ನಂತೂರು: ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ ಆಡಳಿತಕ್ಕೊಳಪಟ್ಟಿರುವ ಶ್ರೀ ಭಾರತೀ ಪದವಿ ಕಾಲೇಜು ಎನ್ನೆಸ್ಸೆಸ್ ಘಟಕ, ಇಡ್ಕಿದು ಗ್ರಾ.ಪಂ. ಮತ್ತು ವಿಟ್ಲಮುಡ್ನೂರು ಗ್ರಾ.ಪಂ. ಸಹಯೋಗದಲ್ಲಿ ಎನ್ನೆಸ್ಸೆಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಬೃಹತ್ ಸ್ವಚ್ಛತಾ ಆಂದೋಲನ ಸ್ವಚ್ಛತೆಯೆಡೆಗೆ ನಮ್ಮ ನಡಿಗೆ ಎಂಬ ಕಾರ್ಯಕ್ರಮ ಗುರುವಾರ ಆಯೋಜಿಸಲಾಗಿತ್ತು.
ವಿಟ್ಲ ಸಮೀಪದ ಕಂಬಳಬೆಟ್ಟು ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆಯಲ್ಲಿ ಆಂದೋಲನವನ್ನು ಉದ್ಘಾಟಿಸಲಾಯಿತು. ಇಡ್ಕಿದು ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ ಜಾಥಾವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಪಿಡಿಒ ಗೋಕುಲ್‌ದಾಸ್ ಭಕ್ತ ಹಾಗೂ ವಿಟ್ಲಮುಡ್ನೂರು ಗ್ರಾ.ಪಂ.ಸದಸ್ಯ ಅಬ್ದುಲ್‌ರಹಿಮಾನ್, ಪಿಡಿಒ ರಾಘವೇಂದ್ರ, ಕಾರ್ಯದರ್ಶಿ ಅಬ್ದುಲ್‌ರಹಿಮಾನ್, ದ.ಕ.ಜಿ.ಪಂ.ಉ.ಹಿ. ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ವಾರಿಜಾ ಮತ್ತಿತರರು ಉಪಸ್ಥಿತರಿದ್ದರು.
ಎನ್ನೆಸ್ಸೆಸ್ ಶಿಬಿರಾರ್ಥಿಗಳೊಂದಿಗೆ ಕಂಬಳಬೆಟ್ಟು ಶಾಲೆ, ಮಿತ್ತೂರು ಶಾಲೆ, ಸೂರ್ಯ ಶಾಲೆ, ಪ್ರೌಢಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಕೈಜೋಡಿಸಿದ್ದರು. ಕಂಬಳಬೆಟ್ಟು ಪೇಟೆಯನ್ನು ಸ್ವಚ್ಛಗೊಳಿಸಿ, ಬಳಿಕ ವಿಟ್ಲ ಪುತ್ತೂರು ರಸ್ತೆಯ ಕಬಕ ವರೆಗೆ ಮೂರು ತಂಡಗಳಾಗಿ ತೆರಳಿದ ವಿದ್ಯಾರ್ಥಿಗಳು ಸಂಪೂರ್ಣ ಸ್ವಚ್ಛಗೊಳಿಸಿದರು. ಅನೇಕ ವಾಹನಗಳಲ್ಲಿ ಕಸವನ್ನು ತುಂಬಿಸಿಕೊಂಡು ಇಡ್ಕಿದು ಗ್ರಾ.ಪಂ.ನ ತ್ಯಾಜ್ಯ ಘಟಕಕ್ಕೆ ನೀಡಲಾಯಿತು.
ಸಮಾರೋಪ :
ಇಡ್ಕಿದು ಗ್ರಾ.ಪಂ.ಸಭಾಭವನದಲ್ಲಿ ಸ್ವಚ್ಛತೆಯೆಡೆಗೆ ನಮ್ಮ ನಡಿಗೆ ಬೃಹತ್ ಸ್ವಚ್ಛತಾ ಆಂದೋಲನದ ಸಮಾರೋಪ ಸಮಾರಂಭ ನಡೆಯಿತು. ಇಡ್ಕಿದು ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ ಅಧ್ಯಕ್ಷತೆ ವಹಿಸಿದ್ದರು.
ತಾ.ಪಂ.ಸದಸ್ಯೆ ವನಜಾಕ್ಷಿ ಭಟ್ ಅವರು ಮಾತನಾಡಿ, ದೇಶ ಪ್ರೇಮವನ್ನು ಬಿಂಬಿಸುವಂತಹ ಹಾಗೂ ಸಾಮಾಜಿಕ ಕಳಕಳಿಯನ್ನು ತೋರ್ಪಡಿಸುವ ಈ ಕಾರ್ಯ ಶ್ಲಾಘನೀಯ. ಚಿಕ್ಕಮಕ್ಕಳಲ್ಲೇ ಕಸವನ್ನು ಎಸೆಯದಂತೆ ಜಾಗೃತಿ ಮೂಡಿಸುವ ಈ ಸ್ವಚ್ಛತಾ ಆಂದೋಲನ ಯಶಸ್ವಿಯಾಗಿದೆ. ಇದನ್ನು ಆಯೋಜಿಸಿದ ಇಡ್ಕಿದು, ವಿಟ್ಲಮುಡ್ನೂರು ಹಾಗೂ ಭಾರತೀ ಪದವಿ ಕಾಲೇಜಿನ ಎನ್ನೆಸ್ಸೆಸ್ ಘಟಕ ಹಾಗೂ ಕಂಬಳಬೆಟ್ಟು, ಮಿತ್ತೂರು ಹಾಗೂ ಸೂರ್ಯ ಶಾಲೆಯ ವಿದ್ಯಾರ್ಥಿಗಳನ್ನು ಶ್ಲಾಘಿಸಲೇಬೇಕು ಎಂದರು.
ವಿಟ್ಲಮುಡ್ನೂರು ಗ್ರಾ.ಪಂ.ಸದಸ್ಯ ಅಬ್ದುಲ್‌ರಹಿಮಾನ್, ಕಂಬಳಬೆಟ್ಟು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಕುಕ್ಕ ಕೆ., ದ.ಕ.ಜಿ.ಪಂ.ಉ.ಹಿ. ಪ್ರಾ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್‌ರಹಿಮಾನ್, ವಿಟ್ಲಮುಡ್ನೂರು ಗ್ರಾ.ಪಂ.ಸದಸ್ಯ ಸುಶಾಂತ್ ಶೆಟ್ಟಿ, ಸಹಶಿಕ್ಷಕ ರಾಧಾಕೃಷ್ಣ ವರ್ಮ, ಅನುಷ್ಠಾನ ಸಮಿತಿಯ ಅಧ್ಯಕ್ಷ ಶೀನಪ್ಪ ಗೌಡ ಅಮೈ, ಶ್ರೀ ಭಾರತೀ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಜೀವನ್‌ದಾಸ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಅಶೋಕ್ ಎಸ್., ಸಹಶಿಬಿರಾಧಿಕಾರಿಗಳಾದ ಸತ್ಯನಾರಾಯಣಪ್ರಸಾದ್ ಕೆ., ಅಮೃತಾ, ಘಟಕ ನಾಯಕರಾದ ಸುಮಂತ್, ರಶ್ಮಿ ವಿ.ಆರ್., ಅನುಷ್ಠಾನ ಸಮಿತಿ ಕಾರ್ಯದರ್ಶಿ ಕಾರ್ತಿಕ್ ಕುಮಾರ್ ಶೆಟ್ಟಿ ಮೂಡೈಮಾರು ಮತ್ತಿತರರು ಉಪಸ್ಥಿತರಿದ್ದರು.
ಇಡ್ಕಿದು ಗ್ರಾ.ಪಂ. ಗೋಕುಲ್‌ದಾಸ್ ಭಕ್ತ ಸ್ವಾಗತಿಸಿದರು. ಇಡ್ಕಿದು ಗ್ರಾ.ಪಂ.ಉಪಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ನಿರೂಪಿಸಿ, ವಂದಿಸಿದರು.