ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ
ಪ್ರತಿದಿನ ಬೇಕೇ ಪ್ರಾರ್ಥನೆ?
ಒಮ್ಮೆ ಒಬ್ಬ ಶಿಷ್ಯ ಗುರುವನ್ನು “ಪ್ರತಿದಿನ ಏಕೆ ದೇವರ ಪ್ರಾರ್ಥನೆ ಮಾಡಬೇಕು?” ಎಂದು ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ಗುರುಗಳು ಒಂದು ಕೊಳಕಾದ ಬಟ್ಟೆಯನ್ನು ಕೊಟ್ಟು, “ಇದರಲ್ಲಿ, ಅಗೋ ಅಲ್ಲಿ ಕಾಣುತ್ತಿದೆಯಲ್ಲಾ, ಆ ಕೆರೆಯಿಂದ ನೀರು ತೆಗೆದುಕೊಂಡು ಬಾ” ಎಂದು ಹೇಳುತ್ತಾರೆ.
ಬಟ್ಟೆ ತೂತುಗಳನ್ನು ಹೊಂದಿದ್ದರಿಂದ ಎಷ್ಟು ಬಾರಿ ಪ್ರಯತ್ನಿಸಿದರೂ ನೀರನ್ನು ತರುವಾಗ ಅದು ದಾರಿಯಲ್ಲೇ ಸೋರಿ ಹೋಗುತ್ತಿತ್ತು. ಅವನು ಗುರುವಿನ ಹತ್ತಿರ ಬಂದು, “ಆ ಬಟ್ಟೆಯಲ್ಲಿ ನೀರು ತರಲು ಸಾಧ್ಯವಾಗಲಿಲ್ಲ” ಎನ್ನುತ್ತಾನೆ. ಆಗ ಗುರುಗಳು “ಆ ಬಟ್ಟೆಯನ್ನು ತೆಗೆದು ಕೊಂಡು ಬಾ” ಎಂದು ಹೇಳುತ್ತಾರೆ.
ಆ ಬಟ್ಟೆಯನ್ನು ತೋರಿಸಿದ ಗುರುಗಳು “ಇದು ಮೊದಲು ಹೇಗಿತ್ತು? ಈಗ ಹೇಗಿದೆ?” ಎಂದು ಕೇಳುತ್ತಾರೆ. ಆಗ ಶಿಷ್ಯ, “ಮೊದಲು ತುಂಬ ಕೊಳಕಾಗಿತ್ತು. ಈಗ ಸ್ವಚ್ಫವಾಗಿದೆ” ಎನ್ನುತ್ತಾನೆ.
ಆಗ ಗುರುಗಳು, “ಪ್ರತಿದಿನ ಪ್ರಾರ್ಥನೆ ಮಾಡುವುದರಿಂದ ನಮ್ಮ ಮನಸ್ಸಿನ ಕಲ್ಮಷಗಳೆಲ್ಲ ಹೋಗಿ ಸ್ವಚ್ಫವಾಗುತ್ತದೆ. ಇದೇ ಪ್ರಾರ್ಥನೆಯ ಮಹತ್ತ್ವ. ಆದ್ದರಿಂದ ಪ್ರತಿದಿನ ದೇವರ ಪ್ರಾರ್ಥನೆ ಮಾಡಬೇಕು” ಎನ್ನುತ್ತಾರೆ.