ನಂತೂರು: ವಿದ್ಯಾರ್ಥಿ ಜೀವನದಲ್ಲಿ ದೊರಕುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡಾಗ ಗುರಿಯನ್ನು ತಲುಪಲು ಸಾಧ್ಯ. ಸಂಸ್ಕೃತಿಯುಕ್ತ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಅವಕಾಶ ನೀಡುವ ಭಾರತೀ ವಿದ್ಯಾಸಂಸ್ಥೆಯ ಕಾರ್ಯ ಶ್ಲಾಘನೀಯ. ಸಂಸ್ಕೃತಿಯುಕ್ತ ಶಿಕ್ಷಣ ಸ್ವಸ್ಥ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಮಹಿಳಾ ಘಟಕದ ಗೌರವಾಧ್ಯಕ್ಷೆ ಆರತಿ ಆರ್.ಆಳ್ವ ಹೇಳಿದರು.
ಅವರು ಮಂಗಳವಾರ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಭವನದಲ್ಲಿ ಶ್ರೀ ಭಾರತೀ ಪದವಿ ಕಾಲೇಜಿನ ಸಾಂಸ್ಕೃತಿಕ ಸಂಘ ಕಲಾಭಾರತಿಯನ್ನು ಉದ್ಘಾಟಿಸಿ, ಲೋಗೋವನ್ನು ಬಿಡುಗಡೆಗೊಳಿಸಿ, ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ಜೀವನ್‌ದಾಸ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿ ಗಳಲ್ಲಿ ಆತ್ಮಸ್ಥೈರ್ಯವನ್ನು ತುಂಬುತ್ತದೆ. ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ ಆದರೆ ವಿದ್ಯಾರ್ಥಿಗಳು ಸೋಲೇ ಗೆಲುವಿನ ಸೋಪಾನ ಎಂದುಕೊಂಡು ಬದುಕಿನಲ್ಲಿ ಮುನ್ನಡೆಯಬೇಕು ಎಂದು ಮಾರ್ಗದರ್ಶನ ಮಾಡಿದರು.
ಶ್ರೀ ಭಾರತೀ ಸಮೂಹ ಸಂಸ್ಥೆಗಳ ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್ ಅವರು ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರುವ ಚಟುವಟಿಕೆಗಳು ಅವಶ್ಯ. ನಮ್ಮ ಸಂಸ್ಥೆ ಈ ರೀತಿಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಯೋಜಿಸುತ್ತಿದೆ ಎಂದರು.
ಉಪಪ್ರಾಂಶುಪಾಲರೂ ವಿದ್ಯಾರ್ಥಿ ಕ್ಷೇಮಪಾಲಕರೂ ಆದ ಗಂಗಾರತ್ನ ಮುಗುಳಿ, ಲೋಗೋವನ್ನು ವಿನ್ಯಾಸಗೊಳಿಸಿದ ಚಿತ್ರಕಲಾ ಅಧ್ಯಾಪಕ ಸುಂದರ ಮತ್ತು ಸುಮಂತ್ ಉಪಸ್ಥಿತರಿದ್ದರು. ಬಳಿಕ ದ್ವಿತೀಯ ಬಿ.ಕಾಂ. ಮತ್ತು ಬಿ.ಸಿ.ಎ. ವಿದ್ಯಾರ್ಥಿಗಳಿಂದ ಪ್ರತಿಭಾಪ್ರದರ್ಶನ ನಡೆಯಿತು. ತೀರ್ಪುಗಾರರಾಗಿ ಆರತಿ ಆರ್.ಆಳ್ವ, ಗಂಗಾರತ್ನ ಮುಗುಳಿ ಹಾಗೂ ವಾಣಿಜ್ಯಶಾಸ್ತ್ರ ಉಪನ್ಯಾಸಕ ಅಶೋಕ ಎಸ್. ಸಹಕರಿಸಿದರು.
ವಾಣಿಜ್ಯ ಉಪನ್ಯಾಸಕ, ಕಲಾಭಾರತಿ ಸಂಯೋಜಕ ಪ್ರವೀಣ ಪಿ. ಪ್ರಸ್ತಾವಿಸಿ, ಇಂದಿನ ಶಿಕ್ಷಣ ವಿದ್ಯಾರ್ಥಿಗಳಿಗೆ ಕೇವಲ ಪಠ್ಯಪುಸ್ತಕದ ಜ್ಞಾನವನ್ನು ನೀಡುತ್ತಿದೆ. ಆದರೆ ಪಠ್ಯ ಪುಸ್ತಕದ ಜ್ಞಾನದ ಜೊತೆಗೆ ಲೋಕ ಜ್ಞಾನವನ್ನು ನೀಡಿದಾಗ ಮಾತ್ರ ಸಮಾಜದಲ್ಲಿ ಜೀವನೋಪಾಯ ಸಾಧ್ಯ. ವಿದ್ಯಾರ್ಥಿಗಳು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿನಿ ದಿಶಾ ದಿನೇಶ್ ಸ್ವಾಗತಿಸಿದರು. ವಿದ್ಯಾರ್ಥಿನಿ ಅಂಕಿತಾ ನೀರ್ಪಾಜೆ ನಿರೂಪಿಸಿದರು. ವಿದ್ಯಾರ್ಥಿ ಪ್ರಶಾಂತ್ ಗಾಂವ್ಕರ್ ಆಶಯಗೀತೆ ಹಾಡಿದರು. ವಿದ್ಯಾರ್ಥಿನಿ ಗಂಗಾ ಸತ್ಯನಾರಾಯಣ ಹೆಗ್ಡೆ ವಂದಿಸಿದರು.