ಭಾಷೆ ಹೇಳಿದರೆ ಬರೀ ಮಾತಾಡ್ಲೆ ಮಾಂತ್ರ ಇಪ್ಪದಲ್ಲ. ಅದರೊಟ್ಟಿಂಗೆ ತುಂಬಾ ಚೆಂದದ ಸಂಸ್ಕೃತಿಯೂ ಜೋಡಿಂಡಿದ್ದು. ನಮ್ಮ ಭಾಷೆ, ಸ೦ಸ್ಕೃತಿ ಒಳಿಯೆಕಾದರೆ ಮನೆಭಾಷೆಯ ಮಹತ್ವ ಗೊಂತಾಯೆಕು. ನಾವು ಮಾತಾಡುವ ಭಾಷೆಯೇ ಮನೆಭಾಷೆ ಅಥವಾ ಅಬ್ಬೆ ಭಾಷೆ ( ಮಾತೃ ಭಾಷೆ). ಅಬ್ಬೆಯತ್ರೆ ನಮಗೆ ಎಷ್ಟು ಪ್ರೀತಿಯೋ, ಅಷ್ಟೇ ಪ್ರೀತಿ, ಗೌರವ, ಅಭಿಮಾನ ಅಬ್ಬೆ ಭಾಷೆಯತ್ರೂ ಬೇಕು. ನಮಗೆಲ್ಲ ಅಬ್ಬೆ ಭಾಷೆಯ ಮಹತ್ವ ಅರಡಿಯೆಕು ಹೇಳುವ ಕಾರಣಕ್ಕೇ ನಮ್ಮ ಗುರುಗೊ ಕಳೆದ ಚಾತುರ್ಮಾಸ್ಯವನ್ನೇ ಸ್ವಭಾಷಾ ಚಾತುರ್ಮಾಸ್ಯ ಹೇಳುವ ಹೆಸರು ಮಡುಗಿ ನಮ್ಮ ಭಾಷೆಯ ಮಹತ್ವವ ನಮಗೆಲ್ಲ ತಿಳಿಶಿದ್ದವು. ನಮ್ಮ ದಿನನಿತ್ಯದ ಮಾತಿನ ಎಡೇಲಿ ಬಪ್ಪ ಅದೇಷ್ಟೋ ಆಂಗ್ಲ ಪದಂಗಳ ಬದಲಿಂಗೆ ಉಪಯೋಗಿಸೆಕಾದ ಕನ್ನಡ ಪದಂಗಳ ಹೇಳಿಕೊಟ್ಟಿದವು.
ನಮ್ಮ ಭಾಷೆ, ನಮ್ಮ ಸಂಸ್ಕಾರ ಬಿಟ್ಟರೆ ನಮ್ಮತನವ ಬಿಟ್ಟಾಂಗೆ ಹೇಳಿ ಹಿರಿಯರು ಹೇಳಿದ್ದವು. ಪರಕೀಯತೆಯ ಗಾಳಿ ತಾಗಿ ನಾವು ನಮ್ಮತನವ ಕಳಕೊಳ್ತಾ ಇದ್ದು. ನಮ್ಮ ಭಾಷೆಯ ಅದೆಷ್ಟೋ ಪದಂಗಳೇ ಇಂದು ಕಾಣೆಯಾಯಿದು. ನಮ್ಮ ಹಿರಿಯರು, ಅಜ್ಜಿ, ಅಜ್ಜ ಮಾತಾಡುಗ ಹೇಳ್ಯೊಂಡಿದ್ದ ಸುಮಾರು ಶಬ್ದಂಗಳ ಅರ್ಥ ಸಾನು ನಮಗೆ ಗೊಂತಿಲ್ಲದ್ದಾಂಗಾಯಿದು. ಹಳ್ಳಿಗೊಕ್ಕೆ ಪೇಟೆಯ ಸಂಸ್ಕೃತಿ ಬಂದ ಮತ್ತೆ ನಮ್ಮ ಸಹಜತೆ ಮರೆಯಾಯಿದು.
ನಮ್ಮ ದಿನ ನಿತ್ಯ ರೂಢಿಲಿ ಬಪ್ಪ ಮಾತುಗಳೇ ಕಾಣೆಯಾವ್ತಾಯಿದ್ದು. ಹವ್ಯಕ ಭಾಷೆಯ ಹಾಡುಗೊ, ನುಡಿಗಟ್ಟುಗೊ, ಗಾದೆಮಾತುಗೊ ಎಲ್ಲವನ್ನೂ ಉಪಯೋಗಿಸಿ ನಮ್ಮ ಹಿರಿಯರು ಮಾತಾಡಿಂಡಿತ್ತಿದವು. ಅವರ ಬೈಗಳಿಲ್ಲಿ ಕೂಡಾ ಶುದ್ಧ ಹವ್ಯಕ ಪದಪ್ರಯೋಗವೇ ಇತ್ತಿದ್ದಷ್ಟೆ.
ಆದರೆ ಇಂದು ಆಧುನಿಕತೆಯ ಗಾಳಿ ಬೀಸಿ ಮನೆ ಭಾಷೆಯ ಎಡೇಲಿ ಆಂಗ್ಲ ಶಬ್ದಂಗಳೇ ತುಂಬಿ ಹೋಯಿದು. ಉದಿಯಪ್ಪಗ ಎದ್ದ ಲಾಗಾಯ್ತು ಇರುಳು ಒರಗುವ ವರೆಗೆ ನಮ್ಮ ಬಾಯಿಲಿ ಅದೆಷ್ಟು ಆಂಗ್ಲ ಪದಂಗೊ ಬತ್ತು ಹೇಳಿ ಲೆಕ್ಕಹಾಕಿದರೆ ಮಂಡೆ ಬೆಶಿಯಕ್ಕು. ಅಷ್ಟುದೆ ಬೇರೆ ಬಾಶೆಯ ಪದಂಗೊ ತುಂಬಿ ಹೋಯಿದು. ಹೆಚ್ಚೆಂತಕೆ, ನಮ್ಮ ಮನೆಗಳಲ್ಲಿ ಅಬ್ಬೆ ಭಾಷೆಯ ಪ್ರಯೋಗ ಕಮ್ಮಿ ಅಪ್ಪಾಂಗೆ ನಮ್ಮ ಮನೆಗಳಲ್ಲಿ ಅಬ್ಬೆ ಹೇಳುವ ಪ್ರಯೋಗವೇ ಇಲ್ಲೆ ಹೇಳ್ಲಕ್ಕು. ಅಬ್ಬೆಯಿಲ್ಲದ ಮನೆಯಲ್ಲಿ ಅಬ್ಬೆ ಭಾಷೆ ಉಳಿವದು ಹೇಂಗೆ ?
ಅಬ್ಬೆ ಹೇಳಿದರೆ ಅಮ್ಮ. ಆದರೆ ಅಮ್ಮನ ಅಬ್ಬೆ ಹೇಳಿ ದಿನಿಗೇಳುವವು ಇಂದು ತುಂಬಾ ಕಮ್ಮಿ. ಅಟ್ಟುಂಬೊಳ, ಅಂಗಲ್ಪು, ಅಟ್ಟಣೆ, ಇರಿಕ್ಕೆ, ಸಿಕ್ಕ, ಪಾಟೆ, ಉರುಪ್ಪುದು, ಒಯ್ಯಾಪ್ರೆ, ಎಡ್ಪು, ಇರುವಾರ, ದಡಮ್ಮೆ……ಇದೆಲ್ಲ ನಿತ್ಯ ಉಪಯೋಗ್ಸಿಂಡಿದ್ದ ಬರೀ ಬೆರಳೆಣಿಕೆಯ ಪದಂಗೊ ಮಾಂತ್ರ.
ಊರು, ಸೀಮೆ ಬದಲಿದ ಹಾಂಗೆ ಭಾಷೆಲಿಯೂ ಬದಲಾವಣೆ ಆವ್ತು. ಕುಂಬ್ಳೆ ಸೀಮೆ, ವಿಟ್ಲ ಸೀಮೆ, ಕೋಳ್ಯೂರು ಸೀಮೆ ಹೇಳಿ ಒಂದೊಂದು ಸೀಮೆಗೂ ಅದರದ್ದೇ ಆದ ಕೆಲವು ಭಾಷಾ ಪ್ರಯೋಗ ಇದ್ದು. ಒಂದೇ ಶಬ್ದಕ್ಕೆ ಒಂದೊಂದು ಸೀಮೆಲಿ ಒಂದೊಂದು ಅರ್ಥ ಬಪ್ಪದೂ ಇದ್ದು.
ಮದಲಿಂಗೆ ಮನೆಗೆ ನೆಂಟ್ರು ಬಂದಿಪ್ಪಗ ಮನೆಯವು ಆರೋ
” ಇವಕ್ಕೆ ಮೀವಲೆ ಚೆಂಡಿಹರ್ಕು ಕೊಡು ” ಹೇಳುದು ಕೇಳಿ
” ಅಯ್ಯೋ, ಅವಕ್ಕೆ ಹರ್ಕಟೆ ವಸ್ತ್ರ ಎಲ್ಲ ಕೊಡೆಡ. ಒಳ ಕಪಾಟಿಲ್ಲಿ ಮಡುಗಿದ ಗೆನಾ ಬೈರಾಸು ತಂದು ಕೊಡು” ಹೇಳಿ ದೊಡ್ಡಬ್ಬೆ ಸಣ್ಣಕೆ ಹೇಳುದು ಕೇಳಿದ್ದು ಗ್ರೇಶುಗ ಈಗಲೂ ನೆಗೆ ಬತ್ತು.
ಇನ್ನೊಂದು ಅನುಭವ ನೆಂಪು ಮಾಡುಗ ಒಬ್ಬನೇ ಇದ್ದರೂ ನೆಗೆ ತಡವಲೆಡಿಯ. ಯೇವದೋ ಅನುಪ್ಪತ್ತ್ಯದ ಮನೆಗೆ ಹೋಗಿಪ್ಪಗ ಅಲ್ಲಿ ಆರೋ ಒಬ್ಬರು ಮಾವ°
” ಅವು ಮೀವಲೆ ಹೋವ್ತವಾಡ, ನೀರಡೆ ಕೊಡು” ಹೇಳುದು ಕೇಳಿ ಆ ಕಾಲಲ್ಲಿ ಅಪರೂಪ ಆಗಿದ್ದ ಉದ್ದಿನ ಒಡೆಗೆ ಬಾಯಿ ಬಿಟ್ಟು ಕೊದ್ದು.
” ಒಡೆ ಇದ್ದರೆ ಈಗಲೇ ಕೊಡು. ಮಿಂದಿಕ್ಕಿ ಬಂದು ಅರ್ಗ್ಯ ಜೆಪ ಎಲ್ಲ ಅಪ್ಪಗ ತಣಿಗು ” ಹೇಳಿ ಮೀವಲೆ ಹೆರಟವು ಹೇಳಿಯಪ್ಪಗ ನಾವುದೆ ಕೊರಳುದ್ದ ಮಾಡಿ ನೋಡಿದ್ದೇ. ಅವು ಈ ಬೈರಾಸಿನನ್ನೇ ನೀರಡೆ ಹೇಳಿದ್ದದೂಳಿ ಮತ್ತೆ ಗೊಂತಾದ್ದು. ಬಟ್ಲು ಬಾಯಿ ಮಂಗನ ಹಾಂಗೆ ಕೊದಿ ಬಿಟ್ಟದು ಬಂತು.
ಬೈರಾಸು, ತೋರ್ತು, ಚೆಂಡಿಹರ್ಕು, ನೀರಡೆ… ಇದೆಲ್ಲ ಪರ್ಯಾಯ ಶಬ್ದಂಗೊ ಹೇಳಿ ಮತ್ತೆ ಗೊಂತಾತು.
” ಪುಳ್ಳಿ ಬಂದ°, ಮಿಂದ ನೀರು ತಾ ” ಹೇಳಿ ಅಜ್ಜಿ ಹೇಳುದು ಕೇಳಿ
” ಯೆಬ್ಬೇ….ಎನಗೆ ಮಿಂದ ನೀರೆಲ್ಲ ಬೇಡ ” ಹೇಳಿ ಅಲ್ಲಿಂದ ಎದ್ದು ಓಡಿದ್ದಾ°ಡ.
ಮಿಂದ ನೀರು ಹೇಳಿದರೆ ರಜಾ ನೀರು ಹೇಳಿ ಪುಳ್ಳಿಮಾಣಿಗೆ ಗೊಂತಾಯಿದಿಲ್ಲೆ.
ಹೀಂಗೇ ಭಾಷೆಯ ಸಣ್ಣ ಸಣ್ಣ ಬದಲಾವಣೆಯ ಹಾಸ್ಯ ಅನುಭವಂಗೊ ನಮ್ಮೆಲ್ಲರ ಬದ್ಕಿಲ್ಲಿಯೂ ಇಕ್ಕು.
ಕುಂಬ್ಳೆ ಸೀಮೆ ಭಾಷೆಲಿ ಹೆಚ್ಚಾಗಿ ಹತ್ರಾಣ ಮಲೆಯಾಳದ ಪದ ಉಪಯೋಗ ಆವ್ತು. ಎರಟ್ಟಿ, ತೋರ್ತು, ಮತಿ, ಮೋಳು…. ಇದೆಲ್ಲ ಮಲಯಾಳದ ಪದಂಗೊ. ವಿಟ್ಲ ಸೀಮೆಲಿ ಹೀಂಗೆ ಕೆಲವು ತುಳು ಪದಂಗ ಬೆರಕೆ ಆಯಿದು.
ಯೇವದೇ ಭಾಷೆಯಾದರೂ ನಿರಂತರವಾಗಿ ಒಳಿಯೆಕಾದರೆ ಅದರ ಪ್ರಯೋಗ ನಿಂಬಲಾಗ. ಶಬ್ದ ಭಂಡಾರ ಹೆಚ್ಚೆಕು. ನಾವು ಸರಿಯಾಗಿ ನಮ್ಮ ಮಾತಿನ ಹೊಡೆಂಗೆ ಗುಮಾನ (ಲಕ್ಷ್ಯ ) ಕೊಟ್ಟರೆ ನಮಗೇ ಆಶ್ಚರ್ಯ ಅಪ್ಪಷ್ಟು ಬದಲಾವಣೆ ನಮ್ಮ ಭಾಷೆಲಿ ಆಯಿದು.
‘ ಅಪ್ಪೋರ ಸೇರಿದರೆ ಒಪ್ಪಬುದ್ಧಿಯು ಬಕ್ಕು
ಮರನಾ ಸೇರಿದರೆ ನೆಳಲಕ್ಕು | ಕಿರುಬಾಲಾ
ನಿನ್ನ ಸೇರಿದರೆ ಸುಖವಕ್ಕು
ಅಜ್ಜಿ ಹೇಳ್ಯೊಂಡಿದ್ದ ಹವ್ಯಕ ಹಾಡು ಇದು. ಹೀಂಗಿದ್ದ ಅದೇಷ್ಟೋ ಸಾಹಿತ್ಯಂಗೂ ಕಾಣೆಯಾಯಿದು. ‘ಹವ್ಯಕ ಭಾಷೆಯ ಸಾಹಿತ್ಯ ರಚನೆಗೊ ಕೆಲವು ಇದ್ದರೂ ಕನ್ನಡ ಸಾಹಿತ್ಯಕ್ಕೆ ಸಿಕ್ಕುವ ಪ್ರೋತ್ಸಾಹ ಅದಕ್ಕಿಲ್ಲೆ. ಹಾಂಗಾಗಿ ಸಾಹಿತಿಗಳೂ ಸಹಜವಾಗಿ ಹವ್ಯಕ ಭಾಷೆಲಿ ಬರವಲೆ ಉಮೇದು ತೋರ್ಸುತ್ತವಿಲ್ಲೆ.
ಎಂತದೇ ಆಗಲಿ ಅಬ್ಬೆ ಭಾಷೆಯ ಚೆಂದ, ಕೊಶಿ ಬೇರೆ ಯೇವ ಭಾಷೆಲಿ ಮಾತಾಡುಗಲೂ ಸಿಕ್ಕುತ್ತಿಲ್ಲೆ. ಹಾಂಗಾಗಿ ಮರದು ಮೂಲೆಗೆ ಸೇರಿದ ಶಬ್ದಂಗಳ ಮತ್ತೆ ಹೆರ ತಪ್ಪೊ°. ನಮ್ಮ ಮುಂದಾಣ ತಲೆಮಾರಿನವಕ್ಕೆ ನಮ್ಮ ಬಾಶೆಯ ಮಹತ್ವ ತಿಳಿಶುವ°.
ತುಪ್ಪಶನ ಉಂಬಲೆ ತುಳುನಾಡಿ0ಗೋಯೆಕು
ಅಕ್ಕಿಯ ಮೇಲೆ ಬರೆಯಿಲ್ಲೆ
ತುಳುನಾಡ ಮಕ್ಕಳ ಮೈಲಿ ಕಲೆಯಲ್ಲೆ
ಹೀಂಗಿದ್ದ ಪದ್ಯಂಗೊ ಇದ್ದರೆ ಮತ್ತೆ ಅದೆಲ್ಲ ಅಬ್ಬೆಕ್ಕಳ ಬಾಯಿಲಿ ಬರಲಿ. ಮತ್ತೆ ಅಚ್ಚ ಹವ್ಯಕ ಭಾಷೆ ನಮ್ಮ ಮನೆಗಳಲ್ಲಿ ಚೆಂದಕೆ ಕೇಳಿ ಬರಲಿ. ನಮ್ಮ ಶ್ರೀಗುರುಗೊ ಕೈಗೊಂಡ
‘ಮರೆತು ಹೋದ ಮನೆ ಮಾತು ಮರಳಿ ಮರುಕಳಿಸುವ ಸ್ವಭಾಷಾ ಮಹಾ ಪರ್ವದ ಸಂಕಲ್ಪದ ಕಾರ್ಯದ ಯಶಸ್ಸಿನ ಅಭಿಯಾನ ನಮ್ಮ ಮನೆಂದಲೇ ಸುರುವಾಗಲಿ.
ಪ್ರಸನ್ನಾ ವಿ. ಚೆಕ್ಕೆಮನೆ.