ವಿಶ್ವ ಹವ್ಯಕ ಸಮ್ಮೇಳನದ ಪ್ರಚಾರಾರ್ಥವಾಗಿ “ಜಾಗೃತಿ ನಡಿಗೆ”

ಸುದ್ದಿ
ಡಿಸೆಂಬರ್ 28,29,30 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಐತಿಹಾಸಿಕ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಅಖಿಲ ಹವ್ಯಕ ಮಹಾಸಭೆಯ ಅಮೃತಮಹೋತ್ಸವ ಕಾರ್ಯಕ್ರಮಗಳ ಪ್ರಚಾರಾರ್ಥವಾಗಿ ಮಲ್ಲೇಶ್ವರಂನಲ್ಲಿ ಜಾಗೃತಿ ನಡಿಗೆ (ವಾಕಾಥಾನ್) ನಡೆಯಿತು.
ಖ್ಯಾತ ನಾಯಕನಟ ಅಜೇಯ್ ರಾವ್  ಜಾಗೃತಿಯನ್ನು ನಡಿಗೆಗೆ ಚಾಲನೆ ನೀಡಿ ಮಾತನಾಡಿ ; ಹವ್ಯಕ ಸಂಸ್ಕೃತಿ ವಿಶೇಷವಾಗಿದ್ದು, ಆ ಸಂಸ್ಕೃತಿಯ ಆಚಾರ ವಿಚಾರಗಳನ್ನು ಹಾಗೂ ವೈಶಿಷ್ಟ್ಯಗಳನ್ನು ಜಗತ್ತಿಗೆ ಪರಿಚಯಿಸಲು 28 ರಿಂದ 30 ವರೆಗೆ ವಿಶ್ವ ಹವ್ಯಕ ಸಮ್ಮೇಳನ ಆಯೋಜಿಸಿದ್ದಾರೆ. ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಇಂತಹಾ ಸಮ್ಮೇಳನಗಳು ಅವಶ್ಯ. ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತಿದ್ದು, ನೀವೆಲ್ಲರೂ ಭಾಗವಹಿಸಿ ಎಂದು ಜನತೆಗೆ ಕರೆನೀಡಿದರು.
ಸ್ಥಳೀಯ ಕಾರ್ಪೊರೇಟರ್ ಮಂಜುನಾಥ್ ರಾಜು ಮಾತನಾಡಿ, ಮಹಾಸಭೆಯಿಂದ ಉತ್ತಮ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ವಿಶ್ವ ಹವ್ಯಕ ಸಮ್ಮೇಳನಕ್ಕೆ ನಮ್ಮೆಲ್ಲರ ಸಂಪೂರ್ಣ ಸಹಕಾರವಿದ್ದು, ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.
ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆಯವರು ವಿಶ್ವ ಹವ್ಯಕ ಸಮ್ಮೇಳನದ ಮಾಹಿತಿಯನ್ನು ನೀಡಿ, ಇದು ನಮ್ಮ ಸಮಾಜದ ವೈಶಿಷ್ಟ್ಯಯುತವಾದ ಸಂಸ್ಕೃತಿ ಸಂಪ್ರದಾಯಗಳನ್ನು ಜಗತ್ತಿಗೆ ಪರಿಚಯಿಸಲು ಸಕಾಲ. ಹವ್ಯಕರ ಆಹಾರ ಪಾರಂಪರಿಕ ಆಹಾರ ಪದಾರ್ಥಗಳು ಜನಮನ್ನಣೆ ಪಡೆದಿದ್ದು, ಕರಾವಳಿ – ಮಲೆನಾಡು ಭಾಗಗಳ ಪಾರಂಪರಿಕ ಆಹಾರದ ‘ಹವ್ಯಕ ಪಾಕೋತ್ಸವ’ವನ್ನು ಆಯೋಜಿಸಲಾಗಿದೆ. ಹಳ್ಳಿಸೊಗಡಿನ ಆಲೇಮನೆ, ಅಡಿಕೆ ಕೃಷಿಯ ಸಮಗ್ರ ದರ್ಶನ, ಸಮಾಜದ ಆಗುಹೋಗುಗಳ ಕುರಿತಾದ ಗೋಷ್ಠಿಗಳು, ಗೀತ – ನಾಟ್ಯ ವೈಭವ, ಯಕ್ಷ ನೃತ್ಯ, ಅಭಿನಯರಂಗ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.  ಸಮಸ್ತ ಜನತೆಗೆ  ಮಾಹಿತಿ ನೀಡಿ ಎಲ್ಲರನ್ನೂ ಕಾರ್ಯಕ್ರಮಕ್ಕೆ ಕರೆತರೋಣ. ಜನತೆಗೆ ಮಾಹಿತಿ ನೀಡಲು ಈ ಜಾಗೃತಿ ನಡಿಗೆಯನ್ನು ಆಯೋಜಿಸಿದ್ದೇವೆ ಎಂದರು.
ಮಲ್ಲೇಶ್ವರಂ ಸ್ಪೋರ್ಟ್ಸ್ ಫೌಂಡೇಶನ್ ಹಾಗೂ ರಿಶೇಪ್ ನೇಷನ್ ಸಹಯೋಗದಲ್ಲಿ ಆಯೋಜಿತವಾದ  ಜಾಗೃತಿ ನಡಿಗೆ ಬೆಳಗ್ಗೆ 6.30 ಕ್ಕೆ ಆರಂಭವಾಗಿ  ಮಲ್ಲೇಶ್ವರಂನ ಮಾರ್ಗೋಸಾ ರಸ್ತೆ ಮೂಲಕ ಸಾಗಿ, ಸಂಪಿಗೆ ರಸ್ತೆ, ಮಲ್ಲೇಶ್ವರಂ ಸರ್ಕಲ್ ಮುಂತಾದ ಕಡೆಗಳಲ್ಲಿ ಸಂಚರಿಸಿ ಹವ್ಯಕ ಮಹಾಸಭಾದ ಆವರಣಕ್ಕೆ ಹಿಂತಿರುಗಿತು. ಸುಮಾರು 5 ಕಿ. ಮಿ ಸಂಚರಿಸಿದ ನಡಿಗೆಯಲ್ಲಿ ಮಲ್ಲೇಶ್ವರಂನ ಗಣ್ಯರು, ಮಹಾಸಭೆಯ ಪದಾಧಿಕಾರಿಗಳು ಹಾಗೂ ಹಿತೈಷಿಗಳು, ಮಹಾಸಭೆಯ ಸದಸ್ಯರು ಸೇರಿದಂತೆ 500ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

Author Details


Srimukha

Leave a Reply

Your email address will not be published. Required fields are marked *