ಮನೆಯನ್ನು ನವೀಕರಿಸುವ ಉದ್ದೇಶದಿಂದ ಮುಳ್ಳೇರಿಯ ಮಂಡಲದ ಗುರಿಕಾರರು ಹಾಗೂ ಪದಾಧಿಕಾರಿ ಭೇಟಿ

ಇತರೆ

ಗುಂಪೆ: ಶ್ರಾವಣಕರೆ ಘಟಕದ ಪುತ್ತಿಗೆ ಕೃಷ್ಣಯ್ಯ ಹೆಬ್ಬಾರರ ಶಿಥಿಲಾವಸ್ಥೆಯಲ್ಲಿದ್ದ ಮನೆಯನ್ನು ನವೀಕರಿಸುವ ಉದ್ದೇಶದಿಂದ ಮುಳ್ಳೇರಿಯ ಮಂಡಲದ ಗುರಿಕಾರರು ಹಾಗೂ ಪದಾಧಿಕಾರಿಗಳು ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಮನೆ ವೀಕ್ಷಣೆ ನಡೆಸಿ, ಮನೆಯ ಪ್ರಸ್ತುತ ಸ್ಥಿತಿ ಪರಿಶೀಲಿಸಿ ಅಗತ್ಯ ದುರಸ್ತಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದ್ದರು.

 

ಇದರ ಮುಂದುವರಿದ ಭಾಗವಾಗಿ ದಿನಾಂಕ ೦4-೦1-2026 ಭಾನುವಾರದಂದು ಬೆಳಗ್ಗೆ ಕೃಷ್ಣಯ್ಯ ಹೆಬ್ಬಾರರ ಮನೆ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಹಿನ್ನೆಲೆಯಲ್ಲಿ ಗುಂಪೆ ವಲಯದ ಅಧ್ಯಕ್ಷರಾದ ಕುಮಾರ ಸುಬ್ರಮಣ್ಯ ಕೊಂದಲಕಾಡು ಇವರ ಅಧ್ಯಕ್ಷತೆಯಲ್ಲಿ ಸ್ಥಳದಲ್ಲೇ ಸಭೆ ನಡೆಸಲಾಯಿತು.

 

ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯತ್ ಮಾಜಿ ಸದಸ್ಯ ಫಾಲಾಕ್ಷ , ಶ್ರೀರಾಮಚಂದ್ರಪುರ ಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಗಳವರ ದಿವ್ಯಾನುಗ್ರಹದೊಂದಿಗೆ ಮನೆಯ ದುರಸ್ತಿ ಕಾರ್ಯವನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಿ ವಾಸಯೋಗ್ಯವಾಗಿ ಪುತ್ತಿಗೆ ಕೃಷ್ಣಯ್ಯ ಹೆಬ್ಬಾರರಿಗೆ ಹಸ್ತಾಂತರಿಸುವ ಅವಕಾಶ ಒದಗಿ ಬರಲಿ ಎಂದು ಶುಭ ಹಾರೈಸಿದರು.

‘ ಸಮಾಜದ ಅಗತ್ಯವಿರುವವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಇಂತಹ ಸೇವಾ ಕಾರ್ಯಗಳು ಮಾದರಿಯಾಗಿವೆ. ಇಂತಹ ಪುಣ್ಯ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಇ.ಎಸ್ ಮಹಾಬಲೇಶ್ವರ ಭಟ್ ಎಡಕ್ಕಾನ ಅವರು ಅಭಿಪ್ರಾಯಪಟ್ಟರು.

‘ ಕೆಲವು ವರ್ಷಗಳ ಹಿಂದೆ ಗುಂಪೆ ವಲಯಾಧ್ಯಕ್ಷರಾಗಿದ್ದ ಅಮ್ಮಂಕಲ್ಲು ರಾಮ ಭಟ್ ಅವರ ನೇತೃತ್ವದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಈ ಮನೆಯನ್ನು ನವೀಕರಿಸಿ ನೀಡಿದ ವಿಚಾರವನ್ನು ಜ್ಞಾಪಿಸಿಕೊಂಡು ಹಸುಗಳನ್ನು ಸಾಕುವ ಈ ಮನೆಯವರಿಗೆ ಗೋಮಾತೆಯ ಅನುಗ್ರಹದಿಂದ ಆದಷ್ಟು ಶೀಘ್ರವಾಗಿ ವಾಸ ಯೋಗ್ಯವಾದ ಮನೆ ದೊರಕುವಂತಾಗಲಿ. ಈ ಒಳ್ಳೆಯ ಕಾರ್ಯಕ್ಕೆ ಶ್ರೀ ಗುರುಗಳ ಅನುಗ್ರಹ ದೊರಕಲಿ ‘ ಎಂದು ಬೆಜಪ್ಪೆ ಘಟಕದ ಗುರಿಕಾರರಾದ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಸದಾಶಯ ವ್ಯಕ್ತಪಡಿಸಿದರು.

 

ವಲಯಾಧ್ಯಕ್ಷರು ಮಾತನಾಡಿ ‘ ಅಸಹಾಯಕ ಸ್ಥಿತಿಯಲ್ಲಿರುವ ಕುಟುಂಬದ ಕಷ್ಟಗಳಿಗೆ ಸ್ಪಂದಿಸಿ ಮನೆ ನವೀಕರಣಕ್ಕೆ ಭರವಸೆಯ ಬೆಂಬಲವಾಗಿ ನಿಂತಿರುವ ಶಾಂಭವೀ ಫ್ಯಾಮಿಲಿ ಟ್ರಸ್ಟ್ ಎಡಕ್ಕಾನ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಇ. ಯಸ್. ಮಹಾಬಲೇಶ್ವರ ಭಟ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ಈ ಕಾರ್ಯವನ್ನು ಯಶಸ್ವಿಗೊಳಿಸಲು ಎಲ್ಲರೂ ಕೈಜೋಡಿಸಿ ತನು – ಮನ, ಧನಗಳ ಸಹಕಾರ ನೀಡಬೇಕು ‘ ಎಂದು ವಿನಂತಿಸಿದರು.

 

ಸಭೆಯಲ್ಲಿ ಪುತ್ತಿಗೆ ಪಂಚಾಯತ್ ಮಾಜಿ ಸದಸ್ಯರಾದ ಫಾಲಾಕ್ಷ, ಇಂಜಿನಿಯರ್ ಕೆ. ರಾಮಚಂದ್ರ ಶಾಸ್ತ್ರಿ, ಶಾಂಭವಿ ಫ್ಯಾಮಿಲಿ ಟ್ರಸ್ಟ್ ಎಡಕ್ಕಾನ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಇ.ಎಸ್. ಮಹಾಬಲೇಶ್ವರ ಭಟ್, ಶ್ರಾವಣಕರೆ ಘಟಕದ ಗುರಿಕಾರರಾದ ನಾರಾಯಣರಾವ್, ಗುಂಪೆ ವಲಯದ ವಿವಿಧ ಘಟಕಗಳ ಗುರಿಕಾರರು, ವಲಯದ ವಿವಿಧ ಪದಾಧಿಕಾರಿಗಳು, ವಲಯ ಶಿಷ್ಯಬಂಧುಗಳು ಹಾಗೂ ಸಾಮಾಜಿಕ ಸಂಘ–ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.

ಶ್ರೀಗುರುವಂದನೆ ಹಾಗೂ ಗೋಸ್ತುತಿಯೊಂದಿಗೆ ಆರಂಭಗೊಂಡ ಸಭೆಯು, ಗುಂಪೆವಲಯದ ಲೇಖ ವಿಭಾಗದ ಇ. ಯಚ್ ಗೋವಿಂದ ಭಟ್ ಅವರ ಧನ್ಯವಾದ ಸಮರ್ಪಣೆಯೊಂದಿಗೆ ಸಂಪನ್ನವಾಯಿತು.

Leave a Reply

Your email address will not be published. Required fields are marked *