” ಶ್ರೀಮಠದ ಯೋಜನೆಗಳನ್ನು ಸಮರ್ಥವಾಗಿ ಕಾರ್ಯರೂಪಕ್ಕೆ ತರಲು ಮಾತೆಯರು ಸಂಘಟಿತರಾಗಬೇಕು ” : ಬಾಲಸುಬ್ರಹ್ಮಣ್ಯ ಭಟ್, ಸರ್ಪಮಲೆ

ಇತರೆ

 

 

” ಶ್ರೀಮಠದ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ವಲಯದ ಪ್ರತೀ ಮನೆಯ ಮಾತೆಯರೂ ಸಂಘಟಿತರಾಗಬೇಕು.‌ ಮುಷ್ಟಿ ಭಿಕ್ಷಾ ಯೋಜನೆ, ಕುಂಕುಮಾರ್ಚನೆ , ಮಾತೃತ್ವಮ್, ಶ್ರೀರಾಮಭುಜಂಗ ಪ್ರಯಾತ ಸ್ತೋತ್ರ ಪಠಣವೇ ಮೊದಲಾದ ಕಾರ್ಯಗಳನ್ನು ಸಮರ್ಪಕವಾಗಿ ಮುನ್ನಡೆಸುವುದೇ ಮಾತೃ ವಿಭಾಗದ ಮುಖ್ಯ ಉದ್ದೇಶ ” ಎಂದು ಮುಳ್ಳೇರಿಯ ಮಂಡಲ ಅಧ್ಯಕ್ಷರಾದ ಸರ್ಪಮಲೆ ಬಾಲಸುಬ್ರಹ್ಮಣ್ಯ ಭಟ್ ಆಶಯ ವ್ಯಕ್ತಪಡಿಸಿದರು.

 

ಮುಳ್ಳೇರಿಯ ಮಂಡಲ ಮಾತೃವಿಭಾಗ ಹಾಗೂ ಮಾತೃತ್ವಮ್ ನ ಸಹಯೋಗದಲ್ಲಿ ಜುಲೈ ತಿಂಗಳ ವಿವಿಧ ದಿನಗಳಲ್ಲಿ ‌ನಡೆದ ಮುಳ್ಳೇರಿಯ ಮಂಡಲದ ಎಲ್ಲಾ ವಲಯಗಳ ಗೂಗಲ್ ಮೀಟ್ ಸಭೆಯಲ್ಲಿ ಮಾತೃವಿಭಾಗದ ಸಂಘಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

 

ಮುಳ್ಳೇರಿಯ ಮಂಡಲ ಉಪಾಧ್ಯಕ್ಷೆ ಹಾಗೂ ಕಾಸರಗೋಡು ನಗರಸಮಿತಿ ಮಾತೃತ್ವಮ್ ಅಧ್ಯಕ್ಷೆ ಕುಸುಮಾ ಪೆರುಮುಖ ಮಾತನಾಡಿ ‘ ಶ್ರೀಮಠದ ಗೋಸಂರಕ್ಷಣಾ ಯೋಜನೆಯಾದ ಮಾತೃತ್ವಮ್ ನ ಮಾರ್ಗಸೂಚಿಗಳನ್ನು ತಿಳಿಸಿ , ಜುಲೈ 31ರಂದು ಅಶೋಕೆಯಲ್ಲಿ ನಡೆಯಲಿರುವ ಮಾತೃ ಸಮಾವೇಶದ ರೂಪುರೇಷೆಗಳನ್ನು ನೀಡಿ ಆ ದಿನ ವಲಯದಿಂದ ಅತೀ ಹೆಚ್ಚು ಮಾತೆಯರು ಸಮಾವೇಶದಲ್ಲಿ ಭಾಗವಹಿಸಬೇಕು ‘ ಎಂದು ಕರೆ ನೀಡಿದರು.

 

ಮಾತೃತ್ವಮ್ ಕೇಂದ್ರ ಸಮಿತಿ ಅಧ್ಯಕ್ಷೆ ಈಶ್ವರಿ ಬೇರ್ಕಡವು ಮಾತೃತ್ವಮ್ ಯೋಜನೆಯ ಕಾರ್ಯವೈಖರಿಯ ಕುರಿತಾದ ಸಲಹೆಸೂಚನೆಗಳನ್ನು ನೀಡಿದರು.

 

ಮುಳ್ಳೇರಿಯ ಮಂಡಲ ಮಾತೃಪ್ರಧಾನೆ ಗೀತಾಲಕ್ಷ್ಮಿ ಮುಳ್ಳೇರಿಯ ಇವರು ‘ ಗುರುಕುಲ ಚಾತುರ್ಮಾಸ್ಯದ ಸಂದರ್ಭದಲ್ಲಿ ನಡೆಯುತ್ತಿರುವ ಛಾತ್ರ ಭಿಕ್ಷಾ ಸೇವೆಯ ವಿವರಗಳನ್ನು ನೀಡಿ ಈ ಸದವಕಾಶವನ್ನು ವಲಯದ ಮಾತೆಯರು ಸಮರ್ಪಕವಾಗಿ ಸದುಪಯೋಗ ಪಡಿಸಬೇಕು. ಅಶೋಕೆಗೆ ತೆರಳಲು ಅನನುಕೂಲವಿದ್ದವರು ಇನ್ನೊಬ್ಬರ ಮುಖಾಂತರ ಛಾತ್ರ ಭಿಕ್ಷೆಯನ್ನು ಸಮರ್ಪಿಸಬಹುದು ‘ ಎಂದರು.

 

ಮಾತೃತ್ವಮ್ ಕೋಶಾಧ್ಯಕ್ಷೆ ಶಿವಕುಮಾರಿ ಇವರು ಮಾತೃತ್ವಮ್ ಯೋಜನೆಯ ರಶೀದಿಯಲ್ಲಿ ಪಾನ್ ನಂಬರ್ ಹಾಕುವ ಅಗತ್ಯತೆಯ ಬಗ್ಗೆ , ಹಣ ಕಟ್ಟುವ ವಿಧಾನಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

 

ಮಂಡಲ ಮುಷ್ಟಿಭಿಕ್ಷಾ ಪ್ರಧಾನೆ ಪದ್ಮಾವತಿ ಪಿ ಭಟ್ ಮುಷ್ಟಿಭಿಕ್ಷಾ ಸೇವೆಯಲ್ಲಿ ಪ್ರತಿ ಮನೆಯ ಮಾತೆಯರು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

 

ಮುಳ್ಳೇರಿಯ ಮಂಡಲ ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು ಸಭೆಗೆ ಶುಭಹಾರೈಸಿದರು.

 

ಶ್ರೀಗುರುವಂದನೆ ಗೋಸ್ತುತಿಯೊಂದಿಗೆ ಆರಂಭವಾದ ಸಭೆಯಲ್ಲಿ ಮಂಡಲ ಹಾಗೂ ವಲಯಗಳ ಅಧ್ಯಕ್ಷರು , ಕಾರ್ಯದರ್ಶಿಗಳು , ವಿವಿಧ ಪದಾಧಿಕಾರಿಗಳು, ಮಾತೆಯರು ಭಾಗವಹಿಸಿ ಶ್ರೀಮಠದ ವಿವಿಧ ಯೋಜನೆಗಳ ಕುರಿತಾದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಗೂಗಲ್ ಮೀಟ್ ಸಭೆಯು ಯಶಸ್ವಿಯಾಗಿ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *