ಜ್ಞಾನದಾನವೇ ಎಲ್ಲ ಮಠಗಳ ಪ್ರಮುಖ ಕರ್ತವ್ಯ – ಶ್ರೀಸಂಸ್ಥಾನ

ಸುದ್ದಿ

ಮಾಣಿ: ಜ್ಞಾನದಾನವೇ ಎಲ್ಲ ಮಠಗಳ ಪ್ರಮುಖ ಕರ್ತವ್ಯ. ಅದನ್ನು ಮಾಡದಿದ್ದರೆ ಅದು ದೊಡ್ಡ ಲೋಪವಾಗುತ್ತದೆ. ಇಪ್ಪತ್ತು ವರ್ಷದಲ್ಲಿ ತಲೆಮಾರು ಬದಲಾಗಿದೆ; ಇನ್ನು ವಿಳಂಬ ಮಾಡದೇ ಕಾಲಮಿತಿಯಲ್ಲಿ ವಿಶ್ವವಿದ್ಯಾಪೀಠ ಸ್ಥಾಪನೆ ಮಾಡುವ ಸಂಕಲ್ಪ ಇದೀಗ ಕೈಗೂಡುತ್ತಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ಹೇಳಿದರು.

ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠ ಮಹಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮಾರ್ಗದರ್ಶನ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಶ್ರೀಶಂಕರರು ದೇಶ ಪರಿವರ್ತನೆ ಮಾಡಲು ಸಾಧ್ಯವಾದದ್ದು ಜ್ಞಾನದ ಬಲದಿಂದ. ಅತ್ಯುತ್ತಮ ಆರ್ಷವಿದ್ಯಾಕೇಂದ್ರದ ಮೂಲಕ ಹೊಸ ಪೀಳಿಗೆಗೆ ಇಂಥ ಜ್ಞಾನ ಬೋಧಿಸಿ ಧರ್ಮನಿಷ್ಠೆ, ದೇಶನಿಷ್ಠೆ, ಸಂಸ್ಕೃತಿನಿಷ್ಠೆಯನ್ನು ಒಳಗೊಂಡ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವುದು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಉದ್ದೇಶವಾಗಿದೆ. ೨೦೨೦ರ ಏಪ್ರಿಲ್ ೨೬ರಂದು ಅಕ್ಷಯತೃತೀಯ ದಿನದಂದು ಈ ವಿಶ್ವವಿದ್ಯಾಪೀಠ ಲೋಕಾರ್ಪಣೆಯಾಗಲಿದೆ ಎಂದು ಪ್ರಕಟಿಸಿದರು.

 

ಸೇವಾರ್ಥ ಯೋಜನೆಗಳು ಮತ್ತು ಜ್ಞಾನಾರ್ಥ ಯೋಜನೆಗಳು ಮಠದ ಕಾರ್ಯಗಳಲ್ಲಿ ಪ್ರಮುಖವಾದವು. ಶ್ರೀಶಂಕರ ಪರಂಪರೆಯ ೩೬ನೇ ತಲೆಮಾರಿನ ಕೊಡುಗೆಯಾಗಿ ವಿಶ್ವವಿದ್ಯಾಪೀಠ ಸ್ಥಾಪನೆ ಮಾಡುವ ಘೋಷಣೆಯನ್ನು ೧೯೯೯ ಏಪ್ರಿಲ್ ೨೮ರಂದೇ ಮಾಡಲಾಗಿತ್ತು. ಪೀಠಕ್ಕೆ ಬಂದ ದಿನ ಶಿಷ್ಯರ, ಸಮಾಜದ ಮುಂದೆ ಮಾಡಿದ ಘೋಷಣೆ ಇದೀಗ ಅನುಷ್ಠಾನರೂಪಕ್ಕೆ ಬರುತ್ತಿದೆ ಎಂದರು.

 

ಸರ್ಕಾರ, ಸಮಾಜ, ಇತರ ಎಲ್ಲ ಮಠಗಳು ಈ ಕಾರ್ಯವನ್ನು ಎಂದೋ ಮಾಡಬೇಕಿತ್ತು. ಪರಿಪೂರ್ಣವಾದ ಭಾರತೀಯ ವಿದ್ಯೆಗಳ ಕಲಿಕಾ ಕೇಂದ್ರ ಇಲ್ಲ. ಅಂಥ ವಿಶಿಷ್ಟ ಕಾರ್ಯಕ್ಕೆ ಶ್ರೀಮಠ ಮುಂದಾಗಿದೆ. ಶಂಕರರು ಹಿಂದೆ ಅವತಾರವೆತ್ತಿದ್ದ ಕಾರಣ ಇಂದು ಸಮಾಜ ಉಳಿದುಕೊಂಡಿದೆ. ಅವರ ಅವಿಚ್ಛಿನ್ನ ಪರಂಪರೆ ಮುಂದುವರಿಸಿಕೊಂಡು ಬಂದಿರುವ ಶ್ರೀರಾಮಚಂದ್ರಾಪುರ ಮಠ ಇಂಥ ಕಾರ್ಯವನ್ನು ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

 

ದೇಶದ, ಧರ್ಮದ, ಸಮಾಜದ ಒಳಿತಿಗೆ ಅಗತ್ಯವಾದ್ದನ್ನು ಮಾಡಲೇಬೇಕಾಗಿದೆ. ಕಲ್ಪಿಸಿದ ಸಂಕಲ್ಪಗಳು ಕಾರ್ಯಸಾಧ್ಯವಾಗುತ್ತವೆ ಎನ್ನುವುದು ನಮ್ಮ ಮಠದ ಪರಂಪರೆಯಿಂದ ತಿಳಿದುಬಂದಿದೆ. ವಿಶ್ವಗೋಸಮ್ಮೇಳನ, ರಾಮಾಯಣ ಮಹಾಸತ್ರ, ಗೋಸ್ವರ್ಗದಂಥ ಅಪೂರ್ವ ಕಾರ್ಯಗಳು ನಮ್ಮ ಮಹಾಸಂಕಲ್ಪಗಳು ಸಿದ್ಧಿಯಾಗುತ್ತವೆ ಎನ್ನುವುದಕ್ಕೆ ನಿದರ್ಶನಗಳು ಎಂದು ವಿವರಿಸಿದರು.

 

ನಾಲ್ಕೂ ವೇದಗಳ, ಶಾಸ್ತ್ರಗಳ ಕಲಿಕೆಗೆ ಅವಕಾಶ ನೀಡುವ ಒಂದು ಕಾರ್ಯ ಆಗಬೇಕು. ಉಪವೇದಗಳು, ವೇದಾಂಗಗಳು, ಅರುವತ್ತನಾಲ್ಕು ಕಲೆಗಳು, ಅನೇಕ ಭಾರತೀಯ ಮೂಲದ ವಿದ್ಯೆಗಳು, ಆಧುನಿಕ ಭಾಷೆ, ತಂತ್ರಜ್ಞಾನ, ಆತ್ಮರಕ್ಷಣೆಗೆ ಸಮರವಿದ್ಯೆಗಳನ್ನು ಒಳಗೊಂಡ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವುದು ಈ ವಿದ್ಯಾಪೀಠದ ಉದ್ದೇಶ. ಎಲ್ಲ ಭಾರತೀಯ ವಿದ್ಯೆಗಳ ಪರಿಚಯದ ಜತೆಗೆ ಒಂದು ವಿಷಯದಲ್ಲಿ ಆಳವಾದ ಜ್ಞಾನವನ್ನು ಒದಗಿಸುವುದು ಇಲ್ಲಿನ ವಿಶೇಷ ಎಂದರು.

 

ಈ ಮಹತ್ಕಾರ್ಯಕ್ಕೆ ಶ್ರೀಮಠದ ಶಿಷ್ಯಭಕ್ತರು ಮೂರು ವರ್ಷ ಕಾಲ ತಮ್ಮ ವಾರ್ಷಿಕ ಆದಾಯದ ಶೇಕಡ ೫ರಷ್ಟು ಮೊತ್ತವನ್ನು ಕೊಡುಗೆಯಾಗಿ ನೀಡಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಇದರ ಜತೆಗೆ ಹಲವಾರು ಬಗೆಯ ಸಮರ್ಪಣೆಗಳಿಗೆ ಅವಕಾಶವಿದೆ. ಶ್ರೀಮಠ ಇದಕ್ಕಾಗಿ ಸುಮಾರು ೧೦ ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿರುವ ಪ್ರಾಚೀನ ಶೈಲಿಯ “ಕುಲಗುರು” ಭವ್ಯ ಗುರುನಿವಾಸವನ್ನು ವಿಶ್ವವಿದ್ಯಾಪೀಠಕ್ಕೆ ಸಮರ್ಪಣೆ ಮಾಡಿದೆ ಎಂದು ಹೇಳಿದರು.

 

ಡಾ.ಗಜಾನನ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಹವ್ಯಕ ಮಹಾಮಂಡಲದ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪ್ಪು, ನಿಯೋಜಿತ ಕಾರ್ಯದರ್ಶಿ ಪಿ.ನಾಗರಾಜ ಭಟ್, ಮುಖಂಡರಾದ ಹಾರಕೆರೆ ನಾರಾಯಣ ಭಟ್ ಮತ್ತಿತತರು ಉಪಸ್ಥಿತರಿದ್ದರು.

Author Details


Srimukha

Leave a Reply

Your email address will not be published. Required fields are marked *