ಚಾತುರ್ಮಾಸ್ಯ ಪ್ರಶಸ್ತಿಯ ಪರಮಾನುಗ್ರಹಕ್ಕೆ ಪಾತ್ರರಾದ ಶ್ರೀಧರಣ್ಣ ಶ್ರೀರಾಮ ಸಾಯುಜ್ಯಕ್ಕೆ

ಇತರೆ

ಪಿಡಿಎಸ್ ಎಂದೇ ಖ್ಯಾತರಾದ ಸಾಗರ ಸಮೀಪದ ಭೀಮನಕೋಣೆಯ ನಮ್ಮ ಶ್ರೀಧರಣ್ಣ ಕೆಲಕಾಲದ ಅಸೌಖ್ಯದಿಂದ ಇಂದು ಬೆಳಗಿನ ಜಾವ ಕಾಲವಶರಾದರು ಎಂಬ ಸುದ್ದಿ ತೀವ್ರ ನೋವಿನದ್ದು.

ನಮ್ಮ ಮಠದ ಕಾರ್ಯ ಎಂದರೆ ತನ್ನ ಸ್ವಂತ ಕಾರ್ಯಕ್ಕಿಂತ ಹೆಚ್ಚಿನದು ಎಂದು ದೃಢವಾಗಿ ನಂಬಿ ಕಾರ್ಯ ಮಾಡಿದವರು ಅವರು. ಶ್ರೀ ಮಠದ ವ್ಯವಸ್ಥೆಯಲ್ಲಿ ಹಲವಾರು ಮಹತ್ವದ ಹುದ್ದೆಗಳನ್ನು ನಿರ್ವಹಿಸಿ, ಗುರುಗಳ ಪ್ರೀತಿಗೆ ಪಾತ್ರರಾದವರು. ದೊಡ್ಡ ದೊಡ್ಡ ಮಹತ್ವದ ಕಾರ್ಯಗಳ ಸಂಪೂರ್ಣ ನೇತೃತ್ವ ಇದ್ದಾಗಲೂ, ಹಣಕಾಸಿನ ನಿರ್ವಹಣೆಯಲ್ಲಿ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆ ತೋರಿದವರು. ಮಠಕ್ಕೆ ಪಡೆಯುವ ವಸ್ತು, ಮಠದಿಂದ ನೀಡುವ ಹಣ ಎರಡರಲ್ಲೂ ಹೆಚ್ಚಿನ ಕಾಳಜಿ ವಹಿಸಿ, ಮಾರುಕಟ್ಟೆಯ ದರಕ್ಕಿಂತ ಕಡಿಮೆ ಬೆಲೆಗೆ ಹೊಂದಿಸುವ ಸ್ವಭಾವ, ಜಾಣ್ಮೆ, ಕಾರ್ಯ ಕೌಶಲ ಹಾಗೂ ನಿಸ್ಪೃಹತೆ ಅವರದ್ದು. ಚಂದ್ರಮೌಳೀಶ್ವರ ದೇವಾಲಯದ ನಿರ್ಮಾಣ ಕಾರ್ಯದಲ್ಲಿ ಆರಂಭದಿಂದಲೂ ತೊಡಗಿದ್ದ ಅವರ ಪರಿಶ್ರಮ, ಕಾರ್ಯನಿರ್ವಹಣಾ ವಿಧಾನ ಶ್ರೀಮಠ ಎಂದೂ ಮರೆಯಲಾರದ್ದು. ತನಗಿಂತ ಹಿರಿಯರೊಡನೆ ಗೌರವದಿಂದ ಹಾಗೂ ಕಿರಿಯರೊಡನೆ ಪ್ರೀತಿಯಿಂದ, ವಿನೋದದಿಂದ, ಎಲ್ಲರೊಡನೆ ಸ್ನೇಹದಿಂದ ಅವರು ನಡೆದುಕೊಳ್ಳುತ್ತಿದ್ದ ರೀತಿ ಅವಿಸ್ಮರಣೀಯ.

 

ಸಾಗರದಲ್ಲಿ ವಿಶ್ವಾಸಾರ್ಹ ಅಡಿಕೆ ವ್ಯವಹಾರದ ಮಂಡಿ ಸ್ಥಾಪಿಸಿ, ಅದನ್ನೂ ವಿಸ್ತರಿಸಿ, ವ್ಯವಸ್ಥಿತವಾಗಿ ನೋಡಿಕೊಂಡು ಬರುತ್ತಿದ್ದವರು ಅವರು. ಸರಳಜೀವನ, ಸಜ್ಜನಿಕೆ, ಗುರು ನಿಷ್ಠೆ, ದಾನ ಗುಣ, ಬಂಧು ಪ್ರೇಮ, ಕುಟುಂಬ ವತ್ಸಲತೆ ಎಲ್ಲವೂ ಸದಾ ಕಣ್ಣಿಗೆ ಕಟ್ಟುವಂತಿದೆ. ಈ ಎಲ್ಲಾ ಆದರ್ಶ ಸ್ವಭಾವಗಳಿಂದ ಶ್ರೀ ಸಂಸ್ಥಾನದವರ ಮನಸನ್ನು ಗೆದ್ದವರು ಅವರು. ಅವರ ಎಲ್ಲಾ ಯೋಜನೆಗಳ ಅನುಷ್ಠಾನದಲ್ಲಿ, ಹಾಗೂ ವಹಿಸಿದ ಕಾರ್ಯ ನಿರ್ವಹಣೆಯಲ್ಲಿ ಪೂರ್ಣ ಶ್ರದ್ಧೆಯಿಂದ ತನ್ನನ್ನು ತೊಡಗಿಸಿಕೊಂಡ ದಿವ್ಯ ಚೇತನ ಶ್ರೀಧರಣ್ಣ. ಇದೇ ದಾರಿಯಲ್ಲಿ ಅವರ ಸುಪುತ್ರ ಮಿತ್ರ ಪ್ರವೀಣ ಹಾಗೂ ಅವರಸಮಸ್ತ ಕುಟುಂಬ ಸಾಗುತ್ತಿರುವುದು ಅವರಿಗೆ ಸದಾ ತೃಪ್ತಿ ನೀಡಿದ ವಿಚಾರ.

 

ಚಾತುರ್ಮಾಸ್ಯ ಪ್ರಶಸ್ತಿಯ ಪರಮಾನುಗ್ರಹಕ್ಕೆ ಪಾತ್ರರಾದ ಶರಣ ಶ್ರೇಷ್ಠ ಶ್ರೀಧರಣ್ಣ ಇನ್ನಿಲ್ಲ ಎಂಬುದು ದುಃಖಕರ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರಿಗೆ ಶ್ರೀ ಗುರು ಅನುಗ್ರಹದಿಂದ ಸದ್ಗತಿ ಪ್ರಾಪ್ತ ವಾಗಲಿ ಎಂದು ಪ್ರಾರ್ಥಿಸಿ, ನಮಿಸುವೆ.

 

ಮೋಹನ ಭಾಸ್ಕರ ಹೆಗಡೆ

ಅಧ್ಯಕ್ಷ, ಶಾಸನ ತಂತ್ರ

ಶ್ರೀರಾಮಚಂದ್ರಾಪುರ ಮಠ.

Leave a Reply

Your email address will not be published. Required fields are marked *