ಸಂಕ್ರಾಂತಿಯ ಪುಣ್ಯಪರ್ವದಲ್ಲಿ ಮಿಂದು ಝಗಮಗಿಸಿದ ಗೋಸ್ವರ್ಗ!
ಸ್ವರ್ಗವೆಂದರೇನೆಂದು ಭುವಿಯಲ್ಲೇ ಕಂಡ ಗೋಪ್ರೇಮಿಗಳು- ಗುರುಭಕ್ತರು!!
ಓ ಅಲ್ಲಿ ಕೆಳಗಿಳಿದು ಹೋಗುವಾಗಲೇ ಕಾಣುವ ಹುಲ್ಲಿನಲ್ಲಿ ಬರೆದ ಹರೇರಾಮ- ಗೋಸ್ವರ್ಗ!
ಮತ್ತೆ ಎದುರಿಗೆ ಕಾಣುವುದು ಕಬ್ಬಿನಹಾಲು, ಪುದೀನಾಜ್ಯೂಸ್ ನಂತಹ ವಿವಿಧ ಪಾನೀಯಗಳು! ಹಾಗೆ ಪ್ರೇಕ್ಷಾಪಥ ದಲ್ಲಿ ಕಾಲಿಟ್ಟರೆ ಕರೆಕರೆದು ದೇಶೀಗೋಹಾಲು ಕೊಟ್ಟು ಅರಿಶಿಣ- ಕುಂಕುಮ- ಹೂವು- ಬಳೆ ಕೊಟ್ಟು “ಸುಹಾಸಿನಿಯರ ಪೂಜೆ” ಯ ಸಂತಸದಲಿ ಮಿಂದೇಳುವ ತಾಯಿಯರು!! ಹಾಗೆ ಬಲಕ್ಕೆ ತಿರುಗಿದರೆ ಅಮೃತಫಲ, ತೊಡೆದೇವು, ಮನೋಹರ, ಸಾವಯವ ಪಾನಿಪುರಿ, ದೇಶೀ ಬಟ್ಟೆಗಳ ಸ್ಟಾಲ್!! ಮತ್ತಲ್ಲೆ ಎಡಕ್ಕೆ ತಿರುಗಿದರೆ ಬಾಳೆದಿಂಡಿನ ಬಜೆ! ಕರಿಗುಂಬಳದ ಸಿಹಿ ಇಡ್ಲಿ! ನಿಪ್ಪಟ್ಟು! ಕುಡಿಯುವ ಮಜ್ಜಿಗೆ! ಹಪ್ಪಳ! ಹೋಳಿಗೆ! ಭರಪೂರ ತಿಂಡಿಗಳು!
ಮತ್ತೆ ಮುಂದೆ ಹೋದರೆ ತುಲಾಭಾರ ದ ಗೋವು!ಹಾಗೆ ಎಡಬಲಗಳಲ್ಲಿ ಸಾವಿರದ ಗೋವುಗಳ ಸ್ವಚ್ಛಂದ ಸಮ್ರಾಜ್ಯದ ಗೋವೆಂಬ ಪ್ರಜೆಗಳು!! ಮತ್ತದೋ ಸಪ್ತಸನ್ನಿಧಿ ಯಲ್ಲಿ ಇಳಿಯುವಲ್ಲಿಯೇ ಇರುವ ದಕ್ಷಿಣದ ಗೋಪದ ದ ಹತ್ತಿರ ಗಜಗಾಂಭೀರ್ಯದ ಗೋಸ್ವರ್ಗದ ಮಹಾರಾಜ- ರಾಮಭದ್ರ ನೆಂಬ ನಂದಿ! ಮಹಾರಾಣಿ ಕಲ್ಯಾಣಿ’!! ಆ ರಾಜರಾಣಿಯರೊಂದಿಗೆ ಸ್ವಂತಿ”(selfie) ತೆಗೆಸಿಕೊಳ್ಳಲು ಮುಗಿಬೀಳುವ ಭಕ್ತಸ್ತೋಮ! ಹಾಗೆ ಗೋಪಥ ದಲ್ಲಿ ಸಾಗಿದರೆ ಅಲ್ಲಲ್ಲಿ ಉಯ್ಯಾಲೆಯಾಡುತ್ತಿರುವ ಮಕ್ಕಳು- ನಾರಿಯರು!!! ಎಡೆಬಿಡದೆ ಕಿವಿಗೈದು ಮುದವೀವ ಹುಂಭಾರವ ಅಂಬಾ… ಅಂಬೇ… ನಾದ! ಹಣೆಯಲ್ಲಿ ತಿಲಕ, ನೆತ್ತಿಯಲ್ಲಿ ಬಿಂದಿ, ತಲೆಮೇಲೆ ಹೊಳೆವ ದುಕೂಲ, ಕೈತುಂಬ ಬಳೆಗಳು, ಸೊಂಟಪಟ್ಟಿ, ಬಾಜುಬಂದಿ, ಉದ್ದನೆಯ ಜಡೆ, ಮುಡಿತುಂಬ ಹೂವು, ಮುಖ ತುಂಬ ನಗು ತುಂಬಿದ “ನಮಿತಾ” ಮುಂತಾದ ಪುಟ್ಟ ರಾಧೆಯರು- ಬಾಜುಬಂದಿ, ಸೊಂಟಪಟ್ಟಿ, ಕೈಬಳೆ ,ರೇಷ್ಮೆಪಂಚೆ, ಆಭರಣಗಳು, ಕಿರೀಟ, ಧರಿಸಿ ಕೊಳಲೂದುವ ಕೃಷ್ಣರ ವೇಷ ಧರಿಸಿ ನಲಿನಲಿದು ಓಡಾಡುತ್ತಿರುವ ವಿನೀತ್ ಕಶ್ಯಪ್ ಮುಂತಾದ ಪುಟಾಣಿಗಳು! ಸಂಕ್ರಾಂತಿ ಎಳ್ಳು- ಸಿಹಿ ಹಂಚುತ್ತ ಕಾಲುಗಳಿಗೂ, ಬಾಯಿಗೂ ಬಿಡುವನ್ನೇ ಕೊಡದ “ಮಾತೆ” ಯರು! ಅಲ್ಲಲ್ಲಿ ವಿಧ್ಯುಕ್ತವಾಗಿ ನಡೆಯುತ್ತಿರುವ ಗೋಪೂಜೆಗಳು- ದಾನಧರ್ಮಗಳು!
ಹುಗ್ಗಿ, ಹುಳಿಗೊಜ್ಜುಗಳ ವಿಶಿಷ್ಟ ರುಚಿಯ, ರುಚಿರುಚಿಯಾದ ಭೋಜನ!!
ಹಾಗೆ ಧರ್ಮಸಭೆಯಲ್ಲಿ ಉತ್ತರದ ಗೋಪದದಲ್ಲಿ ವಿರಾಜಮಾನರಾದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಗಳವರು ಅಕ್ಕಪಕ್ಕ ಬಹುಭಕ್ತಿಯಿಂದ ಕುಳಿತ ಹಾಲು ಒಕ್ಕೂಟದವರು, ಗೋಸಂಘದವರು! ಗೋಸ್ವರ್ಗಕ್ಕೆ ಸಂಪತ್ತಿನ ಮಳೆಗರೆದ ದಾನಿಗಳು! ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ವಿದ್ಯೆಗಾಗಿ ಕೊಡುಗೈಗಳಾದ ಮಹನೀಯರು- ಮಹಿಳೆಯರು! ಶ್ರೀಗಳ ಅಮೃತಹಸ್ತದಿಂದ “ಆದ್ಯೋತ” ಎಂಬ ವೆಬ್ ಪತ್ರಿಕೆಯ ಲೋಕಾರ್ಪಣೆ! ಆರೋಗ್ಯಸಂಬಂಧಿತ “ಕಷಾಯ” ದ ಲೋಕಾರ್ಪಣೆ! ಹಿರಿಯರ ಹಿರಿನುಡಿಗಳು! ಗುಂಜಗೋಡು ಗಣಪತಿಯವರ ನಿರೂಪಣೆ! ಧರ್ಮಸಭೆಯಲ್ಲಿ ಗೋದಿನದ, ಗೋವುಗಳ ಮಹತ್ವ ಸಾರಿ ಗೋವಿಲ್ಲದಿದ್ದರೆ ಮನುಕುಲವಿಲ್ಲ, ಸೃಷ್ಟಿಯಿಲ್ಲ, ಜೀವರಾಶಿಗಳಿಲ್ಲ, ಗೋಸೇವೆಯೇ ದೇವ-ಗುರು ಸೇವೆ, ಗೋಸೇವೆಯ ಮೂಲಕ ಮುಂದಿನ ಪೀಳಿಗೆಗೆ ಬದುಕು ಕೊಡಿ ಎಂಬ ಸಂದೇಶ ಸಾರಿ ಜಾಗೃತಿಯ ಕಹಳೆ ಮೊಳಗಿಸಿದ ನಮ್ಮ ಗುರುಗಳು- ವಿಶ್ವದ ಏಕೈಕ ಅವಿಚ್ಛಿನ್ನ ಪೀಠಾಧೀಶರಾದ, ಗೋಕರ್ಣಮಂಡಲಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು!
ಸರಭರನೆ ಓಡಾಡುವ ಫೋಟೋಗ್ರಾಫರ್ ಗಳು! ವೀಡಿಯೋಗ್ರಾಫರ್ ಗಳು! ಮಾಧ್ಯಮದವರು!
ಶ್ರೀಮತಿ ರೇಷ್ಮಾಭಟ್ಟ ಮೂರೂರು ಅವರ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಇಂಪು! ದಿಗ್ಗಜರು ಪಾತ್ರಧಾರಿಗಳಾಗಿ ಅಭಿನಯಿಸಿದ ಗೋಮಹಿಮೆ ಸಾರುವ “ನೃಗಚರಿತ್ರೆ” ಯೆಂಬ ಯಕ್ಷಗಾನ!
ಶ್ರೀಅಮೃತಹಸ್ತದಿಂದ ಪುಣ್ಯವಂತರು ಪಡೆದ -ಫಲ “ಮಂತ್ರಾಕ್ಷತೆ” ಯೆಂಬ ಪುಣ್ಯನಿಧಿ!!
ಬಣ್ಣಬಣ್ಣದ ಬೆಳಕಿನಿಂದ ಕಂಗೊಳಿಸಿದ ಗೋಸ್ವರ್ಗದಲ್ಲಿ ಏನಿತ್ತು- ಏನಿಲ್ಲ!!
ವಿಶ್ವದಲ್ಲಿಯೇ ಏಕೈಕವಾದ ಭುವಿಯ ಸ್ವರ್ಗ ಗೋಸ್ವರ್ಗದಲ್ಲಿ ಮನಸಿಗೂ, ಪಂಚೇಂದ್ರಿಯಗಳಿಗೂ, ಸಂಭ್ರಮವ ಪಡೆದ ಗುರು-ಗೋಭಕ್ತರ ಮನಸೊಂದೇ– ಮತ್ಯಾವಾಗ ಸಂಕ್ರಾಂತಿ! ಸಧ್ಯದಲ್ಲೇ ಮತ್ತೊಮ್ಮೆ ಶುಭಪರ್ವ ಸಂಕ್ರಾಂತಿ ಬಂದರಾಗದೇ??
ಬಂದವರು ಪುಣ್ಯವಂತರು! ನೇರಪ್ರಸಾರ ವೀಕ್ಷಿಸಿದವರು ಭಾಗ್ಯಶಾಲಿಗಳು!
ಬರದವರು?? ಬರದವರಿಗಿದೋ ಆಹ್ವಾನ– ಬರಿದಿನಗಳಲ್ಲೂ ಗೋಸ್ವರ್ಗ ಚೆಂದವಾಗೇ ಇರುತ್ತದೆ. ಅನುಕೂಲ ಮಾಡಿಕೊಂಡು ಬಂದು ನೋಡಿ ಹೋಗಿ! ಮತ್ತೆ ಮುಂದಿನ ಪರ್ವಗಳಲ್ಲಿ ಯಾರ ಆಹ್ವಾನವಿರದೆಯೂ ನೀವೇ ಬರುತ್ತೀರಿ! ಮುದಪಡೆದು ಮುದಹಂಚುತ್ತೀರಿ!!