ಗಿರಿನಗರ: ಸಮುದಾಯಕ್ಕೆ ಮುಂದಾಳುತ್ವವಿದ್ದಾಗ ವ್ಯವಸ್ಥೆ ಉತ್ತಮವಾಗಿ ಮುನ್ನಡೆಯುತ್ತದೆ. ದೈವ ನಿರ್ಣಯದ ಮುಂದೆ ಬೇರಾವುದೂ ಇಲ್ಲ. ಮಾಡುವ ಕಾರ್ಯದಲ್ಲಿ ವಿವೇಚನೆ ಅಗತ್ಯವಿದೆ. ತ್ಯಾಗವಿಲ್ಲದೆ ನಾಯಕತ್ವ ಇರಲು ಸಾಧ್ಯವಿಲ್ಲ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.
ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ಹದಿನೈದನೇ ದಿನ ಆಶೀರ್ವಚನ ನೀಡಿದರು.
ದೇಸೀ ತುಪ್ಪದ ಪ್ರಭಾವವನ್ನು ಪುರಾಣ ಕಾಲದಲ್ಲಿ ಕಾಣಬಹುದಾಗಿದೆ. ಮಂತ್ರಿಗಳು ಸಮಾಜದ ಶ್ರೇಯಸ್ಸನ್ನು ಬಯಸುವವರಾಗಿರಬೇಕು. ಬೂದಿಗೂ ಚಿಗುರಿಗೂ ಬಹಳಷ್ಟು ಸಂಬಂಧವಿದೆ. ಸಂಸ್ಕಾರ ಸಹಿತವಾದ ಶಿಕ್ಷಣ ಮಕ್ಕಳಿಗೆ ಸಿಗುವ ಕಾರ್ಯವಾಗಬೇಕು. ಅಡಿಪಾಯವಿಲ್ಲದೆ ಇದ್ದರೆ ಗೋಡೆ ನಿಲ್ಲಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಶ್ರೀರಾಮ ವಿಶ್ವಾಮಿತ್ರರ ಆಶ್ರಮದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದ. ಅಲ್ಲಿ ತನ್ನ ಸೂರ್ಯ ವಂಶದ ಬಗ್ಗೆ ತಿಳಿದುಕೊಳ್ಳುವ ಕಾರ್ಯ ಮಾಡುತ್ತಿದ್ದ. ಭಗೀರಥನ ಮಹಾ ಪ್ರಯತ್ನದ ಫಲವಾಗಿ ಗಂಗೆ ಭೂಮಿಗೆ ಹರಿದಳು ಎಂಬ ಸಮಗ್ರ ಚಿತ್ರಣವನ್ನು ಪ್ರವಚನದಲ್ಲಿ ವಿವರಿಸಿದರು.
ಧರ್ಮಕರ್ಮ ಖಂಡದ ಶ್ರೀಸಂಯೋಜಕ ರಾಮಕೃಷ್ಣ ಕೂಟೇಲು ಪ್ರಸ್ತಾವನೆಗೈದರು. ವಿನಾಯಕ ಎನ್ ಭಟ್ ಕಾರ್ಯಕ್ರಮ ನಿರೂಪಿಸಿದರು.