ರಾಮಪದ – ಪರಮಪದ – ಮೋಕ್ಷಪದ : ಕಾಂಚನ ರೋಹಿಣಿ ಸುಬ್ಬರತ್ನಂ

ಲೇಖನ

 

ದಿನಾಂಕ 18.12.2018ರಂದು ರಾಮಚಂದ್ರಾಪುರದಮಠದ ಶಾಖೆಯಾದ
ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಾಶ್ರಮದಲ್ಲಿ ರಾಮಪದ -ಭಗವದವಲೋಕನ ದಿನ ಅಂದು ವೈಕುಂಠ ಏಕಾದಶೀ. ಮೋಕ್ಷವನ್ನು ಬಯಸುವವರಿಗೆ ವೈಕುಂಠದ ದ್ವಾರವು ತೆರೆದಿರುವ ದಿನ. ಭಗವಂತನಾದ ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದ ದಿನ. ಇಂತಹ ಸುದಿನದಲ್ಲಿ ಅನೇಕ ಭಕ್ತರೊಂದಿಗೆ ನನಗೂ ರಾಮಪದವನ್ನು ನೋಡುವ, ಸೇರುವ ಪುಣ್ಯದ ಅವಕಾಶವು ದೊರೆತುದೇ ಭಾಗ್ಯವಿಶೇಷ. ಮುಕ್ತಿಯ ಆಸೆಗಾಗಿ ದೇವಸ್ಥಾನಗಳಿಗೆ ಜನ ಮುತ್ತಿದ್ದರೆ ರಾಮಪದವನ್ನು ಬಯಸಿ ರಾಮಾಶ್ರಮದಲ್ಲಿ ಸೇರಿದ್ದವರಿಗೆ ಅನಾಯಾಸವಾಗಿ ಪುರುಷಾರ್ಥ ಗಳಿಕೆಗೆ ಸುಲಭಹಾದಿಯಾದ ಸಂಗೀತದ ಹಾಗೂ ಸಂಗೀತದಷ್ಟೇ ಸುಮಧುರವಾದ ಪ್ರವಚನದ ಸ್ವರಾಕ್ಷರ ಸಮರ್ಪಣೆಗಳಿಂದ ರಾಮಪದ ದರ್ಶನ. ಮುಕ್ತಿಯೇನು ಸುಲಭವಾಗಿ ದೊರೆಯುವಂತಹುದೇನು? ನಿಜವಾದ ಭಕ್ತಿಯದು ಬೇಡವೇ? ಭಕ್ತಿಯ ಸಾಮರ್ಥ್ಯವನ್ನು ಹನುಮಂತನೇ ರಾಮನಿಗೆ ತೋರಿಸಿಕೊಟ್ಟಿದ್ದಾನೆ. ರಾಮಸೇತುವನ್ನು ಕಟ್ಟುವಾಗ ಹನುಮಂತನು ‘ರಾಮ’ ಎಂದು ಬರೆದು ಹಾಕುತ್ತಿದ್ದ ಕಲ್ಲುಗಳು ತೇಲುವ, ಅವು ಒಂದಕ್ಕೊಂದು ಜೋಡಣೆಯಾಗುವ ಪರಿಯನ್ನು ನೋಡಿ ಸ್ವತಃ ರಾಮನೇ ಅಚ್ಚರಿ ಪಟ್ಟು ತಾನೇ ‘ರಾಮ’ ಎಂದು ಬರೆದು ಹಾಕಿದಾಗ ಅದು ಮುಳುಗಿತಂತೆ! ಆಗ ಹನುಮಂತನು ನಗುತ್ತ ‘ಅಯ್ಯಾ ರಾಮ, ನೀನೇ ಕೈಬಿಟ್ಟಮೇಲೆ ಆ ಕಲ್ಲಾಗಲಿ, ಯಾವುದೇ ಆಗಲಿ ಮುಳುಗದೇ ಇದ್ದೀತೇನು?’ ಎಂದು ನಕ್ಕನಂತೆ! ಭಕ್ತಿಯು ಎಲ್ಲಕ್ಕಿಂತ ಮಿಗಿಲು ಎಂಬುದನ್ನು ತೋರಿಸಿಕೊಡುವ ಗುರುವಿನ ಆಶ್ರಯವಿಲ್ಲದೆ ಮುಕುತಿಯು ದೊರಕಿತೇನು? ಪುರಂದರದಾಸರು ಹೇಳಲಿಲ್ಲವೇ ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು.

 

‘ರಾಮಪದ’ ಕಾರ್ಯಕ್ರಮವು ಭಕ್ತಿಯನ್ನೇ ಕುರಿತಾದದ್ದು. ಇದನ್ನು ನಡೆಸಿಕೊಡುವವರೋ, ಪರಮಪೂಜ್ಯರಾದ, ಲೋಕಕ್ಕೇ ಗುರುಗಳಾದ ಶ್ರೀಸಂಸ್ಥಾನ ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಶ್ರೀಚರಣರು, ಮಹಾಸ್ವಾಮಿಯವರು. ಇಂತಹ ಗುರುಮುಖೇನ ‘ರಾಮಪದ’ ದರ್ಶನವು ದೊರೆಯುವುದೆಂದರೆ ಪ್ರತಿ ಏಕಾದಶಿಯೂ ವೈಕುಂಠ ಏಕಾದಶಿಗೆ ಸಮಾನವಾದದ್ದೇ.

 

ಪ್ರತಿ ಏಕಾದಶಿಯಂದು ರಾಮಪದ ಕಾರ್ಯಕ್ರಮವು ನಡೆಯುತ್ತದೆ. ಅಂದು ಭಗವಂತನಿಗೆ ಸಂಗೀತ – ಪ್ರವಚನಗಳ ಸ್ವರಾಕ್ಷರ ನೈವೇದ್ಯ ಸಮರ್ಪಣೆ. ಕೇಳುವ ಭಕ್ತರಿಗೆ ಭವದ ಸಾಗರವನ್ನು ದಾಟುವ ಉಪಾಯದ ಸಾಧನವನ್ನು ಕುರಿತು ಸುಲಭವಾಗಿ ಭಕ್ತರ ಹೃದಯವನ್ನೂ, ಅಂತರಾತ್ಮವನ್ನೂ ಮುಟ್ಟುವಂತೆ ಇಲ್ಲಿ ಹೇಳಲಾಗುತ್ತದೆ. ಭವಸಾಗರವನ್ನು ದಾಟುವ ಸಾಧನವಾಗಿ ಸಂಗೀತನೌಕೆಯನ್ನು ಬಳಸಲಾಗುತ್ತದೆ. ಪ್ರತಿ ರಾಮಪದದ ಕಾರ್ಯಕ್ರಮದಲ್ಲಿಯೂ ಶಾಸ್ತ್ರೀಯಸಂಗೀತವಾಗ್ಗೇಯಕಾರರ, ಹರಿ – ಹರದಾಸರ ಪದಗಳ ಗಾಯನವನ್ನು ಸ್ವತಃ ಶ್ರೀಗಳು ತಮ್ಮ ಸುಮಧುರವಾದ, ಭಾವಭರಿತ, ಆರ್ದ್ರತೆಯಾವರಿತ ಕಂಠದಿಂದ ಈ ಅರ್ಥಪೂರ್ಣ ಕಾವ್ಯಮಯ ಸಾಹಿತ್ಯಪ್ರಬಂಧಗಳನ್ನು ಹಾಡುವುದಲ್ಲದೆ, ಹೊಸ ಹೊಸ ಕಲಾವಿದರನ್ನು ಕಲಾಲೋಕಕ್ಕೆ ಪರಿಚಯಿಸಿ ಪ್ರೋತ್ಸಾಹವನ್ನು ನೀಡಿ, ಅವರಿಂದಲೂ ಹಾಡಿಸಿ, ಕಲಾಲೋಕವು ಸಂಪದ್ಭರಿತವಾಗಲೆಂದು ಈ ಕಲಾವಿದರೆಂಬ ಉಡುಗೊರೆಯನ್ನು ಕಲಾಲೋಕಕ್ಕೆ ನೀಡುತ್ತಿದ್ದಾರೆ. ಈ ಸಂಗೀತಪ್ರಬಂಧಗಳ ಸಾಹಿತ್ಯಸಾರವನ್ನೂ, ವಾಗ್ಗೇಯಕಾರರನ್ನೂ ಕುರಿತು ಸಾಹಿತ್ಯದ – ವಾಗ್ಗೇಯಕಾರರ ಸದಾಶಯ – ಹೃದಯ – ಆತ್ಮಗಳನ್ನೇ ತೋರುವ ಪ್ರವಚನವಿದ್ದು ಭಕ್ತರ ಹೃದಯವನ್ನು ತಣಿಸುತ್ತವೆ, ಜೀವನವನ್ನು ಸಾರ್ಥಕ ಪಡಿಸುತ್ತವೆ.

 

ಹಲವಾರು ಸಂಗೀತ ಸಂಸ್ಥೆಗಳು ಸರ್ವತೋಮುಖವಾದ ಶಾಸ್ತ್ರೀಯ ಸಂಗೀತದ ಸೇವೆಗಳನ್ನು ಮಾಡುತ್ತಿದ್ದಾವೆ, ನಿಜ. ಆದರೆ ಯಾವುದೇ ಫಲಾಪೇಕ್ಷೆಯಿಲ್ಲದೆ, ಥಳುಕಿನ ಪ್ರಚಾರಗಳಿಲ್ಲದೆ, ನಿಸ್ವಾರ್ಥವಾಗಿ ಗೋಕರ್ಣ ಮಂಡಲಾಧೀಶರಾದ ಶ್ರೀಜಗದ್ಗುರುಗಳು ಶಾಸ್ತ್ರೀಯ ಸಂಗೀತ ಪ್ರಪಂಚಕ್ಕೂ ಹಾಗೂ ವಾಗ್ಗೇಯಕಾರರಿಗೂ ಪ್ರತಿ ಏಕಾದಶಿಯಂದು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತ, ಶ್ರೋತೃಗಳಿಗೆ ವಾಗ್ಗೇಯಕಾರರ ಸಾಹಿತ್ಯಗಳ ಅರ್ಥಹೃದಯವನ್ನು ಸ್ವಾರಸ್ಯಮಯವಾಗಿ ಶ್ರುತಪಡಿಸುತ್ತ, ಶಾಸ್ತ್ರೀಯ ಸಂಗೀತದ ಬಗ್ಗೆ ಆಸಕ್ತಿಯನ್ನು ಒಲವನ್ನು, ಭಕ್ತಿಯನ್ನು ಮೂಡಿಸುವುದರಲ್ಲಿ ತನ್ಮೂಲಕ ಸಂಸ್ಕೃತಿ ಸಂಪದವನ್ನು ಬೆಳೆಸುವಲ್ಲಿ, ಬೆಳಗಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇದರಲ್ಲಿ ಬಾಲಕಲಾವಿದರಿಂದ ಹಿಡಿದು ಹಿರಿಯ ವಿದ್ವಾಂಸರಾದವರೂ ಭಾಗವಹಿಸಿ ಕೃತಾರ್ಥರಾಗುತ್ತಿದ್ದಾರೆ. ನಿಸ್ವಾರ್ಥವಾದ, ಧೀಮಂತವಾದ ಈ ಕಲಾಸೇವೆಗಾಗಿ ಶಾಸ್ತ್ರೀಯ ಸಂಗೀತಪ್ರಪಂಚವು ಶ್ರೀಗಳಿಗೂ, ಶ್ರೀರಾಮಚಂದ್ರಾಪುರಮಠಕ್ಕೂ, ಆಭಾರಿಯಾಗಬೇಕಾಗಿದೆ.

 

ಈ ಬಾರಿ ದಿನಾಂಕ 18.12.2018 ರ ವೈಕುಂಠ ಏಕಾದಶೀ ದಿನದಂದು ನಡೆದ ‘ರಾಮಪದ’ ಕಾರ್ಯಕ್ರಮದಲ್ಲಿ ಪ್ರಸ್ತಾವನೆಯನ್ನೂ ಭಾಗವಹಿಸಿದ ಕಲಾವಿದರ ಪರಿಚಯವನ್ನೂ ಶ್ರೀಮತಿ ಅನೂರಾಧ ಪಾರ್ವತಿಯವರು ಮಾಡಿದರು. ಅನಂತರ ಲೋಕಗುರುಗಳಾದ ಶ್ರೀಸನ್ನಿಧಾನದವರಿಂದ ಸ್ವಗುರುಗಳ ಸ್ತುತಿಗಾಯನವಾಯಿತು. ನಾದಯೋಗಿ ವಾಗ್ಗೇಯಕಾರರುಗಳಾದ ಶ್ರೀ ಮುತ್ತುಸ್ವಾಮಿ ದೀಕ್ಷಿತರ, ಶ್ರೀ ತ್ಯಾಗರಾಜರ, ಶ್ರೀಪಾದರಾಯರ, ಶ್ರೀ ಪುರಂದರದಾಸರ ಕೀರ್ತನೆಗಳ ಗಾಯನವು ನಡೆದು, ಭಾಗವತ, ರಾಮಾಯಣ, ಮಹಾಭಾರತ ಕವಿಗಳಿಗೆ ಹಾಗೂ ವಾಗ್ಗೇಯಕಾರರಿಗೂ ನಾದ, ಸ್ವರ, ರಾಗ, ತಾಳ, ಪ್ರಬಂಧಗಳೆಂಬ, ಗಾಯನ – ವಾದನ – ಪ್ರವಚನಗಳೆಂಬ ಫಲಪುಷ್ಪಗಳಿಂದ ಕೂಡಿದ ಅಷ್ಟವಿಧ ಪೂಜೆಯು ನಡೆಯಿತು. ಈ ದಿವ್ಯಪೂಜೆಗೆ ಸಹಕರಿಸಿದವರು :

 

ವಾದನ ಸೇವೆಯಲ್ಲಿ :
ಸಿತಾರ್ ಎಂಬ ತತವಾದ್ಯದಲ್ಲಿ ಶ್ರೀ ಸುಬ್ರಹ್ಮಣ್ಯ ಹೆಗಡೆ,
ಹಾರ್ಮೋನಿಯಂ ಎಂಬ ಸುಷಿರವಾದ್ಯದಲ್ಲಿ – ಶ್ರೀ ಪ್ರಜ್ಞಾನ ಲೀಲಾಶುಕ ಉಪಾಧ್ಯಾಯ.
ಅವನದ್ಧವಾದ್ಯವಾದ ತಬಲಾದಲ್ಲಿ – ಶ್ರೀ ಗಣೇಶ ಭಾಗವತ್, ಗುಂಡಕಲ್ಲು.

 

ಗಾಯನ ಸೇವೆಯಲ್ಲ :
ಸಹಗಾಯಕೀಮಣಿಗಳಾದ
ಕು. ದೀಪಿಕಾ ಭಟ್
ಕು. ಪೂಜಾ ಕೋರಿಕ್ಕಾರು
ಕು. ಪ್ರಿಯಾ ಕೋರಿಕ್ಕಾರು
ಕು. ದೀಪ್ತಿ.

 

ಮುಖ್ಯ ಗಾಯನದಲ್ಲಿ :
ಶ್ರೀ ರಘುನಂದನ ಬೇರ್ಕಡವು ಹಾಗೂ
ಕು. ಅನ್ವಿತಾ ಭಟ್.

 

ಶ್ರೀಮುಖ ಪ್ರಸ್ತುತ ಕೀರ್ತನಸಾರ
(ಇವುಗಳನ್ನು ಯಥಾವತ್ತಾಗಿ ಬರೆಯಲು ಅಸಮರ್ಥಳಾಗಿದ್ದೇನೆ, ನನಗೆ ಅರ್ಥವಾದಂತೆ ಮಾತ್ರವಿದೆ)
# ಜನ್ಮವನ್ನೆತ್ತುವುದೇ ಮೋಕ್ಷಗಳಿಕೆಗಾಗಿ. ಜನ್ಮದಿನವನ್ನು ಎಷ್ಟು ವೈಭವವಾಗಿ ಆಚರಿಸುತ್ತದೆಯೋ ಅದಕ್ಕಿಂತಲೂ ಮೋಕ್ಷಗಳಿಕೆಯ ಈ ದಿನವನ್ನು ಹೆಚ್ಚು ವೈಭವವಾಗಿ, ಭಕ್ತಿಯುತವಾಗಿ, ಉತ್ಸವವಾಗಿ ಆಚರಿಸಬೇಕು.
# ಲಕ್ಷ್ಮಿಯೆಂದರೆ ಲೌಕಿಕವಾದ ‘ಧನ’ ಮಾತ್ರಳಲ್ಲ. ಆಕೆಯು ಬುದ್ಧಿ, ಯಶಸ್ಸು, ವಿದ್ಯೆ, ಆರೋಗ್ಯ, ಸುಖ, ಶಾಂತಿ ಮುಂತಾದ ಸಕಲ ಶುಭಕರ ಸಂಪತ್ತುಗಳಿಗೆ ‘ಸಾಧನ’ವೆಂದು ಶ್ರೀ ಮುತ್ತುಸ್ವಾಮಿ ದೀಕ್ಷಿತರು ‘ಶ್ರೀವರಲಕ್ಷ್ಮೀಂ’ ಕೀರ್ತನೆಯಲ್ಲಿ ಹೇಳಿದ್ದಾರೆ.
# ರಾಮನಾಮವನ್ನು ಕೇಳಿದಾಕ್ಷಣವೇ ಉಂಟಾಗುವ ರೋಮಾಂಚವೇ ವಜ್ರಕವಚ, ರಾಮನಾಮವೇ ವರಖಡ್ಗ, ಅದುವೇ ಸೀತಾ ಮಾತೆಗೆ ತೋರಿಸಿದ ವರಮುದ್ರೆಯೆಂದು ತ್ಯಾಗರಾಜರು ತಮ್ಮನ್ನು ಹನುಮಂತನಂತೆ ಆಪ್ತಭಕ್ತ, ಭಂಟ – ಭಟನೆಂದು ಭಾವಿಸಿಕೊಂಡು ‘ಬಂಟುರೀತಿ’ ಕೀರ್ತನೆಯನ್ನು ರಚಿಸಿದ್ದಾರೆ.
# ತ್ಯಾಗರಾಜರಿಗೆ ರಾಮ ರಾಮವೆಂದು ಎಷ್ಟು ಹೇಳಿದರೂ ಅವರ ಹೃದಯದಲ್ಲಿ ಇನ್ನಷ್ಟು ಜಪಿಸುತ್ತಲೇ ಇರಬೇಕೆಂಬ ತೀರದಷ್ಟು ಅಪೇಕ್ಷೆ. ‘ರಾಮ, ಮಾತನಾಡಬಾರದೇ? ಅದು ನಿನಗೆ ಒಂದೇ ಒಂದು ಮಾತು. ಆದರದು ನನಗೆ ಅಪಾರ ಮೌಲ್ಯವುಳ್ಳದ್ದು.ರಾಮ ನೀಕೊಕ್ಕ ಮಾಟ – ನಾಕೊಕ್ಕ ಮೂಟ! ನನ್ನ ಒಂದು ಮಾತನ್ನು ಹೇಳಿದರೆ ನಿನಗೇನು ನಷ್ಟ!’
# ಶ್ರೀಪಾದರಾಯರು ಹೀಗೆ ಹೇಳಿದ್ದಾರೆ — ‘ಪ್ರಪಂಚವೆನ್ನುವುದು ಋಣಗಳಿಂದ ತುಂಬಿದೆ. ನಮ್ಮ ಕರ್ತವ್ಯಗಳನ್ನು ಮಾಡಿ ಮುಗಿಸಬೇಕು. ಬೇರೇನನ್ನೂ, ಯಾರನ್ನೂ ನೆಚ್ಚಿಕೊಳ್ಳಲಾಗದು! ಪ್ರಪಂಚವು ಹೇಗಿದೆಯೆಂದರೆ, ರಂಗವಿಠಲನದೇ ಸರಿ’ – ಎಂದು ಹೇಳಲೂ ಸಾಸಿರ ದಂಡವನ್ನು ತೆರಬೇಕಾಗಿದೆ. ಕಾಡಬೆಳದಿಂಗಳಿನಂತೆ ಆ ಬೆಳದಿಂಗಳೂ ಕಾಡಿನಲ್ಲಿ ಏನೇನೋ ಇದೆಯೆಂಬ ಭಯವನ್ನೂ ಭ್ರಮೆಯನ್ನೂ ಮೂಡಿಸುತ್ತದೆ, ಅದು ಕತ್ತಲೆಯ ಬೆಳದಿಂಗಳೇ ಸರಿ. ಹಾಗೆಂದು ಎಲ್ಲರನ್ನೂ ಬಿಡುತ್ತೇವೆಂದು ಹೊರಟುಬಿಡಬೇಡಿ. ಇದು ಋಣವನ್ನು ಬಿಸಾಡಲು ಲೈಸನ್ಸ್ ಅಲ್ಲ. ನಿರ್ವಹಿಸಲು ಬೇಕಾದ ಸೆನ್ಸ್.’
# ಪುರಂದರದಾಸರದೇ ಮೊಟ್ಟಮೊದಲ ಜಾಹಿರಾತು ಇದಕೊಳ್ಳಿ ಇದಕೊಳ್ಳಿ ಭವರೋಗಕೌಷಧವ – ಎಂಬ ರಚನೆ. ಲೋಕವ್ಯಾಪಾರದಲ್ಲಿ ಮನುಜರು ಸ್ವಾರ್ಥಪರರಾಗಿ ಜಾಹಿರಾತುಗಳನ್ನು ಮಾಡಿದರೆ ಭಗವಂತನ ನಾಮಗಳನ್ನು ಹೇಳಿ ಇಂದ್ರಿಯ ಚಾಪಲ್ಯಗಳನ್ನು ಜಯಿಸುವ ಇಚ್ಛಾಪಥ್ಯವನ್ನು ಮಾಡಿ ಜೀವನವನ್ನು ಜಯಿಸಿರಿ – ಎಂಬ ಲೋಕದ ಒಳಿತಿನ ಜಾಹೀರಾತನ್ನು ಮಾಡಿದ್ದಾರೆ. ನಿಜವಾಗಿಯೂ ಪರಮನೆಂಟನೇ ಪರ್ಮನೆಂಟ್.’
# ‘ಕರ್ಣಾಟಕ ಸಂಗೀತದ ಹಿರಿಮೆಯೆಂದರೆ ನೂರಾರು ವರ್ಷಗಳು ಎಡೆಬಿಡದೆ ಪರಂಪರಾನುಗತವಾಗಿ ವಾಗ್ಗೇಯಕಾರರ ಸ್ವರ – ರಾಗ – ಸಾಹಿತ್ಯಗಳನ್ನು ಭಕ್ತಿಪೂರ್ವಕವಾಗಿ ಉಳಿಸಿಕೊಂಡು ಬಂದದ್ದು. ವಿಶ್ವದಲ್ಲಿ ಬೇರಾವ ಸಂಗೀತಪದ್ಧತಿಯಲ್ಲಿಯೂ ಇದು ಕಾಣದು.
# ಸಂಗೀತದಂತಹ ಲಲಿತಕಲೆಗಳು ನಾವು ಅದಕ್ಕೆ ಮಾಡುವ ಸೇವೆಗಿಂತಲೂ ಹೆಚ್ಚಾಗಿ ನಮ್ಮನ್ನು ಅವುಗಳು ಉಪಕರಿಸುತ್ತಿವೆ.
# ‘ಎಲ್ಲರ ಮನ – ಗಮನ ರಾಮಪದದತ್ತ ಇರಲಿ.’

ಇದಲ್ಲವೇ ರಾಮಪದ. ಪರಮಪದ.ಮೋಕ್ಷ ಪದ, ಮೋಕ್ಷಪಥ.

 

Author Details


Srimukha

2 thoughts on “ರಾಮಪದ – ಪರಮಪದ – ಮೋಕ್ಷಪದ : ಕಾಂಚನ ರೋಹಿಣಿ ಸುಬ್ಬರತ್ನಂ

    1. ತುಂಬಾ ಚೆನ್ನಾಗಿ ಪ್ರಸ್ತುತಪಡಿಸಿದ್ದೀರಿ.ರೋಹಿಣಿಯವರೇ ,ಮತ್ತೊಮ್ಮೆ ರಾಮಪದ ಸವಿದಂತಾಯಿತು.ಧನ್ಯವಾದಗಳು says:

      ತು

Leave a Reply

Your email address will not be published. Required fields are marked *