” ಗೋವು ನಮ್ಮ ಜೀವನದ ಅವಿಭಾಜ್ಯ ಅಂಗ. ಗೋವನ್ನು ಆಧರಿಸಿದ ಜೀವನ ಕ್ರಮ ನಮ್ಮ ಸಂಸ್ಕೃತಿಯಲ್ಲಿ ಸೇರಿಕೊಂಡಿದೆ. ಆದರೆ ಇಂದು ಮನೆಗಳಲ್ಲಿ ಗೋವನ್ನು ಸಾಕುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳಿಗೆ ಗೋವಿನ ಬಗ್ಗೆ ಪ್ರೀತಿ ಇದ್ದರೂ ಅವುಗಳ ಜೊತೆ ಒಡನಾಡುವ ಅವಕಾಶ ದೊರಕುತ್ತಿಲ್ಲ. ಶ್ರೀಗುರುಗಳ ಮಹತ್ವಪೂರ್ಣ ಯೋಜನೆಯಾದ ಮಾತೃತ್ವಮ್ ಮೂಲಕ ಗೋಪ್ರೇಮಿಗಳಿಗೆ ದೇಶೀಯ ಹಸುಗಳ ಸೇವೆ ಮಾಡಲು ಸುಲಭವಾಗಿ ಅವಕಾಶ ಒದಗಿ ಬಂದಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಗೋಮಾತೆಯ ಸೇವೆಯನ್ನು ಮಾಡಿ ಧನ್ಯತೆಯನ್ನು ಪಡೆಯಬಹುದು ” ಎಂದವರು ಉಪ್ಪಿನಂಗಡಿ ಮಂಡಲ ಕಬಕ ವಲಯದ ಕಾಯರ್ಮಜಲು ನಿವಾಸಿಗಳಾಗಿರುವ ಪಡಾರು ಶಂಭು ಶಾಸ್ತ್ರಿಯವರ ಪತ್ನಿ ವಿಜಯಲಕ್ಷ್ಮಿ.
ಕೋರಿಕ್ಕಾರು ಶ್ಯಾಮ ಭಟ್, ಸುಶೀಲ ದಂಪತಿಗಳ ಪುತ್ರಿಯಾದ ಇವರು ಸುಮಾರು ಎರಡು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡವರು. ಕಬಕ ವಲಯದ ಮಾತೃ ಪ್ರಧಾನೆಯಾಗಿಯೂ ಸೇವೆ ಮಾಡಿದ್ದಾರೆ.
” ಹಿಂದೆ ನಮ್ಮ ಮನೆಯಲ್ಲಿ ಹಸುಗಳನ್ನು ಸಾಕುತ್ತಿದ್ದೆವು. ಆದರೆ ಹಳ್ಳಿ ತೊರೆದ ಮೇಲೆ ಹಸುಗಳನ್ನು ಸಾಕುವುದು ಕಷ್ಟವಾಗತೊಡಗಿತು. ಹಾಗಾಗಿ ಮಾತೃತ್ವಮ್ ಮೂಲಕ ಗೋಸೇವೆ ಮಾಡಲು ತೀರ್ಮಾನಿಸಿದೆ. ದೇವಿಕಾ ಶಾಸ್ತ್ರಿಯವರ ಪ್ರೋತ್ಸಾಹದಿಂದ ಮಾಸದಮಾತೆಯಾದೆ. ಕಾಲ್ನಡಿಗೆಯ ಮೂಲಕ ಅನೇಕ ಮನೆಗಳಿಗೆ ಹೋಗಿ ದೇಶೀಯ ಹಸುಗಳ ಮಹತ್ವದ ಬಗ್ಗೆ ತಿಳಿಸಿದ್ದೇನೆ. ಅವರಲ್ಲಿ ಅನೇಕ ಮಂದಿ ಮಾತೃತ್ವಮ್ ಗೆ ಕೈಜೋಡಿಸಿದ್ದಾರೆ. ನನ್ನ ಹಿರಿಯ ಮಗನೂ ಗುರಿ ತಲುಪಲು ಸಹಕಾರ ನೀಡಿದ್ದಾನೆ ” ಎನ್ನುವ ವಿಜಯಲಕ್ಷ್ಮಿಯವರು ಮೂರು ಹಸುಗಳ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.
ಬಾಲ್ಯದಿಂದಲೇ ಸ್ತೋತ್ರಗಳನ್ನು, ಸಾಂಪ್ರದಾಯಿಕ ಹಾಡುಗಳನ್ನು, ಭಜನೆಗಳನ್ನು ಆಸಕ್ತಿಯಿಂದ ಕಲಿತ ಇವರು ವಿಷ್ಣು ಸಹಸ್ರನಾಮ, ಭಗವದ್ಗೀತೆ ಪಾರಾಯಣವನ್ನು ಮಾಡುತ್ತಾರೆ.
” ಮನದ ದುಗುಡಗಳಿಗೆ ದಿವ್ಯೌಷಧಿ ಶ್ರೀಗುರು ಸೇವೆ. ಶ್ರೀಮಠದ ಸಂಪರ್ಕದಿಂದ ದೇವರ ಮೇಲೆ ಶ್ರದ್ಧೆ ಭಕ್ತಿ ಹೆಚ್ಚಾಗಿದೆ. ಬದುಕಿನಲ್ಲಿ ನೆಮ್ಮದಿ ಶಾಂತಿ ನೆಲೆಸಿದೆ ” ಎನ್ನುವ ವಿಜಯಲಕ್ಷ್ಮಿಯವರಿಗೆ ಗೋಮಾತೆಯ ಸೇವೆಯನ್ನು ಇನ್ನಷ್ಟು ಮುಂದುವರಿಸಬೇಕೆಂಬ ಅಭಿಲಾಷೆಯಿದೆ.
ಪ್ರಸನ್ನಾ ವಿ. ಚೆಕ್ಕೆಮನೆ