ಮಕರ ಸಂಕ್ರಮಣ ಕಳುದು ಕುಂಭ ತಿಂಗಳು ನಮ್ಮ ಕಾಲಬುಡಕ್ಕೆ ಬಂದು ನಿಂದಿದು. ಅದರ್ಲಿ ಎಂತ ವಿಶೇಶ ಹೇಳಿ ಕೇಳ್ತೀರಾ ? ಈ ಸಮಯಲ್ಲೇ ಕೆಡ್ವಸ ಆಚರಣೆ. ಮಕರ ತಿಂಗಳು ೨೭ರಿಂದ ಮತ್ತೆ ಕುಂಭ ಸ೦ಕ್ರಮಣದವರೆಗೆ ನಮ್ಮ ಊರಿಲ್ಲಿ ಕೆಡ್ವಸ ಹೇಳುವ ಒಂದು ವಿಶೇಷ ಆಚರಣೆ ಇದ್ದು. ಕೆಡ್ವಸ ಹೇಳಿದರೆ ನಮ್ಮ ಮಂಗಳೂರು ಹೋಬಳಿಯವಕ್ಕೆ ಗೊಂತಿಕ್ಕು. ಬೇರೆ ಹೊಡೆಲಿ ಈ ಆಚರಣೆ ಇದ್ದಾಳಿ ಗೊಂತಿಲ್ಲೆ. ಹಾಂಗಾಗಿ ಇಂದು ಕೆಡ್ವಸ ಆಚರಣೆಯ ಕ್ರಮಂಗೊ ಹೇಂಗೇಳಿ ನೋಡುವೊ°
ನಮ್ಮ ಪ್ರತಿಯೊಂದು ಆಚರಣೆಯ ಹಿಂದೆಯೂ ಮಾನವೀಯತೆಯ ಸಂವೇದನೆ ಇದ್ದು. ಬದುಕಿನ ಚಿತ್ರಣ ಇದ್ದು. ಪ್ರಕೃತಿ ಮತ್ತೆ ನಮ್ಮ ನಡುವೆ ಒಂದು ರೀತಿಯ ಸೂಕ್ಷ್ಮ ಸಂಬಂಧದ ಮೌನ ಭಾಷ್ಯವೂ ಇದ್ದು. ಈ ಕೆಡ್ವಸ ಆಚರಣೆಯೂದೆ ಅದೇ ನಮೂನೆದು. ನಮ್ಮ ಹಾಂಗೆಯೇ ಭೂಮಿದೇವಿಯುದೆ ಹೇಳಿ ಜಾನ್ಸುವ ಒಂದು ರಜಾ ವಿಶೇಶ ಆಚರಣೆ ಇದು ಹೇಳ್ಲಕ್ಕು.
ಭೂಮಿ ದೇವಿಯ ಅಬ್ಬೆ ಹೇಳಿ ಗೌರವಿಸುವ, ಪೂಜೆ ಮಾಡುವ ಸಂಸ್ಕೃತಿ ನಮ್ಮದು. ಭೂಮಿಯಬ್ಬೆಯ ದೇಹವೂ ಮಾತೆಯರ ದೇಹದ ಹಾಂಗೆ ಹೇಳಿಯೇ ಗ್ರೇಶುದು ನಾವು. ಭೂಮಿ ಹೇಳಿದರೆ ಬರೀ ಮಣ್ಣಲ್ಲ. ಅದು ಹೆಣ್ಣು, ಜೀವ ಕೊಡುವ ಅಬ್ಬೆ ಹೇಳಿಯೇ ನಮ್ಮ ಹಿರಿಯರು ನಂಬಿಂಡಿತ್ತಿದ್ದವು. ಹೆಮ್ಮಕ್ಕೊ ಪ್ರತಿ ತಿಂಗಳು ಋತುಮತಿಯರಪ್ಪಾಂಗೆ ಭೂಮಿದೇವಿ ವರ್ಷಕ್ಕೊಂದರಿ ಋತುಮತಿ ಆವ್ತು ಹೇಳುವ ನಂಬಿಕೆಯೇ ಈ ಕೆಡ್ವಸ ಆಚರಣೆ.
ಮಕರ ತಿಂಗಳು ೨೭ ನೇ ದಿನ ಭೂಮಿದೇವಿ ಋತುಮತಿಯಪ್ಪದು. ಹಾಂಗಾಗಿ ಆ ದಿನ ಹೊತ್ತೋಪಗ ಸೂರ್ಯಾಸ್ತಂದ ಮದಲು ತುಳಶಿಕಟ್ಟೆ ಬುಡವ ಸಗಣ ಉಡುಗಿ ಶುದ್ಧ ಮಾಡುಗು. ಕೊಡಿ ಕೆಡ್ವಸ ಅಂದು. ಕೊಯ್ಶಕ್ಕಿ ( ಕುಚ್ಚಿಲಕ್ಕಿ) ಹೊರುದು ಅದಕ್ಕೆ ಬೆಲ್ಲ, ಕಾಯಿಸೂಳಿ ಹಾಕಿ ಬೆರ್ಸಿ ತುಳಶಿಕಟ್ಟೆಯ ಹತ್ತರೆ ಮಡುಗುವ ಕ್ರಮಯಿದ್ದು. ಬೇರೆ ದಿನಂಗಳಲ್ಲಿ ಅಕ್ಕಿ ಹೊರಿವ ಕ್ರಮಯಿಲ್ಲೆ. ಕೆಡ್ವಸದ ದಿನಂಗಳಲ್ಲಿ ಮಾಂತ್ರ ಈ ಕ್ರಮ ಇಪ್ಪದು. (ಬೇರೆ ಸಮಯಂಗಳಲ್ಲಿ ಅಕ್ಕಿ ಹೊರಿವದು ಶ್ರೇಯಸ್ಸಲ್ಲ ಹೇಳುಗು ಹಿರಿಯರು. ಅದೆಂತಕೆ ಹೇಳಿ ಗೊಂತಿಲ್ಲದ್ರೂ ಯಾವುದೋ ಒಂದು ಸರಿಯಾದ ಕಾರಣ ಇಲ್ಲದ್ದೆ ಆ ನಿಯಮ ಮಡುಗವು ಹೇಳಿ ನಮ್ಮ ನಂಬಿಕೆ )
ಈ ಸಮಯಲ್ಲಿ ಬ್ರಾಹ್ಮಣರು ಬದನೆಕಾಯಿ, ನುಗ್ಗೆಕೊಂಬಿನ ಬೆಂದಿ ಮಾಡಿ ಉಂಬ ಕ್ರಮಯಿದ್ದು. ಬದನೆ – ನುಗ್ಗೆಯ ಈ ಸಮಯಲ್ಲಿ ತಿಂದರೆ ಎಲುಬಿಂಗೆ ಬಲ ಬತ್ತಾಡ. ಎಲುಬು ಗಟ್ಟಿಯಪ್ಪಲೆ ಬೇಕಾಗಿ ಇದರ ತಿಂಬದು. ಮಾಂಸಾಹಾರಿಗೊ ಈ ಸಮಯಲ್ಲಿ ಬೇಂಟೆಗೆ (ಬೇಟೆ ) ಹೋಪ ಕ್ರಮ. ಕುಂಭ ಸಂಕ್ರಮಣದ ದಿನ ಭೂದೇವಿ ಮೀವದು ಹೇಳುವ ನಂಬಿಕೆ. ಆ ದಿನ ಉದೀಯಪ್ಪಗಲೇ ತುಳಶಿ ಕಟ್ಟೆ ಬುಡವ ಶುದ್ಧ ಮಾಡಿ ಭೂಮಿಗೆ ತೆಂಗಿನೆಣ್ಣೆ ಎರವಲಿದ್ದು. ಋತುಮತಿಯಾದ ಕೂಸುಗೊ ಮೀವಲೆ ಹೋಪಗ ಯಾವುದೆಲ್ಲ ಕ್ರಮಂಗಳ ಅನುಸರಿಸುತ್ತೋ ಹಾಂಗೆಯೇ ಭೂಮಿದೇವಿಗೂ ಮಾಡ್ಲಿದ್ದು.
ಒಂದು ಬಾಳೆಲೆಲಿ ಅರಶಿನ ಕೊಂಬು, ಮಸಿ ಗಟ್ಟಿ, ಬಾಗೆ ಹೊಡಿ, ಗೊಂಪಿನ ಸೊಪ್ಪು, ಕುಂಕುಮ, ಚೆಂಬಿಲ್ಲಿ ನೀರು ಎಲ್ಲವನ್ನೂ ಮಡುಗಿ ದೇವಿಗೆ ಕೊಡುದು.
ಹೆರಗಿದ್ದು (ಋತುಮತಿ) ಮೀವಗ ಅರಶಿನ ನೀರು ಹಾಕಿ ಮಿಂದರೆ ಮಾಂತ್ರ ಶುದ್ಧಪ್ಪದು. ಅದಕ್ಕೆ ಬೇಕಾಗಿ ಅರಶಿನ ಕೊಂಬು, ಮದಲಿಂಗೆ ಹಲ್ಲುತಿಕ್ಕಲೆ ಮಸಿಗಟ್ಟಿಯ ಉಪಯೋಗಾಡ. ಅದಕ್ಕೆ ಮಸಿಗಟ್ಟಿ, ತಲೆಗೆ ಹಾಕಿ ಮೀವಲೆ ಗೊಂಪು, ಸಾಬೂನು ಉಪಯೋಗ ಇಲ್ಲದ್ದ ಕಾಲಲ್ಲಿ ಬಾಗೆಹೊಡಿ ಹಾಕಿ ಮಿಂದುಕೊಂಡಿದ್ದದು. ಹಾಂಗಾಗಿ ಮೈಗೆ ಹಾಕಲೆ ಬಾಗೆಹೊಡಿ, ಮಿಂದಿಕ್ಕಿ ಒಳಬಪ್ಪಗ ಹಾಕಲೆ ಕುಂಕುಮ. ಈ ವಸ್ತುಗಳ ಮಡುಗುವವು ಸುಮಂಗಲೆಯರಾಗಿರೆಕು. ಹೆರಗಿಪ್ಪಕುದಿ ನಿಂದ ಹೆಮ್ಮಕ್ಕಳೂ ಇದರ ಮಡುಗುವ ಕ್ರಮ ಇಲ್ಲೇಡ.
ಮಕರ ತಿಂಗಳು ೩೦ ದಿನ ಇದ್ದರೆ ಭೂದೇವಿ ನಾಲ್ಕನೇ ದಿನ ಮೀವದು ಹೇಳುವ ಸಂಕಲ್ಪ, ಇದರ ಬ್ರಾಹ್ಮಣ ಕೆಡ್ವಸ ಹೇಳ್ತವು. ೨೯ ದಿನ ಮಾತ್ರ ಇಪ್ಪದಾದರೆ ಶೂದ್ರ ಕೆಡ್ವಸ ಹೇಳುದು. ನಮ್ಮ ಸಮಾಜದ ಹೆಮ್ಮಕ್ಕೊ ನಾಲ್ಕನೇ ದಿನ ಮೀವದು ಕ್ರಮ. ಹಾಂಗಾಗಿ ಕೆಡ್ವಸ ನಾಲ್ಕು ದಿನ ಇದ್ದರೆ ಬ್ರಾಹ್ಮಣ ಹೇಳಿಯೂ, ಮೂರು ದಿನ ಮಾಂತ್ರ ಇಪ್ಪದಾದರೆ ಶೂದ್ರ ಹೇಳಿಯೂ ಹೆಸರು ಬಂದದು.
ಮದ್ಲಾಣ ಕಾಲಲ್ಲಿ ನಮ್ಮ ಮನೆಗಳಲ್ಲಿ ಋತುಮತಿಯಾದ ಕೂಸುಗೊಕ್ಕೆ / ಹೆಮ್ಮಕ್ಕೊಗೆ ಯಾವ ರೀತಿಯ ಆರೈಕೆ, ಉಪಚಾರ ಮಾಡಿಂಡಿತ್ತಿದ್ದೋ ಅದೆಲ್ಲವನ್ನು ಭೂಮಿದೇವಿಗೆ ಮಾಡುವ ಕ್ರಮಯಿದ್ದು. ಋತುಮತಿಯಾದವರ ದೇಹ ತುಂಬಾ ಸೂಕ್ಷ್ಮ ಹೇಳುವ ಕಾರಣಕ್ಕೆ ನಮ್ಮ ಹಿರಿಯರು ಆ ಸಮಯಲ್ಲಿ ಹೆಮ್ಮಕ್ಕೊ ಹೆಚ್ಚು ಕೆಲಸ ಮಾಡ್ಲಾಗ, ದೇಹ ಅದುರ್ಲಾಗ ಹೇಳಿ ಸಂಪೂರ್ಣ ವಿಶ್ರಾಂತಿ ಕೊಟ್ಟುಕೊಂಡಿತ್ತಿದ್ದವು. ಆ ಸಮಯಲ್ಲಿ ಅವು ಯಾವ ಕೆಲಸವನ್ನೂ ಮಾಡುವ ಕ್ರಮ ಇಲ್ಲೆ. ಆ ಸಮಯಲ್ಲಿ ಅವಕ್ಕೆ ಬೇಕು ಬೇಕಾದ ಅಡಿಗೆಯ ಕೂಡ ಮಾಡಿ ಬಳ್ಸುದು ಪದ್ದತಿ. ಅದೇ ರೀತಿಲಿ ಭೂದೇವಿಗೂ ಈ ಸಮಯಲ್ಲಿ ವಿಶ್ರಾಂತಿ ಕೊಡುವ ಸಮಯ ಇದು. ಈ ಮೂರು ದಿನಂಗಳಲ್ಲಿ ಮಣ್ಣಿನ ಕೆಲಸ ಮಾಡ್ಲಿಲ್ಲೆ. ಕೊಟ್ಟು, ಪಿಕ್ಕಾಸು ಮಾಂತ್ರ ಅಲ್ಲ ಯೇವದೇ ಉಪಕರಣ, ಯಂತ್ರ ಉಪಯೋಗಿಸಿ ಮಣ್ಣು ಗರ್ಪುವ ಕ್ರಮಯಿಲ್ಲೆ. ಮರದ ಗೆಲ್ಲುಗಳ ಕೂಡ ಕಡಿವಲಾಗಾಡ. ಭೂಮಿಗೆ ಬೇನೆ ಅಪ್ಪಾಂಗಿದ್ದ ಯೇವದೇ ಕೆಲಸಂಗಳ ಈ ಸಮಯಲ್ಲಿ ಮಾಡ್ಲಿಲ್ಲೆ. ಭೂಮಿಗೂ ಸಂಪೂರ್ಣ ವಿಶ್ರಾಂತಿ ಕೊಡೆಕು ಹೇಳುವ ಸಂದೇಶವೇ ಇಲ್ಲಿ ಇಪ್ಪದು. ಭೂಮಿಗೆ ಬೇನೆಯಾದರೆ ಸರಿಯಾಗಿ ಬೆಳೆ ಬತ್ತಿಲ್ಲೇಡ.
ಋತುಮತಿಯಪ್ಪದು ಹೆಮ್ಮಕ್ಕೊಗೆ ಮಾಂತ್ರವಾಗಿ ದೇವರು ಕೊಟ್ಟ ಒಂದು ವರ. ಫಲವಂತಿಕೆಯ ಗುರುತು ಅದು. ಭೂಮಿಗೂ ಹಾಂಗೇ ಕೆಡ್ವಸದ ನಂತರ ಭೂಮಿಲಿ ಗಡ್ಡೆಗೆಣಸುಗೊ (ಕೇನೆ ಗೆಂಡೆ, ಅರಶಿನ…) ಚಿಗುರುವ ಸಮಯ. ಭೂಮಿಲಿ ನೀರಿನ ಪಸೆ ಬಪ್ಪದು ಕುಂಭ ತಿಂಗಳಿಂದ ಮತ್ತೆ ಹೇಳಿ ನಂಬಿಕೆ. ಈ ಸಮಯಲ್ಲಿ ಸೆಸಿಗಳ ನೆಟ್ಟರೆ ಒಂದು ವರ್ಷದ ಬೆಳವಣಿಗೆ ಬೇಗನೆ ಆವ್ತು ಹೇಳಿ ಹಿರಿಯರು ಹೇಳುಗು.
ಇಂದು ಕಾಲ ತುಂಬ ಬದಲಿದ್ದು. ಕೆಡ್ವಸದ ಆಚರಣೆ ನಮ್ಮಲ್ಲಿ ತುಂಬ ಕಮ್ಮಿ ಆಯಿದು. ಹೊಸ ತಲೆಮಾರಿನವಕ್ಕೆ ಈ ಆಚರಣೆಯ ಕ್ರಮ ಗೊಂತಿಲ್ಲೆ. ಕೆಲವು ಕಾರಣಂದಾಗಿ ಹಳಬ್ಬರುದೆ ಈಗ ಕೆಡ್ವಸ ಆಚರಿಸುತ್ತವಿಲ್ಲೆ. ಊರು, ಸೀಮೆ ಬದಲಿದ ಹಾಂಗೆ ಪ್ರತಿಯೊಂದು ಕ್ರಮ, ಸಂಪ್ರದಾಯದ ಆಚರಣೆಗಳ ಕ್ರಮ ಬದಲುತ್ತು. ಇಲ್ಲಿ ಉಲ್ಲೇಖಿಸಿದ ವಿಚಾರಂಗೊ ಎನಗೆ ಗೊಂತಿಪ್ಪದರ, ಕೆಲವು ಹಿರಿಯರತ್ರೆ ಕೇಳಿ ತಿಳುದ್ದದರ ಬರದ್ದದು. ಬೇರೆ ಬೇರೆ ದಿಕೆ ರಜ ಹೆಚ್ಚು ಕಮ್ಮಿ ಇಪ್ಪಲೂ ಸಾಕು. ಭೂಮಿಯನ್ನೂ ಅಬ್ಬೆ ಹೇಳಿ ಗ್ರೇಶಿಂಡು, ಅದಕ್ಕೂ ವಿಶ್ರಾಂತಿ ಕೊಟ್ಟುಕೊಂಡಿದ್ದ ನಮ್ಮ ಹಿರಿಯರ ಒಂದು ಒಳ್ಳೆಯ ಮನಸ್ಸಿಂಗೆ ಗುರುತು ಈ ಕೆಡ್ವಸ ಆಚರಣೆ.
ಪ್ರಸನ್ನಾ ವಿ. ಚೆಕ್ಕೆಮನೆ

