ನಮ್ಮ ಸಮಾಜಲ್ಲಿ ಹೆಮ್ಮಕ್ಕೊಗೆ ಯೇವಗಲೂ ವಿಶೇಷ ಗೌರವ ಇದ್ದು ಹೇಳಿ ನಮಗೆ ಗೊಂತಿದ್ದು. ನಮ್ಮ ಹಿರಿಯರು ಹೇಳುವ ಹಾಂಗೆ ‘ ಎಲ್ಲಿ ಹೆಮ್ಮಕ್ಕೋಗೆ ಗೌರವ ಸಿಕ್ಕುತ್ತೋ ಅಲ್ಲಿ ದೇವತೆಗೋ ನೆಲೆಸಿರ್ತ್ತವಡ’. ಹಾಂಗಾಗಿಯೇ ಹೆಮ್ಮಕ್ಕಳ ಗೃಹಲಕ್ಷ್ಮಿ ಹೇಳಿ ಲಕ್ಷ್ಮೀದೇವಿಗೆ ಹೋಲಿಸುದು. ಕೂಸುಗಳ ಅಂತೂ ಭಾಗ್ಯಲಕ್ಷ್ಮಿ ಹೇಳಿಯೇ ಹೇಳುದು. ಈ ಸರ್ತಿ ಲಕ್ಷ್ಮೀ ದೇವಿಯರ ಹಾಂಗೆ ಇಪ್ಪ ಹೆಮ್ಮಕ್ಕಳ ವಸ್ತ್ರ ವಿನ್ಯಾಸದ ವಿಶಯವ ಆಲೋಚನೆ ಮಾಡುವ°
ಹೆಮ್ಮಕ್ಕಳ ದೇಹ ಹೇಳಿದರೆ ದೇವಸ್ಥಾನದಷ್ಟೇ ಪವಿತ್ರ ಹೇಳಿ ನಮ್ಮ ಹಿರಿಯರು ಹೇಳಿದ್ದವು. ಹಾಂಗಾಗಿಯೇ ನಾವು ಹಾಕುವ ವಸ್ತ್ರ ಅಥವಾ ಉಡುಗೆಗೊಕ್ಕೆ ಅಷ್ಟೇ ಮಹತ್ವ ಇಪ್ಪದು.
ನಾವು ಹಾಕುವ ಉಡುಗೆ ಹೇಳಿರೆ ಅದು ಬರೀ ಮೈ ಮುಚ್ಚುವ ವಸ್ತ್ರ ಅಲ್ಲ. ಅದು ನಾವು ಆರು ಹೇಳುವುದರ ಸಮಾಜಕ್ಕೆ ತೋರಿಸುವ ಕನ್ನಟಿ. ನಮ್ಮ ಸಂಸ್ಕಾರ ಹೇಂಗಿಪ್ಪದು ಹೇಳಿ ನಾವು ಹಾಕುವ ವಸ್ತ್ರ ನೋಡಿ ಗುರುತಿಸಲೇ ಎಡಿತ್ತು. ಅದಕ್ಕೆ ನಾವು ನಮ್ಮ ಮಕ್ಕೊಗೆ ಸಣ್ಣಾದಿಪ್ಪಗಳೇ ಉಡುಗೆಯ ಮಹತ್ವ ತಿಳುಶೆಕು, ಇಲ್ಲದ್ರೆ ದೊಡ್ಡಾದ ಮತ್ತೆ ಅವಕ್ಕೆ ನಮ್ಮ ಸಂಸ್ಕೃತಿಯ ಬೆಲೆ ಗೊಂತಾವ್ತಿಲ್ಲೆ.
ಮಕ್ಕೊಗೆ ಸಣ್ಣಾದಿಪ್ಪಗಳೇ ಸಾಂಪ್ರದಾಯಿಕ ಉಡುಗೆಗಳ ಮಹತ್ವ ತಿಳಿಶೆಕು. ಅವರ ಮನಸ್ಸಿಗೆ ಖುಷಿ ಅಪ್ಪ ಹಾ೦ಗೆ ಅದರ ಮಹತ್ವವನ್ನುದೆ ಹೇಳೆಕು.
‘ ಮೈ ಮುಚ್ಚುವ ಹಾ೦ಗೆ, ಮೈ ತುಂಬಾ ವಸ್ತ್ರ ಹಾಕಿದರೆ ನಮ್ಮ ಮನಸ್ಸಿ೦ಗೆ ಆತ್ಮವಿಶ್ವಾಸ ಬತ್ತು. ಸುರಕ್ಷೆಯ ಭಾವನೆ ಇರ್ತು ಹೇಳಿ ಮಕ್ಕೊಗೆ ನಾವು ಮನೆ೦ದಲೇ ಕಲುಶೆಕು. ಮೈಕೈ ತೋರಿಸುವ ವಸ್ತ್ರಂಗಳಿಂದ ಮೈ ಮುಚ್ಚುವ ಸಾಂಪ್ರದಾಯಿಕ ಉಡುಗೆಗೊಕ್ಕೆ ಹೆಚ್ಚು ಗೌರವ ಸಿಕ್ಕುತ್ತು ಹೇಳುದರ ನಾವು ನಮ್ಮ ಮಕ್ಕೊಗೆ ಸಣ್ಣಾದಿಪ್ಪಗಳೇ ಗೊಂತು ಮಾಡ್ಸದ್ರೆ ಮಕ್ಕೊ ದೊಡ್ಡಪ್ಪಗ, ಆಧುನಿಕತೆಯ ಗಾಳಿ ಬಡಿವಗ ಅವು ಹಾಕುವ ವಸ್ತ್ರದ ಕ್ರಮಂಗೊ ಬದಲುತ್ತು.
ಇಂದು ನಮಗೆ ಸಾಮಾಜಿಕ ಜಾಲತಾಣಲ್ಲಿ ಅದೆಷ್ಟೋ ಕೂಸುಗಳ ಪಟ ಕಾಣ್ತು. ಬೇಜಾರಪ್ಪ ವಿಷಯ ಎಂತರ ಹೇಳಿದರೆ ಅದರ್ಲಿ ಅವೆಲ್ಲ ಹಾಕುವ ಅಂಗಿಗಳ ನೋಡಿರೆ ನಿಜವಾಗಿ ಎಂತ ಹೇಳೆಕು ಗೊಂತಾವ್ತಿಲ್ಲೆ. ಮೈ ಮುಚ್ಚುದು ಹೇಳಿದಕ್ಕಿಂತ ಹೆಚ್ಚು, ಮೈಕಾಂಬಾಂಗಿಪ್ಪ ಅಂಗಿಗಳನ್ನೇ ನಮ್ಮ ಕೂಸುಗೊ ಈಗ ಹಾಕುತ್ತಾ ಇದ್ದವು. ಸಾಂಪ್ರದಾಯಿಕವಾಗಿ ಸೀರೆ ಸುತ್ತಿದರು ಸೆರಗು ಹಾಕುವ ರೀತಿಗೆ ಗಮನ ಕೊಟ್ಟರೆ ಮೈಯ ಮುಚ್ಚುದರಿಂದ ಹೆಚ್ಚು ಪ್ರದರ್ಶನಕ್ಕೆ ಮೊದಲ ಆದ್ಯತೆ ಕೊ ಕೊಡುವ ಹಾಂಗೆ ಕಾಣ್ತು.
‘ಇದೇಕೆ ಹಿಂಗಾವ್ತೂಳಿ ‘ ನಾವು ಆಲೋಚನೆ ಮಾಡ್ಲೇಬೇಕು. ವಸ್ತ್ರಸಂಹಿತೆಯ ವಿಶಯಲ್ಲಿ ನಾವೀಗ ತುಂಬ ಮುಂದುವರಿದ್ದು. ನಮ್ಮ ದೇಹ ತೋರಿಸುವುದು ನಮ್ಮ ಹಕ್ಕು ಹೇಳಿ ಗ್ರೇಶುವ ಕೂಸುಗಳೇ ಇಂದು ಹೆಚ್ಚಿನವುದೆ.
ಹೆಮ್ಮಕ್ಕೋಗೆ ಸ್ವಾತಂತ್ರ್ಯ ಇದ್ದು ಹೇಳಿ ತೋರ್ಸಲೆ ಬೇಕಾಗಿ ಹೀಂಗೆ ಮೈಕಾಂಬ ವಸ್ತ್ರ ಹಾಕುತ್ತವೋ ಗೊಂತಿಲ್ಲೆ. ಒಂದು – ಎರಡು ವರ್ಷದ ಪುಟ್ಟು ಮಕ್ಕೊ ಹಾಕುವ ಹಾಂಗಿದ್ದ ಸಣ್ಣ ಸಣ್ಣ ಅಂಗಿಗಳ ನಮ್ಮ ಹದಿಹರೆಯದ ಕೂಸುಗೊ ಹಾಕುತ್ತದು ಕಾಂಬಗ ಬೇಜಾರಾವ್ತು.
ನಾವು ಹಾಕುವ ವಸ್ತ್ರ0ಗೊ ನಮ್ಮ ಬಗ್ಗೆ ಇನ್ನೊಬ್ಬರಿಗೆ ಗೌರವ ಹುಟ್ಸೆಕು ಹೇಳಿ ನಮ್ಮ ಹಿರಿಯರು ಹೇಳಿಕೊಂಡಿತ್ತಿದ್ದವು. ಒಂದು ಕೂಸಿನ ಕಾಂಬಗ ನಮಗೆ
‘ ನಮ್ಮ ತಂಗೆಯ ಹಾ೦ಗೆ, ಅಕ್ಕನ ಹಾ೦ಗೆ ಹೇಳುವ ಭಾವನೆ ಬರೆಕಾರೆ ಅವು ಹಾಕಿದ ವಸ್ತ್ರಂಗಳು ಅಷ್ಟೇ ಗೌರವಪೂರ್ಣವಾಗಿ ಇರೆಕ್ಕು. ತುಂಬಾ ಬಿಗಿಯಾದ, ಅರ್ಧ ಮೈಕಾಂಬ ವಸ್ತ್ರಂಗಳ ಹಾಕಿದರೆ ನಮಗೆ ಅವರತ್ರೆ ಮಾತಾಡ್ಲೆ ಎಡ್ತಿಲ್ಲೆ ಹೇಳುದೇ ಸತ್ಯ. ಇದರ್ಲಿ ಇನ್ನೂ ವಿಶೇಶ ಎಂತರಾಳಿ ಕೇಳಿದರೆ ಎಷ್ಟೋ ಜೆನ ಅಬ್ಬೆಕ್ಕಳೇ ಮಕ್ಕಳ ಹೀಂಗಿದ್ದ ವಸ್ತ್ರ ಹಾಕುವ ಹಾಂಗೆ ಪ್ರೋತ್ಸಾಹ ಕೊಡ್ತವು.
‘ ಎಂಗಳ ಕಾಲಲ್ಲಿ ಹೀಂಗಿಪ್ಪ ವಸ್ತ್ರ ಹಾಕಲೆ ಅವಕಾಶ ಸಿಕ್ಕಿದ್ದಿಲ್ಲೆ. ಮಕ್ಕೊ ಆದರೂ ಅವಕ್ಕೆ ಬೇಕಾದ ಹಾಂಗಿದ್ದ ಅಂಗಿ ಹಾಕಲಿ ಹೇಳುವ ಮನಸ್ಸು ಅವರದ್ದು. ಹೆಮ್ಮಕ್ಕಳ ವ್ಯಕ್ತಿತ್ವ ಹೆಚ್ಚು ಗೌರವಪೂರ್ಣ ಆಯೆಕಾರೆ ಅವು ಹಾಕುವ ಉಡುಗೆಲಿ ಇರ್ತು ಹೇಳುದರ ಮಕ್ಕೊಗೆ ಕಲುಶಲೆ ಮರೆತ್ತವು.
ನಾವು ಅಮೂಲ್ಯ ವಸ್ತುಗಳ, ಆಭರಣಂಗಳ ಎಲ್ಲ ಯೇವ ರೀತಿಲಿ ಜಾಗ್ರತೆಲಿ ಕಪಾಟಿಲ್ಲಿ, ಪೆಟ್ಟಿಗೆಲಿ ಮಡುಗುತ್ತೋ, ಅದೇ ರೀತಿಲಿ ನಮ್ಮ ಕೂಸುಗಳ ದೇಹವನ್ನೂ ಅಷ್ಟೇ ಜಾಗ್ರತೆಲಿ, ಪವಿತ್ರವಾಗಿ ಕಂಡು, ಮೈ ಮುಚ್ಚುವ ರೀತಿಲಿ ವಸ್ತ್ರ ಹಾಕಲೆ ಮಕ್ಕೊಗೆ ಕಲುಶೆಕು. ದೇಹದ ಬಗ್ಗೆ ಗೌರವ ಬಪ್ಪ ಹಾಂಗೆ ಮಾಡುದೇ ಸುರುವಾಣ ಕೆಲಸ ಆಯೆಕು. ಸಾಂಪ್ರದಾಯಿಕ ಉಡುಗೆ ಹಾಕಿಯಪ್ಪಗ ನಮ್ಮ ಮಕ್ಕಳ ಕಾಂಬಲೆ ಎಷ್ಟು ಚಂದ ಇರ್ತು ಹೇಳಿ ಅಪ್ಪ°, ಅಮ್ಮಂದ್ರೇ ಆಲೋಚನೆ ಮಾಡೆಕು. ಅಕ್ಷರ ಕಲುಶುವಷ್ಟೇ ಶ್ರದ್ಧೆಲಿ ಮಕ್ಕೊಗೆ ನಮ್ಮ ಉಡುಗೆ ತೊಡುಗೆಯ ಮಹತ್ವವ ಕಲುಶೆಕು. ನಮ್ಮ ದೇಹಕ್ಕೆ ನಾವು ಗೌರವ ಕೊಟ್ಟು, ಅಚ್ಚುಕಟ್ಟಾದ ಉಡುಗೆ ಹಾಕಿದರೆ ಸಮಾಜವೂ ನಮಗೆ ಗೌರವಕೊಡ್ತು ಹೇಳುವ ವಿಶಯವ ಮಕ್ಕೊಗೆ ಸಣ್ಣಾದಿಪ್ಪಗಲೇ ಹೇಳಿಕೊಡೆಕು. ನಮ್ಮ ಹಿರಿಯರು ಹಾಕಿಕೊಟ್ಟ ಮರ್ಯಾದೆಯ ದಾರಿ ನಮಗೆ ಸದಾ ರಕ್ಷಣೆ ಕೊಡ್ತು ಹೇಳುದರ ಮರವಲಾಗ.
ಹೆಮ್ಮಕ್ಕೊ ಹೇಳಿದರೆ ಸಂಸ್ಕೃತಿಯ ಒಳುಶುವ ಶಕ್ತಿ ಇಪ್ಪವು. ಅವು ಮನಸ್ಸು ಮಾಡಿದರೆ ಎಡಿಯದ್ದದು ಯೇವದೂ ಇಲ್ಲೆ. ಹಾಂಗಾಗಿ ನಮ್ಮ ವಸ್ತ್ರ ಸಂಹಿತೆಯ ಮಹತ್ವವ ನಮ್ಮ ಮಕ್ಕೊಗೆ, ಅದರ್ಲೂ ಮೈಗೆ ಅಂಟಿದ, ಮೈ ಕಾಂಬ, ಆಧುನಿಕತೆಯ ಹೆಸರಿಲ್ಲಿ ಬೇರೆ ಬೇರೆ ರೀತಿಲಿ ಅಂಗಾಂಗ ಪ್ರದರ್ಶನ ಮಾಡುವ ನಮ್ಮ ಕೂಸುಗೊಕ್ಕೆ ತಿಳಿಶುವ°. ಹೊಸ ಬದಲಾವಣೆ ನಮ್ಮ ಮನೆ೦ದಲೇ ಸುರುವಾಗಲಿ ಹೇಳಿ ಗ್ರೇಶುವ°. ನಮ್ಮ ಸಂಸ್ಕಾರದ ದೀಪ ಪ್ರತಿಮನೆಲೂ ಬೆಳಗಲಿ. ಆ ದೀಪದ ಬೆಣಚ್ಚು ನಮ್ಮ ಹವ್ಯಕ ಸಂಸ್ಕೃತಿ ಸಂಪ್ರದಾಯಂಗಳ ಒಳಿಶಿ ಮುಂದಿನ ತಲೆಮಾರಿಂಗುದೆ ದಾರಿ ತೋರ್ಸಲಿ.
ಪ್ರಸನ್ನಾ ವಿ. ಚೆಕ್ಕೆಮನೆ