ಬೆಂಗಳೂರು: ಜನ ಅಥವಾ ಧನ ಶಕ್ತಿಯಿಂದ ದೇಶ ಬದಲಿಸಲಾಗದು; ಸೈನ್ಯ, ಕೋಶ ಅಥವಾ ಜನಸ್ತೋಮ ಇಲ್ಲದೇ ಶಂಕರಾಚಾರ್ಯರು ತಮ್ಮ ಜ್ಞಾನಪ್ರಭೆಯಿಂದ ಅಖಂಡ ಭಾರತದ ಪುನರುತ್ಥಾನ ಮಾಡಿದಂತೆ, ವಿಷ್ಣುಗುಪ್ತ ವಿಶ್ವವಿದ್ಯಾಪೀಠಪ್ರಾಚೀನ ಜ್ಞಾನಪರಂಪರೆಯ ತಳಹದಿಯಲ್ಲಿ ದೇಶದ ಪುನರ್ ನಿರ್ಮಾಣಕ್ಕೆ ಹೊರಟಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಗಿರಿನಗರ ಶ್ರೀರಾಮಾಶ್ರಮದಲ್ಲಿ 28ನೇ ಚಾತುರ್ಮಾಸ್ಯ ವ್ರತಾರಂಭದಲ್ಲಿ ಧರ್ಮಸಂದೇಶ ನೀಡಿದ ಅವರು, “ಇಡೀ ವಿಶ್ವಕ್ಕೆ ಕೋವಿಡ್-19 ಎಂಬ ಗಾಡಾಂಧಕಾರ ಕವಿದ ಸಂಕಷ್ಟದ ಸನ್ನಿವೇಶದಲ್ಲಿ ಈ ಅದ್ಭುತ ಸಂಸ್ಥೆ ಅನಾವರಣಗೊಳ್ಳುತ್ತಿದೆ. ಇದು ದೈವಪ್ರೇರಣೆ. ವಾಸ್ತು, ಆಯುರ್ವೇದ, ವೃಕ್ಷಾಯುರ್ವೇದ, ಸಾಮವೇದದಂಥ ಅಳಿವಿನ ಅಂಚಿನಲ್ಲಿರುವ ಹಲವು ವಿದ್ಯೆಗಳ ಪುನರುತ್ಥಾನ ಇಲ್ಲಿ ನಡೆಯುತ್ತಿದೆ ಎಂದು ಬಣ್ಣಿಸಿದರು.
ವಿಶ್ವದ ನೂರಾರು ಕಡೆಗಳಲ್ಲಿ ಶಾಖೆಗಳನ್ನು ಸ್ಥಾಪಿಸುವುದು ಅಥವಾ ಸಂಪತ್ತು ಸೃಷ್ಟಿ ನಮ್ಮ ಮಠದ ಧ್ಯೇಯವಲ್ಲ; ನಮ್ಮ ಗೋಕರ್ಣ ಮಂಡಲ ವ್ಯಾಪ್ತಿಯಲ್ಲೇ ಹಂಚಿದ ಜ್ಞಾನದ ಬೆಳಕು, ದೇಶ ಕಟ್ಟಬೇಕು. ವಿಶ್ವ ಬೆಳಗಬೇಕು ಎಂಬ ಮಹತ್ಸಂಕಲ್ಪದೊಂದಿಗೆ ವಿವಿವಿ ನಿರ್ಮಾಣವಾಗುತ್ತಿದೆ. ಇದನ್ನೇ ಕೇಂದ್ರಬಿಂದುವಾಗಿಟ್ಟುಕೊಂಡು ಈ ಬಾರಿಯ ಚಾತುರ್ಮಾಸ್ಯವನ್ನು ವಿಶ್ವವಿದ್ಯಾ ಚಾತುರ್ಮಾಸ್ಯವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ರಾಮಚಂದ್ರಾಪುರ ಮಠದ ಸಮಾಜಮುಖಿ ಕಾರ್ಯಗಳಿಗೆ ಕಳಶಪ್ರಾಯವಾಗಿರುವುದು ವಿಷ್ಣುಗುಪ್ತ ವಿಶ್ವವಿದ್ಯಾಪೀಠ. ಈಗಾಗಲೇ ವಿವಿವಿ ತಳಹದಿಯಾಗಿ ಏಳು ಗುರುಕುಲಗಳು ನಡೆಯುತ್ತಿದ್ದು, ಸಮಾಜದಿಂದ ಅದ್ಭುತ ಸ್ಪಂದನೆ ದೊರಕಿದೆ. ಸಾವಿರಕ್ಕೂ ಹೆಚ್ಚು ಮಕ್ಕಳು, ನೂರಕ್ಕೂ ಹೆಚ್ಚು ಶಿಕ್ಷಕರು ಈಗಾಗಲೇ ಗುರುಕುಲಗಳಲ್ಲಿದ್ದಾರೆ. ಇಲ್ಲಿನ ಮಕ್ಕಳ ಕಣ್ಣಲ್ಲಿ ಬೆಳಕಿದೆ. ಹೃದಯದಲ್ಲಿ ಕೆಚ್ಚು- ಕಿಚ್ಚು ಇದೆ. ಇವರೆಲ್ಲರೂ ಶಂಕರಾಚಾರ್ಯರ ದಾರಿಯಲ್ಲಿದ್ದಾರೆ. ಕೆಲವೇ ವರ್ಷದಲ್ಲಿ ವಿವಿಯ ಫಲವನ್ನು ಕಾಣಲಿದ್ದೀರಿ. ಚಾಣಕ್ಯ ಚಂದ್ರಗುಪ್ತನನ್ನು ನಿರ್ಮಾಣ ಮಾಡಿದಾಗ ಸ್ವರ್ಣಯುಗ ನಿರ್ಮಾಣವಾದಂತೆ ವಿವಿವಿ ಭವ್ಯ ಭಾರತದ ನಿರ್ಮಾಣಕ್ಕೆ ನಾಂದಿಯಾಗಲಿದೆ ಎಂದು ನುಡಿದರು.
ಇಂದಿನ ಯುವಜನಕ್ಕೆ ದೇಶದ ಬಗ್ಗೆ ಅಭಿಮಾನ ಇದೆ; ಆದರೆ ಅರಿವಿಲ್ಲ. ಅರಿವು- ಅಭಿಮಾನ ಎರಡೂ ಇದ್ದಾಗ ಮಾತ್ರ ದೇಶದ ಬದಲಾವಣೆ ಸಾಧ್ಯ ಎಂದು ವಿಶ್ಲೇಷಿಸಿದರು.
ಗುರು ಮನುಷ್ಯರೂಪದ ದೇವರು. ಈ ಗುರುತತ್ವಕ್ಕೆ, ಗುರುಪರಂಪರೆಗೆ ನಮನ ಸಲ್ಲಿಸುವ ವಿಶಿಷ್ಟ ಸಂದರ್ಭವೇ ಗುರುಪೂರ್ಣಿಮೆ. ಆದಿಶಂಕರಾಚಾರ್ಯರು ಆರಂಭಿಸಿದ ಪರಂಪರೆಗಳ ಪೈಕಿ ಅವಿಚ್ಛಿನವಾಗಿ ಮುಂದುವರಿಯುತ್ತಿರುವ ಏಕೈಕ ಪರಂಪರೆ ನಮ್ಮದು. ಇಂದು ಜಗದ್ಗುರು ಶ್ರೀಕೃಷ್ಣನ ಆದಿಯಾಗಿ ಸಮಸ್ತ ಗುರುಪರಂಪರೆಯನ್ನು ಭಕ್ತಿಪೂರ್ವಕವಾಗಿ ಪೂಜಿಸುವ ಮೂಲಕ ಚಾತುರ್ಮಾಸ್ಯ ವ್ರತ ಆರಂಭವಾಗಿದೆ ಎಂದರು.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಮನುಷ್ಯತ್ವ, ಮುಮುಕ್ಷುತ್ವ ಬರುವುದು ದೈವಾನುಗ್ರಹದಿಂದ. ಹಿಂದೂ ಧರ್ಮ ಯಾವುದೇ ಪುಸ್ತಕದ ಅಡಿಪಾಯದಲ್ಲಿ ನಿಂತ ಧರ್ಮವಲ್ಲ; ಅವಿಚ್ಛಿನ ಪರಂಪರೆಯಲ್ಲಿ ನಿಂತಿರುವ ಧರ್ಮ. ದೇಶದ ಭೂಭಾಗದ ಮೇಲೆ ಅತಿಕ್ರಮಣಗಳು ನಡೆದರೂ, ಜ್ಞಾನಭಂಡಾರಗಳನ್ನು ನಾಶಪಡಿಸಿದರೂ, ಸನಾತನ ಧರ್ಮ ಉಳಿದುಕೊಂಡಿರುವುದು ಗುರುಪರಂಪರೆಯಿಂದ. ಅಂಥ ಗುರುಪರಂಪರೆಯನ್ನು ಪೂಜಿಸುವ ಪುಣ್ಯ ಸಂದರ್ಭ ಗುರುಪೂರ್ಣಿಮೆ ಎಂದು ಬಣ್ಣಿಸಿದರು. ಶಂಕರ ಪರಂಪರೆಯ ಸೂರ್ಯನಂತೆ ಪ್ರಜ್ವಲಿಸುತ್ತಿರುವ ರಾಘವೇಶ್ವರ ಶ್ರೀಗಳ ವಿಶ್ವವಿದ್ಯಾಪೀಠದ ಕಾರ್ಯಕ್ಕೆ ಕೇಂದ್ರ ಸರ್ಕಾರ ಎಲ್ಲ ಅಗತ್ಯ ನೆರವು ನೀಡಲಿದೆ ಎಂದು ಭರವಸೆ ನೀಡಿದರು.
ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಮತ್ತಿತರ ಗಣ್ಯರು ಪರಮಪೂಜ್ಯರ ಮತ್ತು ಶ್ರೀಕರಾರ್ಚಿತ ದೇವರ ದರ್ಶನ ಪಡೆದರು. ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಮಾತನಾಡಿ, ಭಾರತದ ಭವ್ಯ ಪರಂಪರೆಯನ್ನು ಮರಳಿ ಪಡೆಯುವ ಮಹಾಭಾಗ್ಯವನ್ನು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮೂಲಕ ಶ್ರೀರಾಘವೇಶ್ವರ ಭಾರತೀಸ್ವಾಮೀಜಿ ಲೋಕಕ್ಕೆ ಕರುಣಿಸಿದ್ದಾರೆ ಎಂದು ಹೇಳಿದರು. ಜಗತ್ತಿನ ಎಲ್ಲ ಸಂಶೋಧನೆಗಳ ಮೂಲ ಭಾರತ. ಅದರ ಶಕ್ತಿ, ಸತ್ವ, ಸಿದ್ಧಾಂತಗಳನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಮಹಾನ್ ಸಂಕಲ್ಪವೇ ವಿಶ್ವವಿದ್ಯಾಪೀಠ ಎಂದು ಬಣ್ಣಿಸಿದರು. ಇಂಥ ಪ್ರಯತ್ನಕ್ಕೆ ಇಡೀ ಸಮಾಜ ಕೈಜೋಡಿಸಬೇಕು ಎಂದು ಕೋರಿದರು.
ಶ್ರೀಮಠದ ಸಿಇಓ ಕೆ.ಜಿ.ಭಟ್, ಚಾತುರ್ಮಾಸ್ಯ ಮಹಾಸಮಿತಿ ಗೌರವಾಧ್ಯಕ್ಷ ದಿವಾಣ ಕೇಶವ ಕುಮಾರ್, ಕ್ರಿಯಾಸಮಿತಿ ಗೌರವಾಧ್ಯಕ್ಷ ಜಿ.ಎಂ.ಹೆಗಡೆ ಹುಕ್ಲಮಕ್ಕಿ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಎಸ್.ಜಿ.ಭಟ್, ಪ್ರಧಾನ ಕಾರ್ಯದರ್ಶಿ ವಾದಿರಾಜ ಸಾಮಗ, ಸಂಚಾಲಕ ಹರಿಪ್ರಸಾದ್ ಪೆರಿಯಾಪು, ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಉಪಾಧ್ಯಕ್ಷೆ ಕೆ.ಟಿ.ಶೈಲಜಾ ಭಟ್, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು ಮತ್ತಿತರರು ಉಪಸ್ಥಿತರಿದ್ದರು. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.
ನೀಲಕಂಠ ಯಾಜಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಚಯ ಮಾಡಿಕೊಟ್ಟರು. ಶಿವಮೊಗ್ಗ ಕೃಷಿ ವಿವಿಯಿಂದ ಮಾನ್ಯತೆ ಪಡೆದ ಮಲೆನಾಡು ಸಿಂಧೂರಿ ಎಂಬ ಕೆಂಪಕ್ಕಿ ತಳಿಯನ್ನು ಈ ಸಂದರ್ಭದಲ್ಲಿ ಪರಮಪೂಜ್ಯರು ಲೋಕಾರ್ಪಣೆ ಮಾಡಿದರು. ನಿವೇದನಾ ಆ್ಯಪ್ ಬಿಡುಗಡೆ ಮಾಡಲಾಯಿತು.
ರಾಘವೇಶ್ವರ ಶ್ರೀಗಳು ಶಂಕರ ಪರಂಪರೆಯ ಸೂರ್ಯ
ಬೆಂಗಳೂರು: ಸಮಾಜಮುಖಿ ಕಾರ್ಯಗಳ ಮೂಲಕ ರಾಘವೇಶ್ವರ ಶ್ರೀಗಳು ಶಂಕರ ಪರಂಪರೆಯ ಸೂರ್ಯನಂತೆ ಪ್ರಜ್ವಲಿಸುತ್ತಿದ್ದಾರೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಬಣ್ಣಿಸಿದರು.
ಶ್ರೀಗಳ 28ನೇ ಚಾತುರ್ಮಾಸ್ಯ ವ್ರತಾರಂಭದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಮಹಡಿ ಮೇಲೆ ಮಹಡಿ ಕಟ್ಟುವ, ದಿನಕ್ಕೆ ಒಂದೆರಡು ಮಂದಿಯಾದರೂ ರಾಜಕಾರಣಿಗಳನ್ನು ಭೇಟಿಯಾಗದಿದ್ದರೆ ತಮ್ಮ ಆಧ್ಯಾತ್ಮಿಕ ಸಾಧನೆಯೇ ಅಪೂರ್ಣ ಎಂಬ ಮನೋಭಾವದ ಮರಾಧೀಶರು ಇರುವ ಕಾಲಘಟ್ಟದಲ್ಲಿ ಸಮಾಜೋದ್ಧಾರಕ ಕಾರ್ಯಗಳನ್ನಷ್ಟೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿರುವ ಶ್ರೀರಾಘವೇಶ್ವರರು ಗುರುತತ್ವದ ವಿರಳ ಪ್ರತೀಕ ಎನಿಸುತ್ತಾರೆ ಎಂದು ಬಣ್ಣಿಸಿದರು.
“ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕಲ್ಪನೆಯೇ ಅದ್ಭುತ. ವ್ಯಕ್ತಿ ನಿರ್ಮಾಣದಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎನ್ನವುದು ಆರೆಸ್ಸೆಸ್‍ನ ಬಲವಾದ ನಿಲುವು. ಶ್ರೀಮಠ ಕೂಡಾ ಇದೇ ಕಾರ್ಯವನ್ನು ಮಾಡುತ್ತಿದೆ. ಶ್ರೇಷ್ಠ ಗುಣಮಟ್ಟದ ಆಧುನಿಕ ಶಿಕ್ಷಣ ನೀಡುವ ಜತೆಗೆ ಹತ್ತು ಸಾವಿರ ವರ್ಷಗಳ ಜ್ಞಾನಪರಂಪರೆಯನ್ನು ಮುಂದಿನ ಪೀಳಿಗೆಗೆ ಬೋಧಿಸುವ ಕಾರ್ಯವನ್ನು ವಿವಿವಿ ಗುರುಕುಲಗಳು ಈಗಾಗಲೇ ಮಾಡುತ್ತಿವೆ ಎಂದು ಹೇಳಿದರು.
ಮೆಕಾಲೆ ಶಿಕ್ಷಣ ಸರಿ ಇಲ್ಲ ಎಂದು ನಾವು ವಿಶ್ಲೇಷಿಸಿದರೂ ಅದಕ್ಕೆ ಪರ್ಯಾಯ ತರಲು ಈವರೆಗೆ ಸಾಧ್ಯವಾಗಿಲ್ಲ. ಹೊಸ ಶಿಕ್ಷಣ ನೀತಿ ಜಾರಿಗೆ ಬರುವ ಮೂರು ವರ್ಷ ಮೊದಲೇ ಈ ನೀತಿಯ ಎಲ್ಲ ಅಂಶಗಳನ್ನು ಒಳಗೊಂಡ ಹಾಗೂ ಅದಕ್ಕೂ ಮಿಗಿಲಾದ ಪರಿಕಲ್ಪನೆ ವಿವಿವಿಯ ತಳಪಾಯದ ಮೂಲಕ ಶ್ರೀಮಠದಿಂದ ಸಾಕಾರಗೊಂಡಿದೆ ಎಂದು ವಿಶ್ಲೇಷಿಸಿದರು.
ಆಯುರ್ವೇದದಿಂದ ಖಗೋಳ ಶಾಸ್ತ್ರದವರೆಗೆ, ವಾಸ್ತು, ಜ್ಯೋತಿಷ್ಯದಿಂದ ಅಣುವಿಜ್ಞಾನ ಸಿದ್ಧಾಂತದವರೆಗೆ ಪ್ರಾಚೀನ ಭಾರತದ ಎಲ್ಲ ಜ್ಞಾನಶಾಖೆಗಳ ಪುನರುತ್ಥಾನಕ್ಕೆ ಅಡಿಪಾಯವನ್ನು ಶ್ರೀಮಠ ಹಾಕಿದೆ. ಅದರಲ್ಲಿ ಸಮಸ್ತ ಸಮಾಜ ಪಾಲ್ಗೊಂಡು ಸೇವೆಯಲ್ಲಿ ಸಾರ್ಥಕ್ಯ ಕಂಡುಕೊಳ್ಳಬೇಕಾಗಿದೆ ಎಂದು ನುಡಿದರು.