ಹವಿಸವಿ ತೋರಣ – ೧೮ ಜಡೆ ಹೆಣೆಯುವ ಬಾರೇ……

ಲೇಖನ

 

ಕೆಲವು ವರ್ಷದ ನಂತರ ಒಂದು ಹಳೇ ಹಾಡು ಕೇಳಿದೆ.

‘ ಜಡೆ ಹೆಣೆಯುವ ಬಾರೇ….. ಪಾರ್ವತಿಗೆ ಜಡೆ ಹೆಣೆಯುವ ಬಾರೇ…..’ ಎಷ್ಟು ಚೆಂದದ ಹಾಡಿದು.

ಆ ಹಾಡು ಕೇಳ್ಯಪ್ಪಗ ಮನಸ್ಸು ಒಂದರಿ ಬಾಲ್ಯದ ನೆಂಪುಗಳ ಹೊಡೆಂಗೆ ಓಡಿತ್ತು. ತಲೆಯ ನಡೂಕೆ ಬೈತಲೆ ತೆಗದು ತಲೆಕಸವಿನ ಎರಡೂ ಹೊಡೆಂಗೆ ಹಾಕಿ, ಕಿಮಿಯ ಹತ್ತರೆ ಎರಡು ಜೆಡೆ ಹಾಕಿ ಅದಕ್ಕೆ ಹೂಗು ಹೂಗಿಪ್ಪ ಬಣ್ಣದ ಲಾಡಿ ಸೇರ್ಸಿ ಮಡ್ಸಿ ಕಟ್ಟಿಂಡಿದ್ದ ಚೆಂದದ ಬಾಲ್ಯ ಎನ್ನದು. ಎಲ್ಲಿಗೆ ಹೋವ್ತರೂ ಆ ಎರಡೂ ಜೆಡೆಗೂ ಸೇರ್ಸಿ ಒಂದಿಷ್ಟು ಹೂಗು ಸೂಡಿಂಡೇ ಹೋಪದು. ಈಗ ಆ ಕಾಲವ ಗ್ರೇಶುಗ ತನ್ನಷ್ಟಕ್ಕೆ ನೆಗೆ ಬತ್ತು. ಹಾಂಗಿದ್ದ ಕಾಲ ಅದು. ಅಂತೇ ಕೂಡ ತಲೆಯ ಮುಟ್ಲೆ ಬಿಡವು ಹಿರಿಯರು.

ಹಿಂದಾಣ ಕಾಲದ ಮಡಿ ಮೈಲಿಗೆ ಆಚಾರ ವಿಚಾರಂಗೊ ಗೊಂತಿಪ್ಪವು ಈಗಲೂ ಫಕ್ಕನೆ ತಲೆಕಸವು ಮುಟ್ಟಿದರೆ ಕೈ ತೊಳದಿಕ್ಕಿಯೇ ಬೇರೆ ವಸ್ತುಗಳ ಮುಟ್ಲೆ ಹೋಕಷ್ಟೆ. ಅಷ್ಟೊಂದು ಸಂಪ್ರದಾಯಬದ್ಧ ಆಚರಣೆಗಳ ಪಾಲಿಸಿಂಡಿದ್ದತ್ತು.

 

ಅಂಬಗ ಕೂಸುಗೊ, ಹೆಮ್ಮಕ್ಕೊ ತಲೆಕಸವು ಕತ್ತರ್ಸುವ ಕ್ರಮಯಿಲ್ಲೆ. ಹಾಂಗೆ ಹೇಳಿ ತಲೆಕಸವು ಬಿಕ್ಕಿ ಹಾಕುವ ಕ್ರಮವಂತೂ ಇಲ್ಲಲೇಯಿಲ್ಲೆ. ತಲೆಕಸವು ಬಿಕ್ಕಿ ಹಾಕಿದ್ದಕ್ಕೆ ಬೈಗಳು ತಿನ್ನದ್ದ ಕೂಸುಗೊ ಆ ಕಾಲಲ್ಲಿ ಇದ್ದಿರವು ಹೇಳಿ ಆವ್ತೆನಗೆ.

 

ಉದಿಯಪ್ಪಗ ಎದ್ದು ಮೋರೆ ತೊಳದು ರಜ ಹೊತ್ತಪ್ಪಗ ಅಬ್ಬೆ ಒಂದರಿಯಾಣ ಕೆಲಸ ಮುಗುಶಿ ತಲೆಬಾಚಿ ಕಟ್ಲೆ ಬಾಚಣಿಗೆ ತೆಕ್ಕೊಂಡು ಬಕ್ಕು. ಮತ್ತೆ ಕೂಸುಗಳ ತಲೆಬಾಚುವ ಕೆಲಸ ಸುರು.

ಅಂಬಗ ಯೇವ ಮನೆಲು ಕೂಸುಗಳ ತಲೆಕಸವು ಕತ್ತರ್ಸುವ ಕ್ರಮ ಇಲ್ಲದ್ದ ಕಾರಣ ಹೆಚ್ಚಿನ ಮನೆಗಳಲ್ಲೂ ಇದೇ ರೀತಿಯ ದಿನಚರಿ ಇದ್ದಿಕ್ಕಷ್ಟೆ.

ತಲೆಗೆ ಎಣ್ಣೆ ಹಾಕಿ , ಅದರ ಜೆಡಕ್ಕು ಬಿಡ್ಸಿ ಬಾಚಿ ನೇಯ್ದು ಕಟ್ಟುದು ಹೇಳಿದರೆ ಅಬ್ಬೆಗೆ ಒಂದು ಕೆಲಸವೇ ಅಕ್ಕು. ಜೆಡೆ ನೇಯ್ದು ಕಟ್ಟಿ ಅದರ ಕೊಡಿಯಂಗೆ ಬಣ್ಣ ಬಣ್ಣದ ಲಾಡಿಯ ಗೊಂಡೆ ಕಟ್ಟಿಕೊಂಡು ಶಾಲೆಗೆ ಹೋಪ ದಿನಂಗೊ ಆ ಕಾಲದವರ ನೆಂಪುಗಳಲ್ಲಿ ಇಕ್ಕು.

ಜೆಡೆ ಕಟ್ಟಿದರೆ ಸಾಲ, ಜೆಡೆ ತುಂಬ ಹೂಗುದೆ ಸೂಡುವ ಕಾಲ ಅದು. ಮಲ್ಲಿಗೆ, ಸೇವಂತಿಗೆ ಸಂಪಗೆ, ಕೇದಗೆ ಮಾಂತ್ರ ಅಲ್ಲ ಹಬ್ಬಲ್ಲಿಗೆ, ಗೆಂಟಿಗೆ ಎಂತಕೆ ಲಂಬನ ಹೂಗಿನ ಮುಕ್ಕೆ ಕೊಯ್ದು ಕಟ್ಟಿ ಹೆಚ್ಚು ಅರಳದ್ದ ಹಾಂಗೆ ಮಣೆಯ ಅಡಿಲಿ ಮಡುಗಿ ಮರದಿನ ಅದರ ಸೂಡುಗು..ಅಂತಹ ಕಾಲ ಅದು….!!

 

ನಾಲ್ಕೈದು ಕೂಸುಗಳೇ ಇಪ್ಪ ಮನೆಗಳಲ್ಲಿ ಅಕ್ಕಂದ್ರು ತಂಗೆಕ್ಕಳ ತಲೆಕಟ್ಟುಗು. ಇಲ್ಲದ್ರೆ ಅಜ್ಜಿ, ಅತ್ತೆ ದೊಡ್ಡಬ್ಬೆ ಹೇಳಿ ಆರಾರು ಈ ಕೆಲಸ ಮಾಡುಗು. ಅಂತೂ ತಲೆಕಟ್ಟುದು ಜೀವನದ ಒಂದು ಮುಖ್ಯವಾದ ಕೆಲಸವೇ ಆಗಿಂಡಿದ್ದತ್ತು.

 

‘ ತಲೆಕಸವು ಬಿಕ್ಕಿ ಹಾಕಿದರೆ ದರಿದ್ರಲಕ್ಷ್ಮಿ ಬಕ್ಕು ‘ ಹೇಳಿ ಸಣ್ಣಾದಿಪ್ಪಗಲೇ ಅಜ್ಜಿ, ಅಜ್ಜ° ಹೇಳಿ ಹೆದರ್ಸಿದ ಕಾರಣ ಈಗಲೂ ಆರಾರು ತಲೆಕಸವು ಬಿಕ್ಕಿಹಾಕಿಂಡು ಕಾಂಬಗ ಅದೇ ನೆಂಪಪ್ಪದು.

 

ಮದಲಿಂಗೆ ಗೆಂಡುಮಕ್ಕಳೂ ತಲೆ ಕಸವು ಕತ್ತರ್ಸದ್ದೆ ಜೊಟ್ಟು ಕಟ್ಟುಗಾಡ. ಪೌರೋಹಿತ್ಯಕ್ಕೆ ಹೋಪ ವೈದಿಕರು ಮಾಂತ್ರ ಜೊಟ್ಟು ಕಟ್ಟುದಲ್ಲ. ಬಹುಶಃ ಆಧುನಿಕತೆಯ ಗಾಳಿ ಬೀಸುಗ ನಮ್ಮ‌ ಸಂಪ್ರದಾಯ, ಆಚರಣೆಗಳಲ್ಲಿ ಬದಲಾವಣೆ ಬಂತು.

 

ಬೆಳ್ಳೆಕ್ಕಾರಂಗೊ ಹೇಳಿ ನಮ್ಮ ಹಿರಿಯರು ಹೇಳಿಕೊಂಡಿದ್ದ ಆಂಗ್ಲರ ಕ್ರಮ ನಮಗೆ ಇಷ್ಟಪ್ಪಲೆ ಸುರುವಾತು. ಹಳ್ಳಿಯವು ಪೇಟೆಗೆ ಹೋಗಿ ಬಪ್ಪಲೆ ಸುರುವಾದ ಮತ್ತೆ ಹಳ್ಳಿ ಜೀವನಲ್ಲು ಬದಲಾವಣೆ ಸುರುವಾತು.

 

ಬಹುಶಃ ಬದಲಾವಣೆಯ ಸುರುವಾಣ ಗಾಳಿ ಬಡುದ್ದದೇ ಹೆಮ್ಮಕ್ಕಳ ಜೆಡೆಗೋ ಹೇಳಿ ಆವ್ತು. ಗರುಗನ ಸೊಪ್ಪು ಹಾಕಿ ಕಾಸಿದ ಎಣ್ಣೆ ಕಿಟ್ಟಿ, ದಾಸನ, ದಡ್ಸನದ್ದೆಲ್ಲ ಗೊಂಪು ಹಾಕಿ ಮಿಂದು ಫಳಫಳ ಹೇಳಿಂಡಿದ್ದ ತಲೆಕಸವಿನ ಯೇವದೇ ದಾಕ್ಷಿಣ್ಯ ಇಲ್ಲದ್ದೆ ಕತ್ತರಿಲಿ ಕತ್ತರ್ಸುದು ಕಾಂಬಗ ಮನಸ್ಸಿಂಗೆ ಬೇಜಾರಾಗಿಂಡಿದ್ದತ್ತು. ಈಗಾಣ ಕೆಲವು ಮಕ್ಕೊ ಅಂತೂ ಮಾಣಿಯಂಗಳ ಹಾಂಗೆ ತಲೆ ಕಸವು ಕತ್ತರ್ಸಿಂಡಿಪ್ಪದು ಕಾಂಬಗ ಹಿಂದಾಣ ಹಿರಿಯರು ಈಗ ಇರ್ತಿದ್ದರೆ ಎಂತ ಮಾಡ್ತಿತವೋ ಹೇಳಿ ಆವ್ತು.

 

ತಲೆಗೆ ಮಿಂದಿಕ್ಕಿ ದಪ್ಪ ತಲೆಕಸವು ಸರಿಯಾಗಿ ಒಣಗಲೆ ರಜಾ ಹೊತ್ತು ಬಿಡ್ಸಿ ಹಾಕಿದರೆ ಸಾನು

‘ ಹೀಂಗೆ ತಲೆಬಿಕ್ಕಿ ಹಾಕುದು ಯೇವಗ ಹೇಳಿ ಗೊಂತಿದ್ದಾ ?’ ಹೇಳಿ ಅಜ್ಜ° ಕೇಳುಗು. ಅಪರಕ್ರಿಯೆಗಳ ಕರ್ತೃಗೊ ತಲೆಕಸವು ಬಿಟ್ಟುಕೊಂಡಿಪ್ಪ ಕ್ರಮ ಇದ್ದದು ಅಂದು.

 

‘ ತಲೆಕಸವಿನ ಸ್ವತಂತ್ರವಾಗಿ ಬಿಟ್ಟರೆ ಬುದ್ದಿಯೂ ಚಂಚಲ ಆವ್ತಾಡ. ಏಕಾಗ್ರತೆ ಬತ್ತಿಲ್ಲೆ. ಅದಕ್ಕೆ ಪುರಾಣ ಕಾಲಲ್ಲಿ ಗೆಂಡುಮಕ್ಕೊ ಸಾನು ತಲೆಕಸವಿನ ಕಟ್ಟಿಂಡು ಇತ್ತಿದ್ದವು’ ಹೇಳಿ ನಮ್ಮ ಗುರುಗಳೂ ಒಂದು ಆಶೀರ್ವಚನಲ್ಲಿ ಹೇಳಿತ್ತಿದ್ದವು.

 

ಶುಭಕಾರ್ಯಂಗಳಲ್ಲಿ ಭಾಗವಹಿಸುಗ ಹೆಮ್ಮಕ್ಕೊ ಚೆಂದಕೆ ಜೆಡೆ ಕಟ್ಟಿ , ಹೂಗು ಸೂಡಿಂಡು ಮಾಡಿದರೆ ಆ ಕಾರ್ಯಕ್ಕೆ ಫಲ ಹೆಚ್ಚಾಡ. ಮನಸ್ಸಿಲ್ಲಿ ದೈವಿಕ ಭಾವನೆ ಹೆಚ್ಚು ಇರ್ತಾಡ. ಆದರೆ ಈಗಾಣ ಕೂಸುಗೊಕ್ಕೆ ಉದ್ದ ತಲೆಕಸವೇ ಅಪರೂಪ ಆಯಿದು. ರಜಾ ಉದ್ದ ತಲೆಕಸವು ಇಪ್ಪವುದೆ ಜಡೆ ಹಾಕುತ್ತ ಕ್ರಮ ಇಲ್ಲೆ. ಅದರ ಹಾಂಗೇ ಬಿಟ್ಟುಕೊಂಡಿರ್ತವು.

 

ಮದಲಿಂಗೆ ಮೂರೆಳೆಯ ಜೆಡೆ, ಐದೆಳೆಯ ಜೆಡೆ, ಏಳೆಳೆಯ ಜೆಡೆ ಹೇಳಿ ಬೇರೆ ಬೇರೆ ರೀತಿಲಿ ಜೆಡೆ ನೇಯುವ ಉಶಾರಿ ಹೆಮ್ಮಕ್ಕೊ ಇತ್ತಿದ್ದವು. ಮದಿಮ್ಮಾಳ ಆಯತ ಮಾಡ್ಲೆ ಈಗಾಣ ಹಾಂಗೆ ಪೇಟೆಯ ಜನಂಗಳ ಕರಕೊಂಡು ಬಪ್ಪ ಕ್ರಮವೇ ಮದಲಿಂಗೆ ಇಲ್ಲೆ.

 

‘ ಮೂರು ಕಾಲಿನ ಜಡೆ ಐದುಕಾಲಿನ ಜಡೆ

ಒಂಭತ್ತು ಕಾಲಿನ ಜಡೆ ಸೀಳುಕಾಲಿನ ಜಡೆ……’ ಹೇಳಿ ಹಾಡಿಲ್ಲಿ ಬಪ್ಪ ಹಾಂಗೆ ಚೆಂದ ಚೆಂದದ ಕೇಶವಿನ್ಯಾಸ ಮಾಡುವ ಪರಿಣಿತರು ಮದಲಿಂಗೆ ಇತ್ತಿದ್ದವು. ಈಗಲೂ ಅಪರೂಪಕ್ಕೆ ಇದ್ದವು.

 

ಉದ್ದ ಜೆಡೆ ಹೇಳಿದರೆ ಒಂದುಕಾಲಲ್ಲಿ ಹೆಮ್ಮಕ್ಕೊಗೆ ಹೆಮ್ಮೆಯ ವಿಶಯ‌. ಅದು ನಮ್ಮ ಸಂಸ್ಕೃತಿಯ ಒಂದು ಭಾಗ. ಜೆಡೆ ಹೆಮ್ಮಕ್ಕಳ ಗೌರವ, ಮನೆತನದ ಮರ್ಯಾದೆ ಹೇಳುವ ಕಾಲವುದೆ ಒಂದಿದ್ದತ್ತು.

ಬಿಕ್ಕಿದ ತಲೆಕಸವು ಅಶಿಸ್ತು,ಅಶಾಂತಿಯ ತತ್ತರೆ ಅದರ ಕಟ್ಟಿಯಪ್ಪಗ ಮನಸ್ಸಿಂಗೆ ನೆಮ್ಮದಿ, ಶಾಂತಿ ಸಿಕ್ಕುತ್ತು.

ಕಾಲ ಬದಲಿದ ಹಾಂಗೆ ಆಚಾರಂಗೊ, ಕ್ರಮಂಗೊ ಬದಲಿದ್ದದಪ್ಪು.‌ ಆದರೆ ತಲೆಕಸವು ಹೆಮ್ಮಕ್ಕಳ ಸೌಭಾಗ್ಯದ ಸಂಕೇತ. ಅದರ ಕಟ್ಟದ್ದೆ ಬಿಡುವ ಕ್ರಮವ ಕಮ್ಮಿ ಮಾಡುವ°.

ಧಾರ್ಮಿಕ ಕಾರ್ಯಕ್ರಮಂಗಳಲ್ಲಿ ಭಾಗವಹಿಸುಗ, ನಮ್ಮ ಮಠ, ದೇವಸ್ಥಾನಂಗೊಕ್ಕೆ ಹೋಪಗ ಚೆಂದಕೆ ತಲೆಕಟ್ಟಿ ಹೂಗು ಸೂಡಿಂಡು ಹೋಪ ಸಂಪ್ರದಾಯವ ನಮ್ಮ ಕೂಸುಮಕ್ಕೊಗೆ ಹೇಳಿಕೊಡುವ° . ಅವರಲ್ಲಿ ಋಣಾತ್ಮಕ ಶಕ್ತಿ ಬೆಳೆಯದ್ದೆ ಧನಾತ್ಮಕ ಚೈತನ್ಯ ಮೂಡಿಸಲೆ ಇದು ತುಂಬಾ ಒಳ್ಳೆದು.

 

 

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *