ನಮ್ಮ ಭಾರತೀಯ ಸಂಸ್ಕೃತಿಲಿ ಹಬ್ಬಂಗೊ ಹೇಳಿದರೆ ಬರೀ ಸಂಭ್ರಮದ ದಿನoಗೊ ಅಲ್ಲ, ಸಂತೋಷದ ಪ್ರದರ್ಶನ ಅಲ್ಲ, ನಮ್ಮ ನಿತ್ಯ ಜೀವನ, ಪ್ರಕೃತಿ ಮತ್ತೆ ನಮ್ಮ ಧರ್ಮ. ಈ ಮೂರುದೆ ಒಟ್ಟಿಂಗೆ ಸೇರಿಬಪ್ಪ ಧಾರ್ಮಿಕ ಆಚರಣೆ. ನವರಾತ್ರಿ, ದೀಪಾವಳಿ ಎಲ್ಲ ಇಪ್ಪಾಂಗೆ ಸಂಕ್ರಾಂತಿ ಹಬ್ಬವುದೆ ಒಂದು ಹಬ್ಬ. ನಮ್ಮ ಇತ್ಲಾಗಿ ಮೊದಲಿಂಗೆ ಈ ಆಚರಣೆ ಕಮ್ಮಿಯಾದರೂ ಇಂದು ನಮಗೂ ಈ ಹಬ್ಬದ ಮಹತ್ವ ಗೊಂತಿದ್ದು. ಬೆಣಚ್ಚು, ಭೂಮಿ, ಗೋಮಾತೆ, ಕೃಷಿ ಇದಕ್ಕೆಲ್ಲ ಸಂಬಂಧಪಟ್ಟ ಹಬ್ಬ ಇದು.
ಸಂಕ್ರಾಂತಿ ಹೇಳಿದರೆ ಸೂರ್ಯ ಒಂದು ರಾಶಿಂದ ಇನ್ನೊಂದು ರಾಶಿಗೆ ಸಂಕ್ರಮಣ ಮಾಡುವ ಕಾಲ. ೧೨ ರಾಶಿಗಳಲ್ಲಿಯೂ ಸೂರ್ಯ ಸಂಚಾರ ಮಾಡ್ತ°.
ಮಕರ ಸಂಕ್ರಾಂತಿ ಹೇಳಿದರೆ ಉತ್ತರಾಯಣದ ಪುಣ್ಯಕಾಲ ಸುರುವಪ್ಪ ದಿನ. ದಕ್ಷಿಣಾಯನ ಹೇಳಿದರೆ ಪಿತೃ ಮಾರ್ಗದ ಬಾಗಿಲು ತೆಗವ ಸಮಯ ಆದರೆ ಉತ್ತರಾಯಣ ದೇವಮಾರ್ಗದ ಬಾಗಿಲು ತೆಗವ ಸಮಯ ಹೇಳುದು ನಮ್ಮ ಧಾರ್ಮಿಕ ವಿಶ್ವಾಸ. ಸೂರ್ಯದೇವರು ಧನು ರಾಶಿಂದ ಮಕರ ರಾಶಿಗೆ ಬಪ್ಪದಿನವೇ ಮಕರ ಸಂಕ್ರಾಂತಿ . ಹಾಂಗಾಗಿ ಈ ಹಬ್ಬದ ದಿನ ಸೂರ್ಯ ದೇವರ ವಿಶೇಷವಾಗಿ ಆರಾಧನೆ ಮಾಡುದು. ನಮ್ಮ ಒಂದು ವರ್ಷ ಹೇಳಿದರೆ ದೇವತೆಗೊಕ್ಕೆ ಒಂದು ದಿನ ಆಡ. ಅದರ್ಲ್ಲಿ ದಕ್ಷಿಣಾಯನ ಹೇಳಿದರೆ ಇರುಳು. ಉತ್ತರಾಯಣ ಹಗಲು ಹೇಳಿ ನಮ್ಮ ಹಿರಿಯರ ನಂಬಿಕೆ. ಉತ್ತರಾಯಣದ ಶುಭದಿನ ಸ್ವರ್ಗದ ಬಾಗಿಲು ತೆಗವದು ಹೇಳಿ ನಮ್ಮ ಪುರಾಣoಗಳಲ್ಲಿ ಉಲ್ಲೇಖವಾಗಿದ್ದು. ಸಂಕ್ರಮಣದ ಕಾಲ ಹೇಳಿದರೆ ತುಂಬಾ ಪುಣ್ಯಪ್ರದವಾದ ಕಾಲ. ನಮ್ಮ ಅಧ್ಯಾತ್ಮ ಸಾಧನೆಗೆ ಪುಣ್ಯಕಾರ್ಯ ಮಾಡ್ಲೆ ಈ ಸಮಯ ತುಂಬಾ ಶ್ರೇಷ್ಠ ಆಡ
ಮಹಾಭಾರತಲ್ಲಿ ಪಾಂಡವ ಕೌರವರ ಅಜ್ಜ° ಭೀಷ್ಮ ಪಿತಾಮಹ ಬಾಣದ ಮಂಚಲ್ಲಿ ಮನುಗಿಂಡು ಮೋಕ್ಷಕ್ಕೆ ಬೇಕಾಗಿ ಉತ್ತರಾಯಣದ ಶುಭದಿನವರೆಗೆ ಕಾದುಕೂದ ವಿಷಯ ನಮಗೆಲ್ಲ ಕೇಳಿ,ಓದಿ ಗೊoತಿದ್ದು.
ಸೂರ್ಯ ದೇವರು ಎಲ್ಲ ಗ್ರಹಂಗಳ ಶಕ್ತಿಯ ಮೂಲ ಹೇಳಿ ಜ್ಯೋತಿಷ್ಯ ಶಾಸ್ತ್ರ ಹೇಳ್ತು. ಸೂರ್ಯನ ಚಲನೆಯ ಒಟ್ಟಿoಗೆ ಕಾಲಚಕ್ರವುದೇ ಬದಲುತ್ತು. ಸಂಕ್ರಾಂತಿ ಹೇಳುವ ಪದದ ಅರ್ಥವೇ ಬದಲಾವಣೆ ಹೇಳಿ. ಮಕರ ಸಂಕ್ರಾಂತಿಂದ ಮತ್ತೆ ಹಗಲು ಹೆಚ್ಚು ಇರುಳು ಕಮ್ಮಿ ಆವ್ತು. ಇದು ಪ್ರಕೃತಿಲಿ ನಡವ ಒಂದು ವಿಶೇಷ ಬದಲಾವಣೆ. ಇದರ ಧಾರ್ಮಿಕವಾಗಿ ಹೇಳ್ತರೆ ಬೆಣಚ್ಚಿನ ಹೊಡೆಂಗೆ ಹೋಪ ಹಬ್ಬ ಹೇಳಿ ಹೇಳ್ಲಕ್ಕು. ಹಾಂಗಾಗಿ ಮಕರ ಸಂಕ್ರಾಂತಿ ಮಾನವನ ಅಜ್ಞಾನ, ದುಃಖ, ಬೇಜಾರ ಎಲ್ಲವನ್ನು ದೂರ ಮಾಡಿ ಹೊಸ ಆಶೆ, ಹೊಸ ಕನಸುಗಳ ಮನಸ್ಸಿಗೆ ತುಂಬುವ ಹಾoಗಿದ್ದ ಒಳ್ಳೆಯ ಸಂದೇಶ ಕೊಡುವ ಹಬ್ಬ.
ನಮ್ಮ ಹೆಚ್ಚಿನ ಹಬ್ಬಂಗಳೂ ಚಾಂದ್ರಮಾನದ ಪ್ರಕಾರ ಬತ್ತರೆ ಈ ಮಕರ ಸಂಕ್ರಾಂತಿ ಹಬ್ಬ ಹಾಂಗಲ್ಲ. ಇದು ಸೌರಮಾನ ವರ್ಷದ ಆಚರಣೆಲಿ ಬಪ್ಪ ಹಬ್ಬ. ಈ ಕಾರಣಂದಾಗಿ ಇದು ಹೆಚ್ಚಾಗಿ ನಮ್ಮ ಆಂಗ್ಲ ವರ್ಷ ಜನವರಿ ೧೪ ಅಥವಾ ೧೫ ನೇ ತಾರೀಕಿoಗೆ ಬಪ್ಪದು. ಭಾರತದ ಬೇರೆ ಬೇರೆ ರಾಜ್ಯಂಗಳಲ್ಲಿ ಬೇರೆ ಬೇರೆ ಹೆಸರಿಲ್ಲಿ ಇದರ ಆಚರಿಸುತ್ತವು. ಸಂಕ್ರಾಂತಿಯ ಸಮಯಲ್ಲಿ ಮಾಡುವ ಪುಣ್ಯ ಕಾರ್ಯಂಗೊ, ವ್ರತಂಗೊ, ದಾನಂಗೊ ಬಾಕಿದ್ದ ಸಮಯಂಗಳಲ್ಲಿ ಮಾಡುದಕ್ಕಿಂತ ಹೆಚ್ಚು ಫಲ ಕೊಡ್ತು ಹೇಳುದು ನಮ್ಮ ಸನಾತನ ನಂಬಿಕೆ. ಹಾಂಗಾಗಿ ಈ ದಿನ ವಿಶೇಷವಾದ ದಾನಂಗಳ ಕೊಡ್ಲೆ ಮತ್ತಷ್ಟು ಒಳ್ಳೆ ದಿನ.
ನಮ್ಮ ಹೆಚ್ಚಿನ ದೇವಸ್ಥಾನಂಗಳಲ್ಲಿ ಆಯನಂಗೊ (ಜಾತ್ರೆ) ಸುರುವಪ್ಪದು ಮಕರ ಸಂಕ್ರಾಂತಿಂದ ಮತ್ತೆಯೇ. ಸೂರ್ಯನ ಬೆಣಚ್ಚು ಹೆಚ್ಚು ಪ್ರಖರ ಆವ್ತಾ ಹೋಪ ಈ ಸಮಯಲ್ಲಿ ಎಳ್ಳು, ಬೆಲ್ಲ, ಕಬ್ಬು ಇದೆಲ್ಲ ತಿಂದರೆ ಆರೋಗ್ಯಕ್ಕೆ ಒಳ್ಳೆದು ಹೇಳುವ ಕಾರಣಕ್ಕೆ ಸಂಕ್ರಾಂತಿಯ ದಿನ ಇದರ ಅತ್ಲಾಗಿತ್ಲಾಗಿ ಹಂಚುವ ಆಚರಣೆ ರೂಢಿಗೆ ಬಯಿಂದು.
‘ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡು ‘ ಹೇಳುವ ಮಾತು ಈ ಹಬ್ಬದ ಸಂದೇಶ ಹೇಳ್ಲಕ್ಕು. ಇದು ಸೌಹಾರ್ದತೆ, ಒಳ್ಳೆಯ ಸಂಬಂಧ ಒಳಿಶಿಕೊಂಬದರ ಸಂಕೇತ.
ಕೇರಳದ ಪ್ರಸಿದ್ಧ ದೇವಸ್ಥಾನ ಶಬರಿಮಲೆಲಿ ಮಕರಜ್ಯೋತಿ ದರ್ಶನ ಅಪ್ಪದೂದೆ ಮಕರ ಸಂಕ್ರಾಂತಿಯ ದಿನವೇ. ತಮಿಳುನಾಡಿನ ಪೊಂಗಲ್ ಹಬ್ಬವನ್ನು ಇಂದೇ ಆಚರಿಸುದು. ಉತ್ತರ ಕರ್ನಾಟಕ ಹೊಡೇಲಿ ಸಂಕ್ರಾಂತಿ ದಿನ ಗೋಪೂಜೆಯನ್ನೂ ಮಾಡ್ತವು. ದನಗಳ, ಎತ್ತುಗಳ ಮೀಶಿ ಅಲಂಕಾರ ಮಾಡಿ ಆರತಿ ಮಾಡ್ತವಾಡ.
ಈ ದಿನ ಸೂರ್ಯ ದೇವರ ಆರಾಧನೆಗೆ ವಿಶೇಷ ದಿನ. ಶಕ್ತಿಯ ಮೂಲವಾದ ಸೂರ್ಯನ ಉಪಾಸನೆಂದ ನಮಗೆಲ್ಲ ಒಳ್ಳೆದಾವ್ತು ಹೇಳುವ ನಂಬಿಕೆಂದಲೇ ಈ ದಿನ ಸೂರ್ಯೋದಯ ಕಾಲಲ್ಲಿ ಪುಣ್ಯನದಿ ಸ್ನಾನ ಮಾಡೆಕು ಹೇಳುವ ಆಚರಣೆ ಬಂದದು. ಪವಿತ್ರ ನದಿಗಳಲ್ಲಿ ಹೋಗಿ ಮೀವಲೆ ಎಡಿಯದ್ದವು ಅವರವರ ಮನೆಗಳಲ್ಲೇ ಮಿಂದು ಸೂರ್ಯಂಗೆ ಅರ್ಘ್ಯ ಕೊಟ್ಟು ಸೂರ್ಯ ದೇವರ ಉಪಾಸನೆ ಮಾಡಿದರೆ ಅವನ ಅನುಗ್ರಹಂದ ಬದುಕಿಲ್ಲಿ ಸದಾ ಯಶಸ್ಸು ಸಿಕ್ಕುತ್ತು ಹೇಳುದು ನಮ್ಮ ಹಿರಿಯರ ವಿಶ್ವಾಸ. ನಾವುದೆ ಅದನ್ನೇ ಅನುಸರಿಸಿದರೆ ಒಳ್ಳೆದಾವ್ತು ಹೇಳುವ ನಂಬಿಕೆ.
ಈ ವರ್ಷ ಜನವರಿ ೧೪ ಕ್ಕೆ ಮಕರ ಸಂಕ್ರಾಂತಿ ಹಬ್ಬ. ಎಳ್ಳು, ಬೆಲ್ಲ ಹಂಚಿ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಗಳ ಹಾಂಗೆ ಕಾಲ, ಪ್ರಕೃತಿಯ ಒಟ್ಟಿಂಗೆ ಬೆರೆತು ಹೋದ ಈ ಹಬ್ಬವ ಕೊಶೀಲಿ ಆಚರಿಸುವ°. ನಮ್ಮ ಹಿರಿಯರು ಹೇಳುವ ಹಾಂಗೆ ಈ ಭೂಮಿಲಿ ಗೋವುಗೊಕ್ಕೂ, ಬ್ರಾಹ್ಮಣರಿಂಗು ಸದಾ ಕ್ಷೇಮವೇ ಆಗಲಿ. ಈ ಮೂಲಕ ಧನ, ಧಾನ್ಯ, ಸಂಪತ್ತು ಹೆಚ್ಚಾಗಲಿ. ಇದರಿಂದ ಲೋಕಕ್ಕೇ ಸನ್ಮಂಗಲ ಆಗಲಿ ಹೇಳುವ ಪ್ರಾರ್ಥನೆ ನಮ್ಮದು.
ಪ್ರಸನ್ನಾ ವಿ. ಚೆಕ್ಕೆಮನೆ