ಪಾದ ಎಲ್ಲಕ್ಕಿಂತ ಕೆಳಗೆ, ರಾಮನ ಪಾದುಕೆ ಎಲ್ಲಕ್ಕಿಂತ ಮೇಲೆ. ’ರಾಮನ ಕಾಲಕೆಳಗಿರುವುದನ್ನು ತನ್ನ ತಲೆಯ ಮೇಲಿಟ್ಟುಕೊಂಡಾಗ ರಾಮನೆಷ್ಟು ಮೇಲೆ, ತಾನೆಷ್ಟು ಕೆಳಗೆ ’. ಭರತನಲ್ಲಿ ರಾಮನ ಭಾವ.
ನಾನು ದೊರೆಯಾಗಲಾರೆ. ನನ್ನಣ್ಣನಾಗಬೇಕು. ರಾಮನಿಗೆ ಭರತನಾಗಬೇಕು ಎನ್ನುವ ಆಸೆ. ಇಬ್ಬರೂ ದೊರೆಯಾಗಲಿಲ್ಲ. ಸಿಂಹಾಸನದ ಮೇಲೆ ಪಾದುಕೆಯನ್ನಿಟ್ಟ. ಪಾದುಕಾರಾಜ್ಯಕ್ಕೆ ರಾಮನ ಒಪ್ಪಿಗೆ. ಪಾದುಕಾ ಸ್ಪರ್ಶಕ್ಕೆ ಚೈತನ್ಯ.
ಶ್ರೀ ಶಂಕರಾಚಾರ್ಯರ ಸಂಕಲ್ಪ ನಮ್ಮ ಮಠ. ರಾಮ ಪಾದುಕೆಯನ್ನು ಕೊಟ್ಟು, ತನ್ನನ್ನಿಟ್ಟು ಕಳುಹಿಸಿದ. ಭರತ ಪಟ್ಟದಾನೆಯ ಮೇಲೆ ನೆತ್ತಿಯನಿಟ್ಟು, ಅದರ ಮೇಲೆ ಪಾದುಕೆಯನಿಟ್ಟು ರಥವೇರಿ ಅಯೋಧ್ಯೆಗೆ ಪ್ರಯಾಣ. ಅಣ್ಣ, ತಂದೆ ಇಲ್ಲದ ನೋವು.
ಅಯೋಧ್ಯೆ ಸ್ಮಶಾನ ಮೌನ. ಯಜ್ಞಾಗ್ನಿಶಿಖೆಯಂತೆ, ಜಲತರಂಗದಂತೆ, ಅಂಬರದಿಂದ ಧರೆಗಿಳಿದ ತಾರೆಯಂತೆ, ನಕ್ಷತ್ರಗಳನ್ನು ಮೋಡ ಮುಚ್ಚಿದಂತಿತ್ತು. ಭರತ ರಾಮನ ಪಾದುಕೆಯೊಂದಿಗೆ ನಂದಿಗ್ರಾಮಕ್ಕೆ ಬಂದು ರಾಮನಂತೆ ಹಣ್ಣುಹಂಪಲು ತಿನ್ನುತ್ತಾ ೧೪ ವರ್ಷ ರಾಜ್ಯಭಾರ ಮಾಡಿದ.
ಪಾದುಕಾರಾಜ್ಯವು ರಾಮರಾಜ್ಯಕ್ಕಿಂತ ಶ್ರೇಷ್ಠವಾದುದು. ನಮಗೆ ರಾಮನಾಗಲು ಸಾಧ್ಯವಿಲ್ಲದಿದ್ದರೂ ಭರತರಾಗೋಣ. ಅಯೋಧ್ಯೆಯನ್ನು ರಾಮನಾಳಲಿ, ನಮ್ಮನ್ನು ಭರತನಾಳಲಿ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಧಾರಾ ರಾಮಾಯಣ ಪ್ರವಚನದಲ್ಲಿ ಹೇಳಿದರು.