ಹವಿ ಸವಿ ತೋರಣ – ೧೦ ಅಜ್ಜಿ ಹೇಳುವ ಕಥೆಗೊ

ಲೇಖನ

 

ಅಜ್ಜಿ ಹೇಳುಗ ಮನಸ್ಸಿಂಗೆ ಬಪ್ಪದೇ ಪ್ರೀತಿ ವಾತ್ಸಲ್ಯದ ಪ್ರತಿರೂಪದ ನೆಂಪು. ಅಜ್ಜ° ಅಜ್ಜಿಯ ಪ್ರೀತಿಗೆ ಸಮವಾದ್ದು ಯೇವದು ಇಲ್ಲೆ. ಪುಳ್ಳಿಯಕ್ಕಳ ಸುತ್ತುದೆ ಕೂರ್ಸಿ ಅವು ಕಥೆ ಹೇಳುವ ಚೆಂದವ ವರ್ಣಿಸುಲೆ ಎಡಿಯ. ಮಕ್ಕೋಗೆ ಕಥೆ ಕೇಳ್ಲೆ ಎಷ್ಟು ಕೊದಿ ಇರ್ತೋ ಅಷ್ಟೇ ಪ್ರೀತಿಲಿ ಅಜ್ಜಿ, ಅಜ್ಜ° ಕಥೆ ಹೇಳ್ತವು.

ಮದಲಿಂಗೆ ಅಜ್ಜಿಯ ಕಥೆ ಕೇಳದ್ದೆ ದೊಡ್ಡಾದ ಮಕ್ಕೊ ತುಂಬಾ ಕಮ್ಮಿ ಇಕ್ಕಷ್ಟೇ. ಅಜ್ಜಿಯ ಕಥೆ ಕೇಳುವ ಪುಳ್ಳಿಯಕ್ಕಳ ಸಂಭ್ರಮ ಒಂದು ಬೇರೆಯೇ. ಎಲೆ ಬಾಯಿಗೆ ಹಾಕಿಂಡು, ಪುಳ್ಳಿಯಕ್ಕಳ ಹತ್ತರೆ ಕೂರ್ಸಿಂಡು ಅಜ್ಜಿ ಕಥೆ ಹೇಳ್ಲೆ ಸುರು ಮಾಡಿದರೆ ಅದು ಮುಗಿವನ್ನಾರವು ಮಕ್ಕೊ ಬಾಯಿ ಮುಚ್ಚದ್ದೆ ಕಥೆ ಕೇಳುಗು.ಅಜ್ಜಿ ಹೇಳುವ ಕಥೆಗಳೇ ಹಾಂಗಿಪ್ಪದು. ರಾಮಾಯಣ, ಮಹಾಭಾರತ, ಮಾಂತ್ರ ಅಲ್ಲ, ಪುರಾಣದ ಸುಮಾರು ಕಥೆಗೊ, ಜಾನಪದ ಕಥೆಗೊ, ಪಂಚತಂತ್ರ ಕಥೆಗೊ.ಕಾಗಕ್ಕ ಗುಬ್ಬಕ್ಕನ ಕಥೆಯೂ ಇಕ್ಕು…. ಹೀಂಗೆ ಅಜ್ಜಿಯ ಕಥೆಯ ಭಂಡಾರ ತುಂಬಾ ದೊಡ್ಡದು.

ಕಥೆಗಳ ಅಜ್ಜಿ ವಿವರಿಸುವ ರೀತಿಯೇ ಚೆಂದ. ಅಜ್ಜಿಯ ವರ್ಣನೆಲಿ ಹುಲಿ ಬಂದರೆ ಸರಿಯಾದ ಹುಲಿ ಎದುರೆ ಬಂದು ನಿಂದ ಹಾಂಗಿಕ್ಕು. ಹತ್ತು ತಲೆಯ ರಾವಣನ ಕಥೆ ಕೇಳುಗ ಆ ರಾವಣನ ರೂಪ ಕಣ್ಣಿಂಗೆ ಕಟ್ಟಿದ ಹಾಂಗೆ ವರ್ಣಿಸುಗು. ಸತ್ಯ ಹರಿಶ್ಚಂದ್ರನ ಕಥೆ, ಚಂದ್ರಹಾಸನ ಕಥೆಯೆಲ್ಲ ಕೇಳಿ ಕಣ್ಣನೀರು ಹಾಕದ್ದ ಮಕ್ಕಳೇ ಇರವು. ಕಥೆಗಳ ವರ್ಣನೆಯೊಟ್ಟಿಂಗೆ ಅಜ್ಜಿ ಪುಳ್ಳಿಯಕ್ಕೊಗೆ ಚಂದದ ನೀತಿಯನ್ನು ತಿಳಿಶುಗು. ಮಕ್ಕಳ ಮನಸಿಲ್ಲಿ ಭಕ್ತಿ, ಶ್ರದ್ಧೆ, ದಾನ, ಧರ್ಮ, ಕರುಣೆ ಹೀಂಗಿದ್ದ ಗುಣಂಗೊ ಸಣ್ಣಾದಿಪ್ಪಗಳೇ ಮೂಡಿ ಬರೆಕು, ಅವು ದೊಡ್ಡಪ್ಪಗ ಆ ಜೀವನಮೌಲ್ಯಂಗಳ ಬದುಕಿಲ್ಲಿ ರೂಡಿಸಿಕೊಳ್ಳೆಕು ಹೇಳುವ ಉದ್ದೇಶಂದಲೇ ಅಜ್ಜಿ ಹಾಂಗಿದ್ದ ಕಥೆಗಳ ಹೇಳುದು.

ಮಕ್ಕಳ ದೈಹಿಕ ಬೆಳವಣಿಗೆಯ ಒಟ್ಟಿಂಗೆ ಮಾನಸಿಕ ಬೆಳವಣಿಗೆಯೂ ಆಯೆಕು. ಹೊಸ ಹೊಸ ಆಲೋಚನೆಗೊ ಅವರ ಮನಸ್ಸಿಂಗೆ ಬರೆಕು. ಅವರೊಳದಿಕೆ ಅತ್ಲಾಗಿತ್ಲಾಗಿ ಒಗ್ಗಟ್ಟು ಬೇಕು. ಒಬ್ಬನ ಕಷ್ಟಕ್ಕೆ ಮತ್ತೊಬ್ಬ° ಸಕಾಯ ಮಾಡೆಕು. ಯೇವ ಕೆಲಸ ಮಾಡುಗಳೂ ಚೆಂದಕೆ ಅಚ್ಚುಕಟ್ಟಾಗಿ ಮಾಡೆಕು.. ಹೀಂಗಿದ್ದ ವಿಷಯಂಗಳ ಅಜ್ಜಿ ಕಥೆಯ ಒಟ್ಟಿಂಗೆ ಹೇಳುಗು. ಒಳ್ಳೆ ಕೆಲಸ ಮಾಡಿದವಂಗೆ ಒಳ್ಳೆದಾವುತ್ತೊಳಿಯೂ, ಹಾಳು ಕೆಲಸ ಮಾಡಿದವಕ್ಕೆ ದೇವರು ಶಿಕ್ಷೆ ಕೊಡ್ತ° ಹೇಳಿಯೂ ಇಪ್ಪ ನೀತಿ ಅಜ್ಜಿ ಕಥೆಲಿ ಇಕ್ಕು. ಅದರೊಟ್ಟಿಂಗೆ ಅವರ ಜೀವನದ ಅನುಭವಂಗಳನ್ನೂ ಸೇರ್ಸಿ ಕಥೆಯ ಹಾಂಗೇ ಹೇಳುಗು ಅಜ್ಜಿ. ಇದೆಲ್ಲವೂ ಪುಳ್ಯಕ್ಕೊಗೆ ಚೆಂದದ ಜೀವನದ ಪಾಠಂಗೊ ಆಗಿಂಡಿದ್ದತ್ತು. ಅವರ ಕಲ್ಪನಾಶಕ್ತಿ ವಿಸ್ತಾರ ಆಗ್ಯೊಂಡಿತ್ತು. ಸಂಬಂಧಗಳ ಬೆಲೆ ಅರಡಿಗು. ಒಟ್ಟಾರೆ ನಾವು, ನಮ್ಮ ಆಚಾರವಿಚಾರಂಗೊ, ನೀತಿನಿಯಮಂಗೊ ಎಲ್ಲ ವಿಷಯಂಗಳನ್ನೂ ಮಕ್ಕಳ ಪುಟ್ಟು ಮನಸ್ಸಿಂಗೆ ಅರ್ಥ ಅಪ್ಪಾಂಗೆ ವಿವರಿಸುಲೇ ಅಜ್ಜಿಗೆ ಮಾಂತ್ರ ಎಡಿಗಷ್ಟೆ.

ಇಂದು ಕಾಲ ಬದಲಿದ್ದು. ಇಂದ್ರಾಣ ಮಕ್ಕೊ ಜಂಗಮವಾಣಿ, ದೂರದರ್ಶನದ ಹಾಂಗಿದ್ದ ಹೊಸ ಹೊಸ ಆಕರ್ಷಣೆಗಳ ಬಲೆಗೆ ಮಕ್ಕೊ ಬಿದ್ದಿದವು ಹೇಳುದೇ ಬೇಜಾರಿನ ವಿಶಯ. ಎಷ್ಟೋ ಮನೆಗಳಲ್ಲಿ ಅಜ್ಜ° ಅಜ್ಜಿಯಕ್ಕಳೇ ಇಲ್ಲೆ. ಅವರ ಒಡನಾಟ ಇಲ್ಲದ್ದೆ ಮಕ್ಕೊಗೆ ಚೆಂದದ ಜೀವನ ಮೌಲ್ಯದ ಪಾಠ ಸಿಕ್ಕುತ್ತಿಲ್ಲೆ. ಅಜ್ಜ ಅಜ್ಜಿ ಇದ್ದರೂ ಎಲ್ಲಾ ಮಕ್ಕಳೂ ಅವರ ಕಥೆಗಳ, ಜೀವನದ ಅನುಭವಂಗೊಕ್ಕೆ ಕೆಮಿ ಕೊಡ್ತವಿಲ್ಲೆ. ಅಜ್ಜಿಯ ಕಥೆಗಳೊಟ್ಟಿಂಗೆ ಅದರಿಂದ ಸಿಕ್ಕಿಂಡಿದ್ದ ಜ್ಞಾನವೂ ನಷ್ಟ ಆವ್ತಾಯಿದ್ದು. ಎಲ್ಲಿಯೂ ಬರದು ಮಡುಗದ್ದ ಎಷ್ಟೋ ಒಳ್ಳೊಳ್ಳೆ ಕಥೆಗಳೇ ಇಲ್ಲದಾಂಗಾಯಿದು.

ನಮ್ಮ ಕೌಟುಂಬಿಕ ವ್ಯವಸ್ಥೆಲಿ ಬದಲಾವಣೆ ಆದ ಹಾಂಗೆ ಮಕ್ಕೊಗೆ ಸಿಕ್ಕುವ ಮಾರ್ಗದರ್ಶನ ಕಮ್ಮಿಯಾತು. ಪರಸ್ಪರ ಬಾಂಧವ್ಯದ ಬೆಲೆ, ಸಹಕಾರದ ಮೌಲ್ಯ ಯೇವದೂ ಸಿಕ್ಕುತ್ತಿಲ್ಲೆ. ಈ ವಿಶಯಲ್ಲಿ ನಾವು ಈಗಲೇ ಎಚ್ಚರಿಕೆ ವಹಿಸೆಕು. ಮನೆಲಿ ಅಜ್ಜ ಅಜ್ಜಿ ಇದ್ದರೆ ದಿನಲ್ಲಿ ರಜಾ ಹೊತ್ತಾದರೂ ಅವರ ಮಾತುಗಳ, ಕಥೆಗಳ ಕೇಳ್ಲೆ ಬಿಡೆಕು. ಈಗಾಣ ಯಾಂತ್ರಿಕ ಜೀವನದ ಎಡೇಲಿಯೂ ಮಕ್ಕಳ ಮನಸ್ಸಿಲ್ಲಿ ಸದ್ಗುಣಂಗೊ ಮೂಡುವ ಹಾಂಗೆ ಮಾಡೆಕು. ಪ್ರೀತಿ, ವಿಶ್ವಾಸ, ಪ್ರೀತಿ, ಸಹಕಾರದ ಅಜ್ಜಿಯ ಕಥೆಗಳ ಪಾಠ ಎಲ್ಲ ಮಕ್ಕೊಗೂ ಸಿಕ್ಕುವ ಹಾಂಗಾಗಲಿ.

ಪ್ರಸನ್ನಾ ವಿ. ಚೆಕ್ಕೆಮನೆ

ಚಿತ್ರಲ್ಲಿ ಇಪ್ಪವು ಸರಸ್ವತಿ ಭಟ್ ಎಡಕ್ಕಾನ ಮತ್ತೆ ಅವರ ಪುಳ್ಯಕ್ಕೊ

Leave a Reply

Your email address will not be published. Required fields are marked *