ಸಾಗರ: ನಿಸ್ವಾರ್ಥವಾದ ಸೇವೆಗೆ ವಿಶೇಷ ಫಲವಿದೆ ಮತ್ತು ಅದು ಶಾಶ್ವತವಾದ ಧನ್ಯತೆಯನ್ನು ನೀಡಲಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು.
ಸಾಗರ ಅಗ್ರಹಾರದ ಶ್ರೀರಾಘವೇಶ್ವರ ಸಭಾ ಭವನ ಸಮಿತಿ ಏರ್ಪಡಿಸಿದ್ದ ಭವನ ನಿರ್ಮಾಣಕ್ಕೆ ಸಹಕರಿಸಿದವರಿಗೆ ಗೌರವ ಸಮರ್ಪಣೆ ಧನ್ಯಾನುಗ್ರಹ ಸಮಾರಂಭದಲ್ಲಿ ಅವರು ದಿವ್ಯಸಾನ್ನಿಧ್ಯವಹಿಸಿ ದಾನಿಗಳಿಗೆ ಆಶೀರ್ವದಿಸಿ ನಂತರ ಆಶೀರ್ವಚನ ನೀಡಿದರು.
ನಮ್ಮ ದೊಡ್ಡ ಗುರುಗಳು ಆ ಕಷ್ಟ ಕಾಲದಲ್ಲಿಯೂ ಇಲ್ಲಿಯ ನೆಲ ಖರೀದಿಸಿ ಕಾಪಾಡಿಕೊಂಡು ಬಂದಿರುವುದು ಒಂದು ಸಂಗತಿಯಾದರೆ ತಾಯಿ ರಾಜರಾಜೇಶ್ವರಿಯ ಕೃಪೆ ಭವನ ನಿರ್ಮಾಣಕ್ಕೆ ಪರೋಕ್ಷವಾಗಿ ಕಾರಣವಾಗಿದೆ ಮತ್ತು ಸಮಾಜದವರ ಉದಾರ ಮನದ ಕೊಡುಗೆ ಈ ಭವನವನ್ನು ಸಾಕಾರಗೊಳಿಸಿದೆ. ಆ ಹಿನ್ನೆಲೆಯಲ್ಲಿ ಗುರು ಕೊಟ್ಟ ನೆಲ, ತಾಯಿ ಕೊಟ್ಟ ವರ ಹಾಗೂ ಸಮಾಜದ ಸೇವೆಯ ಫಲ ಸಾಗರದ ರಾಘವೇಶ್ವರ ಭವನ ನಿರ್ಮಾಣಕ್ಕೆ ಕಾರಣ ಎಂದು ಒಂದೇ ಮಾತಿನಲ್ಲಿ ಹೇಳಬಹುದು ಎಂದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಅವಿಚ್ಚಿನ್ನ ಪರಂಪರೆಯ ಪೀಠ ಸಮಾಜಕ್ಕೆ ಕೊಟ್ಟ ಕೊಡುಗೆ ಹಲವು, ಕಳೆದ ೧೫ ದಿನಗಳಲ್ಲಿ ಇಲ್ಲಿ ನಡೆದ ನವರಾತ್ರ ನಮಸ್ಯಾ ಕಾರ್ಯಕ್ರಮದ ಮೂಲಕ ಜನತೆಗೆ ಧಾರ್ಮಿಕ ಶ್ರದ್ದೆ ಮೂಡಿಸಿ ಸಂಸ್ಕಾರ ನೀಡುವಂತಾಗಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದರು.
ಭವನ ಸಮಿತಿಯ ಅಧ್ಯಕ್ಷ ಎಂ .ಹರನಾಥ್ ರಾವ್, ಸಮಿತಿಯ ಗುರುಮೂರ್ತಿ ಹೆಗಡೆ ಕಲ್ಸೆಮನೆ, ಮಾತನಾಡಿದರು. ಈ ವೇಳೆ ರಾಘವೇಶ್ವರ ಭವನ ಸಮಿತಿಯವತಿಯಿಂದ ಸಮಾಜಕ್ಕೆ ಗುರುಗಳನ್ನು ಕೊಟ್ಟ ಶ್ರೀಮಾತರವರಿಗೆ ಉಡಿ ಗೌರವ ನೀಡಿ ವಂದಿಸಲಾಯಿತು. ಭವನ ಸಮಿತಿಯ ಪ್ರಧಾನ ಕಾರ್ಯದರ್ಶಿ ಸದಾಶಿವ ರಾಜಶ್ರೀ, ಕೆ.ಎನ್. ಶ್ರೀಧರ ಮತ್ತಿತರರು ಇದ್ದರು. ರಮೇಶ್ ಹೆಗಡೆ ಗುಂಡೂಮನೆ, ಮಹಾಲಕ್ಷ್ಮಿ ನಿರೂಪಿಸಿದರು.