ಗೋಸೇವಾ ಸದ್ಭಾವನಾ ಯಾತ್ರೆ ಕರ್ನಾಟಕ ಪ್ರವೇಶ – ಗೋಭಕ್ತ ಫೈಜ್ ಖಾನ್‍ರನ್ನು ಸ್ವಾಗತಿಸಿದ ಭಾರತೀಯ ಗೋಪರಿವಾರ

ಗೋವು

ದೇಶ ಕಂಡ ಅಪರೂಪದ ಗೋಭಕ್ತ, ಮೊಹಮ್ಮದ್ ಫೈಜ್ ಖಾನ್ ಅವರು ದೇಶವ್ಯಾಪಿ ಗೋಮಹತ್ವ ಜಾಗೃತಿಯ ಉದ್ದೇಶದಿಂದ ಕೈಗೊಂಡಿರುವ ‘ಗೋ ಸೇವಾ ಸದ್ಭಾವನಾ ಯಾತ್ರೆ’ ಎಂಬ ಭಾರತ ಪ್ರದಕ್ಷಿಣ ಪಾದಯಾತ್ರೆಯು ನಿನ್ನೆ ಕರ್ನಾಟಕ ಪ್ರವೇಶಿಸಿದೆ.

 

ಚಾಮರಾಜನಗರದ ಮೂಲಕ ಕರ್ನಾಟಕ ರಾಜ್ಯ ಪ್ರವೇಶಿಸಿದ ಫೈಜ್ ಖಾನ್ ಅವರನ್ನು ಭಾರತೀಯ ಗೋಪರಿವಾರದ ಕರ್ನಾಟಕ ರಾಜ್ಯ ಘಟಕ ಹಾರ್ದಿಕವಾಗಿ ಸ್ವಾಗತಿಸಿದೆ.

 

ಭಾರತೀಯ ಗೋತಳಿಗಳ ಮಹತ್ವದ ಜಾಗೃತಿ, ಗೋಜನ್ಯ ಪದಾರ್ಥಗಳ ಅಗತ್ಯ ಮತ್ತು ಉಪಯೋಗಗಳ ಕುರಿ‌ತು ಜನಮಾನಸಕ್ಕೆ ತಲುಪಿಸಬೇಕು ಹಾಗೂ ಗೋಮಾತೆಯ ಸೇವೆಯ ಮೂಲಕ ಕೋಮುಗಳ‌ ನಡುವೆ ಸಾಮರಸ್ಯವನ್ನು ಮೂಡಿಸಬೇಕು ಎಂಬುದು ಈ ಉದ್ದೇಶ ಎನ್ನುತ್ತಾರೆ ಫೈಜ್ ಖಾನ್.

೧೪,೦೦೦ ಕಿಮೀಗಳ‌ ಪಾದಯಾತ್ರೆ
~
ಗೋಮಹತ್ವವನ್ನು ಪಸರಿಸುತ್ತಾ ಫೈಜ್ ಖಾನ್ ದೇಶದ ಮೂಲೆಮೂಲೆಯನ್ನು ತಲುಪಲಿದ್ದಾರೆ. ಸುಮಾರು ೧೪,೦೦೦ ಕಿಮೀಗಳನ್ನು ಕಾಲ್ನಡಗಿಯಲ್ಲೇ ಕ್ರಮಿಸಲಿದ್ದಾರೆ. ೨೦೧೭ರ ಜೂನ್ ೨೪ರಂದು ಲೇಹ್ ನಿಂದ ಆರಂಭಿವಾಗಿರುವ ಈ ಯಾತ್ರೆ ಕನ್ಯಾಕುಮಾರಿಯ ವರೆಗೆ ಸಾಗಿ ಅಲ್ಲಿಂದ ಅಮೃತಸರ ತಲುಪಲಿದೆ. ಮೊದಲ ಹಂತದಲ್ಲಿ ಜಮ್ಮುಕಾಶ್ಮೀರ, ಹಿಮಾಚಲಪ್ರದೇಶ, ಪಂಜಾಬ್‌, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಒರಿಸ್ಸಾ, ಜಾರ್ಖಂಡ್‌, ಛತ್ತೀಸ್‌ಗಡ್‌, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಗೋಜಾಗೃತಿ ಅಭಿಯಾನ ನಡೆಸಿದ್ದಾರೆ‌.

 

ಎರಡನೇ ಹಂತದ ಭಾಗವಾಗಿ ನಿನ್ನೆ ಕರ್ನಾಟಕ ರಾಜ್ಯ ಪ್ರವೇಶಿಸಿದ್ದು, ಜನವರಿ 24ರ ವರೆಗೂ ರಾಜ್ಯದ ವಿವಿಧ ಕಡೆಗಳಲ್ಲಿ ಪಾದಯಾತ್ರೆ ನಡೆಸಿ ಗೋಮಹತ್ವವನ್ನು ಸಾರಲಿದ್ದು, ನಂತರದಲ್ಲಿ ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್‌, ರಾಜಸ್ಥಾನ, ಹರಿಯಾಣ, ದಿಲ್ಲಿಯಲ್ಲಿ ಯಾತ್ರೆ ನಡೆಸಿ ಪಂಜಾಬ್‌‍ನ ಅಮೃತಸರದಲ್ಲಿ ಯಾತ್ರೆಯನ್ನು ಪೂರೈಸಲಿದ್ದಾರೆ.

ರಾಘವೇಶ್ವರ ಶ್ರೀಗಳ ಭೇಟಿ
~
ಗೋಸೇವೆಯ ಫಲವಾಗಿಯೇ ನೂರಾರು ಕಡೆ ಗೋಕಥೆ, ಪ್ರವಚನಗಳನ್ನು ಕೊಡಲು ಸಾಧ್ಯವಾಗಿದೆ ಎನ್ನುವ ಫೈಜ್ ಖಾನ್,
ಪರಮಪೂಜ್ಯ ಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ, ಭಾರತೀಯ ಗೋಪರಿವಾರದ ಯೋಜಕ ಚಕ್ರವರ್ತಿ ಸೂಲಿಬೆಲೆ ಅವರ ಉಪಸ್ಥಿತಿಯಲ್ಲಿ 2016ರ ಎಪ್ರಿಲ್ 19ರಂದು ಬೆಂಗಳೂರಿನ ಶ್ರೀರಾಮಚಂದ್ರಾಪುರ ಮಠದಲ್ಲಿ ‘ಗೋಧೂಳಿ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ಪರಮಪೂಜ್ಯ ರಾಘವೇಶ್ವರಭಾರತಿ ಶ್ರೀಗಳು ಕೈಗೊಂಡಿರುವ ಗೋರಕ್ಷೆ, ಗೋಜಾಗೃತಿ ಯೋಜನೆಗಳಿಂದ ಸಾಕಷ್ಟು ಪ್ರಭಾವಿತರಾಗಿದ್ದರು. ಗೋಸೇವಾ ಸದ್ಭಾವನಾ ಯಾತ್ರೆಯ ನಿಮಿತ್ತ ಕರ್ನಾಟಕಕ್ಕೆ ಆಗಮಿಸಿರುವ ಫೈಜ್ ಖಾನ್ ಬೆಂಗಳೂರಿಗೆ ಬಂದು (ಡಿ.೨೭-೨೮) ಪೂಜ್ಯ ರಾಘವೇಶ್ವರ ಶ್ರೀಗಳ ದರ್ಶನ ಮಾಡಿ ಆಶೀರ್ವಾದ ಪಡೆಯಲಿದ್ದಾರೆ.

ಈ ಯಾತ್ರೆಯು ಡಿಸೆಂಬರ್ ೨೩ ರಂದು ಮೈಸೂರು, ೨೬-೨೯ರ ವರೆಗೆ ಬೆಂಗಳೂರು ಹಾಗೂ ಸುತ್ತಮುತ್ತ, ಜನವರಿ ೩-೪ ತಿಪಟೂರು, ಅರಸೀಕೆರೆ, ಜನವರಿ ೯-೧೦ ಶಿವಮೊಗ್ಗ, ಜನವರಿ ೧೫ ಜೋಗ್ ಜಲಪಾತ ಸೇರಿದಂತೆ ದಿನಕ್ಕೊಂದು ಪಟ್ಟಣದಲ್ಲಿ ಅಭಿಯಾನ ನಡೆಯಲಿದ್ದು, ಕೊನೆಯದಾಗಿ 24ಕ್ಕೆ ಕಾರವಾರದಲ್ಲಿ ಕರ್ನಾಟಕ ಭಾಗದ ಯಾತ್ರೆಯನ್ನು ಸಂಪೂರ್ಣಗೊಳಿಸಲಿದ್ದಾರೆ. ರಾಜ್ಯಾದ್ಯಂತ ಭಾರತೀಯ ಗೋಪರಿವಾರದ ಕಾರ್ಯಕರ್ತರು ಫೈಜ್ ಖಾನ್ ಅವರಿಗೆ ಸಾಥ್ ನೀಡಲಿದ್ದು ಅಗತ್ಯ ಸಹಕಾರ ‌ಕೊಡಲಿದ್ದಾರೆ‌

Author Details


Srimukha

Leave a Reply

Your email address will not be published. Required fields are marked *