ಮಾಲೂರು: ಭಾರತೀಯ ಕೃಷಿ ಪದ್ದತಿಗೆ ಮೂಲಾಧಾರ ಗೋವು. ಗೋಸಾಕಣೆಯ ಮೂಲಕ ರಾಸಾಯನಿಕ ಕೃಷಿಯಿಂದ ದೂರವಾಗಿ, ಸಾವಯವ ಕೃಷಿಯನ್ನು ನಡೆಸುವ ಅನಿರ್ವಾಯತೆ ಇದೆ. ಗೋವುಗಳ ಮೂಲಕ ಆರ್ಥಿಕ ಸ್ಥಿತಿಯ ಬೆಳವಣಿಗೆ ಆಗಬೇಕಾಗಿದ್ದು, ಆ ನಿಟ್ಟಿನಲ್ಲಿ ಕೆಲಸ ಕಾರ್ಯವಾಗಬೇಕಾಗಿದೆ ಎಂದು ನ್ಯಾಷನಲ್ ಸೆಕ್ಯುರಿಟಿ ಬೋರ್ಡ್ ಸದಸ್ಯ, ಐಐಎಂಬಿ ಪ್ರೊ. ಆರ್. ವೈದ್ಯನಾಥನ್ ಹೇಳಿದರು.
ಅವರು ಮಾಲೂರು ಗಂಗಾಪುರ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಗೋಪಾಲ್ಸ್ ಸಂಸ್ಥೆಯ ವತಿಯಿಂದ ದೇಸೀ ಗೋವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ನಡೆದ ಐ ಲೈವ್, ಐ ಕೇರ್, ಐ ಸರ್ವ್ ನೇಟಿವ್ ಕೌವ್ಸ್ ನ ಕಾರ್ಯಕ್ರಮದಲ್ಲಿ ಗೋವು ಮತ್ತು ಆರ್ಥಿಕತೆ ಎಂಬ ವಿಚಾರದಲ್ಲಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಹೆಚ್ಚು ಗೋವುಗಳನ್ನು ಸಾಕುತ್ತಿದ್ದವರು ಶ್ರೀಮಂತರಾಗಿದ್ದರು. ರಾಜರ ಕಾಲದಲ್ಲಿ ಆರ್ಥಿಕತೆ ಗೋವಿನ ಮೇಲೆಯೇ ನಿಂತಿದ್ದು, ಮುಂದಿನದಿಂದ ದಿನದಲ್ಲೂ ಗೋಕೇಂದ್ರೀಕೃತ ಆರ್ಥಿಕ ಸ್ಥಿತಿ ನಿರ್ಮಾಣವಾಗಬೇಕಾಗಿದೆ. ದೇಸೀ ಗೋವುಗಳ ತಳಿಗಳು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿರುವುದು ಖೇದಕರ. ಬರದ ನಾಡಿನಲ್ಲಿಯೋ ಉತ್ತಮ ರೀತಿಯಲ್ಲಿ ರಾಘವೇಂದ್ರ ಗೋಆಶ್ರಮ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಸುಮಾರು 250ಕ್ಕೂ ಅಧಿಕ ಐಟಿ ಬಿಟಿ ಉದ್ಯೋಗಿಗಳು, ಗೋಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಗೋಶಾಲೆಗಳ ಸ್ವಚ್ಚತಾ ಕಾರ್ಯ ನಡೆಸಿದರು. ದೇಸೀ ಗೋ ತಳಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಗವ್ಯ ಉತ್ಪನ್ನಗಳ ತಯಾರಿಯ ಬಗ್ಗೆ ಕಾರ್ಯಾಗಾರ ನಡೆಯಿತು. ಮಕ್ಕಳಿಗೆ ಚಿತ್ರ ಸ್ಪರ್ಧೆ, ಕರುಗಳ ಜತೆಗೆ ಮಕ್ಕಳ ಸ್ಪೆಲ್ಪಿ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ನಡೆಯಿತು.
ಪ್ರಚಾರಮ್ ಡಾಟ್ ಇನ್ ನ ವೀರ ರಾಘವನ್, ಕೋದೇಶಮ್ ರಿವರ್ ಬೇಸಿನ್ ಫೌಂಡೇಶನ್ ನ ಗಣೇಶ ಕಾರ್ತಿಕ್ ಮಾತನಾಡಿದರು. ಶ್ರೀ ರಾಘವೇಂದ್ರ ಗೋಆಶ್ರಮ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಹೆಗಡೆ ಯಲಹಂಕ, ಶ್ರೀರಾಮಚಂದ್ರಾಫುರ ಮಠದ ಗೋಶಾಲೆ ಶ್ರೀಸಂಯೋಜಕ ತಿರುಮಲೇಶ್ವರ ಪ್ರಸನ್ನ, ಗೋಆಶ್ರಮದ ವಿಶೇಷ ಕರ್ತವ್ಯಾಧಿಕಾರಿ ರಾಮಚಂದ್ರ ಅಜ್ಜಕಾನ, ಗೋಆಶ್ರಮದ ಕೃಷ್ಣ ಭಟ್, ಲಕ್ಷ್ಮೀಶ, ಅನಂತ ಹೆಗಡೆ, ಗೋಪಾಲ್ಸ್ ತಂಡದ ಮಧು, ರಾಮ್, ಸದಾಶಿವ, ರಾಜೇಶ್, ದುಷ್ಯಂತ್ ಮತ್ತಿತರರು ಉಪಸ್ಥಿತರಿದ್ದರು.