‘ ಶ್ರೀಮಠದ ಸೇವೆಗಳಲ್ಲಿ ಭಾಗಿಯಾಗುವುದೇ ಬಾಳಿನ ಸೌಭಾಗ್ಯ’ ಭವತಾರಿಣಿ ವಿ. ಭಟ್ ಸಾದಂಗಾಯ

ಮಾತೃತ್ವಮ್ ಲೇಖನ

” ಶ್ರೀಮಠದ ನಿರಂತರ ಸೇವೆಯಿಂದ ನಮ್ಮ ಬದುಕಿನಲ್ಲಿ ನೆಮ್ಮದಿ ಮತ್ತು ಶಾಂತಿ ನೆಲೆಸಿದೆ. ನಮ್ಮ ಮನೆಯವರ ಪ್ರೋತ್ಸಾಹದಿಂದ ಗೋಮಾತೆಯ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ಎಲ್ಲಕ್ಕಿಂತ ಮಿಗಿಲಾಗಿ, ಶ್ರೀಮಠದ ಸಂಪರ್ಕದಿಂದ ನಮ್ಮ ಬದುಕಿಗೊಂದು ಸುಸಂಸ್ಕೃತ ಚೌಕಟ್ಟು ದೊರಕಿದೆ” ಎಂದು ಹೃದಯ ತುಂಬಿ ನುಡಿಯುವವರು ಭವತಾರಿಣಿ ವಿ. ಭಟ್ ಸಾದಂಗಾಯ.

ಉಪ್ಪಿನಂಗಡಿ ಮಂಡಲ ಮಡಂತ್ಯಾರು ವಲಯದ ಸಾದಂಗಾಯದ ವಿಶ್ವೇಶ್ವರ ಭಟ್ ಅವರ ಪತ್ನಿಯಾಗಿರುವ ಇವರು, ವೃತ್ತಿಜೀವನದ ಜವಾಬ್ದಾರಿಗಳ ನಡುವೆಯೂ ಶ್ರೀಮಠದ ನಿಷ್ಠಾವಂತ ಸೇವಕಿಯಾಗಿ, ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ತವರು ಮನೆಯ ಧಾರ್ಮಿಕ ವಾತಾವರಣದ ಪ್ರಭಾವ ಭವತಾರಿಣಿಯವರ ಬದುಕಿನಲ್ಲಿ ಪ್ರಭಾವ ಬೀರಿದೆ. ಅವರ ಸಾತ್ತ್ವಿಕ ಬದುಕಿಗೆ ಭದ್ರ ಬುನಾದಿ ನೀಡಿದವರು ತಂದೆ ಕಾರ್ಯಾನದ ಎಂ. ಸೀತಾರಾಮ ವೈದ್ಯ, ಮತ್ತು ತಾಯಿ ಶಕುಂತಲಾ.

ಬಾಲ್ಯದಲ್ಲಿಯೇ ಹಿರಿಯರಿಂದ ಶ್ರೀಮಠದ ಸಂಪರ್ಕ ಮತ್ತು ದೈವಿಕ ಸಂಸ್ಕಾರ ಬಳುವಳಿಯಾಗಿ ದೊರೆತಿರುವುದಲ್ಲದೆ, ತವರು ಮನೆಯಲ್ಲಿ ಸಾಕುತ್ತಿದ್ದ ಹಸುಗಳ ಸಾನ್ನಿಧ್ಯದಿಂದ ಗೋಮಾತೆಯ ಮೇಲೆ ವಿಶೇಷ ಮಮತೆ ಮೂಡಲು ಸಾಧ್ಯವಾಯಿತು

ವಿವಾಹದ ನಂತರ ಸಾದಂಗಾಯ ಕುಟುಂಬದ ಸೊಸೆಯಾಗಿ ಬಂದ ಮೇಲೂ ಈ ಭಕ್ತಿಯ ಒಡನಾಟ ಮತ್ತಷ್ಟು ಗಟ್ಟಿಯಾಗುತ್ತಾ ಸಾಗಿತು.

ಭವತಾರಿಣಿ ಅವರು ‘ಮೆಸ್ಕಾಂ’ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರೂ ತಮ್ಮ ಉದ್ಯೋಗದ ಒತ್ತಡಗಳ ನಡುವೆ ಮಾತೃತ್ವಮ್ ಯೋಜನೆಯ ಮೂಲಕ ಗೋ ಸೇವೆ ನಡೆಸುತ್ತಿದ್ದಾರೆ.

“ಉದ್ಯೋಗದ ಜೊತೆಯಲ್ಲಿ ಹಸುಗಳನ್ನು ಮನೆಯಲ್ಲಿ ಸಾಕುವುದು ಕಷ್ಟವಾಗುವವರಿಗೆ, ಶ್ರೀಮಠದ ‘ಮಾತೃತ್ವಮ್’ ಯೋಜನೆಯ ಮೂಲಕ ಗೋಸೇವೆ ಮಾಡುವುದು ಅತ್ಯಂತ ಅನುಕೂಲಕರ ಮತ್ತು ಪುಣ್ಯದ ಹಾದಿ” ಎನ್ನುವುದು ಭವತಾರಿಣಿಯವರ ಅನುಭವದ ನುಡಿ.

ಗೋಸೇವೆಯ ಪವಿತ್ರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ಎರಡು ಹಸುಗಳ ಸಂಪೂರ್ಣ ನಿರ್ವಹಣಾ ವೆಚ್ಚವನ್ನು ತಾವೇ ಸ್ವಯಂ ಭರಿಸಿಕೊಂಡು, ಶ್ರೀಗುರುಗಳ ಆಶೀರ್ವಾದಪೂರ್ವಕವಾಗಿ ದೊರಕುವ ‘ಬಾಗಿನ’ವನ್ನು ಸ್ವೀಕರಿಸಿದ್ದಾರೆ.

ಯಾವುದೇ ಒಂದು ಪುಣ್ಯಕಾರ್ಯ ನಿರಂತರವಾಗಿ ಸಾಗಬೇಕಾದರೆ ಅದಕ್ಕೆ ಕುಟುಂಬದ ಸಹಕಾರ ಅತ್ಯಗತ್ಯ. ಭವತಾರಿಣಿ ಅವರ ಈ ಗೋಸೇವಾ ಸಂಕಲ್ಪಕ್ಕೆ ಅವರ ಪತಿ, ಮಕ್ಕಳು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.

ಇವರ ಪತಿ ವಿಶ್ವೇಶ್ವರ ಭಟ್ ಅವರು ಶ್ರೀಮಠದ ವಿವಿಧ ಸೇವಾ ಕಾರ್ಯಗಳಲ್ಲಿ ಸದಾ ಕಾಲ ನಿರತರಾಗಿದ್ದು ಇವರ ಇಬ್ಬರು ಮಕ್ಕಳೂ ಕೂಡ ಶ್ರೀಮಠದ ಸಂಪರ್ಕದಲ್ಲಿದ್ದಾರೆ.

‘ ಬಾಲ್ಯದಿಂದಲೇ ಮಕ್ಕಳು ನಮ್ಮ ಸಂಸ್ಕೃತಿಯ ಸಾತ್ತ್ವಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳ ಬೇಕಿದ್ದರೆ ಶ್ರೀಮಠದ ಸಂಪರ್ಕ ದೊರಕುಂತೆ ಮಾಡಬೇಕು ” ಎನ್ನುವ ಭಾವತಾರಿಣಿಯವರು ಶ್ರೀಗುರುಗಳು ಸಮಾಜದ ಹಾಗೂ ಧರ್ಮದ ಉನ್ನತಿಗಾಗಿ ಕೈಗೊಂಡಿರುವ ಪ್ರತಿಯೊಂದು ಯೋಜನೆಗಳ ಬಗ್ಗೆಯೂ ಸದ್ಭಾವನೆ ಹೊಂದಿದ್ದಾರೆ.

‘ ತಮ್ಮ ನಿತ್ಯದ ಉದ್ಯೋಗದ ಜೊತೆಜೊತೆಗೇ, ಶ್ರೀಮಠದ ಮತ್ತು ಗೋಮಾತೆಯ ಸೇವೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವ ಶಕ್ತಿಯನ್ನು ಶ್ರೀಗುರುಗಳು ಕರುಣಿಸಲಿ ‘ ಎಂಬುದೇ ಭವತಾರಿಣಿಯವ ಅಭಿಲಾಷೆ.

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *