ಬೆಂಗಳೂರು:- ಗೋಕರ್ಣದ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ತಕ್ಷಣ ಶ್ರೀರಾಮಚಂದ್ರಾಪುರಮಠಕ್ಕೆ ಹಸ್ತಾಂತರಿಸುವಂತೆ ಘನ ಸರ್ವೋಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠ ಆದೇಶಿಸಿದೆ. ಶ್ರೀಮಠ ಸಲ್ಲಿಸಿದ್ದ ನ್ಯಾಯಾಂಗನಿಂದನೆ ಅರ್ಜಿಯನ್ನು ಇಂದು ಮಾನ್ಯ ಮಾಡಿದ ಘನ ಸರ್ವೋಚ್ಚ ನ್ಯಾಯಾಲಯ ; ಸರ್ಕಾರದ ಕ್ರಮದ ಕುರಿತಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ದೇವಾಲಯವನ್ನು ಶ್ರೀಮಠಕ್ಕೆ ತಕ್ಷಣ ಹಸ್ತಾಂತರಿಸುವಂತೆ ಆದೇಶ ನೀಡಿದೆ.
ಸೆಪ್ಟೆಂಬರ್ ೧೯ ರ ವರೆಗೂ ದೇವಾಲಯ ಶ್ರೀಮಠದ ಆಡಳಿತದಲ್ಲೇ ಇತ್ತು, ಅಲ್ಲಿಯವರೆಗೂ ಯಾವುದೇ ಆಡಳಿತಾಧಿಕಾರಿಯ ಪ್ರಭಾರ ಇರಲಿಲ್ಲ. ಸೆ. ೭ ರ ಯಥಾಸ್ಥಿತಿಯನ್ನು ಮುಂದುವರಿಸುವಂತೆ ನ್ಯಾಯಾಲಯದ ಆದೇಶ ಇದ್ದರೂ ಸರ್ಕಾರ ದೇವಾಲಯವನ್ನು ವಶಪಡಿಸಿಕೊಂಡಿರುವುದು ಸರಿಯಲ್ಲ. ಇದು ಸ್ಪಷ್ಟ ನ್ಯಾಯಾಂಗ ನಿಂದನೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಸೋಮವಾರದ ಒಳಗಾಗಿ ದೇವಾಲಯದ ಆಭರಣ ಸೇರಿದಂತೆ ಸಮಸ್ತ ಚರ ಹಾಗೂ ಸ್ಥಿರಾಸ್ಥಿಗಳನ್ನು ಒಳಗೊಂಡಂತೆ ಸಮಗ್ರ ಆಡಳಿತವನ್ನು ಶ್ರೀಮಠಕ್ಕೆ ಹಸ್ತಾಂತರಿಸುವಂತೆ ಕಟ್ಟುನಿಟ್ಟಾದ ಸೂಚನೆ ನೀಡಿದೆ.
ಸರ್ಕಾರಕ್ಕೆ ೩ ನೇ ಬಾರಿ ಮುಖಭಂಗ:
ಗೋಕರ್ಣ ಮಹಾಬಲೇಶ್ವರ ದೇವಾಲಯದ ಆಡಳಿತಕ್ಕೆ ಸಂಬಂಧಿಸಿ, ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸಮ್ಮುಖದಲ್ಲಿ ೩ ನೇ ಬಾರಿಗೆ ಸರ್ಕಾರಕ್ಕೆ ಮುಖಭಂಗವಾಗಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದರೂ, ಸರ್ಕಾರ ಕಾನೂನು ಬಾಹಿರವಾಗಿ ದೇವಾಲಯವನ್ನು ವಶಪಡಿಸಿಕೊಂಡಿತ್ತು ಹಾಗೂ ಪುನರ್ಹಸ್ತಾಂತರದ ನಾಟಕವಾಡಿತ್ತು. ಇದೀಗ ಇಂದಿನ ಆದೇಶದಂತೆ ಸೋಮವಾರದ ಒಳಗಾಗಿ ಆಡಳಿತವನ್ನು ಹಸ್ತಾಂತರಿಸದೇ ಇದ್ದರೆ ತೀವ್ರ ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನು ಮಾನ್ಯ ನ್ಯಾಯಮೂರ್ತಿ ಖಾನ್ವಿಲ್ಕರ್ ನೀಡಿದ ಪ್ರಸಂಗ ಕ್ಕೂ ನ್ಯಾಯಾಲಯ ಸಾಕ್ಷಿಯಾಯಿತು. ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡ ನ್ಯಾಯಾಲಯ, ಮುಂಜಾಗರುತಾ ಕ್ರಮವಾಗಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಹಾಗೆಯೇ ಇರಿಸಿಕೊಂಡು, ಈ ಆದೇಶವನ್ನು ನೀಡಿರುವುದು ವಿಶೇಷವಾಗಿದೆ.
ಭಾರತ ಸರ್ಕಾರದ ಸಾಲಿಸಿಟರ್ ಜನರಲ್ ಶ್ರೀ ತುಷಾರ್ ಮೆಹ್ತಾ ಶ್ರೀಮಠದ ಪರವಾಗಿ ವಾದಮಂಡಿಸಿದರು.
ಗೋಕರ್ಣ ದೇವಾಲಯದ
ಆಡಳಿತ ನಿರ್ವಹಣೆಯನ್ನು ಶ್ರೀಮಠಕ್ಕೆ ವಹಿಸುವಂತೆ ಮಾನ್ಯ ಸರ್ವೋಚ್ಛ ನ್ಯಾಯಾಲಯ ಇದೀಗ ೩ನೇ ಬಾರಿ ಸರ್ಕಾರಕ್ಕೆ ಸೂಚಿಸಿದ್ದು, ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಶಿರಸಾವಹಿಸಿ ಪಾಲಿಸಬೇಕಾದ ಕರ್ತವ್ಯವಿರುವ ಸರ್ಕಾರ, ಈ ಬಾರಿಯಾದರೂ *ಯಾವುದೇ ಒತ್ತಡಕ್ಕೆ ಮಣಿಯದೇ, ನ್ಯಾಯಾಲಯದ ಆದೇಶವನ್ನು ಯಥಾವತ್ತಾಗಿ ಪಾಲಿಸಲಿ ಎಂಬ ಆಗ್ರಹ ಶ್ರೀರಾಮಚಂದ್ರಾಪುರಮಠದ್ದು.
ಹರೇ ರಾಮ
ಚೆನ್ನಾಗಿದೆ.. ಶ್ರೀಮುಖ ಶಿಷ್ಯರಿಗೆ ಅತೀ ಅಗತ್ಯವಾಗಿದೆ..
ಶ್ರೀಮುಖವು ಬೆಳೆಯಲಿ, ಬೆಳಗಲಿ, ನಮ್ಮನ್ನೆಲ್ಲ ಬೆಳಗಿಸಲಿ..
ಹರೇ ರಾಮ..