ಕಾಸರಗೋಡು: ಬಕ್ರೀದ್ ಹಿನ್ನೆಲೆಯಲ್ಲಿ ಕಸಾಯಿಗೆಂದು ಮಧ್ಯವರ್ತಿಯೊಬ್ಬ ಆಂಧ್ರ ಪ್ರದೇಶದಿಂದ ತರಿಸಿ ರಸ್ತೆ ಬದಿಯಲ್ಲಿ ಕಟ್ಟಿದ್ದ ಓಂಗೋಲ್ ತಳಿಯ 5 ಹೋರಿಗಳನ್ನು ಶ್ರೀರಾಮಚಂದ್ರಾಪುರ ಮಠದ ಗೋ ಸಂಜೀವಿನಿ ವಿಭಾಗದಿಂದ ಖರೀದಿಸುವ ಮೂಲಕ ರಕ್ಷಿಸಲಾಯಿತು.
ಕಾಸರಗೋಡು ಬೇಕಲ ಸಮೀಪದ ಚಿತ್ತಾರಿಯ ರಸ್ತೆ ಬದಿಯಲ್ಲಿ ಅಮಾನುಶವಾಗಿ ಗೋವುಗಳನ್ನು ಕಟ್ಟಿರುವ ವಿಚಾರವನ್ನು ಗಮನಿಸಿದ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ನಿರ್ದೇಶನದ ಮೇರೆಗೆ ವಿಷ್ಣು ಪೂಚೆಕ್ಕಾಡು ಅವರ ಉಸ್ತುವಾರಿಯಲ್ಲಿ ರಕ್ಷಣೆ ಮಾಡಲಾಯಿತು.
ಗೋಪ್ರೇಮಿಗಳಿಂದ ದೇಣಿಗೆ ಸಂಗ್ರಹಿಸುವ ಮೂಲಕ ಗೋಸಂಜೀವಿನಿ ವಿಭಾಗದಿಂದ ಗೋವುಗಳ ರಕ್ಷಣೆ ಮಾಡಲಾಯಿತು. ಆಲಕ್ಕೋಡು ಗೋಕುಲಂ ಗೋಶಾಲೆಗೆ ತಾತ್ಕಾಲಿಕವಾಗಿ ಕೊಂಡೊಯ್ದಿದ್ದು, ಬಾನುಕುಳಿ ಗೋಸ್ವರ್ಗಕ್ಕೆ ಕೊಂಡೊಯ್ಯಲಾಗುತ್ತದೆ. ಗೋಕುಲಂ ಗೋಶಾಲೆಯಲ್ಲಿ ಶ್ರೀಧರ ಹೆಗಡೆ ಅವರು ಗೋಪೂಜೆ ಮಾಡುವ ಮೂಲಕ ಸ್ವಾಗತಿಸಲಾಯಿತು.
ಸ್ಥಳೀಯರಾದ ಗಣಪತಿ ಹೆಗಡೆ, ಸುಬ್ರಹ್ಮಣ್ಯ, ರಾಮಚಂದ್ರಾಪುರ ಮಠ ಕಾಮದಘಾ ವಿಭಾಗದ ಡಾ. ವೈ. ವಿ. ಕೃಷ್ಣ ಮೂರ್ತಿ, ಗೋಸಂಶೋಧನಾ ವಿಭಾಗದ ಜಯಪ್ರಕಾಶ ಲಾಡ, ಗೋಶಾಲೆ ಉಸ್ತುವಾರಿ ತಿರುಮಲೇಶ್ವರ ಪ್ರಸನ್ನ, ಮುಷ್ಠಿಭಿಕ್ಷೆ ಯೋಜನೆಯ ಶ್ರೀಕೃಷ್ಣ ಮೀನಗದ್ದೆ, ಮುರಳಿ ಎನ್. ಹಾಜರಿದ್ದರು.
ವ್ಯಾಪಾರಕ್ಕಾಗಿ ಪ್ರದರ್ಶನ:
ಕಾಸರಗೋಡು ಆಸುಪಾಸಿನಲ್ಲಿ ರಸ್ತೆ ಬದಿಯಲ್ಲಿ ಗೋವುಗಳನ್ನು ಪ್ರದರ್ಶನಕ್ಕೆ ಇಡುವ ಮೂಲಕ ಮಾರಾಟ ಮಾಡಲಾಗುತ್ತಿದೆ. ಹಿಂಸಾತ್ಮಕವಾಗಿ ರಸ್ತೆ ಬದಿಯಲ್ಲಿ ಪ್ರದರ್ಶನಕ್ಕೆ ಇಡುತ್ತಿದ್ದರೂ ಯಾವೊಂದೂ ಪ್ರಾಣಿದಯಾ ಸಂಘಗಳಾಗಲೀ, ಸಂಘಟನೆಗಳಾಗಲೀ ಮಾತನಾಡದೇ ಇರುವುದು ಶೋಚನೀಯವಾಗಿದೆ.
ಗೋಸಂಜೀವಿನಿ ಯೋಜನೆಯಡಿ ಖರೀದಿ:
ಕಟುಕರ ಪಾಲಾಗುವ ಭಾರತೀಯ ತಳಿಯ ಗೋವುಗಳು ಹಾಗೂ ಎತ್ತುಗಳನ್ನು ಖರೀದಿಸಿ, ಅವುಗಳನ್ನು ಶ್ರೀಮಠದ ಗೋಶಾಲೆಯಲ್ಲಿ ಪೋಷಿಸುವ ಸಲುವಾಗಿಯೇ ಶ್ರೀರಾಮಚಂದ್ರಾಪುರ ಮಠ ಗೋಸಂಜೀವಿನಿ ಯೋಜನೆಯನ್ನು ಆರಂಭಿಸಿದೆ. ಮಲೆಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ತಮಿಳುನಾಡಿನ ಆಡಿ ಜಾತ್ರೆಯಲ್ಲಿ ಮಾರಾಟವಾಗಲಿದ್ದ 1500ಕ್ಕೂ ಹೆಚ್ಚು ಗೋವುಗಳನ್ನು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಗೋಸಂಜೀವಿನಿ ಯೋಜನೆಯಡಿ ಈ ಹಿಂದೆ ಖರೀದಿಸಿ ಸಂರಕ್ಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.