‘ಗೋವು-ಮಣ್ಣು-ಅಡಿಕೆ’ ಮಾಹಿತಿ ಶಿಬಿರ ಸಂವಾದ

ಸುದ್ದಿ

ಸಿದ್ದಾಪುರ: ಅಧಿಕ ಜ್ಯೇಷ್ಠ ಕೃಷ್ಣ ಅಮಾವಾಸ್ಯೆಯಂದು (15.06.2026) ಗೋಸ್ವರ್ಗದ ಸಂಶೋಧನಾ ಕೇಂದ್ರದಲ್ಲಿ ಶ್ರೀರಾಮಚಂದ್ರಾಪುರ ಮಠದ ಸಂಶೋಧನಾ ಖಂಡ, ಕಾಮದುಘಾ ಟ್ರಸ್ಟ್, ಗೋಫಲ ಟ್ರಸ್ಟ್, ಗೋಸ್ವರ್ಗ, ಶ್ರೀರಾಮದೇವ ಮಠ ಬಾನ್ಕಳಿ ಮತ್ತು ಮಾತೃತ್ವಮ್ ಇವರ ಜಂಟಿ ಆಶ್ರಯದಲ್ಲಿ ‘ಗೋವು-ಮಣ್ಣು-ಅಡಿಕೆ’ ಕುರಿತ ಮಾಹಿತಿ ಶಿಬಿರ ಮತ್ತು ಕೃಷಿ ಸಂವಾದ ಕಾರ್ಯಕ್ರಮವು ವಿಜಯವಾಗಿ ನೆರವೇರಿತು.

 

ಕೃಷಿ ಇಲಾಖೆ ಸಿದ್ದಾಪುರ, ಕೆ.ವಿ.ಕೆ. ಶಿರಸಿ ಹಾಗೂ ತೋಟಗಾರಿಕೆ ಇಲಾಖೆ ಸಹಕಾರದೊಂದಿಗೆ ವನಮಹೋತ್ಸವದ ಮೂಲಕ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಸಂಶೋಧನಾ ಖಂಡದ ಸಂಯೋಜಕ ಡಾ. ಜಯಪ್ರಕಾಶ್ ಲಾಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳು, ಸಂಪನ್ಮೂಲ ವ್ಯಕ್ತಿಗಳು ಮತ್ತು ಕೃಷಿಕರನ್ನು ಸ್ವಾಗತಿಸಿದರು.

ಗೋಸ್ವರ್ಗದ ಗೌರವಾಧ್ಯಕ್ಷ ಆರ್. ಎಸ್. ಹೆಗಡೆ ಹರಗಿ ಅಧ್ಯಕ್ಷತೆಯ ಸಭೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಮಾ ಅವರು ಗೋಮಯ ರಾಶಿಗೆ ಆರತಿ ಬೆಳಗುವ ಮೂಲಕ ಉದ್ಘಾಟಿಸಿ, ಸಾವಯವ ಕೃಷಿಗೆ ಸರಕಾರದ ನೆರವು, ಗೋಸ್ವರ್ಗವು ಕೇಂದ್ರ ಸರಕಾರದ ಜೈವಿಕ ಸಂಪನ್ಮೂಲ ಕೇಂದ್ರವಾಗಿ ಆಯ್ಕೆಯಾಗಿರುವ ಹೆಮ್ಮೆಯ ಬಗ್ಗೆ ತಿಳಿಸಿ, ಜಿಲ್ಲೆಯಲ್ಲೇ ಉತ್ತಮ ಕಾರ್ಯನಿರ್ವಹಣೆಯ ಕೇಂದ್ರವೆಂದು ಶ್ಲಾಘಿಸಿದರು.

ಹವ್ಯಕ‌ ಮಹಾಮಂಡಲದ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ ಅವರು ದೇಶಿ ಗೋವುಗಳ ತಳಿಗಳ ಬಗ್ಗೆ ಮಾಹಿತಿ ನೀಡಿದರೆ, ನಿವೃತ್ತ ಸಹಾಯಕ ನಿರ್ದೇಶಕ ಶಂಕರ್ ಹೆಗಡೆ ಮಣ್ಣಿನ ಗುಣಗಳು ಮತ್ತು ಪ್ರಾಮುಖ್ಯತೆ ಕುರಿತು ಬೆಳಕು ಚೆಲ್ಲಿದರು. ಕೆ.ವಿ.ಕೆ. ವಿಜ್ಞಾನಿಗಳಾದ ಡಾ. ಶ್ವೇತಾ ಕುಮಾರಿ ಮತ್ತು ಡಾ. ಅಮಿತ್ ಪೂಜಾರ ಅವರು ಕ್ರಮವಾಗಿ ಸಾವಯವ ಗೊಬ್ಬರ ತಯಾರಿಕೆ, ಮಣ್ಣಿನ ಆರೋಗ್ಯ, ಅಡಿಕೆ ಬೆಳೆಯ ಎಲೆಚುಕ್ಕಿ ಮತ್ತು ಕೊಳೆ ರೋಗಗಳ ನಿಯಂತ್ರಣ ಹಾಗೂ ಬೋರ್ಡೋ ದ್ರಾವಣದ ಸರಿಯಾದ ತಯಾರಿಕಾ ವಿಧಾನವನ್ನು ವಿವರಿಸಿದರು.

ಗೋಫಲ್ ಟ್ರಸ್ಟ್‌ನ ಬಾಲಸುಬ್ರಹ್ಮಣ್ಯ ಅವರು ಗವ್ಯ ಉತ್ಪನ್ನಗಳ ವೈಜ್ಞಾನಿಕ ಆಧಾರ ಮತ್ತು ಎಲೆಚುಕ್ಕಿ ರೋಗ ಹತೋಟಿಯ ಧನಾತ್ಮಕ ಫಲಿತಾಂಶಗಳನ್ನು ಪ್ರಸ್ತುತಪಡಿಸಿದರು. ಮಧ್ಯಾಹ್ನದ ಕೃಷಿ ಸಂವಾದದಲ್ಲಿ ಕೃಷಿಕರ ಸಂಶಯಗಳನ್ನು ಡಾ. ಗುರುರಾಜ್ ಪಡೀಲು ಅವರು ಸಂಪನ್ಮೂಲ ವ್ಯಕ್ತಿಗಳ ಮೂಲಕ ಪರಿಹರಿಸಿದರು. ಅನಂತರ ಗೋಸ್ವರ್ಗದ ಆದರ್ಶ, ಬಾಲಚಂದ್ರ ಹೆಗಡೆ, ಮಂಜುನಾಥ ಅವರು ಜೀವಾಮೃತ, ಘನಜೀವಾಮೃತ, ಫಿನಾಯಿಲ್ ತಯಾರಿಕೆಯ ಪ್ರಾತ್ಯಕ್ಷಿಕೆ ನೀಡಿದರು.

ಸಮಾರೋಪಕ್ಕೂ ಮುನ್ನ ವಿಜಯ ಗಂಗಾಧರ್ ಅವರ ಗೋಗೀತೆಯ ಗಾಯನ ಸಭಿಕರನ್ನು ಮುದಗೊಳಿಸಿತು. ಸಮಾರೋಪದಲ್ಲಿ ಗೋಸ್ವರ್ಗದ ಅಧ್ಯಕ್ಷ ಎಮ್. ಜಿ. ರಾಮಚಂದ್ರ ಅಧ್ಯಕ್ಷತೆ ವಹಿಸಿ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *