ನೀರ್ಚಾಲು: ಗ್ರಾಮೀಣ ಜನತೆಯ ಆರೋಗ್ಯ ರಕ್ಷಣೆಗಾಗಿ ಮುಜುಂಗಾವು ಶ್ರೀಭಾರತೀ ನೇತ್ರಚಿಕಿತ್ಸಾಲಯವು ವಿವಿಧೆಡೆ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ದೃಷ್ಟಿದೋಷದಿಂದ ಬಳಲುತ್ತಿರುವವರಿಗೆ ನೆರವಾಯಿತು.
ಹಲವಾರು ಸಮಾಜಮುಖಿ ಯೋಜನೆಗಳ ಮೂಲಕ ಶ್ರೀಮಠವು ಗುರುತಿಸಿಕೊಂಡಿದೆ. ಶ್ರೀಮಠ ಹಾಗೂ ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ಸಮಾಜಸೇವೆ ಕೈಗೊಂಡಿರುವ ಶಿಷ್ಯವರ್ಗವೂ ಈ ರೀತಿಯ ಕಾರ್ಯಕ್ರಮಗಳ ಮೂಲಕ ಜನಸೇವೆ ನಡೆಸುತ್ತಿದೆ.
ಮುಜುಂಗಾವಿನಲ್ಲಿರುವ ಶ್ರೀ ಧರ್ಮಚಕ್ರ ಟ್ರಸ್ಟ್(ರಿ)ನ ಶ್ರೀಭಾರತೀ ನೇತ್ರಚಿಕಿತ್ಸಾಲಯವು ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಇವರ ಆಶ್ರಯದಲ್ಲಿ ಹಾಗೂ ನಬಾರ್ಡ್, ಮುಗು ಜಲಾನಯನ ಪದ್ಧತಿ, ನೀರ್ಚಾಲು ಇವರ ಪ್ರಾಯೋಜಕತ್ವದಲ್ಲಿ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ, ಭಾನುವಾರ ಉಚಿತ ನೇತ್ರ ತಪಾಸಣಾ ಶಿಬಿರ ನಡೆಸಿತು. ಶಿಬಿರವನ್ನು ಉದ್ಘಾಟಿಸಿದ ಮುಳ್ಳೇರಿಯ ಮಂಡಲ ಅಧ್ಯಕ್ಷ ಪ್ರೊ.ಶ್ರೀಕೃಷ್ಣ ಭಟ್ ಮಾತನಾಡಿ, ಗುರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದಾಗ ಜೀವನದಲ್ಲಿ ಯಶಸ್ಸು ಸಾಧ್ಯ ಎಂದರು.
ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಶ್ರೀ ಕೆ.ಎನ್.ಕೃಷ್ಣ ಭಟ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಜುಂಗಾವು ಶ್ರೀ ಭಾರತೀ ನೇತ್ರಚಿಕಿತ್ಸಾಲಯದ ಆಡಳಿತಾಧ್ಯಕ್ಷ ಡಾ| ಶ್ರೀಧರ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿ ಡಾ| ಆನಂದ ಎಸ್. ಹಂದೆ ದೃಷ್ಟಿದೋಷದ ಕುರಿತು ವಿವರವಾಗಿ ತಿಳಿಸಿದರು. ಸಂಚಾಲಕ ಶ್ರೀ ಎಸ್.ಎನ್. ಭಟ್ ಅರ್ಜುನಗುಳಿ ಮಾತನಾಡಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈಗಾಗಲೇ 550ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ನೇತ್ರ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ. ಇನ್ನು ಮುಂದೆಯೂ ಸಂಘಸಂಸ್ಥೆಗಳು ನಮ್ಮೊಂದಿಗೆ ಕೈಜೋಡಿಸಿ ಬಡಜನತೆಗೆ ನೆರವಾಗಬೇಕು ಎಂದರು.
ನಿವೃತ್ತ ಅಧ್ಯಾಪಕ ಶ್ರೀ ಅಪ್ಪಣ್ಣ ಮಾಸ್ತರ್ ಶುಭಾಶಂಸನೆಗೈದರು. ಖ್ಯಾತ ಹವ್ಯಾಸಿ ಯಕ್ಷಗಾನ ಕಲಾವಿದರಾದ ಶ್ರೀ ಬಾಲಕೃಷ್ಣ ಆಚಾರ್ಯ ನೀರ್ಚಾಲು ಇವರು ನೇತ್ರ ತಪಾಸಣೆ ಮಾಡಿಸಿಕೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, “ಹಳ್ಳಿ ಪ್ರದೇಶದಲ್ಲಿ ಇಂತಹ ಉಚಿತ ಶಿಬಿರಗಳ ಮೂಲಕ ಜನರ ಸೇವೆ ಮಾಡುವ ನೇತ್ರ ಚಿಕಿತ್ಸಾಲಯದ ಚಟುವಟಿಕೆ ಬಹಳ ಶ್ಲಾಘನೀಯ” ಎಂದು ನುಡಿದರು.
ಮುಗು ಜಲಾನಯನ ಪದ್ಧತಿಯ ಅಧ್ಯಕ್ಷ ಶ್ರೀ ಜಯದೇವ ಖಂಡಿಗೆ ಸ್ವಾಗತಿಸಿ, ಕಾರ್ಯದರ್ಶಿ ಶ್ರೀ ಎಚ್.ಎಂ.ಶಿವಪ್ರಸಾದ್ ಧನ್ಯವಾದವನ್ನಿತ್ತರು. ಶ್ರೀಮತಿ ಸವಿತಾ ಎಸ್.ಎನ್. ಭಟ್ ಅರ್ಜುನಗುಳಿ ನಿರೂಪಣೆಗೈದರು.
ನೂರಕ್ಕೂ ಅಧಿಕ ಸಾರ್ವಜನಿಕರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.