ಬೆಂಗಳೂರು: ನಿಜ ಜ್ಯೇಷ್ಠ ಏಕಾದಶಿಯಿಂದ ಚತುರ್ದಶಿಯವರೆಗೆ (10-07-2026 ಇಂದ 13-07-2026) ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯವು ವಿಜಯನಗರದಲ್ಲಿರುವ ಶ್ರೀಭಾರತೀ ವಿದ್ಯಾಲಯಕ್ಕೆ ಲಭಿಸಿದ್ದು, ಶಾಲೆಯ ಇತಿಹಾಸದಲ್ಲಿ ಚಿರಸ್ಮರಣೀಯವಾದ ಆಧ್ಯಾತ್ಮಿಕ ಅಧ್ಯಾಯವಾಗಿ ಉಳಿಯಿತು. ನಾಲ್ಕು ದಿನಗಳ ಕಾಲ ನಡೆದ ‘ಜ್ಞಾನಯಾನ’ ಕಾರ್ಯಕ್ರಮವು ಶಾಲೆಯ ಸಮಗ್ರ ವಾತಾವರಣವನ್ನು ಭಕ್ತಿ, ಸಂಸ್ಕಾರ ಹಾಗೂ ಜ್ಞಾನಪ್ರಕಾಶದಿಂದ ಆವರಿಸಿತು.


ಜುಲೈ 10ರಂದು ಪರಮಪೂಜ್ಯ ಶ್ರೀಸಂಸ್ಥಾನದವರನ್ನು ಪೂರ್ಣಕುಂಭದೊಂದಿಗೆ ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು. ಆಡಳಿತ ಮಂಡಳಿ, ಶಿಕ್ಷಕರು, ಸಿಬ್ಬಂದಿ ಹಾಗೂ ಭಕ್ತವೃಂದದ ಉಪಸ್ಥಿತಿಯಲ್ಲಿ ನಡೆದ ಧೂಳಿ ಪಾದುಕಾಪೂಜೆಯೊಂದಿಗೆ ಕಾರ್ಯಕ್ರಮಗಳಿಗೆ ಶುಭಾರಂಭ ದೊರೆಯಿತು.
ಜುಲೈ 11ರಂದು ಶ್ರೀಕರಾರ್ಚಿತ ಪೂಜೆ ನೆರವೇರಿದ ಬಳಿಕ ಪರಮಪೂಜ್ಯ ಶ್ರೀಸಂಸ್ಥಾನದವರು ಶ್ರೀಭಾರತೀ ವಿದ್ಯಾಲಯದ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು. ತದನಂತರ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ವಿಜ್ಞಾನ ಹಾಗೂ ಕಲಾ ಪ್ರದರ್ಶನವನ್ನು ವೀಕ್ಷಿಸಿ, ವಿದ್ಯಾರ್ಥಿಗಳ ಪ್ರತಿಭೆ, ಸೃಷ್ಟಿಶೀಲತೆ ಹಾಗೂ ಶಿಕ್ಷಕರ ಮಾರ್ಗದರ್ಶನವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ಅಭಿವೃದ್ಧಿಗೆ ವಿವಿಧ ರೀತಿಯಲ್ಲಿ ಸಹಕರಿಸಿದ ದಾನಿಗಳನ್ನು ಪರಮಪೂಜ್ಯ ಶ್ರೀಸಂಸ್ಥಾನದವರು ಸನ್ಮಾನಿಸಿ ಆಶೀರ್ವದಿಸಿದರು.
ಬಳಿಕ ನಡೆದ ಧರ್ಮಸಭೆಯಲ್ಲಿ ಶಿಕ್ಷಣದ ಉದ್ದೇಶ, ಸಂಸ್ಕಾರಯುತ ಬೋಧನೆ, ಗುರುಗಳ ಕರ್ತವ್ಯ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ವಿಕಾಸದ ಕುರಿತು ಅಮೂಲ್ಯ ಮಾರ್ಗದರ್ಶನ ನೀಡಿದರು. ಅನಂತರ ಆಡಳಿತ ಮಂಡಳಿಯೊಂದಿಗೆ ಸಭೆ ಹಾಗೂ ಶಿಕ್ಷಕರಿಗೆ ವಿಶೇಷ ಮಾರ್ಗದರ್ಶನ ಕಾರ್ಯಕ್ರಮಗಳು ನೆರವೇರಿದವು.
ಶಾಲೆಯ 25 ವರ್ಷಗಳ ಪಯಣದ ಸ್ಮರಣಾರ್ಥ ಸಿದ್ಧಪಡಿಸಲಾದ ಸ್ಮರಣಿಕೆಯನ್ನು ಪರಮಪೂಜ್ಯರು ಶಾಲೆಯ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರಿಗೆ ನೀಡಿ ಆಶೀರ್ವದಿಸಿದರು.

ಜುಲೈ 13ರಂದು ಪರಮಪೂಜ್ಯ ಶ್ರೀಸಂಸ್ಥಾನದವರು ನೆರವೇರಿಸಿದ ಶ್ರೀಕರಾರ್ಚಿತ ಪೂಜೆಯ ಸಂದರ್ಭದಲ್ಲಿ 1,200ಕ್ಕೂ ಅಧಿಕ ವಿದ್ಯಾರ್ಥಿಗಳು ಶ್ರೀಕರಾರ್ಚಿತ ದೇವತೆಗಳ ದಿವ್ಯ ದರ್ಶನ ಪಡೆದು ಧನ್ಯರಾದರು. ಬಳಿಕ ಪರಮಪೂಜ್ಯ ಶ್ರೀಗಳು ಶಾಲೆಯ ಪ್ರಾರ್ಥನಾ ಸಭೆಯಲ್ಲಿ ದಿವ್ಯ ಉಪಸ್ಥಿತಿ ನೀಡಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ಆಶೀರ್ವದಿಸಿದರು.
ಅನಂತರ ನಡೆದ ‘ಜ್ಞಾನಯಾನ’ ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಶ್ರೀಸಂಸ್ಥಾನದವರು ಸರಳ ಉದಾಹರಣೆಗಳ ಮೂಲಕ ಏಕಾಗ್ರತೆ, ಆತ್ಮಜ್ಞಾನ, ಆತ್ಮಸ್ಥೈರ್ಯ, ಶಿಸ್ತು, ಸೇವಾಭಾವ ಹಾಗೂ ಭಾರತೀಯ ಮೌಲ್ಯಗಳ ಕುರಿತು ಅಮೃತಮಯ ಮಾರ್ಗದರ್ಶನ ನೀಡಿದರು. ಶ್ರೀಗಳ ಪ್ರತಿಯೊಂದು ಉತ್ತರವು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ನೆರೆದ ಭಕ್ತರಲ್ಲಿ ಹೊಸ ಚಿಂತನೆ ಮತ್ತು ಸ್ಫೂರ್ತಿಯನ್ನು ಮೂಡಿಸಿತು.
ಪರಮಪೂಜ್ಯ ಶ್ರೀಗಳ ಈ ನಾಲ್ಕು ದಿನಗಳ ದಿವ್ಯ ಸಾನ್ನಿಧ್ಯವು ಶ್ರೀಭಾರತೀ ವಿದ್ಯಾಲಯದ ಸಮಸ್ತ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ, ಆಡಳಿತ ಮಂಡಳಿ ಹಾಗೂ ಪೋಷಕರಿಗೆ ಆಧ್ಯಾತ್ಮಿಕ ಚೈತನ್ಯ, ಧಾರ್ಮಿಕ ಮೌಲ್ಯಗಳು ಮತ್ತು ಜೀವನದ ಆದರ್ಶಗಳನ್ನು ಅಳವಡಿಸಿಕೊಳ್ಳುವ ಅಪೂರ್ವ ಅವಕಾಶವನ್ನು ಕಲ್ಪಿಸಿತು.