ಧರ್ಮಕಾರ್ಯ, ಶಾಶ್ವತ ಕಾರ್ಯಗಳಿಗೆ ನೆರವಾಗುವುದೇ ಸತ್ಕಾರ್ಯ: ರಾಘವೇಶ್ವರ ಶ್ರೀ

ಮಠ

ಮಾಣಿ: ದುಂದುವೆಚ್ಚಕ್ಕೆ ಕಡಿವಾಣ ಹಾಕಿಕೊಂಡು, ಸರಳ ಜೀವನ ಅಳವಡಿಸಿಕೊಂಡು ಸಮಾಜದ ಶಾಶ್ವತ ಕಾರ್ಯಗಳಿಗೆ ಧರ್ಮಕಾರ್ಯಗಳಿಗೆ ಕೊಡುಗೆ ನೀಡುವ ಮೂಲಕ ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.
ಮಾಣಿ ಮಠದಲ್ಲಿ ನೂತನ ಶಿಲಾಮಯ ಗರ್ಭಾಗಾರದಲ್ಲಿ ಸಪರಿವಾರ ಶ್ರೀರಾಮದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಸೋಮವಾರ ನಡೆದ ಧರ್ಮಸಭೆಯಲ್ಲಿ ಪರಮಪೂಜ್ಯರು ಆಶೀರ್ವಚನ ನೀಡಿದರು.
ಸರಳ ಜೀವನದಲ್ಲಿರುವ ಸುಖ- ಶ್ರೇಯಸ್ಸು ಯಾವುದರಲ್ಲೂ ಇಲ್ಲ. ಒಂದು ತುತ್ತು ಕಡಿಮೆ ಉಂಡು ಅದನ್ನು ಸಮಾಜಕ್ಕೆ ನೀಡಿ ಎಂಬ ಪರಿಕಲ್ಪನೆಯಡಿ ಮುಷ್ಟಿಭಿಕ್ಷೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ ಎಂದರು.


ನನ್ನ ಮನೆಯೊಳಗೆ ಅಧರ್ಮಕ್ಕೆ ಅವಕಾಶವಿಲ್ಲ ಎಂಬ ದೃಢಸಂಕಲ್ಪವನ್ನು ರೂಢಿಸಿಕೊಳ್ಳದಿದ್ದರೆ, ನಮ್ಮ ಸಮಾಜ ವ್ಯವಸ್ಥೆ ಉಳಿಯಲಾರದು ಎಂದು ಎಚ್ಚರಿಸಿದರು. ಧರ್ಮ, ಸಂಸ್ಕøತಿ, ಪರಂಪರೆ, ಮಠ ಮಂದಿರಗಳು, ಕಾರ್ಯಗಳು ಈ ದೇಶದ ಜೀವನಾಡಿ. ಎಲ್ಲರ ಮನಸ್ಸು ಕೂಡಾ ಸತ್ಯಂ, ಶಿವಂ, ಸುಂದರಂ ಎಂಬಂತೆ ಶಾಶ್ವತ, ಸುಂದರ ಹಾಗೂ ಮಂಗಲಕರವಾಗಲಿ ಎಂದು ಆಶಿಸಿದರು.
ಸೌಂದರ್ಯ ಬಹಳ ಕಾಲ ಉಳಿಯುವುದಿಲ್ಲ; ಬಹಳಕಾಲ ಉಳಿಯುವುದು ಸುಂದರವಾಗಿ ಇರುವುದಿಲ್ಲ. ಸುಂದರವಾಗಿ, ಧೀರ್ಘಕಾಲ ಉಳಿಯುವಂಥದ್ದು ಮತ್ತು ಮಂಗಳಮಕರವಾಗಿರುವಂಥದ್ದು ಶಿಲಾಮಯ ಗರ್ಭಾಗಾರ. ಇದು ಸತ್ಯಂ, ಶಿವಂ ಸುಂದರಂ ಎಂಬಂತೆ ಮಂಗಳಮಯವಾಗಿರುವಂಥದ್ದು. ಸಂಪೂರ್ಣ ಶಿಲಾಮಯಗಬೇಕು ಎಂಬ ಅಪೇಕ್ಷೆ, ಯಾರಿಗೂ ನಾಶ ಮಾಡಲೂ ಸಾಧ್ಯವಾಗಬಾರದು ಎಂಬ ಕಾರಣಕ್ಕೆ ಎಂದು ವಿಶ್ಲೇಷಿಸಿದರು.
ಇಂಥ ಶಿಲಾಮಯ ನಿರ್ಮಾಣಗಳಿಂದ ಅವುಗಳ ಮೇಲೆ ಎಂಥ ದಾಳಿಗಳು ನಡೆದಾಗಲೂ ಹಾಳುಗೆಡವಬಹುದೇ ವಿನಃ ಅದರ ಕುರುಹು ನಾಶಪಡಿಸಲು ಸಾಧ್ಯವಿಲ್ಲ. ಪೋರ್ಚ್‍ಗೀಸರಿಂದ ನಾಶವಾದ ಮೂಲಮಠ ಅಶೋಕೆಯ ಕುರುಹುಗಳು ಮಾತ್ರ ಇಂದು ಉಳಿದಿವೆ. ಮಠದ ಹಿತ್ಲು ಎಂಬ ಪ್ರದೇಶದಲ್ಲಿ ಮಠದ ಪಂಚಾಂಗ ಸಿಕ್ಕಿದೆ. ಮೂಲ ಮಠ ಅಲ್ಲಿ ಮತ್ತೆ ತಲೆ ಎತ್ತಿ ನಿಂತು ಸಮಾಜಕ್ಕೆ ಬೆಳಕಾಗಲಿದೆ ಎಂದು ಪ್ರಕಟಿಸಿದರು.
ಒಂದು ಕಾರ್ಯವನ್ನು ಸಮಯಮಿತಿಯಲ್ಲಿ ಮತ್ತು ಸರಿಯಾಗಿ ಮಾಡುವುದು ಅಗತ್ಯ. ಕೇವಲ 108 ದಿನಗಳಲ್ಲಿ ಈ ದೇಗುಲ ನಿರ್ಮಾಣ ಮಾಡಿರುವ ಮಂಗಳೂರು ಹೋಬಳಿಯ ಸಮಸ್ತ ಜನ ಅರ್ಹಶಿಷ್ಯರು; ಶ್ರೇಷ್ಠ ಶಿಷ್ಯರು. ಇದು ಕೃತಕೃತ್ಯರ ಸಭೆ. ಮರ್ಯಾದಾ ಪುರುಷೋತ್ತಮನಿಗೆ ನಮ್ಮನ್ನು ಸಮರ್ಪಿಸಿಕೊಂಡ ಕ್ಷಣ ಇದು ಎಂದು ಬಣ್ಣಿಸಿದರು. ಭಾರತದ ಸಂಸ್ಕøತಿ ಪರಂಪರೆಯ ಮೇಲೆ ಅಮೋಘ ಪರಿಣಾಮ ಬೀರಿದ ಮರ್ಯಾದಾ ಪುರುಷೋತ್ತಮನಿಗೆ ನೀಡಿದ ಸಹಸ್ರಮಾನದ ಕೊಡುಗೆ ಎಂದರು.


ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಭಾರತದ ಕುಟುಂಬ ವ್ಯವಸ್ಥೆ ಇಡೀ ವಿಶ್ವಕ್ಕೆ ಮಾದರಿ. ಭಾರತದ ವಿಶೇಷತೆ ಅಡಗಿರುವುದು, ನಮ್ಮ ಸನಾತನ ಹಿಂದೂ ಧರ್ಮ ಉಳಿದುಕೊಂಡಿರುವುದು ಈ ಕುಟುಂಬ ವ್ಯವಸ್ಥೆಯಿಂದಾಗಿ. ದೇವಾಲಯ, ಮಂದಿರಗಳಷ್ಟೇ ಕುಟುಂಬ ವ್ಯವಸ್ಥೆಯೂ ಮುಖ್ಯ. ನಮ್ಮ ಪೂರ್ವಜರು ಸಹಸ್ರಮಾನಗಳಿಂದ ಇದನ್ನು ಉಳಿಸಿಕೊಂಡು ಬಂದಿದ್ದಾರೆ. ಬ್ರಿಟಿಷರು, ಮೊಗಲರು ಶ್ರದ್ಧಾ ಭಕ್ತಿ ಕೇಂದ್ರಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದರೂ, ಕುಟುಂಬ ವ್ಯವಸ್ಥೆ ನಾಶಗೈಯಲು ಸಾಧ್ಯವಾಗಲಿಲ್ಲ. ಇಂಥ ಪವಿತ್ರ ವ್ಯವಸ್ಥೆ ನಮ್ಮಲ್ಲಿ ಉಳಿದುಕೊಂಡಿದ್ದೇವೆಯೇ ಎಂಬ ಬಗ್ಗೆ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು.
ಸಡಿಲಗೊಳ್ಳುತ್ತಿರುವ ಕುಟುಂಬ ವ್ಯವಸ್ಥೆಯನ್ನು ಬಲಪಡಿಸಬೇಕು. ಮಾನವೀಯ ಹಾಗೂ ಭಾವನಾತ್ಮಕ ಸಂಬಂಧಗಳನ್ನು ಉಳಿಸಿಕೊಳ್ಳುವ ಬಗ್ಗೆ ಯುವಜನರಿಗೆ ಮಾರ್ಗದರ್ಶನ ನೀಡಬೇಕು. ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿದ್ದು, ಶಾಂತಿಯಿಂದ ಉಂಟಾದ ಜನಾಂದೋಲನದ ಜತೆಗೆ ಸುಭಾಷ್‍ಚಂದ್ರ ಬೋಸ್ ಅವರಂಥ ಕ್ರಾಂತಿಕಾರಿ ನಾಯಕರ ಹೋರಾಟದ ಕಾರಣದಿಂದ ಎಂದು ಹೇಳಿದರು.
ಜಗತ್ತು ಇಂದು ಭಾರತದ ಕಡೆ ನೋಡುತ್ತಿದೆ. ಯೋಗ, ಆಯುರ್ವೇದದಂಥ ಜ್ಞಾನ ಸಂಪತ್ತಿನ ಕಡೆಗೆ ಇಡೀ ವಿಶ್ವ ನೋಡುತ್ತಿದ್ದು, ಈ ಬಗ್ಗೆ ಶ್ರದ್ಧಾಭಕ್ತಿ ಬೆಳೆಸುವ ಕಾರ್ಯ ಆಗಬೇಕು. ದೇಶದ ಅಖಂಡತೆಯನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬರೂ ಕೊಡುಗೆ ನೀಡಬೇಕು ಎಂದು ಸೂಚಿಸಿದರು.
ಬ್ರಿಟಿಷ್, ಮೊಘಲರ ಶಿಕ್ಷಣದ ಫಲವಾಗಿ ನಮ್ಮ ಶಿಕ್ಷಣದಲ್ಲಿ ಭಾರತೀಯತೆ ಮರೆತು ಹೋದ ಸಂದರ್ಭದಲ್ಲಿ ಶಿಕ್ಷಣ ವ್ಯವಸ್ಥೆ ಪರಿವರ್ತನೆಗೆ ಗೋಕರ್ಣದಲ್ಲಿ ಶ್ರೀರಾಮಚಂದ್ರಾಪುರ ಮಠ ನಿರ್ಮಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಇಡೀ ದೇಶಕ್ಕೇ ಮಾದರಿ. ಸನಾತನ ಹಿಂದೂ ಧರ್ಮದ ರಕ್ಷಣೆಯಲ್ಲಿ ದೊಡ್ಡ ಹೆಜ್ಜೆ. ಇದೇ ಮಾದರಿಯಲ್ಲಿ ಕೇಂದ್ರ ಸರ್ಕಾರ ಕೂಡಾ ನರೇಂದ್ರ ಮೋದಿ ನೇತೃತ್ವದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ತಂದಿದೆ ಎಂದು ವಿವರಿಸಿದರು.
ಇಡೀ ಸಮಾಜಕ್ಕೆ ಸ್ಫೂರ್ತಿದಾಯಕ ಕಾರ್ಯವನ್ನು ಶ್ರೀಗಳು ಮಾಡುತ್ತಿದ್ದು, ಇದರ ಜತೆ ಕೈಜೋಡಿಸುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳೋಣ ಎಂದರು. ಸಂಘಟಿತರಾಗಿರುವಾಗ ನಮ್ಮ ಶಕ್ತಿಯ ಬಗ್ಗೆ ಹೆಮ್ಮೆ, ವಿಶ್ವಾಸ, ನಂಬಿಕೆ, ಶ್ರದ್ಧಾ ಭಕ್ತಿಯ ವಾತಾವರಣ ಸಹಜ. ಕುಟುಂಬ ವ್ಯವಸ್ಥೆಯಲ್ಲೂ ಇದನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡೋಣ ಎಂದರು.
ಜೀವಮಾನದಲ್ಲಿ ಇಂಥ ಅವಕಾಶ ಬರುವುದು ದುರ್ಲಭ. ಈ ಶಿಲಾಮಯ ಗರ್ಭಾಗಾರ ನಿರ್ಮಾಣ ಸಹಸ್ರಮಾನದ ಕಾರ್ಯ; ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದರು. ರಾಮಚಂದ್ರಾಪುರ ಮಠದ ಪ್ರತಿಯೊಂದು ಕಾರ್ಯಗಳೂ ಇತಿಹಾಸದ ಪುಟದಲ್ಲಿ ದಾಖಲಾಗುವಂಥದ್ದು. ಸಿದ್ದಾಪುರದಲ್ಲಿ ನಿರ್ಮಾಣವಾಗಿರುವ ಗೋಸ್ವರ್ಗ ಇಡೀ ದೇಶದಲ್ಲೇ ಏಕಮೇವಾದ್ವಿತೀಯವಾದದ್ದು. ಗೋಸಂರಕ್ಷಣೆಗಾಗಿ ದೇಶಾದ್ಯಂತ ಕೈಗೊಂಡ ಅಭಿಯಾನದ ಪರವಾಗಿ ಸರ್ಕಾರಗಳೂ ಗೋವಿನ ವಿಚಾರದಲ್ಲಿ ಜಾಗೃತವಾಗಿವೆ ಎಂದು ಬಣ್ಣಿಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಜನಸಾಮಾನ್ಯರ ಹೃದಯಕ್ಕೆ ಹತ್ತಿರವಾದ ಕ್ಷೇತ್ರಗಳಲ್ಲಿ ಪರಮಪೂಜ್ಯರು ಕೆಲಸ ಮಾಡುತ್ತಾ ಬಂದು ಸಮಾಜ ಪರಿವರ್ತನೆಗೆ ಕಾರಣವಾಗಿದ್ದಾರೆ. ಧರ್ಮ ಭಾರತದ ಪ್ರಾಣ ಅಥವಾ ಆತ್ಮ. ಹಿಂದೂಗಳು ಎಂದು ಎದೆ ತಟ್ಟಿ ಹೇಳಿಕೊಳ್ಳಲು ಇಂದು ಹಿಂಜರಿಕೆ ಇದೆ. ಕಲ್ಲಿನಲ್ಲಿ ದೇವರನ್ನು ಕಂಡವರು ನಾವು. ನದಿ ನೀರನ್ನು ಪವಿತ್ರತೀರ್ಥ ಎಂದು ಪರಿಗಣಿಸಿದವರು ನಾವು; ಗೋವು ನಮಗೆ ಕೇವಲ ಹಾಲು ನೀಡುವ ಪ್ರಾಣಿಯಲ್ಲ; ಅದನ್ನು ಗೋಮಾತೆ ಎಂದು ಪರಿಗಣಿಸುತ್ತೇವೆ ನಾವು. ಭರತಭೂಮಿಯ ಜತೆಗೆ ವಿಶೇಷ ನಂಟು ಹೊಂದಿರುವ ಪ್ರತಿಯೊಬ್ಬರೂ ಹಿಂದೂಗಳು ಎಂದು ವಿಶ್ಲೇಷಿಸಿದರು.
ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ, “ಶಂಕರಾಚಾರ್ಯರು ನಿರ್ಮಿಸಿದ ಇತಿಹಾಸವನ್ನು ಶ್ರೀ ರಾಘವೇಶ್ವರಭಾರತೀಸ್ವಾಮೀಜಿಯವರು ಮತ್ತೆ ಸೃಷ್ಟಿಸುತ್ತಿದ್ದಾರೆ. ಭಕ್ತಿಯ ಅದ್ಭುತ ಶ್ರದ್ಧಾಕೇಂದ್ರವಾಗಿ ಮಾಣಿ ಮಠ ಬೆಳೆದಿದೆ ಎಂದರು.
ದೇವಾಲಯವನ್ನು ಸ್ವಾಯತ್ತಗೊಳಿಸುವುದು ಕೈಗಾರಿಕೆಗಳನ್ನು ಸ್ವಾಯತ್ತಗೊಳಿಸಿದಷ್ಟು ಸುಲಭವಲ್ಲ. ಈ ಬಗ್ಗೆ ಅವಲೋಕನ, ಚರ್ಚೆಗಳು ನಡೆಯುತ್ತಿವೆ. ಅಯೋಧ್ಯೆ ಮಂದಿರ, ಕಾಶಿ ಕಾರಿಡಾರ್, ಕಾಶ್ಮೀರದಲ್ಲಿ ಶಂಕರಾಚಾರ್ಯರ ಮಂದಿನ ಪುನರ್ ನಿರ್ಮಾಣವಾಗಿದೆ. ರಾಜ್ಯದಲ್ಲೂ ಸಂಪೂರ್ಣ ಬಹುಮತ ಬಂದ ತಕ್ಷಣ ದೇವಾಲಯ ಸ್ವಾಯತ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿದೆ ಎಂದು ಭರವಸೆ ನೀಡಿದರು.
ಕಳೆದ ಮೂರು ದಶಕಗಳಲ್ಲಿ ಮಾಣಿ ಮಠದಲ್ಲಿ ಅದ್ಭುತ ಬದಲಾವಣೆಗಳು ಆಗಿವೆ. ಇಡೀ ಸಮಾಜದ ಶ್ರದ್ಧಾ ಭಕ್ತಿಯ ಕೇಂದ್ರವಾಗಿ ಶ್ರೀಮಠ ರೂಪುಗೊಂಡಿದೆ. ಧರ್ಮರಕ್ಷಣೆಯ ನಿಟ್ಟಿನಲ್ಲಿ ಇಡೀ ಸಮಾಜ ಒಗ್ಗೂಡಬೇಕು. ಇದಕ್ಕೆ ಮಠಮಾನ್ಯಗಳು ಮಾರ್ಗದರ್ಶನ ನೀಡಬೇಕು ಎಂದು ಸಚಿವ ಎಸ್.ಅಂಗಾರ ಮನವಿ ಮಾಡಿದರು. ಶ್ರೀರಾಮನ ಆದರ್ಶ ನಮಗೆಲ್ಲರಿಗೆ ಮಾದರಿ ಎಂದು ಶಾಸಕ ಸಂಜೀವ ಮಠಂದೂರು ಅಭಿಪ್ರಾಯಪಟ್ಟರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮುಕ್ತೇಸರ ಶ್ರೀ ವಾಸುದೇವ ಅಸ್ರಣ್ಣ ಮಾತನಾಡಿ, ಹಿಂದೂ ಧರ್ಮವನ್ನು ಸಂಘಟಿತವಾಗಿ ಮುಂದೆ ಕೊಂಡೊಯ್ಯುವಲ್ಲಿ ರಾಘವೇಶ್ವರ ಶ್ರೀಗಳ ಪಾತ್ರ ಪ್ರಮುಖವಾದದ್ದು ಎಂದು ಬಣ್ಣಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಮಾತನಾಡಿ, “ನಮ್ಮ ಸನಾತನ ಧರ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವಲ್ಲಿ ಭಾರತೀಯ ಗುರುಪರಂಪರೆ, ಗುರುತತ್ವ ಪ್ರಮುಖ ಪಾತ್ರ ವಹಿಸಿದೆ. ಸರ್ಕಾರದ ಅಧೀನದಲ್ಲಿರುವ ದೇವಸ್ಥಾನಗಳು ಧರ್ಮದ ಉಳಿವಿಗೆ ಮಾಡಬೇಕಾದ ಕಾರ್ಯವನ್ನು ಮಾಡುತ್ತಿಲ್ಲ. ಸನಾತನ ಧರ್ಮದ ಬಗ್ಗೆ ತಿಳಿವಳಿಕೆ ಮೂಡಿಸುವ ಕಾರ್ಯ ಆಗದಿದ್ದರೆ ಮುಂದಿನ ಪೀಳಿಗೆಗೆ ಕೊಡಲಿಯೇಟು ನೀಡಿದಂತಾಗುತ್ತದೆ ಎಂದು ಎಚ್ಚರಿಸಿದರು. ಸರ್ಕಾರದಿಂದ ಯಾವ ನೆರವೂ ಇಲ್ಲದಿದ್ದರೂ ರಾಮಚಂದ್ರಾಪುರ ಮಠದಂಥ ಸಂಸ್ಥೆಗಳು ಈ ಕಾರ್ಯವನ್ನು ಮಾಡುತ್ತಿರುವುದು ಸ್ತುತ್ಯಾರ್ಹ” ಎಂದರು.
ಮನುಷ್ಯನನ್ನು ಎತ್ತಿಹಿಡಿಯುವುದು ಧರ್ಮ ಮಾತ್ರ. ಕುಟುಂಬದಲ್ಲಿ ಧರ್ಮಾಚರಣೆ ಅಳವಡಿಸಿಕೊಳ್ಳುವವರೆಗೂ ಆ ಕುಟುಂಬ ಬೆಳೆಯಲಾರದು. ಎಲ್ಲ ಧರ್ಮವನ್ನೂ ಗೌರವಿಸುವ ವೈಶಾಲ್ಯ ಇರುವುದು ಸನಾತನ ಹಿಂದೂ ಧರ್ಮದಲ್ಲಿ ಮಾತ್ರ. ಗುರುತತ್ವದಲ್ಲಿ ಅಚಲ ನಂಬಿಕೆ ಇರಿಸಿಕೊಂಡು ಮುನ್ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಭಟ್, ವಿವಿವಿ ಗೌರವಾಧ್ಯಕ್ಷ ಡಿ.ಡಿ.ಹೆಗಡೆ, ಶ್ರೀಕ್ಷೇತ್ರ ಗೋಕರ್ಣದ ತಂತ್ರಿಗಳಾದ ವೇದಮೂರ್ತಿ ಶ್ರೀ ಅಮೃತೇಶ ಭಟ್ ಹಿರೇ, ವಾಸ್ತು ತಜ್ಞ ಮಹೇಶ್ ಮುನಿಯಂಗಳ, ಕುಂಟಾರು ರವೀಶ್ ತಂತ್ರಿ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ ಚನಿಲ, ಕಾಂಗ್ರೆಸ್ ಮುಖಂಡ ಅಶೋಕ್ ಕುಮಾರ್ ರೈ, ಪುತ್ತೂರು ನಗರಸಭಾಧ್ಯಕ್ಷ ಜೀವಂದರ್ ಜೈನ್ ಉಪಸ್ಥಿತರಿದ್ದರು.
ಯಕ್ಷಧ್ರುವ ಪ್ರತಿಷ್ಠಾನದ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರು ಆಶಯಗೀತೆ ಪ್ರಸ್ತುತಪಡಿಸಿದರು. ಮಾಣಿಮಠ ಮಹಾಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮಠದ ಲೋಕಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು, ಮಾಣಿಮಠದ ಸಮಿತಿ ಕಾರ್ಯದರ್ಶಿ ಬಂಗಾರಡ್ಕ ಜನಾರ್ದನ ಭಟ್, ಕೋಶಾಧಿಕಾರಿ ಮೈಕೆ ಗಣೇಶ ಭಟ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಉಪಾಧ್ಯಕ್ಷೆ ಶೈಲಜಾ ಕೆ.ಟಿ.ಭಟ್, ಮಂಡಲ ಗುರಿಕ್ಕಾರರಾದ ಉದಯಕುಮಾರ್ ಖಂಡಿಗ, ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ವೇಣುಗೋಪಾಲ ಕೆದ್ಲ, ಮೂರು ಮಂಡಲಗಳ ಅಧ್ಯಕ್ಷರಾದ ಪರಮೇಶ್ವರ ಭಟ್, ಗಣೇಶಮೋಹನ ಕಾಶಿಮಠ, ಬಾಲಸುಬ್ರಹ್ಮಣ್ಯ ಭಟ್ ಸರ್ಪಮೂಲೆ ಭಾಗವಹಿಸಿದ್ದರು. ದೇಗುಲ ಶಿಲ್ಪವನ್ನು ನಿರ್ಮಿಸಿಕೊಟ್ಟ ಕೃಷ್ಣ ಶಿಲ್ಪಿ ಹಾಗೂ ವಾಸ್ತುತಜ್ಞ ಮಹೇಶ್ ಮುನಿಯಂಗಳ ಅವರನ್ನು ಸನ್ಮಾನಿಸಲಾಯಿತು. ಬಂಗಾರಡ್ಕ ಜನಾರ್ದನ ಭಟ್ ವಂದಿಸಿದರು. ಡಾ.ಗೌತಮ ಕುಳಮರ್ವ ಅಭಿವೃದ್ಧಿಪಡಿಸಿದ ದಾನಧಾರ ಯೋಜನೆಯನ್ನು ಈ ಸಂದರ್ಭ ಸಮರ್ಪಿಸಲಾಯಿತು. ಆಂಜನೇಯ ಪೂಜಾ ವಿಧಿ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.

Author Details


Srimukha

Leave a Reply

Your email address will not be published. Required fields are marked *