ಸಮಾಜಕ್ಕೆ ಬೆಳಕಿತ್ತ ಜ್ಯೋತಿ ಮತ್ತೆ ಬೆಳಕಿನತ್ತ : ಶ್ರೀಶಿವಕುಮಾರ ಸ್ವಾಮೀಜಿ ಶಿವೈಕ್ಯ

ಸುದ್ದಿ

ಬೆಂಗಳೂರು: ನಡೆದಾಡುವೆ ದೇವರೆಂದೇ ಪ್ರಸಿದ್ಧರಾದ, ತ್ರಿವಿಧ ದಾಸೋಹದಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ, ಸಮಾಜಕ್ಕೆ ಬೆಳಕಾದ, ನೂರಾಹನ್ನೊಂದು ಸುದೀರ್ಘ ವರ್ಷಗಳ‌‌ ಕಾಲ ಬಾಳಿದ ಮಹಾನ್ ಚೇತನ ಶ್ರೀಸಿದ್ಧಗಂಗಾಮಠದ   ಶ್ರೀಶಿವಕುಮಾರ ಸ್ವಾಮೀಜಿ ಇಂದು ಶಿವೈಕ್ಯರಾದದ್ದು ರಾಜ್ಯವನ್ನು ಶೋಕದಲ್ಲಿ ಮುಳುಗಿಸಿದೆ. ಈ ಸಂದರ್ಭದಲ್ಲಿ ಬೆಂಗಳೂರಿನ ಗಿರಿನಗರದ ಶ್ರೀರಾಮಚಂದ್ರಾಪುರಮಠದಲ್ಲಿ, ಅವರ ಸತ್ಕಾರ್ಯ-ಆದರ್ಶಗಳನ್ನು ನೆನೆದು ರಾಮತಾರಕ, ಶಿವಪಂಚಾಕ್ಷರಿ ಜಪದೊಂದಿಗೆ, ಪುಷ್ಪಾರ್ಚನೆ ಮಾಡಿ, ಮೌನಶ್ರದ್ಧಾಂಜಲಿ ಅರ್ಪಣೆ ಮಾಡಲಾಯಿತು. ವಿದ್ವಾನ್ ಶ್ರೀ ಜಗದೀಶಶರ್ಮಾ, ಡಾ. ಶಾರದಾ ಜಯಗೋವಿಂದ, ಡಾ. ವೈ. ವಿ. ಕೃಷ್ಣಮೂರ್ತಿ ಮಾತನಾಡಿ ಶ್ರೀಶಿವಕುಮಾರ ಸ್ವಾಮಿಗಳ ಸಮಾಜಮುಖಿ ಕಾರ್ಯಗಳ ಬಗ್ಗೆ, ಅವರ ಜೀವನದ ಬಗ್ಗೆ ನೆನೆಸಿಕೊಂಡರು.

 

ತ್ರಿವಿಧ ದಾಸೋಹದಿಂದ ಸಮಾಜಕ್ಕೆ ದಾರಿದೀಪವಾದ ಅವರ ಸಾಧನೆಗಾಗಿ, ಶ್ರೀಕ್ಷೇತ್ರಗೋಕರ್ಣದಿಂದ‌ ಕೊಡಲ್ಪಡುವ ಸಾರ್ವಭೌಮ ಪ್ರಶಸ್ತಿಯನ್ನು ಶ್ರೀಸಂಸ್ಥಾನದವರು ಅವರಿಗೆ ಕೊಡಮಾಡಿದ್ದನ್ನೂ, ಗೋಹತ್ಯಾನಿಷೇಧಕ್ಕಾಗಿ ಶ್ರೀಶಿವಕುಮಾರ ಸ್ವಾಮಿಗಳು ಅಭಯಾಕ್ಷರಕ್ಕೆ ಸಹಿ ಮಾಡಿದ್ದನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲಾಯಿತು.

 

ಗೋಹತ್ಯಾನಿಷೇಧಕ್ಕೆ ಹಕ್ಕೊತ್ತಾಯ ಸಲ್ಲಿಸುವ ಅಭಯಾಕ್ಷರವನ್ನು ಈ ದಿನ ಸರ್ಕಾರಕ್ಕೆ ಸಲ್ಲಿಸಬೇಕಾಗಿತ್ತು. ಶ್ರೀಶಿವಕುಮಾರ ಸ್ವಾಮಿಗಳು ಶಿವೈಕ್ಯವಾದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮುಂದೂಡಲಾಯಿತು.

 

ಶ್ರೀ ಕೃಷ್ಣಪ್ರಸಾದ ಎಡಪ್ಪಾಡಿ, ಶ್ರೀ ಯು. ಎಸ್. ಜಿ. ಭಟ್, ರಾಘವಸೇನೆಯ ಶ್ರೀ ಆರ್. ಕೆ. ಭಟ್, ಶ್ರೀ ಶಿವರಾಮ ಭಟ್ ಪೊನ್ನೂರ್ಕಜೆ, ಶ್ರೀ ಶ್ಯಾಮಕುಮಾರ, ಶ್ರೀ ಮಂಜಪ್ಪ ಗುಂಡಿ, ಶ್ರೀ ಗಣೇಶ ಜೆ. ಎಲ್., ಸಂತಸೇವಕ ಸಮಿತಿಯ ಶ್ರೀ ಶಿಶಿರ ಹೆಗಡೆ, ಡಾ. ರವಿ,  ಅಭಯಾಕ್ಷರ ಕಾರ್ಯಕರ್ತರು, ಶಿಷ್ಯಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Author Details


Srimukha

Leave a Reply

Your email address will not be published. Required fields are marked *