ಹೊನ್ನಾವರ: ಹೊನ್ನಾವರ ಮಂಡಲದ ವಿದ್ಯಾರ್ಥಿ ವಾಹಿನಿಯಿಂದ ವಿದ್ಯಾರ್ಥಿ ಸಹಾಯನಿಧಿ ವಿತರಣಾ ಕಾರ್ಯಕ್ರಮ ತಾಲೂಕಿನ ಮುಗ್ವಾದ ಶ್ರೀರಾಘವೇಂದ್ರ ಭಾರತೀ ಸವೇದ ಸಂಸ್ಕೃತ ಪಾಠಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ‘ಕೃತಜ್ಞತೆ’ ವಿಷಯದ ಕುರಿತು ಉಪನ್ಯಾಸ ನೀಡಿದ ಶಿಕ್ಷಕ ಸಂದೀಪ ಭಟ್ಟ ಮಾತನಾಡಿ, ‘ವಿದ್ಯಾರ್ಥಿಗಳು ಜೀವನದಲ್ಲಿ ಸಮಾಜದ ಹಾಗೂ ಗುರುಗಳ ಋಣವನ್ನು ಎಂದಿಗೂ ಮರೆಯದೆ ಭವಿಷ್ಯದಲ್ಲಿ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳಿ’ ಎಂದು ಕರೆ ನೀಡಿದರು.
ಮಹಾಮಂಡಲದ ವೈದಿಕ ವಿಭಾಗದ ನೀಲಕಂಠ ಯಾಜಿ ಮಾತನಾಡಿ, ಇಂದು ನೀಡಿರುವ ವಿದ್ಯಾರ್ಥಿ ಸಹಾಯನಿಧಿ ವಿದ್ಯಾರ್ಥಿಗಳಿಗೆ ಶ್ರೀಸಂಸ್ಥಾನದವರು ಆಶೀರ್ವದಿಸಿ ಅನುಗ್ರಹಿಸಿದ ಪ್ರಸಾದವಾಗಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಸದ್ವಿನಿಯೋಗ ಮಾಡಬೇಕಾದ ಜವಾಬ್ದಾರಿ ವಿದ್ಯಾರ್ಥಿಗಳಾದ ನಿಮ್ಮ ಮೇಲಿದೆ ಎಂದರು.
ಕಡ್ಲೆ, ಕರ್ಕಿ, ಹೊನ್ನಾವರ, ಹೊಸಾಕುಳಿ, ಮುಗ್ವಾ, ಗೇರುಸೊಪ್ಪಾ ವಲಯದ ೫೪ ವಿದ್ಯಾರ್ಥಿಗಳಿಗೆ ಚೆಕ್ ಹಸ್ತಾಂತರಿಸಲಾಯಿತು. ಮೊದಲು ವಿದ್ಯಾರ್ಥಿ ಸಹಾಯನಿಧಿ ಪಡೆದು, ವ್ಯಾಸಂಗ ಮಾಡಿ ಪ್ರಸ್ತುತ ಉದ್ಯೋಗ ಗಿಟ್ಟಿಸಿಕೊಂಡಿರುವ ಬೇರಂಕಿಯ ಮಧುರಾ ಅನಂತ ಹೆಗಡೆ ವಿದ್ಯಾ ಸಹಾಯನಿಧಿಗೆ ರೂ.೫೦೦೦ ಸಮರ್ಪಿಸಿದರು.
ಮುಗ್ವಾ ವಲಯದ ಅಧ್ಯಕ್ಷ ಎಲ್.ಪಿ.ಹೆಗಡೆ, ಮಂಡಲ ಅಧ್ಯಕ್ಷರು, ಸಂಘಟನಾ ಕಾರ್ಯದರ್ಶಿ ಹಾಗೂ ಇರತ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ವಾಹಿನಿಯ ಪ್ರಕಾಶ ಹೆಗಡೆ ಹಾನಬಿ ಕಾರ್ಯಕ್ರಮ ನಿರೂಪಿಸಿದರು.