ಶ್ರೀ ಜಗದಾತ್ಮಾನಂದಜೀ : ಕಥೆ ಹೇಳಿ ಮಕ್ಕಳ ಬದುಕು ರೂಪಿಸಿದ ಸಂತ

ಲೇಖನ

ಶ್ರೀ ಗುರುಭ್ಯೋನ್ನಮ:

ಇತ್ತೀಚೆಗೆ ಶ್ರೀ ರಾಮಕೃಷ್ಣಾಶ್ರಮದ  ಹಿರಿಯ ಸಂನ್ಯಾಸಿಗಳಾಗಿದ್ದ ಶ್ರೀ ಜಗದಾತ್ಮಾನಂದಜೀಯವರು ತೊಂಬತ್ತನೇ ವಯಸ್ಸಿನಲ್ಲಿ ಪರಮಗುರು ಶ್ರೀರಾಮಕೃಷ್ಣರ ಚರಣಕಮಲವನ್ನು ಸೇರಿದರು. ಎಂಬತ್ತರ ದಶಕದಲ್ಲಿ ಇವರು ಬರೆದ ‘ಬದುಕಲು ಕಲಿಯಿರಿ’ ಎಂಬ ಸೃಜನಶೀಲ ಸಾಹಿತ್ಯ ಕನ್ನಡನಾಡಿನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತ್ತು. ಆಧುನಿಕ ವಿಜ್ಞಾನದ ಹಿನ್ನೆಲೆಯೊಂದಿಗೆ ಆಧ್ಯಾತ್ಮಕ ನೆಲೆಗಟ್ಟಿನಲ್ಲಿ ಬದುಕನ್ನು ಸಕಾರಾತ್ಮಕವಾಗಿ ಎದುರಿಸುವ ಬಗೆಯನ್ನು ಪ್ರಾಯೋಗಿಕ ಉದಾಹರಣೆಗಳೊಂದಿಗೆ ತಿಳಿಸಿದ ಅತ್ಯಂತ ಅಪರೂಪದ ಪುಸ್ತಕ ಅದಾಗಿತ್ತು. ವಿಶೇಷವಾಗಿ ಯುವಜನತೆಗೆ ಅದು ಪ್ರೇರಣಾಗ್ರಂಥವಾಗಿದೆ.

 

ಸ್ವಾಮಿ ಜಗದಾತ್ಮಾನಂದರು ಅದನ್ನು ರಚಿಸಿದ್ದು 1977-80ರಲ್ಲಿ ಮೈಸೂರಿನ ಶ್ರೀರಾಮಕೃಷ್ಣ ವಿದ್ಯಾಶಾಲೆಯಲ್ಲಿ ಇದ್ದಂಥ ಸಂದರ್ಭದಲ್ಲಿ. ಅದೃಷ್ಟವಶಾತ್ ನಾನೂ ಆ ಶಾಲೆಯಲ್ಲಿ ಅದೇ ಸಮಯದಲ್ಲಿ ಓದುತ್ತಿದ್ದೆ. ಸ್ವಾಮೀಜೀಯವರು ಮಕ್ಕಳಿಗೆಲ್ಲ ತುಂಬ ಆಪ್ತರೂ, ಮೆಚ್ಚಿನವರೂ ಆಗಿದ್ದರು. 38 ವರ್ಷಗಳ ಹಿಂದೆ ಅವರ ಮಾರ್ಗದರ್ಶನದಲ್ಲಿ ಕಳೆದ ಆ ದಿನಗಳು ಇಂದಿಗೂ ಕಣ್ಣಮುಂದೆ ಚಿತ್ರಪಟದಷ್ಟೇ ಸ್ಪಷ್ಟವಾಗಿ ಹರಿದಾಡುತ್ತಿವೆ. ಅವರ ಮಾತುಗಳು ಕಿವಿಯಲ್ಲಿ ಝೇಂಕರಿಸುತ್ತಿವೆ. ಆ ನೆನಪಿನ ಹಿನ್ನೆಲೆಯಲ್ಲಿ ಅವರಿಗೊಂದು ನುಡಿ ನಮನ ಸಲ್ಲಿಸುವ ಪುಟ್ಟ ಪ್ರಯತ್ನ ಈ ಬರಹ.

 

ಸ್ವಾಮೀಜಿಯವರದು ಎತ್ತರದ ನಿಲುವು, ದೃಢ ಕಾಯ, ಕಂಚಿನ ಕಂಠ. ಮಾತಿಗೆ ನಿಂತರೆ ಸ್ಪಷ್ಟ ಕನ್ನಡ-ಇಂಗ್ಲೀಷು ಭಾಷೆ, ಉದುರುತ್ತಿದ್ದ ಕನ್ನಡ ಸಾಹಿತ್ಯದ ಅಣಿಮುತ್ತುಗಳು, ಗಂಭೀರ ಏರು ಧ್ವನಿ, ಕೇಳುಗರ ಕಣ್ಣಲ್ಲಿ ಕಣ್ಣಿಟ್ಟು ನೇರ  ಸಂವಹನ, ವಿಷಯದಲ್ಲಿ ಸ್ಪಷ್ಟತೆ, ಆಗಾಗ ಉಕ್ಕುತ್ತಿದ್ದ ನಗೆಚಾಟಿಗಳು, ಅತ್ಯಂತ ಆತ್ಮೀಯ ಭಾಷೆಯಲ್ಲಿ ಹಾವಭಾವದೊಂದಿಗೆ, ಧ್ವನಿಯ ಏರಿಳಿತಗಳೊಂದಿಗೆ, ಹೃದಯದಲ್ಲಿ ಆರ್ದೃತೆ ಹೊಂದಿ ತೀವ್ರತರವಾದ ಕಳಕಳಿ ತುಂಬಿದ ಮಾತುಗಳು. “Swami Vivekananda  has told, Each soul is potentially devine , ಪ್ರತಿಯೊಬ್ಬನ ಅಂತರತ್ಮದಲ್ಲೂ ದಿವ್ಯವಾದ ದೈವಿಕತೆ ಇದೆ… ಯಾರು ಬೇಕಾದರೂ ಜೀವನದಲ್ಲಿ ಅತ್ಯುಚ್ಚ ಸಾಧನೆಯನ್ನು ಮಾಡಬಹುದು, …ಸಾಧನೆ ಮಾಡಿ ತೋರಿಸಿದವರೂ  ಇದ್ದಾರೆ..” ಎಂದು ಅವರು ಗುಡುಗಿದರೆ ಸಿಂಹಗರ್ಜನೆಯಂತೆ ಅನ್ನಿಸುತ್ತಿತ್ತು. ಅದನ್ನೆಲ್ಲ ಕೇಳಿದ ಎಂಥವರಿಗೂ ಹೃದಯದಲ್ಲಿ ಒಳ್ಳೆಯ ಭಾವನೆ, ಮನದಲ್ಲಿ ಸದ್ವಿಚಾರ, ಉತ್ಸಾಹ ಮೂಡುತ್ತಿತ್ತು. ಅವರ ಮಾತುಗಳನ್ನು  ತೆಪ್ಪಗೆ ತಲೆ ತಗ್ಗಿಸಿ ಕೇಳುತ್ತ ಕುಳಿತಿರುತ್ತಿದ್ದ ಮಕ್ಕಳೂ ಕೊನೆಗೆ ಎದ್ದು ಬರುವಾಗ ಎದೆಯುಬ್ಬಿಸಿ, ಉಲ್ಲಸಿತರಾಗಿ, ಕಳೆಕಳೆಯಿಂದ ಏನೋ ಸಾಧನೆ ಮಾಡಲು ಹೊರಟಂತೆಯೇ ಎದೆಯಲ್ಲಿ ವಿಶ್ವಾಸ ತುಂಬಿಕೊಂಡು ಬರುತ್ತಿದ್ದರು.  ಅಷ್ಟು ಪ್ರಭಾವ ಬೀರುತ್ತಿದ್ದವು ಅವು ನಮ್ಮ ಮೇಲೆ. ಅಂತಹ ಆಯಸ್ಕಾಂತೀಯ ಶಕ್ತಿ ಅದರಲ್ಲಿತ್ತು.

ಸ್ವಾಮೀಜಿಯವರಿಗೆ ವಿದ್ಯಾಶಾಲೆಯಲ್ಲಿ ಮಕ್ಕಳ ಒಂದು ವಾರ್ಡಿನ ಜವಾಬ್ದಾರಿ, ಮುಂಜಾನೆ ಆರುಗಂಟೆಯ ಪ್ರಾರ್ಥನೆಯ ಜವಾಬ್ದಾರಿ, ಹಾಗೆಯೇ ಇಡೀ ಶಾಲೆಯ ಡಿಸ್ಪೆನ್ಸರಿಯ (ಆರೋಗ್ಯ ಕೇಂದ್ರ) ಜವಾಬ್ದಾರಿಯಿತ್ತು. ಹಾಗಾಗಿ ಅವರನ್ನು ಡಾ. ಸ್ವಾಮೀಜಿ ಎಂದೂ ಕರೆಯುತ್ತಿದ್ದೆವು. ಈ ಎಲ್ಲದರ ನಡುವೇ ತಮ್ಮ ಜಪತಪಾದಿ ನಿತ್ಯದ ಕರ್ತವ್ಯಗಳನ್ನೂ ಪೂರೈಸಿದ ಅವರು ಓದುವುದರ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದರು. ಅವರ ಕೋಣೆಯಲ್ಲಿ, ಟೇಬಲ್ಲಿನ ಮೇಲೆ ಸದಾ ರಾಶಿ ರಾಶಿ ಪುಸ್ತಕಗಳು ತುಂಬಿರುತಿದ್ದವು. ರೂಮಿನಲ್ಲಿ ಇಣುಕಿದರೆ ಸದಾ ಬರೆಯುವುದು ಅಥವಾ ಓದುವುದಲ್ಲಿ ತಲ್ಲೀನರಾಗಿರುತ್ತಿದ್ದ ಅವರನ್ನು ಕಾಣಬಹುದಿತ್ತು. ಇವಿಷ್ಟೇ ಸಾಲದೆಂಬಂತೆ ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸುವುದು, ತುಂಟತನ ಮಾಡುವವರನ್ನು ಕರೆದು ಬುದ್ಧಿ ಹೇಳುವುದು, ಹೊರಗಡೆ ಮೈಸೂರಿನಲ್ಲಿ ಉಪನ್ಯಾಸಗಳಿದ್ದರೆ ಹೋಗಿ ಬರುವುದು ಇವು ಎಲ್ಲವೂ ಇರುತ್ತಿದ್ದವು.

 

ಸ್ವಾಮೀಜಿ ಉತ್ತಮ ವಾಗ್ಮಿಗಳಾಗಿದ್ದಂತೆಯೇ ಅಷ್ಟೇ ಚಂದದಿಂದ ಭಜನೆಗಳನ್ನೂ ಹೇಳಿಕೊಡುತ್ತಿದ್ದರು. ಮೂರು ಓಂಕಾರಗಳಿಂದ ಆರಂಭವಾಗುವ ಅವರ ಪ್ರಾರ್ಥನೆ ಭಜನೆ , ಶುಭನುಡಿ, ಧ್ಯಾನದೊಂದಿಗೆ ಕೊನೆಗೊಳ್ಳುತ್ತಿತ್ತು. ಮಕ್ಕಳು ಸಕ್ರಿಯವಾಗಿ ಭಜನೆ-ಧ್ಯಾನಗಳಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುತ್ತಿದ್ದರು. ನಮಗೆ ಖುಷಿ ಕೊಡುವಂಥ, ಲಯಬದ್ಧವಾದ ಮತ್ತು ಭಾವಪೂರ್ಣವಾದ ಹಾಡುಗಳನ್ನು ಹೇಳಿಕೊಡುತ್ತಿದ್ದರು. ಧ್ಯಾನದ ಸಮಯದಲ್ಲಿ  ಮನಸ್ಸನ್ನು ಕೇಂದ್ರಿಕರಿಸುವ ವಿಧಾನ, ಮನಸ್ಸಿಗೆ ಸಕಾರಾತ್ಮಕ ಆದೇಶಗಳನ್ನು ನೀಡುವುದು, ಮುಂತಾದವುಗಳ ಕುರಿತು ಮೆಲುದನಿಯಲ್ಲಿ ಕಾಮೆಂಟರಿಯಂತೇ ಹೇಳುತ್ತ ನಮ್ಮನ್ನು ಏಕಾಗ್ರತೆಯತ್ತ ಕೊಂಡೊಯ್ಯುತ್ತಿದ್ದರು. ಇಂದೂ ಸಹ ಅವರ ಮಾತುಗಳು ಕಿವಿಯಲ್ಲಿ ಗುಂಯ್ಗುಡುತ್ತವೆ.

 

ಸ್ವಾಮೀಜಿಯವರು ಹಾಡುಗಳನ್ನು ಹೇಳುವಾಗ ಸ್ವತ: ಭಾವುಕರಾಗುತ್ತಿದ್ದರು ಹಾಗೆಯೇ ನಮ್ಮನ್ನೂ ಭಾವನೆಗಳಲ್ಲಿ ತೋಯ್ದು ಹೋಗುವಂತೆ ಮಾಡುತ್ತಿದ್ದರು. ಕನ್ನಡದ ಹಲವು ಸಾಹಿತಿಗಳು ಬರೆದ ಹಾಡುಗಳು ಅವರ ಬತ್ತಳಿಕೆಯಲ್ಲಿದ್ದವು. ಕುವೆಂಪು ಅವರ ನೆಚ್ಚಿನ ಸಾಹಿತಿ ಆಗಿದ್ದರೋ ಏನೋ. ಭಾಷಣದಲ್ಲಾಗಲೀ ಭಜನೆಯಲ್ಲಾಗಲೀ ಕುವೆಂಪು ಸಾಹಿತ್ಯದ ಉದ್ಧರಣಗಳು ತುಂಬಿರುತ್ತಿದ್ದವು. ಕುವೆಂಪು ಬರೆದ “ ಬಾ.. ಶ್ರೀಗುರುದೇವನೆ ಬಾ.. ಶ್ಯಾಮಲ ಕಾನನ ಶೃಂಗ ತರಂಗಿತ ಸಹ್ಯಾದ್ರಿಯ ಸುಂದರ ಮಂದಿರಕೆ, ಚಿನ್ಮಯ ಮಮ ಹೃನ್ಮಂದಿರಕೆ…” ಅವರ ನೆಚ್ಚಿನ ಭಜನೆಯಾಗಿತ್ತು. “ಅಗ್ನಿಮಂತ್ರ ದೀಕ್ಷೆಯ ಕೊಡು ನಿನ್ನ ಸಂತಾಕಿಂದು…ಆಶೀರ್ವಾದ ಕವಚ ತೋಡಿಸು ದೈನ್ಯ ವಸನದಿಂ ಬಿಡಿಸು..” ಎಂದು ದೇವಿಯನ್ನು ಬೇಡಿಕೊಳ್ಳುವ ಇನ್ನೊಂದು ಭಜನೆಯೂ ಅಷ್ಟೇ. ಅದರಲ್ಲಿ ಬರುವ ಒಂದು ಸಾಲು “ನರರು ನಾವು ಕುರಿಗಳಲ್ತು…ನಿನ್ನ ಸುತರು ದೀನರೆಂತು..” ಹೇಳುವಾಗ ನಾವು ಗದ್ಗದಿತರಾಗುತ್ತಿದ್ದೆವು.  ಅದನ್ನವರು ಹೇಳಿಕೊಡುತ್ತಿದ್ದ ರೀತಿಯಿಂದಾಗಿ ಈ ಜನ್ಮದಲ್ಲಿ ನಾನು ಅದನ್ನು ಮರೆಯಲು ಸಾಧ್ಯವಿಲ್ಲ ಅನ್ನಿಸಿದೆ. ಪ್ರಾರ್ಥನೆಯ ಮೂಲಕ ಮಕ್ಕಳ ಮನವನ್ನು ಹೀಗೆ ರೂಪಿಸುತ್ತಿದ್ದ ಆ ಮಹಾನ್ ಸಂತನನ್ನು ನೆನೆದಷ್ಟೂ ಗೌರವಾದರಗಳು ಹೆಚ್ಚಾಗುತ್ತಿವೆ.

 

ನಮ್ಮ ಮನಸ್ಸು ದುರ್ಬಲವಾಗಿರಬಾರದು ಎಂದು ಅವರು ಸದಾ ಹೇಳುತ್ತಿದ್ದರು. ಸಾಮಾನ್ಯವಾಗಿ ಪ್ರಾರ್ಥನೆಯ ಕೊನೆಯಲ್ಲಿ ನಾವು  ಧ್ಯಾನಕ್ಕೆ ಕುಳಿತುಕೊಳ್ಳಬೇಕಿತ್ತು. ಅತ್ಯಂತ ಶಾಂತ ವಾತಾವರಣ ಇರುತ್ತಿತ್ತು. ಈ ನಡುವೆ ಕೆಲ ವಿದ್ಯಾರ್ಥಿಗಳು ಗಂಟಲಿಂದ ಕ್ಕೊಕ್..ಕ್ಕೊಕ್.. ಎಂದು ಶಬ್ಧಮಾಡುವುದು ಮುಂತಾದ್ದನ್ನು ಮಾಡುತ್ತಿದ್ದರು. ಆಗ ಸ್ವಾಮೀಜಿ  ಗಂಭೀರವಾಗಿ “ಎರಡು ನಿಮಿಷ ಸದ್ದು ಮಾಡದಿರಲು ಸಾಧ್ಯವಿಲ್ಲವೆ ನಿಮಗೆ? ಎಲ್ಲಿದೆ ನಿಮ್ಮ ಮನಸ್ಸು, ಮನದಲ್ಲಿ ಗಟ್ಟಿ ನಿರ್ಧಾರ ಮಾಡಿ, ಎರಡು ನಿಮಿಷ ..ಯಾವ ಸದ್ದೂ ಮಾಡುವುದಿಲ್ಲ.. ಕೆಮ್ಮವೂ ಬರುವುದಿಲ್ಲ.. ಬಂದರೂ ತಡೆದುಕೊಳ್ಳುತ್ತೇನೆ.. ಎಂದು ನಿಮ್ಮ ಮನಕ್ಕೆ ಆದೇಶ ಕೊಡಿ, ಆಗ ಹೇಗೆ ಸದ್ದು ಬರುತ್ತದೆ ನೋಡೋಣ” ಎಂದು ಸಲ್ಪ ಗದರುವ ದನಿಯಲ್ಲೇ ಹೇಳುತ್ತಿದ್ದರು. ಮಕ್ಕಳು ಅವರ ಮಾತು ಕೇಳುತ್ತಿದ್ದರು. ತಕ್ಷಣದಿಂದ ಎಲ್ಲ ಸದ್ದೂ ಅಡಗಿ ಹೋಗುತ್ತಿತ್ತು!  ಸ್ವಾಮೀಜಿಯವರು ಕೊನೆಯಲ್ಲಿ ಅಷ್ಟೇ ಪ್ರೀತಿಯಿಂದ ಮೃದು ದನಿಯಲ್ಲಿ “ಮಕ್ಕಳೇ, ನಿಮ್ಮ ಮನಸ್ಸಿಗೆ ಅಪಾರ ಶಕ್ತಿ ಇದೆ, ಅದನ್ನು ಉಪಯೋಗಿಸಿಕೊಳ್ಳಿ” ಎನ್ನುತ್ತಿದ್ದರು. ಸ್ವಾಮಿಜಿಯವರು ಎಷ್ಟು ಪ್ರಾಕ್ಟಿಕಲ್ ಮನುಷ್ಯರಾಗಿದ್ದರೆಂದರೆ ತಾವು ಹೇಳಿದ ಮಾತು ಎಷ್ಟು ಸತ್ಯ ಎಂದು ಪ್ರಮಾಣದೊಂದಿಗೆ ತೋರಿಸುತ್ತಿದ್ದರು.

 

ಸ್ವಾಮೀಜಿಯವರ ’ಬದುಕಲು ಕಲಿಯಿರಿ’  ಪುಸ್ತಕದ ಮೊದಲ ಭಾಗ ಪ್ರಕಟಗೊಂಡಿದ್ದು 1980 ರಲ್ಲಿ. ನಿಜವಾಗಿ ಹೇಳಬೇಕೆಂದರೆ ಅವರು ಆ ಪುಸ್ತಕ ಹೇಗೆ ಬರೆದರು, ಆ ಕೃತಿ ಏಕೆ ವಿಶಿಷ್ಟ ಎಂಬುದೇ ಒಂದು ಸುದೀರ್ಘ ಅಧ್ಯಯನದ ವಿಷಯವಾಗಬಹುದು. ಆ ಕೃತಿಯ ಹಿಂದೆ ಸ್ವಾಮೀಜಿಯವರ ಅವಿರತ ಶ್ರಮವಿದೆ. ಆ ಪುಸ್ತಕ ಓದಿದವರಿಗೆ ಅದರ ಅರಿವು ಖಂಡಿತ ಆಗಿರುತ್ತದೆ. ಅದೊಂದು ಕೇವಲ ಕಾಲ್ಪನಿಕ ಕಥೆ, ಘಟನೆ, ವಿಚಾರ, ಚಿಂತನೆ ಅಥವಾ ಉಪದೇಶಗಳ ಸಂಗ್ರಹ ಅಲ್ಲವೇ ಅಲ್ಲ! ಅದರಲ್ಲಿ ಉಲ್ಲೇಖ ಮಾಡಲಾದ ಸಾವಿರಾರು ಘಟನೆಗಳು… ನಿಜ ಜೀವನದ ಘಟನೆಗಳು, ನೂರಾರು ವಿಜ್ಞಾನ ವಿಸಂಗತಿಗಳು ಸಂಶೋಧನೆಯ ಮೂಸೆಯಲ್ಲಿ ಬೆಂದು ಪಕ್ವವಾಗಿ ವಿಜ್ಞಾನ ಪತ್ರಿಕೆಗಳಲ್ಲಿ ಪ್ರಕಟವಾದವುಗಳು. ಸ್ವಾಮೀಜಿ ಅವೆಲ್ಲವುಗಳಿಗೂ ಅಲ್ಲಲ್ಲಿಯೇ ಅಡಿಬರಹಗಳ ಮೂಲಕ ಆಧಾರ ನೀಡುತ್ತ  ವಿಷಯಗಳನ್ನು ಪುಷ್ಟೀಕರಿಸುತ್ತಾರೆ. ನೂರಾರು ಘಟನೆಗಳು ರಾಷ್ಟ್ರಮಟ್ಟದ, ಅಂತರ್ರಾಷ್ಟ್ರೀಯ ಮಟ್ಟದ ದಿನಪತ್ರಿಕೆಗಳಲ್ಲಿ ಬಂದ ವರದಿಗಳು. ತಮ್ಮ ದೈನಂದಿನ ಕರ್ತವ್ಯಗಳೊಂದಿಗೆ ಈ ಮಾಹಿತಿಗಳನ್ನೆಲ್ಲ ಹುಡುಕುವುದು, ಸಂಗ್ರಹಿಸುವುದು, ಅದನ್ನು ನೋಟ್ ಮಾಡಿಟ್ಟುಕೊಳ್ಳುವುದು…ಮುಂತಾದವುಗಳಿಗೆ ಸ್ವಾಮೀಜಿ ಎಷ್ಟು ಶ್ರಮವಹಿಸಿರಬಹುದು! ಗಮನದಲ್ಲಿಡಿ, ಆಗ ಸಂವಹನ ಮಾಧ್ಯಮ, ಸಂಗ್ರಹಿಸಲು ಬೇಕಾದ ಸೌಕರ್ಯಗಳು ಈಗಿನಂತಿರಲಿಲ್ಲ.

ಆ ಪುಸ್ತಕದ ಹೂರಣವಾದರೂ ಏನು? ಅದೇಕೆ ಅದು ಜನಮಾನಸಕ್ಕೆ ಅಷ್ಟು ಹತ್ತಿರವಾಯಿತು ಏಕೆಂದರೆ ಅದರಲ್ಲಿ ಬರುವ ಪ್ರತಿ ವಿಚಾರವೂ, ಘಟನೆಯೂ ನಮ್ಮ ನಿಜ ಜೀವನದ ಭಾಗವೇ ಎಂಬಷ್ಟು ಹತ್ತಿರವಾಗಿ ನಮಗೆ ಕಾಣುತ್ತವೆ. ಸ್ವಾಮೀಜಿ, ಅತ್ಯಂತ ಸರಳ ರೂಪದಲ್ಲಿ ನಾವು ದಿನ ನಿತ್ಯದಲ್ಲಿ ಎದುರಿಸುವ ಸಿಟ್ಟು, ಹೊಟ್ಟೆಕಿಚ್ಚು, ದ್ವೇಷ, ಭಯ, ನಿರಾಸೆ, ದುರಾಸೆ, ಚಿಂತೆ ಮುಂತಾದ ಸಮಸ್ಯೆಗಳಿಗೆ ಪರಿಹಾರ ಹೇಳಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ  ಅವುಗಳ ಕಾರ್ಯಕಾರಣ ಕುರಿತು ವೈಜ್ಞಾನಿಕ, ಮನೋವೈಜ್ಞಾನಿಕ ವಿಶ್ಲೇಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವುಗಳಿಗೆಲ್ಲ ಪ್ರಾಯೋಗಿಕ ಪರಿಹಾರಗಳು ಏನು ಮತ್ತು ಅವು ನಮ್ಮ ಧಾರ್ಮಿಕ ಗ್ರಂಥಗಳಲ್ಲೇ ಹೇಗೆ ಸೂಕ್ಷ್ಮವಾಗಿ ಅಡಗಿವೆ ಎಂದೂ ಹೇಳಿದ್ದಾರೆ. ಸ್ವಾಮೀಜಿಯವರ ಭಾಷೆ ಎಷ್ಟು ಸೊಗಸಾಗಿದೆ ಎಂದರೆ ಇಲ್ಲಿ ಗಂಭೀರ ವಿಷಯಗಳೂ ಒಳ್ಳೆ ತಮಾಷೆಯಾಗಿ, ಪತ್ತೆದಾರಿ ಕಾದಂಬರಿಗಳಂತೆ ಆಸಕ್ತಿಕರವಾಗಿ ಓದಿಸಿಕೊಂಡು ಹೋಗುತ್ತವೆ.

 

ನಾನು ವಿದ್ಯಾಶಾಲೆಯಿಂದ ಹೊರಬಂದು ಎಷ್ಟೋ ವರ್ಷಗಳ ಅನಂತರ ಆ ಪುಸ್ತಕವನ್ನು ಮೊದಲಬಾರಿಗೆ ಓದಿದೆ. ತಮಾಷೆಯೆಂದರೆ, ನನಗೆ ಆ ವಿಷಯಗಳನ್ನೆಲ್ಲ ಮೊದಲೇ ತಿಳಿದಿರುವಂತೆ ಅನ್ನಿಸುತ್ತಿತ್ತು. ಕಾರಣವೇನೆಂದರೆ ಸ್ವಾಮೀಜಿಯವರು ಈ ಪುಸ್ತಕದಲ್ಲಿ ಹೇಳಿದ ಬಹುತೇಕ ವಿಷಯಗಳನ್ನು, ಘಟನೆಗಳನ್ನು ನಮಗೆ ಕಥೆಗಳ ರೂಪದಲ್ಲಿ, ಚಿಂತನೆಗಳ ರೂಪದಲ್ಲಿ, ಆದಿತ್ಯವಾರದ ಉಪನ್ಯಾಸದ ರೂಪದಲ್ಲಿ ಹೇಳಿದ್ದರು. ಆದರೆ ನಮಗೇನು ಗೊತ್ತಿತ್ತು ಸ್ವಾಮೀಜಿ ಆಗ ಇಂತಹ ಮಹಾನ್ ಅಕ್ಷರಯಜ್ಞಕ್ಕೆ ತಯಾರಿ ನಡೆಸಿದ್ದರೆಂಬುದು ?
ಒಮ್ಮೆ ಆದಿತ್ಯವಾರ ಬೆಳಗಿನ  ಪ್ರಾರ್ಥನೆಯ ಅನಂತರ ಸ್ವಾಮೀಜಿ ಮಾತನಾಡಲು ಎದ್ದು ನಿಂತರು. ಅವರ ಕೈಯಲ್ಲಿ ಮೂರು ಮುಸುಂಬಿ ಹಣ್ಣುಗಳಿದ್ದವು. ಇದು ಏಕೆಂದು ನಮಗೆ ಕುತೂಹಲ. ಸ್ವಾಮೀಜಿ, ಮಾತನಾಡುತ್ತಾ ಹಣ್ಣನ್ನು ಒಂದೇ ಕೈಯಲಿ ಹಾರಿಸಿ ಹಿಡಿಯತೊಡಗಿದರು, ಒಂದು…ಎರಡು.. ಮೂರು..! ಮೂರೂ ಹಣ್ಣುಗಳನ್ನು ಒಂದಾದಮೇಲೊಂದರಂತೆ, ನಿರಂತರವಾಗಿ (ಸರ್ಕಸ್ಸಿನಲ್ಲಿ ಟ್ರಿಕ್ ಮಾಡುವವರು ಹಾರಿಸಿದಂತೆ) ಹಾರಿಸಿ ಹಿಡಿಯತೊಡಗಿದರು. ನಮಗೆಲ್ಲ ಆಶ್ಚರ್ಯ, ಸ್ವಾಮೀಜಿ ಇದನ್ನು ಯಾವಾಗ ಕಲಿತರೆಂದು. ಅಂದು ಸ್ವಾಮೀಜಿ “ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು…” ಎಂದು ಹೇಳಲು ಸ್ವತಃ ಅದನ್ನು ಅಭ್ಯಾಸ ಮಾಡಿ ಕಲಿತು ಪ್ರಯೋಗ ಮಾಡಿ ತೋರಿಸಿದ್ದರು. ಇಂತಹ ಹಲವು ಚಾಕಚಕ್ಯತೆಯನ್ನು ಅವರು ರೂಢಿಸಿಕೊಂಡು ಮಕ್ಕಳಿಗೆ “ನೋಡಿ, ನೀವೂ ಇದನ್ನು ಕಲಿಯಬಹುದು” ಎಂದು ತೋರಿಸುತ್ತಿದ್ದರು. ಹೀಗೆ ಹತ್ತು ಹಲವು ರೀತಿಯಲ್ಲಿ ಮಕ್ಕಳಲ್ಲಿ ಧೈರ್ಯ, ಆತ್ಮವಿಶ್ವಾಸ, ಸತತ ಅಭ್ಯಾಸದ ಮಹತ್ತ್ವ ತಿಳಿಸುತ್ತಿದ್ದರು.

 

ಪ್ರತಿದಿನ ರಾತ್ರಿ ಮಲಗುವ ಘಂಟೆ ಬಾರಿಸಿ ನಾವು ನಿದ್ದೆ ಮಾಡಲು ಸಿದ್ಧರಾಗುತ್ತಿದ್ದಂತೆ ನಮ್ಮ ವಾರ್ಡಿನ ಇಂಟರ್ಕಾಮ್ ಗಳಲ್ಲಿ  ಮೆಲ್ಲನೆ ಒಂದು ಧ್ವನಿ ಕೇಳಿ ಬರುತ್ತಿತ್ತು, “ಮಕ್ಕಳೇ, ಕಥೆ ಬೇಕಾ ಕಥೆ…” ಎಂದು. ಆಗ ಎಲ್ಲರೂ…ಒಟ್ಟಿಗೇ “ಬೇಕು ಸ್ವಾಮೀಜೀ ಬೇಕು..” ಎಂದು ಜೋರಾಗಿ ಹಾಸ್ಟೆಲ್ಲಿನ ಛಾವಣಿ ಹಾರಿ ಹೋಗುವಂತೆ ಕಿರುಚುತ್ತಿದ್ದೆವು. ಯಾಕೆಂದರೆ ಅದು ನಮ್ಮ ಪ್ರಿಯ ಡಾ. ಸ್ವಾಮೀಜಿಯವರ ಧ್ವನಿಯಾಗಿರುತ್ತಿತ್ತು. ಮಕ್ಕಳಿಗೆ ಕಥೆ ಹೇಳುವುದೆಂದರೆ ಸ್ವಾಮೀಜಿಯವರಿಗೆ ತುಂಬ ಖುಷಿ. ಅವರು ಎಂದೂ ಕಾಕಕ್ಕ ಗುಬ್ಬಕ್ಕನ ಕಥೆ ಹೇಳಿದವರಲ್ಲ. ನಿಜ ಜೀವನದ ಕುತೂಹಲಕರ ಘಟನೆಗಳು, ಜಗತ್ತಿನ ಯಾವುದೋ ಖಂಡದ ಆದಿವಾಸಿಗಳ ರಸವತ್ತಾದ ವಿಷಯಗಳು, ಅಮೇರಿಕ ರಷ್ಯಾ ದೇಶಗಳ ವಿಜ್ಞಾನಿಗಳು ಕಂಡುಕೊಂಡ ಮನೋವೈಜ್ಞಾನಿಕ ಮಾಹಿತಿಗಳು, ಬರ್ಮುಡಾ ಟ್ರಯಾಂಗಲ್ ನಲ್ಲಿ ಕಣ್ಮರೆಯಾದ ಹಡಗುಗಳ ನಿಗೂಢತೆ, ಭಾರತದಲ್ಲಿ ಮರಣ ಹೊಂದಿ ಹೊರದೇಶದಲ್ಲಿ ಹುಟ್ಟಿದವರ ಪುನರ್ಜನ್ಮದ ಘಟನೆಗಳು,  ಸಾವಿನಾಚೆಯ ಬದುಕುಗಳ ಕುರಿತು ಮನ:ಶಾಸ್ತ್ರಜ್ಞನರ ಅನುಭವಗಳು… ಇಂಥ ನೂರಾರು ವಿಚಾರಗಳು ಅವರ ಕಥೆಯ ವಸ್ತುಗಳಗಿರುತ್ತಿದ್ದವು. ಅಷ್ಟೇ ಅಲ್ಲ ತದನಂತರವೂ ಯಾರಿಗಾದರೂ ಹೆಚ್ಚಿನ ವಿವರಣೆ ಬೇಕಿದ್ದರೆ ಆಸಕ್ತಿಯಿಂದ ಅಂಥವರನ್ನು ಬೇರೆಯಾಗಿ ಕರೆದು ಮಾಹಿತಿ ನೀಡುತ್ತಿದ್ದರು.

 

ಸ್ವಾಮೀಜಿಯವರದು ಮಾತೃಹೃದಯ, ಮಗುವಿನ ಮನಸ್ಸು, ಒಂದಿನಿತೂ ಬಿಂಕವಿಲ್ಲದ ಸಂವಹನ, ಸಾಮಾನ್ಯರಲ್ಲಿ ಸಾಮಾನ್ಯರಾಗಿ ಒಡನಾಟ. ಮಕ್ಕಳನ್ನು ಪ್ರೀತಿಸಿದಷ್ಟೇ ಅವರಿಂದ ಶಿಸ್ತನ್ನೂ ಬಯಸುತ್ತಿದ್ದರು. ಕೆಲವೊಮ್ಮೆ ಮಕ್ಕಳನ್ನು ತಿದ್ದಲು ಎರಡೇಟು ಕೊಟ್ಟರೂ ಅನಂತರ ಕರೆದು ಪ್ರೀತಿಯಿಂದ “ನಾನು ಮೆಲ್ಲನೇ ಕೊಡಬೇಕೆಂದೇ ಕೊಟ್ಟಿದ್ದು …ಜೋರು ಬಿತ್ತಾ.. ನೋವಾಗಲಿಲ್ಲ ಅಲ್ಲವಾ.. ಇನ್ನು ಹಾಗೆ ಮಾಡಬೇಡ” ಎಂದು ನಗುತ್ತ ತಲೆಯ ಮೇಲೆ ಕೈಯಾಡಿಸಿ ಕಳಿಸುತ್ತಿದ್ದರು.

 

ಆಧುನಿಕ ವಿಜ್ಞಾನದ ವಿಕೃತಿಯನ್ನು ಖಂಡಿಸುತ್ತಲೇ ಸದಭಿರುಚಿಯ ವಿಜ್ಞಾನ ಮತ್ತು ಅಧ್ಯಾತ್ಮ ಒಂದಕ್ಕೊಂದು ಪೂರಕ, ಅವು ಸಹಯೋಗ ಸಾಮರಸ್ಯದಿಂದಲೇ ಮುಂದುವರಿಯಬೇಕಿದೆ ಎಂದವರು ಬಯಸುತ್ತಿದ್ದರು. ಅಣುಬಾಂಬಿನ ವಿಷಯದಲ್ಲಿ ಅವರು ಐನ್ ಸ್ಟೀನ್ ಅವರನ್ನು ವಿರೋಧಿಸಿದರೂ, ಅತ್ಯಂತ ಸೂಕ್ಷ್ಮ ಪರಮಾಣುವಿನಲ್ಲೂ ಎಂತಹ ಅದ್ಭುತ ಶಕ್ತಿಯಿದೆ ಎಂದು ತೋರಿಸುವಲ್ಲಿ  ಐನ್ ಸ್ಟೀನ್ ಯಶಸ್ವಿಯಾದುದುದಕ್ಕೆ ಮತ್ತು ತಮ್ಮ ಅಂತಿಮ ದಿನಗಳಲ್ಲಿ ಭಾರತದ ಅಧ್ಯಾತ್ಮದೆಡೆ ಒಲವು ತೋರಿದ್ದನ್ನು ಅವರು ಮೆಚ್ಚಿಕೊಂಡಿದ್ದರು. ಎಡ್ಗರ್ ಕೇಸಿಯಂಥವರ ಅತೀಂದ್ರಿಯಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದರು.  ನೋಬೆಲ್ ವಿಜ್ಞಾನಿ ಡಾ. ಅಲೆಕ್ಸಿಸ್ ಕ್ಯಾರೆಲ್ ( Author of best seller Man the Unknown ) ಪ್ರತಿಪಾದಿಸಿದ್ದ  ’ ಮಾನವ ಜೀವಿಯಲ್ಲಿ ಅತ್ಯದ್ಭುತ ಶಕ್ತಿಶಾಲಿಯಾಗಿರುವ ಮನಸ್ಸನ್ನು ವೈದ್ಯ ವಿಜ್ಞಾನವು ಪರಿಗಣಿಸಿಲ್ಲ’ ಎಂಬ ವಿಚಾರ ಅವರ ಕಳಕಳಿಯೂ ಆಗಿತ್ತು. ಜಗತ್ತಿನ ಪ್ರಸಿದ್ಧ ಮನೋವಿಜ್ಞಾನಿಗಳ ಬರಹಗಳಲ್ಲಿ ಹುದುಗಿರಬಹುದಾದ ಆಧ್ಯಾತ್ಮಿಕ ಸೂಕ್ಷ್ಮಗಳಿಗಾಗಿ ಸಂಶೋಧನಾ ಪ್ರವರ್ತರಾಗಿದ್ದರು ಸ್ವಾಮೀಜಿ. ಅವರ ಒಟ್ಟಾರೆ ವಿಚಾರಗಳಲ್ಲಿ ಮಾನವನ ಆತ್ಮವಿಶ್ವಾಸ, ನಂಬಿಕೆ, ನಿಸ್ವಾರ್ಥ ಪ್ರೀತಿ, ಸೇವೆ, ಕಷ್ಟದಲ್ಲಿರುವವರಿಗಾಗಿ ಪ್ರಾರ್ಥನೆಯಂಥ ವಿಷಯಗಳೇ ಅವನ ಜೀವನದಲ್ಲಿ ಮುಖ್ಯ ಎಂಬ ಅಂಶ ತುಂಬಿರುತ್ತಿತ್ತು.

 

ಅವರ ಆಶೀರ್ವಾದ, ಪ್ರೇರಣೆಯಿಂದ ಇಂದು ವಿದ್ಯಾಶಾಲೆಯಲ್ಲಿ ಕಲಿತ ಹಾಗೂ ಅನ್ಯ ಲಕ್ಷಾಂತರ ಯುವಜನರು ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿರುದಷ್ಟೇ ಅಲ್ಲ ಸಮಾಜ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  ಮಹಾನ್ ಸಾಧಕ, ಪುಣ್ಯಜೀವಿ, ಪ್ರೇರಣಾ ಸ್ರೋತರಾದ ಶ್ರೀ ಜಗದಾತ್ಮಾನಂದಜೀ ಅವರೊಂದಿಗೆ ನನ್ನ ಬಾಲ್ಯದ ಕೆಲ ಸಮಯವನ್ನು ಕಳೆಯಲು ಸಾಧ್ಯವಾಗಿದ್ದು ನನ್ನ ಪುಣ್ಯವೆಂದೇ ಭಾವಿಸಿದ್ದೇನೆ. ಶ್ರಿ ರಾಮಕೃಷ್ಣ, ಶ್ರೀ ವಿವೇಕಾನಂದ ಹಾಗೂ ಶ್ರೀ ಶಾರದಾ ಮಾತೆಯವರ ಪುಣ್ಯಪಾವನ ಚರಣವನ್ನು ಸೇರಿದ ಸ್ವಾಮೀಜಿಯವರ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ.

Author Details


Srimukha

Leave a Reply

Your email address will not be published. Required fields are marked *