ಮಾತು~ಮುತ್ತು : ಯಾರ ನೆನೆಯಲಿ ಕೊನೆಗೆ?

ಶ್ರೀಸಂಸ್ಥಾನ

ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಯಾರ ನೆನೆಯಲಿ ಕೊನೆಗೆ?

ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಒಬ್ಬ ವರ್ತಕನಿದ್ದ. ಅವನಿಗೆ ಸದಾ ವ್ಯಾಪಾರದ್ದೇ ಚಿಂತೆ. ಎಷ್ಟು ಲಾಭ ಬಂದರೂ ಸಮಾಧಾನವಿಲ್ಲ. ಒಮ್ಮೆ ಅವನನ್ನು ಅವನ ಸ್ನೇಹಿತರೊಬ್ಬರು ಒಬ್ಬ ದಾಸರು ನಡೆಸುತ್ತಿದ್ದ ಹರಿಕಥೆಗೆ ಅವನನ್ನು ಕರೆದುಕೊಂಡು ಹೋಗುತ್ತಾರೆ.

 

ಹರಿಕಥೆದಾಸರು ಮಹಾಹರಿಭಕ್ತನಾದ ಅಜಮಿಳನ ಕಥೆಯನ್ನು ಹೇಳುತ್ತಿರುತ್ತಾರೆ. ಕೊನೆಯಲ್ಲಿ ಅವರು “ಯಾರು ಅಂತ್ಯಕಾಲದಲ್ಲಿ ಶ್ರೀಹರಿಯನ್ನು ನೆನೆಯುತ್ತಾರೆಯೋ ಅವರು ಹರಿಪಾದವನ್ನೇ ಸೇರುತ್ತಾರೆ” ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ವರ್ತಕನಿಗೆ ತುಂಬ ಸಂತೋಷವಾಗುತ್ತದೆ. ಅವನು ಅಂತ್ಯಕಾಲದಲ್ಲಿ ಶ್ರೀಹರಿಯನ್ನು ನೆನೆಯಲು ಅನುಕೂಲವಾಗಲಿ ಎಂದುಕೊಂಡು ಅವನ ಮಕ್ಕಳಿಗೆ ನಾರಾಯಣ, ಶ್ರೀಹರಿ, ಶ್ರೀನಿವಾಸ ಎಂದು ನಾಮಕರಣ ಮಾಡುತ್ತಾನೆ. ಸದಾ ವ್ಯಾಪಾರದಲ್ಲಿ ತಲ್ಲೀನನಾಗಿರುತ್ತಾನೆ.

 

ಎಷ್ಟೋ ಸಮಯದ ಅನಂತರ ಅವನಿಗೆ ಅಂತ್ಯಕಾಲ ಸಮೀಪಿಸುತ್ತದೆ. ಅಸೌಖ್ಯದಿಂದ ಹಾಸಿಗೆಯಲ್ಲಿ ಮಲಗಿರುತ್ತಾನೆ. ಅವನ ಹೆಂಡತಿ ಮಕ್ಕಳೆಲ್ಲರೂ ಅವನ ಸುತ್ತ ನಿಂತಿರುತ್ತಾರೆ. ಎಲ್ಲರನ್ನು ನೋಡಿ, “ಅಂಗಡಿಯಲ್ಲಿ ಯಾರಿದ್ದಾರೆ?” ಎಂದು ಕೇಳುತ್ತಾನೆ ಅವನು. ಅಷ್ಟರಲ್ಲಿಯೇ ಅವನ ಪ್ರಾಣಪಕ್ಷಿ ಹಾರಿಹೋಗುತ್ತದೆ. ಜೀವ ಹೋಗುವ ಸಮಯದಲ್ಲಿ ಅವನ ಬಾಯಿಂದ ಬಂದ ಮಾತು ‘ಅಂಗಡಿಯಲ್ಲಿ ಯಾರಿದ್ದಾರೆ?’ ಎಂದು.

 

ಜೀವನವಿಡೀ ನಾವು ಮಾಡಿದ್ದೇ ನಮ್ಮ ಅಂತ್ಯಕಾಲದಲ್ಲಿಯೂ ಬರುತ್ತದೆ. ಆದ್ದರಿಂದ ಶ್ರೀಹರಿಯನ್ನು ಅನುದಿನವೂ ನೆನೆಸಿಕೊಂಡಾಗ ಮಾತ್ರ ಕೊನೆಯಲ್ಲಿ ಶ್ರೀಹರಿಯ ನೆನಪಾಗುತ್ತದೆ. ಅದಿಲ್ಲವಾದರೆ ನಮ್ಮ ಕೆಲಸವೇ ನೆನಪಾಗುತ್ತದೆ.

Leave a Reply

Your email address will not be published. Required fields are marked *