ಹವಿ ಸವಿ ತೋರಣ – ೧೬ ನೀರೆಯ ನೀರಿನ ಪ್ರಪಂಚ

ಲೇಖನ

 

ಉದಿಯಪ್ಪಗ ಬೇಗ ಎದ್ದು ಸೂರ್ಯೋದಯದ ಹೊತ್ತಿಂಗೆ ಒಂದರಿಯಾಣ ಕೆಲಸ ಮುಗಿಶಿಕ್ಕಿ ಬಾವಿಂದ ನೀರೆಳವದು ಎನ್ನ ಅಭ್ಯಾಸ. ಅಷ್ಟೊತ್ತಿಂಗೆ ಸೂಯ೯ ಉದಿಸಿ ಬಂದಿರ್ತಾಯಿಲ್ಲೆ. ಆ ಹೊತ್ತಿಂಗೆ ಮೂಡ ಹೊಡೆಯಾಣ ಆಕಾಶ ನೋಡ್ಲೆ ಅದೆಷ್ಟು ಚೆಂದ..!

ಕೆಂಪು, ಅರಶಿನ, ನೀಲಿ, ಕೇಸರಿ ಹೇಳಿ ಬೇರೆ ಬೇರೆ ಬಣ್ಣಂಗೊ ಒಟ್ಟಿಂಗೆ ಆಕಾಶಲ್ಲಿ ಹೊಳವದು ಕಾಂಬಗ ಸೂರ್ಯ ದೇವರ ಎದುರುಗೊಂಬಲೆ ಆಕಾಶದ ಬಾಗಿಲ ಬುಡಲ್ಲಿ ರಂಗೋಲಿ ಹಾಕಿದಾಂಗೆ ಕಾಂಬದು.

ಬಾವಿಗೆ ಕೊಡಪ್ಪಾನ ಇಳಿಶಿಕ್ಕಿ ರಜ ರಜ ಹೊತ್ತು ಅತ್ಯಾಗಿತ್ಲಾಗಿ ನೋಡುದು ದಿನಚರಿಯ ಭಾಗವೇ ಆಗಿಹೋಯಿದು. ಕೊಡಪ್ಪಾನದ ಕೊರಳಿಂಗೆ ಬಳ್ಳಿಯ ಉರುಳು ಸಿಕ್ಸಿಕ್ಕಿ ಅದರ ಬಾವಿಯೊಳಾಂಗೆ ಬಿಟ್ಟು ನೀರು ತುಂಬುವ ಗಳಗಳ ಅಜನ(ಶಬ್ದ) ಕೇಳುಗ ಮನಸ್ಸಿಂಗೆ ಕೊಶಿಯಪ್ಪದು. ಕೊಡಪ್ಪಾ ನಲ್ಲಿ ನೀರು ತುಂಬಿಯಪ್ಪಗ ಬಳ್ಳಿಯ ನಿಧಾನಕೆ ಮೇಗಂಗೆ ಎಳವದು. ಆ ಹೊತ್ತಿಂಗೆ ಉದಯರಾಗ ಹಾಡುವ ಹಕ್ಕಿಗಳ ಚಿಲಿಪಿಲಿ ಶಬ್ದ ಮನಸ್ಸಿನ ಬಾಲ್ಯದ ನೆಂಪುಗಳ ಹೊಡೆಂಗೆ ಎಳೆತ್ತು. ನೀರೆಯ (ಹೆಮ್ಮಕ್ಕಳ ) ನೀರಿನ ಪ್ರಪಂಚಲ್ಲಿ ಮನಸ್ಸು ಒಂದರಿ ಸುತ್ತುಹಾಕಿ ಬತ್ತು.

ಎನ್ನ ಅಪ್ಪನ ಮನೆಲಿ ಬಾವಿ ಇಲ್ಲೆ. ಸೊರಂಗವುದೆ ಕೆರೆಯೂ ಮಾಂತ್ರ ಇಪ್ಪದು. ಮನೆಯ ಹಿಂದಾಣ ಬರೆ ಕರೇಲಿಪ್ಪ ಸೊರಂಗಕ್ಕೆ ಈಂದಿನ ಮರದ ದಂಬೆ (ಈಂದಿನ ಮರವ ಸಿಗುದು ಅರ್ಧ ಮಾಡಿದ ಭಾಗ) ಇದ್ದದು. ಕೆಲವು ದಿಕೆ ಅಡಕೆ ಮರದ ದಂಬೆಯೂ ಇರ್ತು. ಈ ದಂಬೆಯ ಸೊರಂಗದ ಒರತೆ ಬಪ್ಪಲ್ಲಿಗೆ ಜೋಡ್ಸಿ ಮಡುಗಿದರೆ ಅದರಲ್ಲೇ ನೀರು ಹರುದು ಬತ್ತು. ಆ ನೀರಿನ ಎರ್ಕಿಸಿ (ಸಂಗ್ರಹಿಸಿ) ಉಪಯೋಗ್ಸಿಂಡಿದ್ದದು. ಮಳೆ ಕಾಲಲ್ಲಿ ತೋರಕೆ ಬಪ್ಪ ಒರತೆ ನೀರು ಬೇಸಗೆಯಾದ ಹಾಂಗೆ ಕಮ್ಮಿಯಾವ್ತಾ ಹೋವ್ತು. ಅಷ್ಟರವರೆಗೆ ನೀರು ಧಾರಾಳ ಉಪಯೋಗಿಸಿ ಅಭ್ಯಾಸ ಆದ ಮಕ್ಕೊಗೆ ನೀರು ಕಮ್ಮಿಯಾದ ಕೂಡ್ಲೇ ಕೈಕಾಲು ಕಟ್ಟಿದ ಹಾಂಗಪ್ಪದು.

ಅಬ್ಬಿಕೊಟ್ಟಗೆಯ ಚೆಂಬಿನಳಗೆಲಿ ತುಂಬ ನೀರು ತುಂಬ್ಸಿ, ಅಜ್ಜನೋ, ಅಜ್ಜಿಯೋ ನೀರು ಕಾಸಿ ಮಡುಗಿದ್ದರೆ ಮೀವಲೆ ಇಳುದ ಮಕ್ಕೊಗೆ ಬೋದ ಬಪ್ಪದು ಮಂಡಗೆ ಕಾಲಿಯಪ್ಪಗಳೇ….!

ಬೆಶಿ ಬೆಶಿ ನೀರಿನ ತೊಂಡಿಲ್ಲಿ ( ಕರಟಲ್ಲಿ ಮಾಡಿದ ನೀರು ತೋಡುವ ಪಾತ್ರ) ತೆಗದು ಮೈಗೆ ಎರವಗ ಸಿಕ್ಕುವ ಪರಮಾನಂದ ಸುಖವ ವರ್ಣಿಸುಲೇ ಪದಂಗೊ ಇಲ್ಲೆ.

” ಸಾಕು ಮಿಂದದು. ಮಂಡಗೆ ಕಾಲಿ ಮಾಡೆಡ” ಹೇಳಿ ದೊಡ್ಡವು ಆರಾರು ಹೇಳಿದರೆ ರಜ ಆದರೂ ನೀರು ಒಳಿಗು. ಇಲ್ಲದ್ರೆ ವಸ್ತ್ರ ಹಾಕಿ ಉದ್ದಿದ ಹಾಂಗೆ ಮಂಡಗೆ ಕಾಲಿ ಮಾಡುವ ಮಕ್ಕಳೇ ಆ ಕಾಲಲ್ಲಿ ಇದ್ದದು…..!

ಪಾಪ….! ಮನೆಯ ಹಿರಿಯರು ಎಷ್ಟು ಕಷ್ಟ ಬಂದಿಕ್ಕು ಹೇಳಿ ಅಂಬಗ ಕಲ್ಪನೆಯೇ ಇಲ್ಲದ್ದ ಪ್ರಾಯ ಅದು.

ಬೇಸಗೆ ಬಂದ ಹಾಂಗೆ ನೀರಿನ ಮಿತವ್ಯಯದ ಪಾಠ ಸುರುವಕ್ಕು. ಜೊಟ್ಟೆ ಮೊಗಚ್ಚಿದ ಹಾಂಗೆ ನೀರು ಖಾಲಿ ಮಾಡುವ ಮಕ್ಕೊಗೆ ಅದೊಂದು ಶಿಕ್ಷೆಯ ಹಾಂಗಕ್ಕು. ಅಂದರೂ ಒಂದು ಹನಿ ನೀರು ಹಾಳಾಗದ್ದಾಂಗೆ ನೀರಿನ ಸದುಪಯೋಗ ಮಾಡ್ಲೆ ಹೇಳಿಕೊಡುಗು. ಕೈಕಾಲು ತೊಳದ ನೀರು ತೆಂಗಿನ ಮರದ ಬುಡಕ್ಕೆ, ಪಾತ್ರ ತೊಳದ ನೀರು ಬಸಳೆ ಬುಡಕ್ಕೆ, ವಸ್ತ್ರ ತೊಳದ ನೀರು ಬಾಳೆ ಸೆಸಿಗೆ….. ಹಿಂಗೇ ಒಂದರಿ ಉಪಯೋಗಿಸಿದ ನೀರಿನ ಮರುಬಳಕೆಯ ಪಾಠ ಮನೆಂದಲೇ ಸಿಕ್ಕುಗು.

ಇಂದು ಕಾಲ ಬದಲಿದ್ದು. ಮದ್ಲಾಣ ಹಾಂಗೆ ನೀರಿಂಗೆ ಬಂಙ ಇಲ್ಲೆ. ಸೊರಂಗ, ಬಾವಿಂದ ನೀರು ತಪ್ಪ ಕೆಲಸ ಇಲ್ಲೆ. ಭೂಮಿ ಕೊರದು ಅಲ್ಲಿಂದಲೇ ನೀರು ಬಪ್ಪ ವ್ಯವಸ್ಥೆ ಆಯಿದು. ಶರಶಯ್ಯೆಲಿ ಮನುಗಿದ ಭೀಷ್ಮಂಗೆ ಕುಡಿವಲೆ ನೀರಿಂಗೆ ಬೇಕಾಗಿ ಅರ್ಜುನ ಭೂಮಿಗೆ ಬಾಣ ಬಿಟ್ಟು ಗಂಗೆಯ ತರ್ಸಿದ ಕತೆಯ ಹಾಂಗೆ ಈಗ ಭೂಮಿ ಕೊರದು ನೀರು ತಪ್ಪದು ಹೇಳ್ಲಕ್ಕು. ಕರೆಂಟಿನ ಮೋಟಾರಿನ ಗುಬ್ಬಿ ಒತ್ತಿದರೆ ಪೈಪಿಲ್ಲಿ ನೀರು ಬಂದು ಬೀಳುತ್ತು. ನೀರು ತುಂಬ್ಸಿ ಮಡುಗುಲೆ ಟೇಂಕಿ ಬಯಿಂದು. ಕೆಲವೇ ಕೆಲವು ಮನೆಗಳಲ್ಲಿ ದೇವರ ಪೂಜಗೂ, ನಿತ್ಯದ ಅಡಿಗೆ ಉಪಯೋಗಕ್ಕೂ ಮಾಂತ್ರ ಒಂದೆರಡು ಕೊಡಪ್ಪಾನ ನೀರೆಳವದು……!

ನೀರು ತುಂಬಿದ ಕೊಡಪ್ಪಾನ ಮೇಗೆ ಬಂದು ಬಳ್ಳಿಯ ಜಗ್ಗುಗಳೇ ಹಳೇ ನೆಂಪಿನ ಸಂಕೋಲೆ ತುಂಡಪ್ಪದು. ಅಷ್ಟು ಹೊತ್ತುದೆ ಈ ಲೋಕಂದ ಹಳೇ ಕಾಲಕ್ಕೆ ಕರಕೊಂಡು ಹೋಗಿ ಬಂದ ಆ ದಿನಂಗಳ ಸ್ಮರಣೆ ಮೈ ಮರವ ಹಾಂಗೆ ಮಾಡುದೇ ಒಂದು ವಿಶೇಶ. ಹಳೇ ನೆಂಪುಗೊಕ್ಕೆ ಅಷ್ಟು ಒಯಿಲು ( ಸೆಳೆತ ) ಇದ್ದು.

ಮೇಗೆ ಬಂದ ಕೊಡಪ್ಪಾನದ ಕೊರಳಿಂದ ಉರುಳು (ಕುಣಿಕೆ ) ತೆಗದು ಸೊಂಟಲ್ಲಿ ಮಡಿಗಿಂಡು ಮನೆ ಹೊಡೆಂಗೆ ಹೋಪಗ ಮದ್ಲಾಣ ಕಾಲಲ್ಲಿ ಮನೆ ಕೆಲಸ, ಹಟ್ಟಿ ಕೆಲಸ, ಪಾತ್ರ ತೊಳವದು, ವಸ್ತ್ರ ತೊಳವದು ಹೇಳಿ ದಿನಕ್ಕೆ ಎಷ್ಟೋ ಕೊಡಪ್ಪಾನ ನೀರಳದು, ಪಿರಿಬಳ್ಳಿಯ ನಾರು ಕೈಗೆ ತಾಗಿ ತಾಗಿ ದಡ್ಡು ಕಟ್ಟಿದ ಅದೆಷ್ಟೋ ಹೆಮ್ಮಕ್ಕಳ ನೆಂಪಾತು. ಅವರ ಆ ಕಾಲದ ಬದುಕಿನ ಚಿತ್ರಂಗೊ ಮನಸ್ಸಿನ ಪರದೆಲಿ ತೇಲಿ ಬತ್ತು.

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *