ಗೋಸ್ವರ್ಗದಲ್ಲಿ ಪಂಚಗವ್ಯ ಪ್ರಶಿಕ್ಷಣ ಶಿಬಿರ : ಗೋಸೇವೆಯ ನೈಜ ಅನುಭವ ಪಡೆದ ಶಿಬಿರಾರ್ಥಿಗಳು

ಗೋವು

 

ಸಾವಿರ ಗೋವುಗಳ ಸ್ವಚ್ಛಂದ ವಿಹಾರತಾಣವಾದ ಜಗತ್ತಿನ ಏಕೈಕ ಗೋಸ್ವರ್ಗದಲ್ಲಿ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ, ಭಾರತೀಯ ಗೋಪರಿವಾರ ಕರ್ನಾಟಕದ ಸಹಯೋಗದೊಂದಿಗೆ ಮೂರು ದಿನಗಳ ಕಾಲ ಹಮ್ಮಿಕೊಂಡ ಪಂಚಗವ್ಯ ಪ್ರಶಿಕ್ಷಣ ಶಿಬಿರ ನೆರವೇರಿತು. ಶಿಬಿರಾರ್ಥಿಗಳಿಗೆ ಗೋವುಗಳ ಒಡನಾಟದ ವಿಶಿಷ್ಟ ಅನುಭವದೊಂದಿಗೆ ಗೋಸೇವೆಯ ಮಹತ್ತ್ವ, ಗೋವುಗಳ ಸಂರಕ್ಷಣೆಯ ಕುರಿತು ಅರಿವುಗಳನ್ನು ಮೂಡಿಸುವಲ್ಲಿ ಶಿಬಿರವು ಯಶಸ್ವಿಯಾಯಿತು.

 

ರಾಜ್ಯದ ವಿವಿಧ ಜಿಲ್ಲೆಗಳಿಂದ ಮೂವತ್ತಾರು ಜನ ಶಿಬಿರಾರ್ಥಿಗಳು ಪಾಲ್ಗೊಂಡ ಈ ಶಿಬಿರವನ್ನು ಗೋ ಸ್ವರ್ಗದ ಅಧ್ಯಕ್ಷರಾದ ಶ್ರೀ ಆರ್. ಎಸ್. ಹೆಗಡೆ ಗೋಪೂಜೆ ನೆರವೇರಿಸುವ ಮೂಲಕ ವಿಧ್ಯುಕ್ತವಾಗಿ ಉದ್ಘಾಟಿಸಿದರು.

 

ಗೋಸ್ವರ್ಗದ ನಿರ್ಮಾಣದ ಉದ್ದೇಶವನ್ನು ಶಿಬಿರಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದರ ಜೊತೆಗೆ ಶಿರಸಿ ತಾಲೂಕಿನ ಗೋಪರಿವಾರದ ಅಧ್ಯಕ್ಷರಾದ ಶ್ರೀ ಆರ್‌. ಯು. ನಾಯಕ್ ಗೋಮಾತೆಯ ಉಳಿವಿನಲ್ಲಿ ಗವ್ಯೋತ್ಪನ್ನಗಳ ಪಾತ್ರವನ್ನು ಕೂಡ ತಿಳಿಸಿಕೊಟ್ಟರು.

 

ಗೋಆಧಾರಿತ ಕೃಷಿಯ ಬಗ್ಗೆ ಶಿಬಿರಾರ್ಥಿಗಳೊಡನೆ ಮುಕ್ತ ಸಂವಾದ ನಡೆಸುವ ಮೂಲಕ ಪ್ರಶಿಕ್ಷಣದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಶ್ರೀ ರಾಧಾಕೃಷ್ಣ ಬಂದಗದ್ದೆಯವರು ಅನೇಕ ಮಾಹಿತಿಗಳನ್ನು ವಿನಿಮಯ ಮಾಡಿಕೊಂಡರಷ್ಟೇ ಅಲ್ಲದೆ ಗೋಉತ್ಪನ್ನಗಳಾದ ಜೀವಾಮೃತ, ಘನಾಮೃತ, ಬೀಜಾಮೃತ, ಬೀಜದ ಉಂಡೆ(ಸೀಡ್ ಬಾಲ್) ಇವುಗಳ ತಯಾರಿಕೆಯ ಪ್ರಾಯೋಗಿಕ ತರಬೇತಿಯ ಮೂಲಕ ಅವುಗಳನ್ನು ತಯಾರಿಸುವ ವಿಧಾನವನ್ನು ಕಲಿಸಿಕೊಟ್ಟರು.

 

ಪಂಚಗವ್ಯ ಪ್ರಶಿಕ್ಷಣದ ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಶ್ರೀಮತಿ ಸುಲೋಚನ ಅವರು ಅತ್ಯುತ್ಸಾಹದಿಂದ ಶಿಬಿರಾರ್ಥಿಗಳ ಜೊತೆಗೆ ಬೆರೆತು, ಅವರಿಗೆ ಗೋಮಯ ಖಂಡ, ನೋವು ನಿವಾರಕ ಮುಲಾಮ್, ಚರ್ಮದ ಒಡಕು ನಿವಾರಕ ಮುಲಾಮ್, ಕೇಶವರ್ಧಕ ತೈಲ, ಧೂಪ, ಸಾಬೂನು, ದಂತಮಂಜನ, ಫಿನಾಯಿಲ್, ಶಾಂಪೂ ಸೇರಿದಂತೆ ಹಲವಾರು ನಿತ್ಯೋಪಯೋಗಿ ವಸ್ತುಗಳನ್ನು ಗವ್ಯಾಧಾರಿತವಾಗಿ ಉತ್ಪಾದಿಸುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ಅತ್ಯಂತ ಆಸ್ಥೆಯಿಂದ ತಿಳಿಸಿಕೊಟ್ಟರು.

 

ಗವ್ಯೋತ್ಪನ್ನಗಳ ಕುರಿತು, ಗೋವುಗಳ ಕುರಿತು ಶಿಬಿರಾರ್ಥಿಗಳಿಗೆ ಮೂಡಿದ ಅನೇಕ ಪ್ರಶ್ನೆಗಳಿಗೆ
ಪಂಚಗವ್ಯ ಪ್ರಶಿಕ್ಷಣದ ಸಂಚಾಲಕರಾದ ಡಾ. ರವಿ ತಮ್ಮ ವೈದ್ಯಕೀಯ ಪರಿಭಾಷೆಯಲ್ಲಿ ವಿವರಿಸಿದರು. ಪಂಚಗವ್ಯ ಉತ್ಪನ್ನ ಹಾಗೂ ಪಂಚಗವ್ಯ ಚಿಕಿತ್ಸೆಗಳ ಪ್ರಯೋಜನವನ್ನು ಜನರು ಯಾವ ರೀತಿಯಲ್ಲಿ ಸೂಕ್ತವಾಗಿ ಪಡೆಯಬಹುದು ಹಾಗೂ ನಿತ್ಯಜೀವನದಲ್ಲಿ ಗವ್ಯೋತ್ಪನ್ನಗಳನ್ನು ಬಳಸುವುದರಿಂದ ಉಂಟಾಗುವ ಸತ್ಪರಿಣಾಮಗಳ ಎಂಬ ವಿಚಾರಗಳ ಕುರಿತು ತಿಳುವಳಿಕೆ ನೀಡಿದರು.
ಅದರ ಜೊತೆಗೆ, ‘ಫಲವತಿ’ ಎರೆಹುಳು ಗೊಬ್ಬರದ ತಯಾರಿಕೆಯ ಕುರಿತು ಮಾಹಿತಿ ನೀಡಿ ಇದನ್ನು ಯಾವ ರೀತಿಯಲ್ಲಿ ಬಳಸಬಹುದು ಎಂಬುದನ್ನೂ ತಿಳಿಸಿದರು.

ಭಾರತೀಯ ಗೋಪರಿವಾರ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಡಾ‌. ವೈ. ವಿ. ಕೃಷ್ಣಮೂರ್ತಿ ಗೋಸ್ವರ್ಗದಲ್ಲಿ ಸ್ವಚ್ಛಂದವಾಗಿ ವಿಹರಿಸುವ ಗೋವುಗಳ ಬಳಗದ ನಡುವೆ ಶಿಬಿರಾರ್ಥಿಗಳನ್ನು ಕರೆದೊಯ್ದು ಭಾರತೀಯ ಗೋತಳಿಗಳ ಪರಿಚಯ ಮಾಡಿಕೊಟ್ಟು ,ಅವುಗಳ ವಿಶೇಷತೆಗಳನ್ನು ಬಹಳ ಮನೋಜ್ಞವಾಗಿ ವಿವರಿಸಿದರು. ಗೋಸ್ವರ್ಗದಲ್ಲಿ ವಿಶೇಷವಾಗಿ ತಯಾರಿಸಲಾಗುವ ‘ಸ್ವರ್ಗಸಾರ’ ಗೊಬ್ಬರ ತಯಾರಿಯ ವಿಧಾನ ಮತ್ತು ಪ್ರಯೋಜನಗಳನ್ನೂ ಅವರು ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು.

ಗೋಸ್ವರ್ಗದ ಧರ್ಮ-ಸಂಸ್ಕೃತಿ ವಿಭಾಗದ ವ್ಯವಸ್ಥಾಪಕರಾದ ಶ್ರೀ ಗಣಪತಿ ಹೆಗಡೆ ಗುಂಜಗೋಡು ಗೋಸ್ವರ್ಗದಲ್ಲಿ ಪ್ರತಿನಿತ್ಯವೂ ಜರುಗುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ವಿಸ್ತೃತ ಪರಿಚಯ ಮಾಡಿಸಿದರು. ಜಗತ್ತಿನ ಏಕೈಕ ಗೋಸ್ವರ್ಗದ ವೈಶಿಷ್ಟ್ಯಗಳಾದ ರಥಪಥ, ಪ್ರೇಕ್ಷಾಪಥ, ಗ್ರಾಸಪಥ, ಪ್ರದಕ್ಷಿಣ ಪಥ, ಗೋಪದ, ಗೋತೀರ್ಥ, ತೀರ್ಥಪಥ, ಸಪ್ತಸನ್ನಿಧಿ, ಗೋಸ್ತೂಪ, ಗೋವೀಕ್ಷಾಗೋಪುರ, ಗೋನಂದನ ಸೇರಿದಂತೆ ಗೋಸ್ವರ್ಗದ ಮುಂದಿನ ವಿವಿಧ ಯೋಜನೆಗಳ ಕುರಿತಾದ ಸಮಗ್ರ ಮಾಹಿತಿ ನೀಡಿದರು ‌‌.

 

ಗೋಫಲ ವಿಭಾಗದ ಶ್ರೀ ರವೀಂದ್ರ ಚಿಪ್ಳಿ ಶಿಬಿರಾರ್ಥಿಗಳಿಗೆ ಗೋಅರ್ಕ ತಯಾರಿಯ ಪ್ರಾತ್ಯಕ್ಷಿಕೆ‌ ಮತ್ತು ತರಬೇತಿ ನೀಡಿದರು.

 

ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಈ ಪಂಚಗವ್ಯ ಪ್ರಶಿಕ್ಷಣ ಶಿಬಿರದ ಪ್ರಯೋಜನವನ್ನು ಪಡೆದುಕೊಂಡ ಶಿಬಿರಾರ್ಥಿಗಳು ಸಮಾರೋಪ ಸಮಾರಂಭದಲ್ಲಿ ಗೋಸ್ವರ್ಗದ ಮಹತ್ತ್ವ ಬಗೆಗಿನ ತಮ್ಮ ಭಾವನೆಗಳನ್ನು ಮಾತುಗಳ ಮೂಲಕ ವ್ಯಕ್ತಪಡಿಸಿದರು ಹಾಗೂ ಶಿಬಿರದಲ್ಲಿ ತಾವು ಗಳಿಸಿಕೊಂಡ ಅನುಭವಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಗೋಸ್ವರ್ಗದ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ತಾವು ಸಹ ಸಹಭಾಗಿಗಳಾಗುವೆವು ಎಂಬ ವಿಚಾರವನ್ನು ಅತ್ಯಂತ ಸಂಭ್ರಮದಿಂದ ಘೋಷಿಸಿದರು.

 

ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಿದ್ಧಾಪುರ ತಾಲೂಕಿನ ಗೋಪರಿವಾರದ ಅಧ್ಯಕ್ಷರಾದ ಶ್ರೀ ಆರ್. ಜೆ. ಪೈ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು. ಭಾರತೀಯ ಗೋಪರಿವಾರದ ಕಾರ್ಯದರ್ಶಿ ಶ್ರೀ ಮಧು ಗೋಮತಿ ಅವರು ಸಮಾರೋಪ ಸಮಾರಂಭದ ಸ್ವಾಗತ ಮತ್ತು ನಿರ್ವಹಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು . ಭಾರತೀಯ ಗೋಪರಿವಾರದ ಸಹಕಾರ್ಯದರ್ಶಿ ಶ್ರೀ ಶಿಶಿರ ಅಂಗಡಿ ಅವರು ವಂದನಾರ್ಪಣೆಗೈದರು.

ಶಿಬಿರದ ವೈಶಿಷ್ಟ್ಯ – ಗೋ ಸೇವೆ

 

ಶಿಬಿರ ನಡೆದ ಎಲ್ಲ ದಿನಗಳಲ್ಲೂ ಮುಂಜಾನೆಯಿಂದಲೇ ಶಿಬಿರಾರ್ಥಿಗಳೆಲ್ಲ ಗೋವಿಹಾರವನ್ನು ಸ್ವಚ್ಛಗೊಳಿಸುವುದು, ಹಾಲು ಕರೆಯುವುದು, ಗೋವುಗಳಿಗೆ ಮೇವು ಹಾಕುವುದು, ಗೋಮೂತ್ರ ಮತ್ತು ಸೆಗಣಿಗಳನ್ನು ಸಂಗ್ರಹಿಸುವ ಮೂಲಕ ಗೋಸೇವೆಯ ಪುಣ್ಯಕಾರ್ಯದ ಜೊತೆ ಜೊತೆಗೆ ಗೋವುಗಳ ಒಡನಾಟದ ಅನುಭೂತಿಯನ್ನೂ ಪಡೆದುಕೊಂಡರು.

ದೀಪೋತ್ಸವ :

 

ಬಾನ್ಕುಳಿಮಠದಲ್ಲಿ ನಡೆಯುತ್ತಿರುವ ಕಾರ್ತಿಕ ದೀಪೋತ್ಸವದಲ್ಲಿ ಭಾಗವಹಿಸಿ ಧನ್ಯತಾಭಾವವನ್ನು ಪಡೆದುಕೊಂಡ ಶಿಬಿರಾರ್ಥಿಗಳು ಪ್ರತಿದಿನ ಸಂಜೆ ಗೋಸ್ವರ್ಗದಲ್ಲಿ ನಡೆಯುವ ಅತಿ ವಿಶಿಷ್ಟ ಕಾರ್ಯಕ್ರಮವಾದ ಗೋಗಂಗಾರತಿಯಲ್ಲಿಯೂ ಅತ್ಯುತ್ಸಾಹದಿಂದ ಪಾಲ್ಗೊಂಡರು.

ಮಲೆನಾಡಿನ ಸವಿ ಭೋಜನ :

ಮಲೆನಾಡಿನ ಸಾಂಪ್ರದಾಯಿಕ ಸವಿಯೂಟದ ಸುಗ್ರಾಸ ಭೋಜನವು ಎಲ್ಲ ದಿನಗಳಲ್ಲೂ ಶಿಬಿರಾರ್ಥಿಗಳಿಗೆ ಉಣಬಡಿಸಲಾಯಿತು.

ಮೆಚ್ಚುಗೆಗೆ ಪಾತ್ರವಾದ ಕಾರ್ಯಕರ್ತರ ನಿರ್ವಹಣೆ :

 

ಮೂರು ದಿನಗಳ ಕಾಲ ಯಶಸ್ವಿಯಾಗಿ ನಡೆಸಿದ ಈ ಪಂಚಗವ್ಯ ಪ್ರಶಿಕ್ಷಣ ಶಿಬಿರಕ್ಕೆ ಗೋಸ್ವರ್ಗ ಸಂಸ್ಥಾನದ ಎಲ್ಲ ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು ಅತ್ಯುತ್ತಮ ಸಹಕಾರ ನೀಡಿದರು.
ಶಿಬಿರಾರ್ಥಿಗಳ ಊಟೋಪಚಾರ ಮತ್ತು ವಸತಿ ವ್ಯವಸ್ಥೆಗಳನ್ನು ಅತ್ಯಂತ ಮುತುವರ್ಜಿಯಿಂದ ನೋಡಿಕೊಂಡ ಜನ ಸಂತೋಷ ವಿಭಾಗದ ಶ್ರೀ ಆದರ್ಶ ಭಟ್ ಅವರ ಸಹಕಾರವು ಶಿಬಿರಾರ್ಥಿಗಳ ವಿಶೇಷ ಮೆಚ್ಚುಗೆ ಗಳಿಸಿತು.
ಶಿರಸಿಯ ಶ್ರೀಮತಿ ಪ್ರತಿಭಾ ಅಂಗಡಿ ಮತ್ತು ಶ್ರೀಮತಿ ಯಮುನಾ ಹೆಗಡೆ ಅವರು ಶಿಬಿರದುದ್ದಕ್ಕೂ ಸ್ವಯಂಸೇವಕಿಯರಾಗಿ ಸಕ್ರಿಯವಾಗಿ ಪಾಲ್ಗೊಂಡು ಶಿಬಿರದ ಯಶಸ್ಸಿಗಾಗಿ ತಮ್ಮ ಅನನ್ಯ ಸೇವೆ ಸಲ್ಲಿಸಿ ಮೆಚ್ಚುಗೆ ಗಳಿಸಿದರು.

 

ಶಿಬಿರದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಭಾರತೀಯ ಗೋಪರಿವಾರ ಕರ್ನಾಟಕದ ವತಿಯಿಂದ ಅನಂತ ವಂದನೆಗಳು.

Author Details


Srimukha

1 thought on “ಗೋಸ್ವರ್ಗದಲ್ಲಿ ಪಂಚಗವ್ಯ ಪ್ರಶಿಕ್ಷಣ ಶಿಬಿರ : ಗೋಸೇವೆಯ ನೈಜ ಅನುಭವ ಪಡೆದ ಶಿಬಿರಾರ್ಥಿಗಳು

  1. ತುಂಬ ಸುಂದರವಾಗಿ ನಿರೂಪಿತವಾದ ವರದಿ… ಧನ್ಯವಾದಗಳು ‌‌

Leave a Reply

Your email address will not be published. Required fields are marked *