ಗಡ್ಡಬಿಟ್ಟವರು ಮಾತ್ರ ಋಷಿಗಳಲ್ಲ, ಸಾಧನೆ ಮಾಡಿ ಇಂದು ಇಲ್ಲಿ ಪುರಸ್ಕೃತರಾದ ಎಲ್ಲರೂ ಋಷಿ ಸಮಾನರೇ ಆಗಿದ್ದಾರೆ. ಆದರೆ ಸಾಧನೆಯ ವಿಧಾನಗಳು ಬೇರೆ ಬೇರೆ ಎಂದು ಡಾ.ಜಿ.ಎಲ್ ಹೆಗಡೆ ಹೇಳಿದರು.
ಶ್ರೀ ಅಖಿಲ ಹವ್ಯಕ ಮಹಾಸಭೆಯ 79 ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಹಾಗೂ ಹವ್ಯಕ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭ್ಯಾಗತರಾಗಿ ಮಾತನಾಡಿದ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ.ಜಿ.ಎಲ್ ಹೆಗಡೆ, ನಾವು ಭವ್ಯವಾದ ಸಂಸ್ಕೃತಿ ಹೊಂದಿದ್ದೇವೆ. ದಿವ್ಯವಾದ ಇತಿಹಾಸ ಹೊಂದಿದ್ದೇವೆ. ಆದರೆ ನಮ್ಮ ಪಠ್ಯಗಳಲ್ಲಿ ರಾಬರ್ಟ್ ಕ್ಲೈವ್ ಹಾಗೂ ಅವನ ಸಂಸಾರದ ಕುರಿತು ಓದುವಂತಹ ಸ್ಥಿತಿ ಇದೆ ಎಂದು ಖೇದ ವ್ಯಕ್ತಪಡಿಸಿದರು. ನಾವು ನಮ್ಮ ಸಂಸ್ಕೃತಿಯನ್ನು, ನಮ್ಮ ಧಾರ್ಮಿಕತೆಯನ್ನು ಬಿಡದೇ ಅವುಗಳನ್ನು ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಯಕ್ಷಗಾನ – ಕನ್ನಡದ ಉಳಿವು:
ಯಕ್ಷಗಾನ ಹವ್ಯಕರ ಕಲೆಯಾಗಿದ್ದು, ಹವ್ಯಕರು ಯಕ್ಷಗಾನವನ್ನು ಬಿಡಬಾರದು. ಯಕ್ಷಗಾನದಲ್ಲಿ ಒಂದೂ ಆಂಗ್ಲ ಪದ ಬಳಸದೇ, ರಾತ್ರಿಯಿಂದ ಬೆಳಗಿನವರೆಗೆ ಯಕ್ಷಗಾನ ಆನಂದವನ್ನು ಉಣಬಡಿಸುತ್ತದೆ ಮಾತ್ರವಲ್ಲ, ಕನ್ನಡವನ್ನು ಆ ಮೂಲಕ ಉಳಿಸಿಬೆಳೆಸುತ್ತಿದೆ ಎಂದು ಜಿ.ಎಲ್ ಹೆಗಡೆ ಹೇಳಿದರು.
ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ ಮಾತನಾಡಿ, ಸಮಾಜದಲ್ಲಿ ಧನಾತ್ಮಕ ಪರಿಣಾಮ ಉಂಟುಮಾಡಿ; ತನ್ಮೂಲಕ ಸಮಾಜದಲ್ಲಿ ಇಂತಹ ಅನೇಕರು ಹುಟ್ಟುವಂತಾಗಲೀ ಎಂದು ಸಾಧಕರನ್ನು ಹವ್ಯಕ ವಿಭೂಷಣ, ಹವ್ಯಕ ಭೂಷಣ, ಹವ್ಯಕ ಶ್ರೀ ಹಾಗೂ ಹವ್ಯಕ ಸೇವಾಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ಹವ್ಯಕ ವಿಶೇಷ ವಾರ್ಷಿಕ ಪ್ರಶಸ್ತಿಯ ಕುರಿತು ತಿಳಿಸಿದರು.
ಹವ್ಯಕ ಸಂಸ್ಥಾಪನೋತ್ಸವದ ಕುರಿತು ಮಾತನಾಡಿದ ಅವರು, ಹವ್ಯಕ ಮಹಾಸಭಾ ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ್ದಾಗಿದ್ದು, ಭಾರತ ಗಣತಂತ್ರ ಹೊಂದುವುದಕ್ಕೂ ಪೂರ್ವದಲ್ಲಿಯೇ ಹವ್ಯಕ ಮಹಾಸಭೆ 2 ಜನ ಮಹಿಳಾ ಅಧ್ಯಕ್ಷರನ್ನು ಕಂಡಿತ್ತು. ಇದು ಹವ್ಯಕ ಸಮಾಜದಲ್ಲಿ ಮಹಿಳಾ ಸಬಲೀಕರಣವನ್ನು ತೋರಿಸುತ್ತದೆ ಎಂದರು.
ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದಮೂರ್ತಿ ಮಾತನಾಡಿ, ಬ್ರಾಹ್ಮಣ ಸಮಾಜ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ನಾವು ಒಗ್ಗಟ್ಟಾಗ ಬೇಕಿದೆ. ಬ್ರಾಹ್ಮಣ ಸಮಾಜದ ಉಪ ಜಾತಿಗಳಲ್ಲಿನ ಬೇಧಗಳನ್ನು ಬದಿಗೊತ್ತಿ ನಾವೆಲ್ಲ ಬ್ರಾಹ್ಮಣರು ಎಂದು ಒಂದಾಗ ಬೇಕಿದೆ.ಬ್ರಾಹ್ಮಣರನ್ನು ಅಪಹಾಸ್ಯ ಮಾಡುವುದು ಪ್ರಚಾರ ಪಡೆಯಲು ಇರುವ ಸುಲಭ ಉಪಾಯವಾಗಿದೆ. ನಾವು ಒಟ್ಟಾಗಿ ದಿಟ್ಟ ಉತ್ತರಕೊಡಬೇಕಿದೆ ಎಂದರು.
ಹವ್ಯಕ ಮಹಾಸಭೆಯು ಎಲ್ಲ ಉಪಜಾತಿಗಳ ಮಧ್ಯೆ ವಿಭಿನ್ನವಾಗಿದ್ದು, ಸರ್ಕಾರ ಹಾಗೂ ನಮ್ಮ ಅಕಾಡೆಮಿ ಮಾಡಬೇಕಾದ ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಇದಕ್ಕೂ ಮೊದಲು, ಹವ್ಯಕ ವಿಭೂಷಣ, ಹವ್ಯಕ ಭೂಷಣ, ಹವ್ಯಕ ಶ್ರೀ ಹಾಗೂ ಹವ್ಯಕ ಸೇವಾಶ್ರೀ ಪ್ರಶಸ್ತಿಯನ್ನು ಆಯ್ಕೆಯಾದ ಸಾಧಕರಿಗೆ ನೀಡಿ ಮಹಾಸಭೆಯ ಗೌರವ ಸಲ್ಲಿಸಲಾಯಿತು.
ಪ್ರಶಸ್ತಿ ಪುರಸ್ಕೃತ ಡಾ.ಗಜಾನನ ಶರ್ಮ, ಬಳ್ಕೂರು ಕೃಷ್ಣ ಯಾಜಿ, ಶ್ರೀ ನಾರಾಯಣ ದಾಸರು, ಡಾ.ಉದಯಕುಮಾರ್, ಅಶ್ವಿನಿಕುಮಾರ್ ಮುಂತಾದವರು ತಮ್ಮ ಜೀವನಾನುಭವಗಳನ್ನು ಹಂಚಿಕೊಂಡರು.
ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ 21 ಜನರಿಗೆ ಪಲ್ಲವಪುರಸ್ಕಾರ ನೀಡಿ ಗೌರವಿಸಲಾಯಿತು.
ಮೋಹನ ಭಾಸ್ಕರ ಹೆಗಡೆ ಹಾಗೂ ಶ್ರೀ ರಾಜಗೋಪಾಲ್ ಜೋಷಿ ಕಾರ್ಯಕ್ರಮವನ್ನು ನಿರ್ವಹಿಸಿದರು. ನಾರಾಯಣ ಭಟ್ ಹುಳೆಗಾರು ಹಾಗೂ ಸಂದೇಶ ತಲಕಾಲಕೊಪ್ಪ ಪ್ರಶಸ್ತಿ ಪತ್ರವಾಚಿಸಿದರು.
ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷರಾದ ಆರ್ ಎಂ ಹೆಗಡೆ, ಶ್ರೀಧರ ಜೆ ಭಟ್ಟ ಕೆಕ್ಕಾರು, ಕಾರ್ಯದರ್ಶಿಗಳಾದ ಪ್ರಶಾಂತ ಕುಮಾರ ಜಿ ಭಟ್ಟ ಮಲವಳ್ಳಿ, ಆದಿತ್ಯ ಹೆಗಡೆ ಕಲಗಾರು, ಕಾರ್ಯಕ್ರಮದ ಸಂಚಾಲಕರಾದ ರವಿನಾರಾಯಣ ಪಟ್ಟಾಜೆ, ಮುಗಲೋಡಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಪ್ರಕಾಶ್ ಹೆಗಡೆ ಕಲ್ಲಾರೆಮನೆ ಹಾಗೂ ಬಳಗದಿಂದ ‘ವೇಣು ನಿನಾದ’ ಕಾರ್ಯಕ್ರಮ ಜನಮನರಂಜಿಸಿತು.
ಪ್ರಶಸ್ತಿ ಪುರಸ್ಕೃತರು;
1. ಹವ್ಯಕ ವಿಭೂಷಣ – ಡಾ| ಗಜಾನನ ಶರ್ಮ – ಶಿವಮೊಗ್ಗ – ಸಾಹಿತ್ಯ
2. ಹವ್ಯಕ ಭೂಷಣ – ಡಾ. ಉದಯಕುಮಾರ್ ನೂಜಿ – ಕಾಸರಗೋಡು – ಸಮಾಜಸೇವೆ
3. ಹವ್ಯಕ ಭೂಷಣ – ಬಳ್ಕೂರು ಕೃಷ್ಣ ಯಾಜಿ – ಉ. ಕ. – ಯಕ್ಷಗಾನ
4. ಹವ್ಯಕ ಭೂಷಣ – ನಾರಾಯಣ ದಾಸರು – ಉ. ಕ. – ಹರಿಕಥೆ
5. ಹವ್ಯಕ ಶ್ರೀ – ಅಶ್ವಿನೀ ಭಟ್ – ದ. ಕ. – ಕ್ರೀಡೆ
6. ಹವ್ಯಕ ಶ್ರೀ – ರಾಜಾರಾಮ ಸಿ. ಜಿ. – ದ. ಕ. – ಕೃಷಿ ಉದ್ಯಮ
7. ಹವ್ಯಕ ಶ್ರೀ – ಅಶ್ವಿನಿಕುಮಾರ್ ಭಟ್ – ಉ. ಕ. – ಪರಿಸರ
8. ಹವ್ಯಕ ಸೇವಾಶ್ರೀ – ತ್ರಿಯಂಬಕ ಗಣೇಶ ಹೆಗಡೆ