ಶಕಟಪುರದಲ್ಲಿ ಶ್ರೀಪೂರ್ಣಾಭಿಷೇಕ

ಸುದ್ದಿ

ಶಕಟಪುರ: ಫಾಲ್ಗುನ ಶುಕ್ಲ ಪಂಚಮಿಯಂದು (22-02-2026) ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀಕ್ಷೇತ್ರ ಶಕಟಪುರದ ಶ್ರೀವಿದ್ಯಾಪೀಠದ ಪರಮಪೂಜ್ಯ ಶ್ರೀಜಗದ್ಗುರು ಬದರೀ ಶಂಕರಾಚಾರ್ಯ ಶ್ರೀವಿದ್ಯಾಭಿನವ ಶ್ರೀಶ್ರೀಕೃಷ್ಣಾನಂದತೀರ್ಥ ಮಹಾಸ್ವಾಮಿಗಳವರ ಶ್ರೀವಿದ್ಯಾಮಹಾಸನಾರೋಹಣದ ಶ್ರೀಪೂರ್ಣಾಭಿಷೇಕವನ್ನು ನೆರವೇರಿಸಿದರು.

ಅನಂತರ ಧರ್ಮಸಭೆಯಲ್ಲಿ ಆಶೀರ್ವಚನವನ್ನು ಅನುಗ್ರಹಿಸಿದರು. ‘ಇದು ಜಗತ್ತಿನ ಎಲ್ಲ ಆಸ್ತಿಕರು ಹೆಮ್ಮೆ ಪಡಬೇಕಾದ ಕಾರ್ಯಕ್ರಮ. ಎಲ್ಲ ಸಂತರೂ ಸಮಾಧಾನ ಪಡುವ ಕಾರ್ಯಕ್ರಮ’ ಎಂದು ವೈಭವೋಪೇತವಾಗಿ ನಡೆದ ಶ್ರೀಪೂರ್ಣಾಭಿಷೇಕದ ಬಗ್ಗೆ ನುಡಿದರು.

‘ಇಲ್ಲಿನ ಸಿಂಹಾಸನ ಬಹಳ ದೊಡ್ಡದು. ಏಕೆಂದರೆ ಈ ಪರಂಪರೆಯೂ ಬಹಳ ದೊಡ್ಡದು. ಬದರಿಯಿಂದ ಇಲ್ಲಿಗೆ ಹರಿದ ಗಂಗೆಯಿದು. ಈ ಪರಂಪರೆಯನ್ನು ಏರಿದವರ ವಿದ್ಯೆ, ತಪಸ್ಸು, ಮನಸ್ಸುಗಳು ದೊಡ್ಡವು. ಇಂತಹ ವೈಭವ ಯಾರಿಗಾದರೂ ಬೇಕೆಂದು ಅನಿಸಿದರೆ ಅದಕ್ಕೆ ಶ್ರೀರಾಜರಾಜೇಶ್ವರಿಯೇ ದಾರಿ. ತನ್ನನ್ನು ಆಶ್ರಯಿಸಿದವರಿಗೆ ರಾಜಸಿಂಹಾಸನವನ್ನು ನೀಡುವವಳು ಅವಳು. ಇದೆಲ್ಲ ತಪಸ್ಸು, ಆಚಾರ, ಅನುಷ್ಠಾನಗಳ ಫಲ’ ಎಂದು ನುಡಿದು ಎಲ್ಲರಿಗೂ ತಪಸ್ಸಿನ ದಾರಿಯಲ್ಲಿ ಸಾಗಲು ಉಪದೇಶಿಸಿದರು. ‘ದೀಪವನ್ನು ಎತ್ತರದಲ್ಲಿಟ್ಟು ಎಲ್ಲೆಡೆ ಬೆಳಕು ಪಡೆಯುವಂತೆ ಗುರುವನ್ನು ಎತ್ತರದಲ್ಲಿಟ್ಟು ಎಲ್ಲರೂ ಬೆಳಕು ಪಡೆಯಬೇಕು. ಗುರುವನ್ನು ಸಮಾನಾಂತರದಲ್ಲಿ ಕಾಣುವುದಲ್ಲ, ಗುರುವಿನದ್ದು ಎಂದಿಗೂ ಎತ್ತರದ ಸ್ಥಾನ’ ಎಂದು ಗುರುವಿನ ಮಹತ್ತ್ವವನ್ನು ತಿಳಿಸಿಕೊಟ್ಟರು.

‘ಇಲ್ಲಿ ಕಟ್ಟಿರುವ ಮಾವಿನ ತೋರಣಕ್ಕೆ ಮಾವಿನೆಲೆ ಬಂದದ್ದು ಅಶೋಕೆಯಿಂದ. ಇದು ಮಠಗಳ (ರಾಮಚಂದ್ರಾಪುರ-ಶಕಟಪುರ) ನಡುವಿನ ಬಾಂಧವ್ಯ ತೋರಿಸುತ್ತದೆ. ಶಕಟಪುರದ ಪೂಜ್ಯರ ಆಶಯದಂತೆ ಹೂಬಿಡದ ಮರಗಳಿಂದಲೇ ಎಲೆಗಳನ್ನು ತರಲಾಗಿದೆ. ಗಿಡಮರಗಳ ಮೇಲಿನ ಅವರ ಪ್ರೇಮಕ್ಕೆ ಇದು ಸಾಕ್ಷಿ’ ಎಂದು ತಿಳಿಸಿ ‘ರಾಜಾ ಕೌಶಿಕನು ಮಹರ್ಷಿ ವಸಿಷ್ಠರಲ್ಲಿ ಮಾಡಿದ ವೃಕ್ಷ-ವನಸ್ಪತಿಗಳ ಕುಶಲಪ್ರಶ್ನೆಯನ್ನು ಇದು ನೆನಪಿಸುತ್ತದೆ’ ಎಂದರು.

ಶ್ರೀಪೂರ್ಣಾಭಿಷೇಕದ ಸಂದರ್ಭದಲ್ಲಿ ಶ್ರೀಮಠದಿಂದ ಶಕಟಪುರದ ಪೂಜ್ಯರಿಗೆ ಸೂರ್ಯಚಂದ್ರ-ಲಾಂಛನ ಮತ್ತು ಚಂದ್ರಕಾಂತ-ಮಣಿಹಾರಗಳನ್ನು ಸಮರ್ಪಿಸಲಾಯಿತು. ಅದರ ಬಗ್ಗೆ ಶ್ರೀಸಂಸ್ಥಾನದವರ ನುಡಿ ಹೀಗಿತ್ತು- ‘ಸೂರ್ಯಚಂದ್ರರಿರುವವರೆಗೆ ಈ ಪರಂಪರೆ ಇತೋಪ್ಯತಿಶಯ ವೈಭವದಲ್ಲಿ ಬೆಳಗಬೇಕು. ಈ ಅದ್ವೈತ ಪೀಠಗಳ ಬಾಂಧವ್ಯ ಕೂಡ ಹಾಗೆ ಬೆಳಗಬೇಕು.
ಶಕಟಪುರದ ಪೂಜ್ಯರು ತಪಶ್ಚಕ್ರವರ್ತಿಗಳು. ತಪಸ್ಸಿನ ಕಾವನ್ನು ತಂಪಾಗಿಸಿ ಸದಾ ಶಿಷ್ಯರನ್ನು ಹರಸುತ್ತಿರಲೆಂದು ಈ ಮಣಿ ನೀಡಿದ್ದೇವೆ’.

ಶಕಟಪುರದ ಪರಮಪೂಜ್ಯರು ತಮ್ಮ ಆಶೀರ್ವಚನದಲ್ಲಿ ಉಭಯ ಮಠಗಳ ಬಾಂಧವ್ಯವನ್ನು, ಕಾರ್ಯಕ್ರಮದಲ್ಲಿ ಶ್ರೀರಾಮಚಂದ್ರಾಪುರ ಮಠದ ಶಿಷ್ಯರು ಭಾಗವಹಿಸಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.

Leave a Reply

Your email address will not be published. Required fields are marked *