‘ ಗೋಮಾತೆಯ ಸೇವೆಗೆ ​ವಿಶ್ವಗೋ ಸಮ್ಮೇಳನದ ಪ್ರೇರಣೆ ‘ – ಶುಭಾ ಶ್ರೀಧರ್ ಕವಲಕ್ಕಿ,

ಮಾತೃತ್ವಮ್ ಲೇಖನ

‘ ಬದುಕಿನಲ್ಲಿ ಗೋಮಾತೆಯ ಸೇವೆ ಹಾಗೂ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡರೆ ಜೀವನಕ್ಕೊಂದು ಧನ್ಯತೆ ಲಭಿಸುತ್ತದೆ ಹಾಗೂ ಸಾರ್ಥಕ ಭಾವ ಮೂಡುತ್ತದೆ ‘ ಎಂಬುದು ಹೊನ್ನಾವರ ಮಂಡಲ ಮುಗ್ವಾ ವಲಯದ ಕವಲಕ್ಕಿ ನಿವಾಸಿಗಳಾಗಿರುವ ಕರ್ಕಿ ಕುಟುಂಬದ ಶ್ರೀಧರ ಭಟ್ ಅವರ ಪತ್ನಿ ಶುಭಾ ಶ್ರೀಧರ್ ಅವರ ಅನಿಸಿಕೆ
​ ವೃತ್ತಿಯಿಂದ ಶಿಕ್ಷಕಿಯಾಗಿರುವ ಇವರು ಶ್ರೀಮಠದ ನಿಷ್ಠಾವಂತ ಕಾರ್ಯಕರ್ತೆಯಾಗಿದ್ದು ಪ್ರಸ್ತುತ ಬೆಂಗಳೂರಿನ ಗಿರಿನಗರ ನಿವಾಸಿಗಳಾಗಿದ್ದಾರೆ.

​ ಬೆಕ್ಕುತ್ತೆಯ ಗಜಾನನ ಭಟ್ ಮತ್ತು ಪ್ರೇಮಾ ಭಟ್ ದಂಪತಿಗಳ ಪುತ್ರಿಯಾದ ಇವರು, ಬಾಲ್ಯದಿಂದಲೇ ಹಸುಗಳ ಒಡನಾಟದಲ್ಲಿ ಬೆಳೆದವರು. ತವರು ಮನೆಯಲ್ಲಿ ಗೋವುಗಳನ್ನು ಸಾಕಿ, ಅವುಗಳ ಒಡನಾಟದಲ್ಲೇ ಇದ್ದ ಇವರಿಗೆ ಗೋಮಾತೆಯ ಮೇಲೆ ಅಪರೂಪದ ಪ್ರೀತಿಯ ಬಾಂಧವ್ಯವಿತ್ತು.
ಕಳೆದ ಹದಿನೈದು ವರ್ಷಗಳಿಂದ ಶ್ರೀರಾಮಚಂದ್ರಾಪುರ ಮಠದ ಸಂಪರ್ಕದಲ್ಲಿರುವ ಇವರ ಈ ಗೋಪ್ರೇಮಕ್ಕೆ ಒಂದು ಭದ್ರವಾದ ಪ್ರೇರಣೆ ದೊರಕಿದ್ದು ಶ್ರೀಸಂಸ್ಥಾನದವರು ಆಯೋಜಿಸಿದ್ದ ಐತಿಹಾಸಿಕ ‘ವಿಶ್ವ ಗೋ ಸಮ್ಮೇಳನ’ದಲ್ಲಿ ಭಾಗವಹಿಸಿದಾಗ. ಆ ದಿವ್ಯ ಕ್ಷಣದಿಂದ ಇವರಲ್ಲಿ ಗೋಸೇವೆಯ ಬಗ್ಗೆ ಮತ್ತಷ್ಟು ಆಸಕ್ತಿ, ಶ್ರದ್ಧೆ ಹಾಗೂ ಹಂಬಲಗಳು ಜಾಗೃತಗೊಂಡವು.

​ವಿಶ್ವ ಗೋ ಸಮ್ಮೇಳನದ ಪ್ರೇರಣೆಯೊಂದಿಗೆ ಗೋ ಸೇವೆ ಮಾಡಬೇಕೆಂಬ ಹಂಬಲದಿಂದ ಮುನ್ನಡೆದ ಶುಭಾ ಅವರಿಗೆ ಚಿತ್ರಾ ಭಟ್ ಬೆಕ್ಕುತ್ತೆ ಅವರ ಮಾರ್ಗದರ್ಶನ ಲಭಿಸಿತು. ಅವರ ಪ್ರೇರಣೆಯಿಂದಾಗಿ ಶ್ರೀಮಠದ ಮಹತ್ವಾಕಾಂಕ್ಷೆಯ ‘ಮಾತೃತ್ವಮ್’ ಯೋಜನೆಯ ಮೂಲಕ ‘ಮಾಸದ ಮಾತೆ’ಯಾಗಿ ಕೈಜೋಡಿಸಿದರು.
ಎರಡು ಹಸುವಿನ ಸಂಪೂರ್ಣ ನಿರ್ವಹಣಾ ವೆಚ್ಚವನ್ನು ತಾವೇ ಭರಿಸಿದ ಅವರು ಈಗಲೂ ಆ ಸೇವೆಯನ್ನು ಮುಂದುವರಿಸುತ್ತಿದ್ದಾರೆ.

‘ ​ಇಂದಿನ ಆಧುನಿಕ ಜೀವನದ ಒತ್ತಡಗಳ ನಡುವೆ, ಶ್ರೀಮಠದ ಸೇವೆ ಬದುಕಿಗೆ ಅಪಾರ ನೆಮ್ಮದಿಯನ್ನು ನೀಡಿದೆ ‘ ಎನ್ನುವುದು ಶುಭಾ ಅವರ ಅನುಭವದ ನುಡಿ.

“ಶ್ರೀಮಠದ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಮನಸ್ಸಿಗೆ ಸಿಗುವ ನಿರಾಳತೆ ಬೇರೆಲ್ಲೂ ಸಿಗುವುದಿಲ್ಲ” ಎನ್ನುವ ಇವರು, ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳಿದ್ದರೆ ಕಾರ್ಯಕರ್ತೆಯಾಗಿಯೂ ಸೇವೆ ಸಲ್ಲಿಸುತ್ತಾರೆ.
ಮಾತೃತ್ವಮ್ ಯೋಜನೆಯ ಮೂಲಕ ಗೋಸೇವೆಯಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕಿರುವುದು ತಮ್ಮ ಪೂರ್ವಜನ್ಮದ ಸುಕೃತ ಮತ್ತು ಶ್ರೀಗುರುಗಳ ಕೃಪೆ ಎಂದು ಅವರು ಭಾವ ತುಂಬಿ ನುಡಿಯುತ್ತಾರೆ.

‘ ತಮ್ಮ ಗೋ ಸೇವೆಗೆ ಪತಿ ಶ್ರೀಧರ ಭಟ್ ಅವರ ಸಂಪೂರ್ಣ ಸಹಕಾರವಿದೆ’ ಎಂದು ನುಡಿಯುವ ಶುಭಾ ಅವರ ಎಂಟನೇ ತರಗತಿಯಲ್ಲಿ ಓದುವ ಮಗನಿಗೂ ಶ್ರೀಗುರು ಸೇವೆಯಲ್ಲಿ ತುಂಬಾ ಆಸಕ್ತಿ ಇದೆ. ಅವನು ಸಹಾ ಶ್ರೀಮಠದ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದಾನೆ ‘ ಎನ್ನುವ ಶುಭಾ ಅವರ ಕುಟುಂಬ ಶ್ರೀಗುರು ಚರಣಗಳಲ್ಲಿ ಅಪಾರವಾದ ಶ್ರದ್ಧೆಯನ್ನಿರಿಸಿಕೊಂಡಿದೆ.


‘ ​ಶ್ರೀಮಠದ ಸೇವಾಕಾರ್ಯಗಳಲ್ಲಿ ಹಾಗೂ ಗೋಮಾತೆಯ ಸೇವೆಯಲ್ಲಿಯೇ ಬದುಕಿನ ನಿಜವಾದ ಶಾಂತಿ ಅಡಗಿದೆ ‘ ಎಂದು ನಂಬಿರುವ ಶುಭಾ ಶ್ರೀಧರ್ ಕವಲಕ್ಕಿ ಅವರು ತಮಗೆ ಒದಗಿಬಂದಿರುವ ಈ ಗೋಸೇವೆಯ ಅವಕಾಶವು ಶ್ರೀಗುರುಗಳ ಆಶೀರ್ವಾದದಿಂದ ಹೀಗೆಯೇ ಸತತವಾಗಿ ಮುಂದುವರಿಯಬೇಕು ‘ ಎಂಬ ಅಭಿಲಾಷೆ ಹೊಂದಿದ್ದಾರೆ.

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *