ಹನೂರು: ಕೌಡಳ್ಳಿ ಸಮೀಪದ ಭದ್ರಯ್ಯನಹಳ್ಳಿಯಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ “ದೇಶೀ ಆಕಳುಗಳ ಸಂರಕ್ಷಣೆಯ ಮಹಾಸಂಕಲ್ಪದ” ಅಂಗವಾಗಿ “ಶ್ರೀ ಮಠದ ಗೋದಾನ ಯಜ್ಞ”ದ ಯೋಜನೆಯ ಎರಡನೇ ಹಂತದ ಕಾರ್ಯಕ್ರಮ ನಡೆಯಿತು.
ಶ್ರೀ ಗುರುಗಳು ಈ ಹಿಂದೆ ತೀರ್ವ ಬರಗಾಲದಲ್ಲಿ ಈ ಭಾಗದ ಗೋರಕ್ಷಣೆಗೆ ಬೃಹತ್ ಆದ ಮೇವು ವಿತರಣೆ ಮತ್ತು ಅಭಯಾಶ್ರಯ ಯೋಜನೆಗಳ ಮೂಲಕ ನವಚೇತನ ತುಂಬಿದ್ದರು. ಅದರೊಂದಿಗೆ ಈಗ ಇಲ್ಲಿಯ ಗೋಪಾಲಕರ ಆರ್ಥಿಕ ಅಭಿವೃದ್ಧಿಗಾಗಿ ಶ್ರೀ ಮಠದ ಅಂಗಸಂಸ್ಥೆ ಗೋಫಲ ಟ್ರಸ್ಟ್ ಮೂಲಕ ಗೋಪಾಲಕರಿಂದ ಸಗಣಿ ಖರೀದಿಯನ್ನೂ ಮಾಡುತ್ತಿದೆ. ಗೋಫಲ ಟ್ರಸ್ಟ್ ನ ಸಾವಯವ ಗೊಬ್ಬರ ಸ್ವರ್ಗಸಾರದ ಉತ್ಪಾದನಾ ಘಟಕವನ್ನೂ ಕೌಡಳ್ಳಿ ಸಮೀಪ ಆರಂಭಿಸಿದೆ.
ಮೊದಲ ಹಂತದ ಗೋದಾನ ಯಜ್ಞದಲ್ಲಿ ಮೀಣ್ಯಂ ಪಂಚಾಯತ್, ಕೊಪ್ಪ ಗ್ರಾಮ ಭಾಗದ ಗೋಪಾಲಕರಿಗೆ ಮಲೆನಾಡು ಗಿಡ್ಡದ ತಳಿಗಳನ್ನು ಉಚಿತವಾಗಿ ನೀಡಲಾಗಿತ್ತು. ಇಂದು ಈ ಎರಡನೇ ಹಂತದಲ್ಲಿ ಶ್ರೀ ಮಠದ ಮಹಾನಂದಿ ಗೋಲೋಕ, ಹೊಸನಗರದ ಸಹಕಾರದೊಂದಿಗೆ ಭದ್ರಯ್ಯನಹಳ್ಳಿಯಲ್ಲಿ ಗೋವುಗಳನ್ನು ಇಂದು ವಿತರಿಸಲಾಗಿದೆ.
ಗೋಫಲ ಟ್ರಸ್ಟ್ ನ ಘಟಕ ವ್ಯವಸ್ಥಾಪಕರಾದ ಕುಮಾರ ಪಿ ಕೆ ಇವರ ನೇತೃತ್ವದಲ್ಲಿ ಘಟಕದ ರೈತ ಸಂಪರ್ಕಾಧಿಕಾರಿ ಮುತ್ತಯ್ಯ ಟಿ ಹಾಗೂ ಗೋಪಾಲಕ ವೃಂದದ ಸದಸ್ಯರು, ಫಲಾನುಭವಿಗಳು, ಮಣೆಗಾರ ಶಿವಕುಮಾರ್ ಕೌದಳ್ಳಿ ಗೋಸೇವಾ ಪ್ರಮುಖ ಶಿವಮೂರ್ತಿ ವಡಕೆಹಳ್ಳ, ಭಾರತೀಯ ಕಿಸಾನ್ ಸಂಘ ಕೊಪ್ಪ ಗ್ರಾಮ ಘಟಕ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ನಾಗೇಶ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.