ನಂತೂರು: ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ ಆಡಳಿತಕ್ಕೊಳಪಟ್ಟಿರುವ ಶ್ರೀ ಭಾರತೀ ಪದವಿ ಕಾಲೇಜು ಎನ್ನೆಸ್ಸೆಸ್ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ವಿಟ್ಲ ಸಮೀಪದ ಕಂಬಳಬೆಟ್ಟು ದ.ಕ.ಜಿ.ಪಂ.ಉ.ಹಿ. ಪ್ರಾ. ಶಾಲೆಯಲ್ಲಿ ರವಿವಾರ ಉದ್ಘಾಟಿಸಲಾಯಿತು.
ಧರ್ಮನಗರ ಧರ್ಮ ಸೇವಾ ವಿಶ್ವಸ್ಥ ಮಂಡಳಿಯ ಸಂಚಾಲಕ ಕೆ.ಟಿ.ವೆಂಕಟೇಶ್ವರ ಭಟ್ ನೂಜಿ ಉದ್ಘಾಟಿಸಿ, ಮಾತನಾಡಿ, ಮಹಾತ್ಮಾ ಗಾಂಧಿಜಿಯವರ 100ನೇ ಜನ್ಮದಿನದಂದು ಈ ರಾಷ್ಟ್ರೀಯ ಸೇವಾ ಯೋಜನೆಯನ್ನು ಆರಂಭಿಸಲಾಯಿತು. ವಿದ್ಯಾರ್ಥಿಗಳಿಗೆ ಸಾಮಾಜಿಕ ಕಳಕಳಿಯನ್ನು ಬೆಳೆಸುವ ಉದ್ದೇಶದಿಂದ ಇದು ಅತ್ಯುಪಯುಕ್ತವಾಯಿತು. ಬ್ರಿಟಿಷರ ಶಿಕ್ಷಣ ಪದ್ಧತಿಯಿಂದ ಗುರುಕುಲ ಶಿಕ್ಷಣ ಪದ್ಧತಿ ಇಲ್ಲವಾಯಿತು. ಇಂದು ಪದವಿಯನ್ನು ಪಡೆದು ಅಂಕಪಟ್ಟಿಯನ್ನು ತೋರಿಸಿ, ಉದ್ಯೋಗ ಗಿಟ್ಟಿಸುವುದಕ್ಕಾಗಿಯೇ ವಿದ್ಯಾಭ್ಯಾಸ ಎನ್ನುವಂತಾಗಿದೆ. ಆದರೆ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಅನುಗ್ರಹದಲ್ಲಿ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯ ಶಿಕ್ಷಣ ಪಡೆಯುತ್ತಿದ್ದಾರೆ. ಇದು ಶ್ಲಾಘನೀಯ ಎಂದರು.
ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಕಾರ್ಯಾಧ್ಯಕ್ಷ ಗಣೇಶಮೋಹನ ಕಾಶಿಮಠ ಅಧ್ಯಕ್ಷತೆ ವಹಿಸಿ, ಎನ್ನೆಸ್ಸೆಸ್ ಶಿಬಿರದಿಂದ ಶಿಸ್ತು, ಉತ್ತಮ ಗುಣ ನಡತೆ, ಊರಿನಲ್ಲಿ ಶ್ರಮವಹಿಸಿ, ಶ್ಲಾಘನೆಗೊಳಗಾಗಬೇಕು ಎಂದರು.
ಕಂಬಳಬೆಟ್ಟು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಕುಕ್ಕ ಕೆ., ಪ್ರಗತಿಪರ ಕೃಷಿಕ ತಿಮ್ಮಪ್ಪ ಸಫಲ್ಯ ದೇವಸ್ಯ, ಕಂಬಳಬೆಟ್ಟು ದ.ಕ.ಜಿ.ಪಂ.ಉ.ಹಿ. ಪ್ರಾ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್‌ರಹಿಮಾನ್, ಸಹಶಿಕ್ಷಕ ರಾಧಾಕೃಷ್ಣ ವರ್ಮ, ಅನುಷ್ಠಾನ ಸಮಿತಿಯ ಅಧ್ಯಕ್ಷ ಶೀನಪ್ಪ ಗೌಡ ಅಮೈ, ಶ್ರೀ ಭಾರತೀ ಕಾಲೇಜಿನ ಉಪಪ್ರಾಂಶುಪಾಲರಾದ ಗಂಗಾರತ್ನ ಮುಗುಳಿ, ಸಹಶಿಬಿರಾಧಿಕಾರಿಗಳಾದ ಪ್ರವೀಣ ಪಿ., ಸತ್ಯನಾರಾಯಣಪ್ರಸಾದ್ ಕೆ., ಕಾವ್ಯಶ್ರೀ, ಕುಸುಮಾವತಿಸ್ವಾತಿ, ಅಮೃತಾ, ಘಟಕ ನಾಯಕರಾದ ಸುಮಂತ್, ರಶ್ಮಿ ವಿ.ಆರ್., ಅನುಷ್ಠಾನ ಸಮಿತಿ ಕಾರ್ಯದರ್ಶಿ ಕಾರ್ತಿಕ್ ಕುಮಾರ್ ಶೆಟ್ಟಿ ಮೂಡೈಮಾರು, ಸದಸ್ಯರಾದ ಶಿವರಾಮ ಭಟ್, ಪೂರ್ಣಿಮಾ ಎಸ್.ಕಮ್ಮಜೆ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಜೀವನ್‌ದಾಸ್ ಪ್ರಸ್ತಾವಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಅಶೋಕ್ ಎಸ್. ಅವರು ಸ್ವಾಗತಿಸಿ, ವಿದ್ಯಾರ್ಥಿ ನಾಯಕ ಕೌಶಿಕ್ ಬಲ್ಯಾಯ ವಂದಿಸಿದರು. ವಿದ್ಯಾರ್ಥಿ ಸಂಘದ ಜತೆಕಾರ್ಯದರ್ಶಿ ಗಂಗಾಸತ್ಯನಾರಾಯಣ ಹೆಗಡೆ ನಿರೂಪಿಸಿದರು.