ಶ್ರೀಭಾರತೀ ವಿದ್ಯಾಲಯದಲ್ಲಿ ಸಂಭ್ರಮದ ವಾರ್ಷಿಕೋತ್ಸವ

ವಿದ್ಯಾಲಯ

ಹಂಪಿನಗರ: ಬೆಂಗಳೂರಿನ ಹಂಪಿನಗರದಲ್ಲಿರುವ ಶ್ರೀಭಾರತೀ ವಿದ್ಯಾಲಯದಲ್ಲಿ ಜ.೧೭ ಹಾಗೂ ೧೮ ರಂದು ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ ಹಾಗೂ ವಾರ್ಷಿಕೋತ್ಸವಗಳು ಬಹಳ ಸಂಭ್ರಮದಿಂದ ನೆರವೇರಿದವು. ಈ ಬಾರಿ “ನೇಚರ್ ಈಸ್ ಎ ಟೀಚರ್ ” ಎಂಬ ವಿಷಯವಸ್ತುವನ್ನು ಆಯ್ದುಕೊಳ್ಳಲಾಗಿತ್ತು.

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಂದ ದೀಪೋಜ್ವಲನದ ಮೂಲಕ ವಾರ್ಷಿಕೋತ್ಸವದ ಕಾರ್ಯಕ್ರಮ ಆರಂಭವಾಯಿತು. ಶ್ರೀಗಳು ತಮ್ಮ ಆಶೀರ್ವಚನದಲ್ಲಿ “ಮಕ್ಕಳೆಂದರೆ ಬಾಡದ ಪುಷ್ಪಗಳಾಗಬೇಕು;ಶಾಲೆಯಲ್ಲಿ ಶಿಕ್ಷಕನ ಪಾತ್ರ ಬಹಳ ಮುಖ್ಯವಾದುದು. ಮಕ್ಕಳ ಜೀವನ-ಉಜ್ಜೀವನಗಳು ಶಿಕ್ಷಕರ ಕೈಯಲ್ಲಿದೆ.ಈ ಶಾಲೆಯಲ್ಲಿರುವ ಒಂದೊಂದು ಮಗುವೂ ಅರಿವಿನ ದೀಪವಾಗಿ ಹೊರಹೊಮ್ಮಬೇಕು. ಅವರು ಭಾರತದೇಶವನ್ನೇ ಬೆಳಗುವಂತವರಾಗಬೇಕು.ಅಂತಹ ದೀಪಮಾಲಿಕೆಗಳು ಈ ಶಾಲೆಯಿಂದ ಹೊರಬರಬೇಕು.ಈ ಮಕ್ಕಳ ಹೃದಯದಲ್ಲಿ,ಈ ಮಣ್ಣಿನಲ್ಲಿ ಪ್ರಭು ಶ್ರೀರಾಮನ ಚೈತನ್ಯ ಹರಿದಾಡಲಿ “ಎಂದು ನುಡಿದರು.

ಶಾಲೆಯಲ್ಲಿ ನಡೆದ ಕಲಾ ಹಾಗೂ ವಿಜ್ಞಾನ ಪ್ರದರ್ಶನವನ್ನು ವೀಕ್ಷಿಸಿದ ಅವರು “ಕಲೆ ಎಂದರೆ ಭಾವ, ವಿಜ್ಞಾನ ಎಂದರೆ ಜ್ಞಾನ ಅವೆರಡೂ ಒಂದು ಹಕ್ಕಿಯ ಎರಡು ರೆಕ್ಕೆಗಳಿದ್ದಂತೆ; ಅವೆರಡೂ ಜೀವನಕ್ಕೆ ಅವಶ್ಯ “ಎಂದು ನುಡಿದರಲ್ಲದೇ ಮಕ್ಕಳು ತಯಾರಿಸಿದ ಕಲಾಕೃತಿಗಳನ್ನು ಪ್ರಶಂಸಿಸಿದರು.

ಆರಂಭದಲ್ಲಿ ಮಕ್ಕಳು ಗಣೇಶಸ್ತುತಿ ಮಾಡಿ,ಸಭಾ ಪೂಜೆಗೈದರು. ಶಾಲೆಯ ನೂತನ ಪ್ರಾಂಶುಪಾಲರಾದ ಮೋಹನ್ ಸಿ. ಇವರು ಶಾಲೆಯ ವಾರ್ಷಿಕ ವರದಿಯನ್ನು ವಾಚಿಸಿದರು.ಶಾಲೆಯ ಆಡಳಿತಮಂಡಳಿಯ ನೂತನ ಸದಸ್ಯರನ್ನು ಪರಿಚಯಿಸಲಾಯಿತು. ಶಾಲೆಯ ಅಧ್ಯಕ್ಷರಾದ ಡಾ. ಶಾರದಾ ಜಯಗೋವಿಂದ ಅವರು ಅಧ್ಯಕ್ಷೀಯ ಭಾಷಣವನ್ನು ನೆರವೇರಿಸಿದರು. ಹಳೆಯ ಆಡಳಿತಮಂಡಳಿಯ ಸದಸ್ಯರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮ ನೆರವೇರಿತು.

ಬೆಸ್ಟ್ ಔಟ್‌ಗೋಯಿಂಗ್ ಸ್ಟುಡೆಂಟ್ ಎಂಬ ಪ್ರಶಸ್ತಿಗೆ ಭಾಜನರಾದ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಪ್ರಿಯಾಂಕಾ ಭಟ್ಟ ಹಾಗೂ ಸ್ಫೂರ್ತಿ ಇವರನ್ನು ಹಾಗೆಯೇ ಬೆಸ್ಟ್ ಹೌಸ್ ಪ್ರಶಸ್ತಿ ವಿಜೇತರಾದ ತಂಡವನ್ನು ಶ್ರೀಗಳು ಆಶೀರ್ವದಿಸಿದರು.ಭರತನಾಟ್ಯ, ನೃತ್ಯ ಇವೇ ಮೊದಲಾದ ಕಾರ್ಯಕ್ರಮಗಳ ಮೂಲಕ ನೆರೆದ ಸಾವಿರಾರು ಜನರನ್ನು ಮಕ್ಕಳು ರಂಜಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಹಕಾರ ನೀಡಿದ ಎಲ್ಲರನ್ನೂ ವಂದಿಸಲಾಯಿತು.

Leave a Reply

Your email address will not be published. Required fields are marked *