ಮಾಲೂರು: ಜೂ. 12, ದೇವರನ್ನು ತಲುಪಬೇಕಾದರೆ ಗೋವು ದ್ವಾರ ಹಾಗೂ ದಾರಿಯಾಗಿದೆ. ಗೋಮಾತೆಯ ಸೇವೆಯನ್ನು ಮಾಡಿ ಒಲುಮೆಯನ್ನು ಗಳಿಸಿದರೆ ಮುಂದೆ ಭಗವಂತನ ಸಾನಿಧ್ಯ ನಿಶ್ಚಿತ. ಗೋಸೇವೆ ಮಾಡಿದಾಗ ಪಾಪಗಳು ಪರಿಹಾರವಾಗುತ್ತವೆ. ಗೋಸೇವೆ ಉತ್ತಮವಾಗಿ ನಡೆದಾಗ ಎಲ್ಲರಿಗೆ ಆಶೀರ್ವಾದ ಸಿಗುತ್ತದೆ. ಸಿದ್ಧಾಂಜನೇಯನ ಸನ್ನಿಧಿಯಲ್ಲಿ ಶುಭವಾದರೆ ಎಲ್ಲಾ ಕಡೆಯಲ್ಲಿ ಶುಭವಾಗುತ್ತದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಹೇಳಿದರು. ಮಾಲೂರು ಗಂಗಾಪುರ ಶ್ರೀರಾಘವೇಂದ್ರ ಗೋ ಆಶ್ರಮಕ್ಕೆ ಬೇಟಿ ಮಾಡಿ ಗೋಪ್ರೇಮಿಗಳನ್ನು ಅನುಗ್ರಹಿಸಿ, ಆಶೀರ್ವಚನ ನೀಡಿದರು.
ಎಂಜಿಪಿಪಿಎಲ್ ಒಂದು ಸನ್ನಿಧಿಯಾಗಿದ್ದು, ವ್ಯಾಪಾರವಾದರೂ ಸೇವೆಯ ರೀತಿಯಲ್ಲಿರುವ ಪ್ರಕಲ್ಪವಾಗಿದೆ. ಫಲಾಪೇಕ್ಷೆ ಇಲ್ಲದೆ ಮಾಡುವ ಕರ್ಮ ಚಿತ್ತ ಶುದ್ಧಿಗೆ ಕಾರಣವಾಗಿ ಮುಕ್ತಿಯನ್ನು ಕೊಡುತ್ತದೆ. ಗೌಗಂಗಾ ಉದ್ಯಮ ಎಂ.ಜಿ.ಪಿ.ಪಿ.ಎಲ್ ನಡೆಸುವವರು ಸ್ವಯಂ ಫಲಾಪೇಕ್ಷೆ ಬಯಸದೆ ಸೇವೆಗೈಯುತ್ತಿದ್ದಾರೆ. ಬೆಳಕಿನ ಮೂಲ ಜತೆಗೆ ಸಂಬಂಧವಿದ್ದಾಗ ಅಲ್ಲಿ ಎಲ್ಲವೂ ಪ್ರಕಾಶಮಾನವಿರುತ್ತದೆ. ನಮ್ಮ ಬದುಕು ಪ್ರಕಾಶಮಾನವಾಗಿರಬೇಕಾದರೆ ಚೈತನ್ಯದ ಮೂಲದ ಜತೆಗೆ ಸಂಬಂಧವಿಟ್ಟು ಕೊಳ್ಳಬೇಕು. ಗೋವುಗಳು ಚೈತನ್ಯವಾಗಿದ್ದು, ಅವುಗಳ ಜತೆಗೆ ಬಾಂಧವ್ಯವಿದ್ದಾಗ ಬದುಕು ಉತ್ತಮವಾಗಿರುತ್ತದೆ ಎಂದು ತಿಳಿಸಿದರು.
ಎಂಜಿಪಿಪಿಎಲ್‍ನ ನಿರ್ದೇಶಕ ಎಂ.ಪಿ.ಸೋನಿಕಾ, ರಾಘವೇಂದ್ರ ಗೋ ಆಶ್ರಮ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ಅಧ್ಯಕ್ಷ ಡಾ. ಶ್ಯಾಂಪ್ರಸಾದ್, ಕಾರ್ಯದರ್ಶಿ ಶ್ರೀಕಾಂತ ಹೆಗಡೆ ಯಲಹಂಕ, ಕೋಶಾಧಿಕಾರಿ ರಾಮಕೃಷ್ಣ ಹೆಗಡೆ ಕಲ್ಲಬ್ಬೆ, ಕಾಮುದುಘಾ ವಿಭಾಗದ ಡಾ.ವೈ.ವಿ.ಕೃಷ್ಣಮೂರ್ತಿ, ಡಾ|| ಶಾರದಾ ಜಯಗೋವಿಂದ್, ಗುಂಡಿ ಮಂಜಪ್ಪ, ವಿಶೇಷ ಕರ್ತವ್ಯಾಧಿಕಾರಿ ರಾಮ ಅಜ್ಜಕಾನ, ಸ್ಥಳೀಯ ಗಣ್ಯರಾದ ತಬಲಾ ನಾರಾಯಣಪ್ಪ ಕನ್ನೇಲಾಲ್ ರಾಜಪುರೋಹಿತ್, ನರಸಾಪುರ ರಮೇಶ್, ಉಪಸ್ಥಿತರಿದ್ದರು.
ಶ್ರೀ ಗೌತಮ ಬಿ. ಕೆ.