ನಮ್ಮ ಹಿರಿಯರು ನಮಗೆ ದಿನಚರಿ ಹೇಂಗಿದ್ದರೆ ಒಳ್ಳೆದು ಹೇಳಿ ಒಂದಿಷ್ಟು ಚೆಂದದ ಪಾಠ ಕಲಿಶಿದ್ದವು. ಅದರ ಈಗಾಣವಕ್ಕೆ ಅನುಸರಿಸಲೆ ಬಂಙವೇ ಆವ್ತು ಹೇಳಿ ಕಂಡರೂ ಅದೆಂತರಾಳಿ ನೋಡಿಂಡು ಬಪ್ಪೊ°.
ಒಂದೊಂದು ಮನೆಯ ಕ್ರಮಲ್ಲಿ ರಜ ರಜಾ ವೆತ್ಯಾಸಂಗೊ ಇದ್ದರೂ ಮನೆಯ ಹೆರಿಯರು ಹೇಳುವ ಪಾಠ ಸಾಧಾರಣ ಒಂದೇ ಆಗಿಕ್ಕು.
ಹಾಸಿಗೆಂದ ಏಳುಗಳೇ ದೇವರ ಸ್ಮರಣೆ ಮಾಡಿ ಎದ್ದಿಕ್ಕಿ , ಮತ್ತೆ ಮಂಗಳಕರವಾದ ಸುವಸ್ತುಗಳ ನೋಡೆಕು ಹೇಳಿಯೇ ಮದಲಾಣವು ಹೇಳುದು. ಮಂಗಲಕರ ಹೇಳಿದರೆ ಎಂತರ ಗೊಂತಿದ್ದನ್ನೇ ? ಆ ವಸ್ತುಗಳ ನೋಡಿಯಪ್ಪಗ ಮನಸ್ಸಿಂಗೆ ತಂಪಾಯೆಕು. ಕೊಶಿ ಆಯೆಕು. ಉದಿಯಪ್ಪಗ ಎದ್ದಾಂಗೆ ಒಳ್ಳೆ ವಿಷಯಂಗೊ, ಒಳ್ಳೆ ವಸ್ತುಗೊ ಕಂಡರೆ ಆ ದಿನ ಇಡೀ ಶುಭದಿನ ಆಗಿರ್ತು ಹೇಳಿ ಮದಲಾಣವರ ನಂಬಿಕೆ. ಅದು ಲೊಟ್ಟೆ ಅಲ್ಲಾ ಹೇಳುದು ನಮ್ಮ ಜೀವನಲ್ಲಿಯೂ ಅನುಭವಕ್ಕೆ ಬಂದ ಸತ್ಯಂಗೊ.
ತೆಂಗಿನಮರ, ದನಗೊ, ಹಾಲು, ಮೊಸರು, ಕನ್ನಾಟಿ, ಬೆಳಿ ಹೂಗು, ಕುಂಕುಮ, ಗಂಧ….ಹೀಂಗೇ ಮಂಗಲಕರವಾದ ಸುವಸ್ತುಗೊ ಸುಮಾರಿದ್ದು.
ಮದಲಿಂಗೆ ಹೀಂಗಿದ್ದ ಸುವಸ್ತುಗೊ ತುಂಬ ಸುಲಭಲ್ಲಿ ಕಣ್ಣಿಂಗೆ ಬೀಳುಗು. ನಾವು ಎದ್ದು ಬಪ್ಪಗಳೇ ಅಬ್ಬೆಯೋ, ದೊಡ್ಡಬ್ಬೆಯೋ ಹಟ್ಟಿಂದ ಹಾಲು ಕರದು ಚೆಂಬಿಲ್ಲಿ ತುಂಬ್ಸಿ ತಪ್ಪದು ಕಾಂಗು. ಇಲ್ಲದ್ರೆ ಕಿರಿಯಬ್ಬೆಯೋ, ಅಕ್ಕನೋ ಆರಾರು ಪೂಜೆಗೆ ಹೂಗು ಕೊಯ್ದು , ಕೊಡಿಬಾಳೆಲಿ ಇಲ್ಲದ್ರೆ ಹರಿವಾಣಲ್ಲಿ ಹಾಕಿ ತಕ್ಕು.
ಮನೆಂದ ಹೆರ ಬಪ್ಪಗಳೇ ಕಣ್ಣಿಂಗೆ ಕಾಂಬದು ಎದುರಾಣ ಹಟ್ಟಿಲಿ ಪುಟ್ಟುಂಬೆ ಅದರಬ್ಬೆಯ ಜಾಯಿ ಕುಡಿವದಾದಿಕ್ಕು.
ಹಾಂಗೇ ಹಾಸಿಗೆಂದ ಏಳುಗಳೇ ನಮ್ಮ ಕಿವಿಗೆ ಬೀಳುವ ಶಬ್ದ ಅಜ್ಜಿಯಕ್ಕ ಮಸರು ಕಡವ ಗೌಜಿದು. ಎಷ್ಟು ಚಂದದ ಶಬ್ದ ಅದು. ಆ ದೆನಿಯೇ ಒಂದು ರೀತಿಯ ಆಹ್ಲಾದ ಕೊಡ್ತು. ಮನಸ್ಸಿಂಗೆ ತಂಪುಕೊಡುವ ಅಜನೆ ಅದು. ( ಅಜನೆ – ಶಬ್ದ)
‘ ಜಳ್ಳುಂ ಬುಳ್ಳುಂ ಎಮ್ಮೆ ಬೋಚು
ತಾಲೀಪೀಲೀ ಹಶುವಿನ ಬೋಚು
ಮಸರು ಕಡವ ನೇಣೆಲ್ಯೋತು
ನೆರೆಮನೆ ಅಜ್ಜಿ ಕೊಂಡೋಡಿತ್ತು
ತಪ್ಪಲೆ ಹೇಳ್ಯಪ್ಪಗ ಮರದಿಕ್ಕಿ ಬಂತು…..’
ಪುಳ್ಯಕ್ಕೊ ಅಜ್ಜಿಯ ಸುತ್ತ ಬಂದು ಕೂಬಗ ಅಜ್ಜಿ ಹೇಳುವ ಪದ್ಯ ಇದು. ಅದರ ಸಾಹಿತ್ಯ ಆರದ್ದು, ಅದರ ಅರ್ಥ ಎಂತರ ಯೇವದೂ ಅಂದು ಯೋಚನೆ ಬಯಿಂದಿಲ್ಲೆ. ಆದರೆ ಆ ಪದ್ಯ ಅಜ್ಜಿಯ ಬಾಯಿಂದ ಕೇಳುದೇ ಒಂದು ಕೊಶಿ.
ಒಂದು ಕಾಲು ನೀಡಿ, ಇನ್ನೊಂದು ಕಾಲು ಮಡ್ಸಿ ಮಸರು ಕಡವಲೆ ಅಜ್ಜಿ ಕೂಬ ಚಂದವೇ ಬೇರೆ. ಅಜ್ಜಿ ಮಸರು ಕಡವದಾದರೆ ಪುಳ್ಯಕ್ಕೊ ಹತ್ತರೆ ಬಂದು ಓಂಗುಗು.
” ಬೆಣ್ಣೆ ಬಂತಾಜ್ಜೀ…..” ಹೇಳಿ ಅಂಬಗಂಬಗ ವಿಚಾರಣೆ ಮಾಡುವ ಕ್ರಮವು ಇದ್ದು. ಅದಕ್ಕೆ ಕಾರಣ ಎಂತ ಗೊಂತಿದ್ದಾ ? ಅಜ್ಜಿ ಮಸರು ಕಡವಗ ಹತ್ತರೆ ಬಂದರೆ ಅಜ್ಜಿ ಖಂಡಿತಾ ಒಂದು ರಜಾ ಬೆಣ್ಣೆ ಕೊಡ್ತವು. ಆ ಹೊಸ ಬೆಣ್ಣೆಯ ರುಚಿ ಎಷ್ಟು ಲಾಯ್ಕ ಗೊಂತಿದ್ದಾ ? ಸುಮ್ಮನೆ ಅಲ್ಲ ಕೃಷ್ಣ ದೇವರು ಬೆಣ್ಣೆ ಕದ್ದು ತಿಂದುಕೊಂಡಿದ್ದದು..!!
ಕೃಷ್ಣಚಾಮಿಯ ಕಥೆ ಹೇಳುದೂದೆ ಅಜ್ಜಿಯೇ. ಹೆಚ್ಚಾಗಿ ಮೂರ್ಸಂಧಿ ಕಳುದು ಎಲ್ಲರ ಜೆಪ, ಲೆಕ್ಕಮಗ್ಗಿ ಹೇಳಾಣ, ತಿಥಿ,ವಾರ,ನಕ್ಷತ್ರ,ಸಂವತ್ಸರ ಬಾಯಿಪಾಠ ಹೇಳುದೆಲ್ಲ ಆದ ಮತ್ತೆ ಅಜ್ಜಿ ಕತೆಯ ಗೆಂಟು ಬಿಡ್ಸುದು. ಉದಿಯಪ್ಪಗ ಚೆಂದ ಚೆಂದದ ದೇವರ ಹಾಡು ಹೇಳುಗು, ನೀತಿ ಪದ್ಯಂಗೊ ಹೇಳುಗು. ಒಟ್ಟಿಂಗೆ ಪುಳ್ಳಿಯಕ್ಕಳ ನೆಗೆ ಮಾಡ್ಸಲೆ ಕೆಲವು ಕುಶಾಲಿನ ಪದ್ಯಂಗಳನ್ನು ಹೇಳುಗು. ಹಾಂಗಿದ್ದ ಪದ್ಯದ ಸಾಹಿತ್ಯಂಗೊ ಈಗ ನೆಂಪೇ ಆವ್ತಿಲ್ಲೆ ಹೇಳುದೇ ಬೇಜಾರಿನ ವಿಶಯ.
ಅಂದರೂ ಹಾಲು, ಮಸರು,ಬೆಣ್ಣೆಯ ವಿಶಯ ಬಪ್ಪಗ ಕೃಷ್ಣ ಚಾಮಿಯೇ ನೆಂಪಪ್ಪದು.
‘ ಗೋಕುಲದ ಕೃಷ್ಣಚಾಮಿಗೆ ಬೆಣ್ಣೆ ಹೇಳಿದರೆ ಪ್ರೀತಿಯಾಡ. ಅವನ ಅಬ್ಬೆ ಯೆಶೋದೆ ಮಗಂಗೆ ಸಿಕ್ಕಲಾಗ ಹೇಳಿ ಮಸರು, ಬೆಣ್ಣೆ ಎಲ್ಲ ಎತ್ತರದ ಸಿಕ್ಕಲ್ಲಿ ಮಡುಗಿಂಡಿತ್ತಿದ್ದಾಡ. ಅಂದರೂ ಈ ಲೂಟಿ ಪೋಕ್ರಿ ಕೃಷ್ಣ ಚಾಮಿ ಹೇಂಗಾದರು ಮಕ್ಡಿ ಮಾಡಿ ಅದರಿಂದಲೂ ಹಾಲು , ಮಸರು,ಬೆಣ್ಣೆ ತೆಗದು ತಿಂದುಕೊಂಡಿತ್ತಾ°ಡ.
ಅಜ್ಜಿ ಹೇಳುವ ಹೀಂಗಿದ್ದ ಕಥೆಗೊ ಎಷ್ಟು ಚೆಂದ ಗೊಂತಿದ್ದಾ ? ಅವು ಕತೆ ಹೇಳುದರೊಟ್ಟಿಂಗೆ ಪುಳ್ಯಕ್ಕಳ ತಿದ್ದುತ್ತವು. ಸರಿ ಯೇವದು, ತಪ್ಪು ಯೇವದು ಹೇಳುದರ ಮಕ್ಕೊಗೆ ಅರ್ಥಪ್ಪ ಬಾಶೆಲಿ ತಿಳಿಶುತ್ತವು. ಜೀವನಲ್ಲಿ ಬಪ್ಪ ಕಷ್ಟಂಗಳ ಎದುರ್ಸಿ ಬದ್ಕಲೆ ಕಥೆಗಳ ಮೂಲಕ ಮಾರ್ಗದರ್ಶನ ಕೊಡ್ತವು. ಈಗಲೂ ಆ ದಿನಂಗೊ ಜೀವನಲ್ಲಿ ಪುನಾ ಬಂದಿದ್ದರೇಳಿ ಆವ್ತು.
ಇಂದು ನಮಗೆ ಇದೆಲ್ಲ ತುಂಬಾ ಅಪರೂಪಾಯಿದು. ಹಳ್ಳಿ ಮನೆಗಳಲ್ಲಿಯೇ ಆದರೂ ಸುಮಾರು ಬದಲಾವಣೆಗೊ ಬಯಿಂದು.
ಮದಲು ಹಟ್ಟಿ ತುಂಬ ದನಗೊ ಇಪ್ಪ ಮನೆಗಳಲ್ಲಿ ಈಗ ಇಪ್ಪದು ಒಂದೋ, ಎರಡೋ ದನಗೊ ಮಾಂತ್ರ. ಕೆಲವು ದಿಕೆ ಅದೂದೆ ಇಲ್ಲೆ.!!
ಮಸರು ಕಡವಲೆ ಮದ್ಲಾಣ ಕಾಲದ ಮಂತು, ಭರಣಿ ಎಲ್ಲ ಬೇಡ ಈಗ. ‘ ದಧಿಯ ಮಥಿಸುಲೆ ‘ ವಿದ್ಯುತ್ ಯಂತ್ರ ಬಯಿಂದು. ಪಾತ್ರದೊಳ ಮಂತು ಮಡುಗಿ ಆ ಯಂತ್ರದ ಗುಬ್ಬಿ ಒತ್ತಿದರೆ ಬೆಳಿ ಬೆಳಿ ಬೆಣ್ಣೆ ತೇಲಿ ಬತ್ತು.
ಅಜ್ಜಿಯ ಹಾಡಿನ ಇಂಪಾದ ದೆನಿಯ ಬದಲಿಂಗೆ ಈ ಯಂತ್ರದ ಕರ್ಕಶ ದೆನಿ ಕೇಳೆಕಾಗಿ ಬಪ್ಪದು ದೌರ್ಭಾಗ್ಯ ಹೇಳಿ ಆವ್ತರೂ ಮದ್ಲಾಣಾಂಗೆ ಮನೆತುಂಬ ಜೆನ ಇಲ್ಲದ್ದಿಪ್ಪಗ ಕೆಲಸಕ್ಕೆ ಅನುಕೂಲಪ್ಪ ಯಂತ್ರ ಸಿಕ್ಕಿದ್ದದೇ ಅನುಕೂಲ ಹೇಳಿಯೂ ಗ್ರೇಶಿ ಹೋವ್ತು.
ಎಷ್ಟೇ ಸೌಕರ್ಯ ಬಂದರೂ ನಮ್ಮ ದಿನಚರಿಯ ಕ್ರಮವ ಬದಲ್ಸುಲಾಗ. ಉದಿಯಪ್ಪಗ ಏಳುದು, ದೇವರ ಜೆಪ, ಸಂಧ್ಯಾವಂದನೆ ಇದೆಲ್ಲ ನಮ್ಮ ಬದುಕಿನ ಶ್ರೇಯಸ್ಸಿನ ದಾರಿಗೊ.
ನಮ್ಮ ಗುರುಗೊ ಯೇವದೋ ಒಂದು ಆಶೀರ್ವಚನಲ್ಲಿ ಹೇಳಿದ ಹಾಂಗೆ
‘ ನಮ್ಮ ದಿನಚರಿಲಿ ಯೇವದನ್ನೂ ಸರಿಯಾಗಿ ಮಾಡ್ತಿಲ್ಲೆ ನಾವು. ಹಾಂಗಾಗಿಯೇ ನಮ್ಮ ಜೀವನಲ್ಲಿ ತುಂಬ ಏರುಪೇರು. ಊಟ, ಧ್ಯಾನ, ಜೆಪ, ಒರಕ್ಕು ಯೇವದಕ್ಕೂ ಸರಿಯಾದ ಹೊತ್ತು ನಿಯಮ ಎಂತದೂ ಇಲ್ಲದ್ದಾಂಗಾಯಿದು ‘
ಇನ್ನಾದರೂ ಬದ್ಕಿಲ್ಲಿ ನಮಗೆ ಎಡಿಗಾದಷ್ಟು ಕ್ರಮಂಗಳ, ನಮ್ಮ ಶಿಷ್ಟಾಚಾರಂಗಳ, ಸಂಸ್ಕಾರಂಗಳ ಪಾಲಿಸುವ°. ಹಾಂಗಿದ್ದ ಜೀವನ ಕ್ರಮವ ನಮ್ಮ ಜೀವನಲ್ಲಿ ತಂದುಕೊಂಡರೆ ಒಂದು ಅಚ್ಚುಕಟ್ಟುತನ ಬತ್ತು. ಹಳೇ ಕ್ರಮಂಗೊ ಕೆಲವಾದರೂ ಒಳಿತ್ತು. ನಮ್ಮ ಮಕ್ಕೊ ಅದನ್ನೇ ನೋಡಿ ಕಲಿತ್ತವು.
ಅದು ಮುಂದಂಗೆ ಒಳ್ಳೆದಾವ್ತು.
ಮನ್ನೆ ಅಷ್ಟಮಿಗೆ ಅಶೋಕೆಲಿ ಸುಮಾರು ಅಬ್ಬೆಕ್ಕೊ, ಅಜ್ಜಿಯಕ್ಕೊ ಮಸರು ಕಡವ ಚೆಂದದ ದೃಶ್ಯವ ಜಂಗಮವಾಣಿಯ ಪರದೆಲಿ ಕಂಡಪ್ಪಗ ಕೊಶೀ ಆತು. ಕುಞಿ ಕುಞಿ ಮಕ್ಕೊ ಕೃಷ್ಣ ಚಾಮಿಯ ವೇಶ ಹಾಕಿ ಅಬ್ಬೆಕ್ಕಳ ಮಡಿಲಿ ( ಮಡಿಲು ) ಕೂದು ಬೆಣ್ಣೆ ತಿಂಬದು ಕಂಡಪ್ಪಗ ಮತ್ತೊಂದರಿ ದ್ವಾಪರಯುಗಕ್ಕೆ ಹೋಗಿ ಕೃಷ್ಣ ಯಶೋದೆಯರ ಕಂಡಾಂಗಾತು. ಅಂತಹ ಚೆಂದದ ನೋಟಂಗಳೇ ನಮ್ಮ ಕಣ್ಣಿಂಗೆ ಬೀಳುವ ಹಾಂಗಾಗಲಿ ಅಲ್ಲದಾ..!
ಅದುವೇ ಮಂಗಲಮಯ ದಿನದ ಆರಂಭ ಆಗಿರಲಿ.
ಪ್ರಸನ್ನಾ ವಿ. ಚೆಕ್ಕೆಮನೆ