ಮಲೆನಾಡಿನ ಹಸಿರು ತೋಟಗಳನ್ನು ಶೃಂಗರಿಸುವ ಪ್ರಮುಖ ವಾಣಿಜ್ಯ ಬೆಳೆ ಎಂದರೆ ಅಡಿಕೆ. ಅಡಿಕೆ ಬೆಳೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಲಕ್ಷಾಂತರ ಕುಟುಂಬಗಳ ಆರ್ಥಿಕ ಬೆನ್ನೆಲುಬಾಗಿದೆ. ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಧಿ-ವಿಧಾನಗಳಲ್ಲಿ ಅಡಿಕೆಗೆ ಅಗ್ರಸ್ಥಾನವಿದೆ. “ಅಡಿಕೆ ಇದ್ದರೆ ಅದೃಷ್ಟ, ಇಲ್ಲದಿದ್ದರೆ ಕಷ್ಟ” ಎಂಬ ಮಾತು ಕನ್ನಡಿಗರಿಗೆ ಚಿರಪರಿಚಿತ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಪುನೀತ ವೃಕ್ಷವು ಭೀಕರ ಸಂಕಷ್ಟವನ್ನು ಎದುರಿಸುತ್ತಿದೆ.
‘ಎಲೆಚುಕ್ಕಿ ರೋಗ’ ~ ರೈತನ ಸ್ವಪ್ನ ಸುಂದರ ತೋಟಗಳಿಗೆ ಕಂಟಕ:
ಕಳೆದ ಕೆಲವು ವರ್ಷಗಳಿಂದ, ವಿಶೇಷವಾಗಿ ೨೦೨೩-೨೪ರ ಅವಧಿಯಲ್ಲಿ ಮಲೆನಾಡಿನಾದ್ಯಂತ “ಎಲೆಚುಕ್ಕಿ ರೋಗ” ಭೀಕರ ರೂಪ ತಾಳಿತು. ಈ ಶಿಲೀಂಧ್ರಜನ್ಯ ರೋಗವು (Colletotrichum spp.) ಅಡಿಕೆ ಮರದ ಎಲೆಗಳ ಮೇಲೆ ಕಂದು-ಕಪ್ಪು ಕಲೆಗಳನ್ನು ಉಂಟುಮಾಡಿ, ದ್ಯುತಿಸಂಶ್ಲೇಷಣೆಯನ್ನು ಕುಂಠಿತಗೊಳಿಸಿ ಇಳುವರಿಯನ್ನು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ .
ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಈ ರೋಗ, ಸಾಂಪ್ರದಾಯಿಕ ಫಂಗಿಸೈಡ್ಸ್ ಸಿಂಪಡಣೆಗೂ ಸುಲಭವಾಗಿ ಹತೋಟಿಗೆ ಬರುತ್ತಿಲ್ಲ. ಸಮುದಾಯ ಮಟ್ಟದಲ್ಲಿ ನಿರ್ವಹಿಸದಿದ್ದರೆ, ಈ ವಾಯುಗಾಮಿ ರೋಗವು ರೈತರನ್ನು ಸಂಪೂರ್ಣವಾಗಿ ಕಂಗೆಡಿಸುತ್ತದೆ. ವಿಜ್ಞಾನಿಗಳು ರಾಸಾಯನಿಕ ಕ್ರಮಗಳ ಜೊತೆಗೆ ಫೈಟೋಸ್ಯಾನಿಟೇಶನ್ (ಪೀಡಿತ ಎಲೆಗಳನ್ನು ತೆಗೆದು ಸುಡುವುದು) ಕಡ್ಡಾಯ ಎನ್ನುತ್ತಿದ್ದಾರೆ.
ರಸಾಯನಗಳ ಪ್ರಯೋಗ, ಕಾರ್ಮಿಕರ ಕೊರತೆ ಮತ್ತು ರೋಗದ ನಡುವೆ ರೈತರು “ಇನ್ನು ಮುಂದೆ ಅಡಿಕೆ ಬೆಳೆಯಬಹುದೇ?” ಎಂಬ ನಿರಾಶೆಗೆ ಒಳಗಾಗಿದ್ದರು. ಇಂತಹ ಯುಗಸಂಧಿಯ ಸಂದರ್ಭದಲ್ಲೇ ನಡೆದ ಅದ್ಭುತ ಪ್ರಯೋಗ ಆಧ್ಯಾತ್ಮ ಮತ್ತು ವಿಜ್ಞಾನದ ಸಂಗಮವೇ ಆಗಿದೆ ಅದೇ “ಆವಹಂತೀ ಹವನ”.
ಶಂಕರಪಂಚಮೀ ~ ಶ್ರೀರಾಮಚಂದ್ರಾಪುರ ಮಠದಲ್ಲಿ ಪ್ರತಿವರ್ಷದ ವಿಶೇಷ ಆಚರಣೆ:
ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಶಂಕರಪಂಚಮೀಯನ್ನು ಆಚರಿಸಲಾಗುತ್ತದೆ. ಈ ದಿನವೇ ಆದಿಶಂಕರಾಚಾರ್ಯರು ಭೂಮಿಯಲ್ಲಿ ಅವತರಿಸಿದ ಪುಣ್ಯ ದಿನವಾಗಿದೆ. ಶ್ರೀರಾಮಚಂದ್ರಾಪುರ ಮಠವು ಪ್ರತಿವರ್ಷವೂ ಶಂಕರಪಂಚಮೀಯನ್ನು ಭವ್ಯವಾಗಿ ಆಚರಿಸುತ್ತದೆ. ಈ ಸಂದರ್ಭದಲ್ಲಿ ವಿಶೇಷ ಪೂಜೆಗಳು, ಪ್ರವಚನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ವಿಶೇಷವೆಂದರೆ, ಈ ಆಚರಣೆಗಳು ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸಮೀಪದ ಭಾನ್ಕುಳಿ ಮಠದಲ್ಲಿರುವ ‘ಗೋಸ್ವರ್ಗ’ದಲ್ಲಿ ನಡೆಯುತ್ತವೆ.
ಭಾನ್ಕುಳಿ ಮಠವು ಶ್ರೀರಾಮಚಂದ್ರಾಪುರ ಮಠದ ಶಾಖಾ ಮಠವಾಗಿದ್ದು, ಸಹ್ಯಾದ್ರಿಯ ಹಸಿರು ತಪ್ಪಲಿನಲ್ಲಿ ನೆಲೆಗೊಂಡಿದೆ. ಇಲ್ಲಿನ ‘ಗೋಸ್ವರ್ಗ’ವು ಸುಮಾರು ೬00-೭00 ದೇಶೀಯ ಗೋವುಗಳನ್ನು ಸಂರಕ್ಷಿಸಿರುವ ವಿಶಿಷ್ಟ ಗೋಶಾಲೆಯಾಗಿದೆ.
ಶಂಕರಪಂಚಮೀ ೨೦೨೬ ~ ಐತಿಹಾಸಿಕ “ಆವಹಂತೀ ಹವನ”:
೨೦೨೬ನೇ ಇಸವಿಯ ಶಂಕರಪಂಚಮೀ ಏಪ್ರಿಲ್ ೨0 ರಿಂದ ೨೨ರವರೆಗೆ ಸಂಪನ್ನಗೊಂಡಿತು. ಜಗದ್ಗುರು ಶ್ರೀಶಂಕರಾಚಾರ್ಯರು ಜಗತ್ತಿಗೆ ಹರಿಸಿದ ಅನಂತ ಕರುಣೆಯನ್ನು ಸ್ಮರಿಸುವ, ಅವರನ್ನು ಪೂಜಿಸುವ ಹಾಗೂ ಅವರ ಸಂದೇಶಗಳನ್ನು ಅರಿತುಕೊಳ್ಳುವ ಮಹಾಕಾರ್ಯಕ್ರಮವಾದ ಶಂಕರಪಂಚಮಿಯಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಸಾನ್ನಿಧ್ಯದಲ್ಲಿ ಭಾಷ್ಯಪಾರಾಯಣ, ವೇದಪಾರಾಯಣ, ಪಂಚಾಯತನ ಹವನ, ಮಹಾಪಾದುಕಾಪೂಜೆ, ಸ್ತೋತ್ರಸಮರ್ಪಣೆ ಸೇರಿ ಅನೇಕ ವಿಶೇಷ ಕಾರ್ಯಕ್ರಮಗಳಿದ್ದವು. ಇವುಗಳೊಡನೆ ಅಸಂಖ್ಯ ಅಡಿಕೆ ಬೆಳೆಗಾರರ ಸಂಕಷ್ಟನಿವಾರಣೆಗಾಗಿ ‘ ಹವನ’ ಮತ್ತು ‘ಬಿಂದು ಜಯ’ದ ಲೋಕಾರ್ಪಣೆ ನಡೆಯಿತು.
ಮಲೆನಾಡಿನ ಸಂಕಷ್ಟ ~ ಅಡಿಕೆ ತೋಟಗಳಿಗೆ ಕಂಟಕ:
ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಕಳೆದ ಕೆಲವು ವರ್ಷಗಳಿಂದ ‘ಎಲೆಚುಕ್ಕಿ ರೋಗ’ವು ಭೀಕರವಾಗಿ ಹರಡಿತು. ಈ ರೋಗದ ಭೀಕರತೆ ಎಷ್ಟೆಂದರೆ, ಕಾರಣ ಮತ್ತು ಪರಿಹಾರ ಎರಡೂ ಕೈಗೆ ಸಿಗದೆ ಕಂಗಾಲಾಗಿದ್ದ ಅಡಿಕೆ ಬೆಳೆಗಾರರು ನೇರವಾಗಿ ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರಲ್ಲಿ ತಮ್ಮ ವೇದನೆಯನ್ನು ನಿವೇದಿಸಿಕೊಂಡರು.
ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಾನುಗ್ರಹ ~ ವಿಶ್ವದಲ್ಲೇ ಮೊದಲ ಪ್ರಯತ್ನ:
ರೈತರ ಈ ಸಂಕಷ್ಟವನ್ನು ಅರ್ಥ ಮಾಡಿಕೊಂಡ ಶ್ರೀಸಂಸ್ಥಾನದವರು, ರಾಸಾಯನಿಕ ಸಂಶೋಧನೆ ಮತ್ತು ಔಷಧ ಪ್ರಯೋಗಗಳಲ್ಲದೇ, ವೈದಿಕ ಮಾರ್ಗದಿಂದಲೂ ಫಲವನ್ನು ಕಂಡುಕೊಳ್ಳುವ ಒಂದು ಅನನ್ಯ ಉಪಕ್ರಮಕ್ಕೆ ಮುಂದಾದರು. ಇದು ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ಶ್ರೀರಾಮಚಂದ್ರಾಪುರ ಮಠದಿಂದ ಆದಂತಹ ಅದ್ಭುತ ಮತ್ತು ವಿಶಿಷ್ಟ ಪ್ರಯೋಗ. ಒಂದು ಬೆಳೆಗೆ ಬಂದ ರೋಗವನ್ನು ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಎರಡೂ ದೃಷ್ಟಿಕೋನಗಳಿಂದ ನಿವಾರಿಸುವ ಈ ಪ್ರಯತ್ನ ಕೃಷಿ ಇತಿಹಾಸದಲ್ಲೇ ಮೈಲುಗಲ್ಲಾಗಿದೆ.
ಪರಮಪೂಜ್ಯ ಶ್ರೀಸಂಸ್ಥಾನದವರ ಪರಿಕಲ್ಪನೆಯಲ್ಲಿ ಅಡಿಕೆ ಎಲೆಚುಕ್ಕಿ ರೋಗ ನಿವಾರಣೆಗಾಗಿ “ಆವಹಂತೀ ಹವನ”:
ಸಂಕಲ್ಪ:
“ನಾವು ಪಾಲನೆ ಮಾಡುತ್ತಿರುವ, ನಮ್ಮ ಜೀವನಕ್ಕೆ ಆಧಾರವಾದ ಅಡಿಕೆ, ಬಾಳೆ, ತೆಂಗು, ಭತ್ತ, ಏಲಕ್ಕಿ ಮುಂತಾದ ಸಸ್ಯಾರಾಮಗಳ ರಕ್ಷಣೆ ಮತ್ತು ಅವುಗಳಿಗೆ ಬರುವ ರೋಗಗಳ ನಿವಾರಣೆಗಾಗಿ ಈ ಆವಹಂತೀ ಮಂತ್ರ, ಜಪ, ಹವನವನ್ನು ಮಾಡುತ್ತಿದ್ದೇವೆ” ಎಂಬ ಮಹಾಸಂಕಲ್ಪದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಪ್ರಥಮ ಹಂತ ~ ಜಪ:
ಹವನದ ಮೊದಲ ಹಂತದಲ್ಲಿ ಜಪ ನಡೆಯಿತು. ಈ ವೇಳೆ ಮೃತ್ಯುಂಜಯ ಮಂತ್ರ, ನಮಕ ಮಂತ್ರಗಳು, ಚಮಕ ಮಂತ್ರಗಳು, ಭೂದೇವತಾ ಮಂತ್ರಗಳು, ಶ್ರೀದೇವಿ ಮಂತ್ರಗಳು, ಸೋಮದೇವತಾ ಮಂತ್ರಗಳು ಮತ್ತು ಕ್ಷೇತ್ರಪಾಲ ಮಂತ್ರಗಳನ್ನು ಸಾಮೂಹಿಕವಾಗಿ ಜಪಿಸಲಾಯಿತು.
ದ್ವಿತೀಯ ಹಂತ ~ ಹವನ:
ಅನಂತರ ಮುಖ್ಯ ಹವನ ‘ಆವಹಂತೀ’. “ಆವಹಂತೀ” ಎಂಬುದು ತೈತ್ತಿರೀಯ ಶಿಕ್ಷಾ ಪ್ರಶ್ನದಲ್ಲಿ ಬರುವ ಮಂತ್ರಗಳ ಹವನ. ಇವುಗಳ ಪ್ರಧಾನ ದೇವತೆ ಇಂದ್ರ. ಈ ಮಂತ್ರಗಳ ಸಾಮೂಹಿಕ ಪಠನ ಮತ್ತು ಹವನವು ಸಸ್ಯಗಳ ಮೇಲೆ ಧನಾತ್ಮಕ ಪ್ರಭಾವ ಬೀರುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ತೃತೀಯ ಹಂತ ~ ಪಾರಾಯಣ:
ಉದಕಶಾಂತಿ ಮಂತ್ರಗಳು ಸೇರಿದಂತೆ ಸೋಮ-ಓಷಧ-ವನಸ್ಪತಿ-ಭೂ ದೇವತೆಗಳಿಗೆ ಸಂಬಂಧಿಸಿದ ಇನ್ನೂ ಹಲವು ಆಯ್ದ ಮಂತ್ರಗಳ ಪಾರಾಯಣ ನಡೆಯಿತು.
ಹವನ ಸಂಪೂರ್ಣವಾದ ಬಳಿಕ ಉದಕ ಶಾಂತಿ ಮತ್ತು ಜಪ-ಪಾರಾಯಣಗಳ ಮೂಲಕ ಅಭಿಮಂತ್ರಿಸಿದ ಪುಣ್ಯ ಜಲವನ್ನು ಭಕ್ತಾದಿಗಳಿಗೆ ಪ್ರಸಾದವಾಗಿ ನೀಡಲಾಯಿತು. ಮುಂದೆ, ಹೋಮದ ಪವಿತ್ರ ಭಸ್ಮ ಮತ್ತು ಅಭಿಮಂತ್ರಣೆ ಮಾಡಿದ ರಕ್ಷಾದಾರವನ್ನು ಸಂಕಲ್ಪ ಮಾಡಿದವರ ಮನೆಯ ತೋಟದಲ್ಲಿನ ವೃಕ್ಷಕ್ಕೆ ಕಟ್ಟಲು ಮತ್ತು ಅಭಿಮಂತ್ರಿತ ಜಲವನ್ನು ಸಹ ತೋಟಕ್ಕೆ ಪ್ರೋಕ್ಷಣೆ (ಸಿಂಪಡಣೆ) ಮಾಡಲು ತಿಳಿಸಲಾಯಿತು. ಇದರಿಂದ ತೋಟದ ಸಮಸ್ತ ಸಸ್ಯಗಳು, ವಿಶೇಷವಾಗಿ ಅಡಿಕೆ ಮರಗಳು, ರೋಗಮುಕ್ತವಾಗಿ ಸಮೃದ್ಧವಾಗಿ ಬೆಳೆಯುವವು ಮತ್ತು ಅಲ್ಲಿ ಧನ, ಧಾನ್ಯ, ಐಶ್ವರ್ಯದ ನೆಲೆಯಾಗುವುದು ಎಂಬ ಆಶಯವಿದೆ. ಹೀಗೆ ವೈದಿಕ ಕರ್ಮಗಳು ಕೇವಲ ಮಾನವನಿಗೇ ಸೀಮಿತವಾಗದೆ, ಪ್ರಕೃತಿ ಮತ್ತು ಕೃಷಿಯೊಂದಿಗೆ ಬೆಸೆದುಕೊಂಡು ಲೋಕದ ಸಮಗ್ರ ಕಲ್ಯಾಣವನ್ನು ಬಯಸುತ್ತವೆ.
ಗೋಫಲ ಟ್ರಸ್ಟ್ ಮತ್ತು “ಬಿಂದು ಜಯ” ಲೋಕಾರ್ಪಣೆ:
ಈ ಮಹಾಯಜ್ಞದ ಪರಮ ಸಂಕಲ್ಪದ ಫಲವಾಗಿ, ಗೋಫಲ ಟ್ರಸ್ಟ್’ನ ವತಿಯಿಂದ ಒಂದು ಅದ್ಭುತ ಔಷಧವನ್ನು ಸಂಶೋಧಿಸಿ ಲೋಕಾರ್ಪಣೆ ಮಾಡಲಾಯಿತು. ಅದುವೇ ಶ್ರೀಸಂಸ್ಥಾನದವರಿಂದ ನಾಮಾಂಕಿತಗೊಂಡ “ಬಿಂದು ಜಯ”.
ಈ ಹೆಸರಿನ ಸುಂದರವಾದ ಅರ್ಥವನ್ನು ಎಲ್ಲರೂ ತಿಳಿಯಬೇಕು:
‘ಬಿಂದು’ ಎಂದರೆ ಚುಕ್ಕಿ. ‘ಎಲೆಚುಕ್ಕಿ’ ರೋಗಕ್ಕೆ ಕಾರಣವಾದ ಚುಕ್ಕಿಯನ್ನು ಜಯಿಸುವಂಥದ್ದು “ಬಿಂದುಜಯ”. ಇದಕ್ಕೆ ರೋಗದ ಕಾರಣವನ್ನು ಗೆಲ್ಲುವಂತಹ ಸಾಮರ್ಥ್ಯ ಇದೆ ಎಂಬುದನ್ನು ಈ ಹೆಸರು ಸಾರುತ್ತದೆ.
ಈ ‘ಬಿಂದು ಜಯ’ ಕೇವಲ ಒಂದು ಕೀಟನಾಶಕವಲ್ಲ; ಇದು ಸಸ್ಯಗಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಸಂಪೂರ್ಣ ಸಾವಯವ ಮತ್ತು ಪರಿಸರ ಸ್ನೇಹಿ ಸೂಕ್ಷ್ಮಜೀವಿ ಸಂಯೋಜನೆಯಾಗಿದೆ.
“ಬಿಂದು ಜಯ” ~ ಎಲ್ಲಾ ಜನರಿಗೂ ಉಪಯೋಗವಾಗುವ ವರಪ್ರಸಾದ:
ಬಿಂದು ಜಯ ಯಾವುದೇ ಒಬ್ಬ ರೈತನಿಗೆ ಅಥವಾ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾದ ಉತ್ಪನ್ನವಲ್ಲ. ಅದು ಎಲ್ಲಾ ಅಡಿಕೆ ಬೆಳೆಗಾರರಿಗೂ, ಎಲ್ಲಾ ರೈತರಿಗೂ, ಎಲ್ಲಾ ಜನರಿಗೂ ಉಪಯೋಗವಾಗುವಂಥದ್ದು. ಏಕೆಂದರೆ ಬೆಳೆ ಉಳಿದರೆ ರೈತನ ಬದುಕು ಉಳಿಯುತ್ತದೆ; ರೈತನ ಬದುಕು ಉಳಿದರೆ ಎಲ್ಲರಿಗೂ ಆಹಾರ ಸಿಗುತ್ತದೆ, ಎಲ್ಲರೂ ಸುಖವಾಗಿರುತ್ತಾರೆ. ಇದು ಶ್ರೀರಾಮಚಂದ್ರಪುರ ಮಠದ ಸದಾಶಯ. “ಸಸ್ಯಗಳಿಗೆ ಬರುವ ರೋಗಗಳು ನಿವಾರಣೆಯಾಗಬೇಕು; ಅದರಿಂದ ಮನುಷ್ಯರಿಗೆ ಬರುವ ರೋಗಗಳೂ ನಿವಾರಣೆಯಾಗಬೇಕು.”
ಹೀಗೆ ಬಿಂದು ಜಯ ಕೇವಲ ಒಂದು ಕೃಷಿ ಔಷಧವಲ್ಲ; ಅದು ಪ್ರಕೃತಿ ಮತ್ತು ಮಾನವನ ನಡುವಿನ ಸೇತುವೆ. ಅದು ಶ್ರೀರಾಮಚಂದ್ರಾಪುರ ಮಠದಿಂದ ಅನುಗ್ರಹವಾದ ವರೌಷಧ. ಶೀಘ್ರದಲ್ಲೇ ಇದು ಮಾರುಕಟ್ಟೆಯಲ್ಲಿ ಲಭ್ಯವಾಗಲಿದ್ದು, ಎಲ್ಲಾ ಕೃಷಿಕರೂ ಬಳಸಬಹುದು.
ಚೈತ್ರಾ ಭಟ್ ಹೊನ್ನಾವರ