ಬೆಂಗಳೂರು: ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರಲು ಭಾರತ ಸರ್ಕಾರ ಆರಂಭಿಸಿದ ‘ಆಪರೇಷನ್ ಗಂಗಾ’ ಕಾರ್ಯಾಚರಣೆಗೆ ಶ್ರೀರಾಮಚಂದ್ರಾಪುರ ಮಠ ಟ್ವಿಟ್ಟರ್‍ನಲ್ಲಿ ಸಹಾಯವಾಣಿ ಆರಂಭಿಸುವ ಮೂಲಕ ನೆರವು ನೀಡಿರುವುದು ಸಂತ್ರಸ್ತ ವಿದ್ಯಾರ್ಥಿಗಳ ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಉಕ್ರೇನ್ ಮೇಲೆ ಫೆಬ್ರುವರಿ 24ರಂದು ರಷ್ಯಾ ಅತಿಕ್ರಮಣ ನಡೆಸಿದ ಸುದ್ದಿ ಸ್ಫೋಟವಾಗುತ್ತಿದ್ದಂತೆ, ಉಕ್ರೇನ್‍ನಲ್ಲಿರುವ ಅಪಾರ ಸಂಖ್ಯೆಯ ಶ್ರೀಮಠದ ಶಿಷ್ಯರು, ಕನ್ನಡಿಗ ಹಾಗೂ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರುವ ಉದ್ದೇಶದಿಂದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಶ್ರೀಮಠದ ಸೇವಾಖಂಡದ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದ್ದರು.
ಶ್ರೀಮಠದ ಸೇವಾತಂಡದ ಶ್ರೀ ಸಂಯೋಜಕಿ ವಿದ್ಯಾ ಕೈಲಂಕಜೆ ಮತ್ತು ದಿಶಾದರ್ಶಿಯ ಬಾಲಸುಬ್ರಹ್ಮಣ್ಯ ಭಟ್ ನೇತೃತ್ವದ ತಂಡ ಮೊದಲು ಭಾರತ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಮಾಹಿತಿಗಳ ವಿನಿಮಯಕ್ಕೆ ಕ್ರಮ ಕೈಗೊಂಡಿತು. ಅಂತೆಯೇ ಸಂಘರ್ಷಪೀಡಿತ ದೇಶದ
ರಾಯಭಾರ ಕಚೇರಿಗಳನ್ನು ಸಂಪರ್ಕಿಸಿತು. ಸಂತ್ರಸ್ತರ ನೆರವಿಗಾಗಿ ಫೆಬ್ರುವರಿ 28ರಂದು ಶ್ರೀ ರಾಮಚಂದ್ರಾಪುರ ಮಠ ಟ್ವಿಟ್ಟರ್‍ನಲ್ಲಿ ಒಂದು ಸಂಪರ್ಕ್ ಸೇತು ಅಥವಾ ಹೆಲ್ಪ್‍ಲೈನ್ ಆರಂಭಿಸಲಾಗಿದ್ದು, ಇದಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ ದೊರಕಿದೆ.
ಶ್ರೀಮಠದ ದಾಖಲೆಗಳಲ್ಲಿ ಲಭ್ಯವಿದ್ದ ಮಾಹಿತಿ ಆಧರಿಸಿ, ಉಕ್ರೇನ್‍ನಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳ ಹೆಸರು ಹಾಗೂ ವಿವರಗಳನ್ನು ಸಂಗ್ರಹಿಸಿ ಭಾರತದ ರಾಯಭಾರ ಕಚೇರಿಗೆ ಹಾಗೂ ಭಾರತ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಸಲ್ಲಿಸಿ, ಅತಂತ್ರ ಸ್ಥಿತಿಯಲ್ಲಿರುವವರನ್ನು ತಕ್ಷಣ ಸುರಕ್ಷಿತವಾಗಿ ತಾಯ್ನೆಲಕ್ಕೆ ತರುವಂತೆ ಮನವಿ ಮಾಡಿಕೊಂಡಿತು. ಬಳಿಕ ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಹಾಗೂ ಆ ವಿದ್ಯಾರ್ಥಿಗಳ ಮೂಲಕ ಇತರ ವಿದ್ಯಾರ್ಥಿಗಳನ್ನು ಸಂಪರ್ಕಿಸಲಾಗಿದೆ. ಉಕ್ರೇನ್‍ನ ಶೋಚಿನ್‍ನಲ್ಲಿ ಸಿಲುಕಿದ್ದ ಕರ್ನಾಟಕದ ವಿದ್ಯಾರ್ಥಿಗಳು ಸೇರಿದಂತೆ 1400ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಬಸ್ಸಿನಲ್ಲಿ ಪೋಲೆಂಡ್‍ಗೆ ಸ್ಥಳಾಂತರಿಸುವಲ್ಲಿ ರಾಯಭಾರ ಕಚೇರಿ ಯಶಸ್ವಿಯಾಗಿದ್ದು, ಇಡೀ ತಂಡ ಶ್ರೀಮಠದ ಸಂಪರ್ಕಸೇತುವಿನ ಮೂಲಕ ಒಗ್ಗೂಡಲು ಸಾಧ್ಯವಾಗಿದೆ. ವಿದ್ಯಾರ್ಥಿಗಳ ಸಂಪರ್ಕ ಸಾಧಿಸುವಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಮುರಳೀಧರನ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು, ರೆಸ್ಕ್ಯೂ ಆಪರೇಷನ್ ಗಂಗಾ ನಿಯಂತ್ರಣ ಕೊಠಡಿ ಕಾರ್ಯಕರ್ತರು ಶ್ರೀಮಠದ ಕಾರ್ಯಕರ್ತರ ಜತೆ ನಿರಂತರ ಸಂಪರ್ಕದಲ್ಲಿದ್ದರು.
ಖಾರ್ಕಿವ್‍ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳ ರಕ್ಷಣೆ ಒಂದು ಹಂತವಾದರೆ, ಶೋಮಿಯಲ್ಲಿ ಸಿಲುಕಿರುವ ಸುಮಾರು 1200 ವಿದ್ಯಾರ್ಥಿಗಳ ತಂಡವನ್ನು ರಕ್ಷಿಸುವಲ್ಲಿ ಕೂಡಾ ಶ್ರೀಮಠದ ಸಂಪರ್ಕಸೇತು ನೆರವಾಗುತ್ತಿದೆ. ಸಂಪೂರ್ಣ ಬ್ಲಾಕೌಟ್ ಇರುವ ಈ ಪ್ರದೇಶದಲ್ಲಿ ವಿದ್ಯುತ್, ಆಹಾರ ಮತ್ತು ಕುಡಿಯುವ ನೀರಿಗೂ ಹಾಹಾಕಾರ ಎಂಬ ಸ್ಥಿತಿ ಇದ್ದು, ಇವರ ಸಮನ್ವಯಕ್ಕೆ ಕೂಡಾ ಇಡೀ ತಂಡ ಟೊಂಕ ಕಟ್ಟಿದೆ.
ಶ್ರೀಮಠದ ಶಿಷ್ಯ-ಭಕ್ತರಲ್ಲದ ಸಾವಿರಾರು ವಿದ್ಯಾರ್ಥಿಗಳು ಕೂಡಾ ಸಹಾಯವಾಣಿಯ ನೆರವು ಪಡೆದಿರುವುದು ಹೆಮ್ಮೆಯ ಸಂಗತಿ. ಯುದ್ಧಪೀಡಿತ ದೇಶದಿಂದ ಪ್ರತಿಯೊಬ್ಬ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನೆಲಕ್ಕೆ ವಾಪಾಸು ಕರೆತರುವವರೆಗೂ ಸರ್ಕಾರದ ಪ್ರಯತ್ನಕ್ಕೆ ಶ್ರೀಮಠ ಕೈಜೋಡಿಸುತ್ತದೆ ಎಂದು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.
(ವಿದ್ಯಾರ್ಥಿಗಳ ಸಂಭಾಷಣೆಯ ತುಣುಕುಗಳು ಕೂಡಾ ಶ್ರೀಮಠದ ಬಳಿ ಲಭ್ಯವಿದ್ದು, ಗೌಪ್ಯತೆ ಮತ್ತು ಸರ್ಕಾರದ ಸೂಚನೆಯಂತೆ ಅದನ್ನು ಬಿಡುಗಡೆ ಮಾಡುತ್ತಿಲ್ಲ. ವಿದ್ಯಾರ್ಥಿಗಳ ಸಂವಾದ ಕುರಿತ ಕೆಲ ಸ್ಕ್ರೀನ್‍ಶಾಟ್‍ಗಳನ್ನು ಮಾತ್ರ ಬಿಡುಗಡೆ ಮಾಡಲಾಗುತ್ತಿದೆ)