ಶ್ರೀಗುರು ಚರಣ ಸೇವೆಯ ಕುಸುಮಗಳು : ಕಮಲಾ ಸುಬ್ರಹ್ಮಣ್ಯ ಹೆಗಡೆ

ಮಾತೃತ್ವಮ್

 

ಒಂದು ಮನೆಯ ಪ್ರತಿಯೊಬ್ಬ ಸದಸ್ಯನೂ ಶ್ರೀಗುರುಗಳ ಸೇವೆಯಲ್ಲಿ ತೊಡಗಿಸಿಕೊಂಡರೆ ಆ ಮನೆಯವರನ್ನೆಲ್ಲ ‘ ಶ್ರೀಗುರು ಸೇವೆಯ ಚರಣ ಕುಸುಮಗಳು ‘ ಎಂದು ಹೇಳಬಹುದಲ್ಲವೇ ? ಅಂತಹ ಒಂದು ಕುಟುಂಬ ಹೊನ್ನಾವರ ಮಂಡಲದ ಹೊನ್ನಾವರ ವಲಯದ ನೀಲ್ಕೋಡು ಗುಬ್ಬಿಮನೆಯ ಸುಬ್ರಹ್ಮಣ್ಯ ಹೆಗಡೆ ಅವರ ಪತ್ನಿ ಕಮಲಾ ಎಸ್. ಹೆಗಡೆ ಅವರದ್ದು.

” ನಮ್ಮ ಸೇವೆಯ ಬಗ್ಗೆ ಹೇಳಲೇನಿದೆ..? ಶ್ರೀಗುರುಗಳ ಅನುಗ್ರಹ, ಆಶೀರ್ವಾದದಿಂದ ನಾವೆಲ್ಲ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳುವ ಪುಣ್ಯ ದೊರಕಿದೆ. ‌ಇದಕ್ಕಿಂತ ಮಿಗಿಲಾದ ಸೌಭಾಗ್ಯ ಇನ್ನೇನಿದೆ ” ಎಂದು ಕೆಲವೇ ಮಾತುಗಳ ಮೂಲಕ ತಮ್ಮ ಮನದ ಭಾವಗಳನ್ನು ವ್ಯಕ್ತಪಡಿಸಿದವರು ಕಮಲಾ ಹೆಗಡೆಯವರು.

ಅಂಕೋಲಾದ ಮೊರಳ್ಳಿ ಗ್ರಾಮದ ಮಾಣಿಗುಡ್ಡೆ ಸುಬ್ರಾಯ ನಾರಾಯಣ ಹೆಗಡೆ ಹಾಗೂ ಸಾವಿತ್ರಿ ದಂಪತಿಗಳ ಪುತ್ರಿಯಾದ ಕಮಲಾ ಎಸ್. ಹೆಗಡೆ ಹಲವಾರು ವರ್ಷಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಹೊನ್ನಾವರ ವಲಯದ ಮುಷ್ಠಿಭಿಕ್ಷಾ ಪ್ರಧಾನೆಯಾಗಿರುವ ಕಮಲಾ ಹೆಗಡೆಯವರು ಶ್ರೀಮಠದ ವಿವಿಧ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದವರು. ಸ್ವಯಂ ಇಚ್ಛೆಯಿಂದ ಗೋಮಾತೆಯ ಸೇವೆಗಾಗಿ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾದ ಇವರು ಈಗಾಗಲೇ ಎರಡು ವರ್ಷದ ಗುರಿ ತಲುಪಿದ್ದಾರೆ.

” ನಮ್ಮ ಸಂಸ್ಕೃತಿಯಲ್ಲಿ ಗೋವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಹಿಂದೆ ಪ್ರತಿಯೊಂದು ಮನೆಯಲ್ಲೂ ಹಸುಗಳಿದ್ದವು. ಇಂದಿನ ಆಧುನಿಕ ಬದುಕಿನ ಧಾವಂತದ ನಡುವೆ ಎಲ್ಲರಿಗೂ ಮನೆಯಲ್ಲಿ ಹಸು ಸಾಕಲು ಕಷ್ಟಸಾಧ್ಯ. ‌ಪರಮಪೂಜ್ಯ ಶ್ರೀ ಸಂಸ್ಥಾನದವರ ಗೋ ಸಂರಕ್ಷಣಾ ಯೋಜನೆ ನಿಜಕ್ಕೂ ಅದ್ಭುತ. ಇಂದು ಸಮಾಜದಲ್ಲಿ ದೇಶೀಯ ಹಸುಗಳ ಮಹತ್ವದ ಬಗ್ಗೆ ಅರಿವು ಮೂಡಿಸುವಲ್ಲಿ ವಿಶ್ವ ಗೋ ಸಮ್ಮೇಳನ, ಅಭಯಾಕ್ಷರ ಅಭಿಯಾನ, ಹಾಲುಹಬ್ಬ, ಮಂಗಲ ಗೋಯಾತ್ರೆಯಂತಹ ಕಾರ್ಯಕ್ರಮಗಳು ಯಶಸ್ವಿಯಾಗಿವೆ ” ಎನ್ನುವ ಕಮಲಾ ಎಸ್. ಹೆಗಡೆಯವರಿಗೆ ಅನೇಕ ಮಂದಿ ಗೋಪ್ರೇಮಿಗಳು ಮಾತೃತ್ವಮ್ ಯೋಜನೆಗೆ ಸಹಕಾರ ನೀಡಿದ್ದಾರೆ.

ಕಮಲಾ ಎಸ್. ಹೆಗಡೆಯವರ ಪುತ್ರ ವಿನೋದ ಅವರು ಕೆಲವು ವರ್ಷಗಳಿಂದ ಶ್ರೀ ಸಂಸ್ಥಾನದವರ ಶ್ರೀ ಪರಿವಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿನಿಯಾಗಿರುವ ಪುತ್ರಿ ವಿನುತಾ ಮಾಸದ ಮಾತೆಯಾಗಿ ಗೋಸೇವೆಯಲ್ಲಿ ತೊಡಗಿಸಿಕೊಂಡವರು. ಸೊಸೆ ನಿಖಿತಾ ಅವರು ಸಹಾ ಶ್ರೀಮಠದ ಸೇವೆಯಲ್ಲಿ ನಿರತರಾಗಿರುವವರು.

” ಮನೆಯವರಿಗೆಲ್ಲ ಶ್ರೀಗುರುಗಳ ಸೇವೆ ಮಾಡುವ ಅವಕಾಶ ದೊರಕಿದ್ದು ಪೂರ್ವ ಜನ್ಮದ ಸುಕೃತ.‌ ಗೋಸೇವೆ, ಶ್ರೀಮಠದ ಸೇವೆ ನಿರಂತರವಾಗಿ ಮುಂದುವರಿಸಬೇಕು ಎಂಬುದೇ ಮನದ ಅಭಿಲಾಷೆ ” ಎನ್ನುವ ಕಮಲಾ ಎಸ್. ಹೆಗಡೆಯವರ ವಿನಮ್ರ ನುಡಿಗಳಲ್ಲಿ ಅವರ ಸೇವಾ ಮನೋಭಾವದ ಶ್ರದ್ಧಾಭಕ್ತಿಗಳು ತುಂಬಿಕೊಂಡಿವೆ.

 

Leave a Reply

Your email address will not be published. Required fields are marked *