ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಹಾಗೂ ಹೆತ್ತವರ ಮಹತ್ತ್ವ ತಿಳಿಸಿಕೊಡುವ ನಿಟ್ಟಿನಲ್ಲಿ ಇಂದು ಶ್ರೀರಾಮಚಂದ್ರಾಪುರಮಠದ ಅಂಗಸಂಸ್ಥೆ ಶ್ರೀಭಾರತೀವಿದ್ಯಾಲಯದಲ್ಲಿ ಜನ್ಮದಾತರಿಗೆ ಪೂಜೆ ಸಲ್ಲಿಸುವ ವಿಶಿಷ್ಟ ಕಾರ್ಯಕ್ರಮ ಜರುಗಿತು.
ಕನ್ನಡ ರಾಜ್ಯೋತ್ಸವದ ಈ ಶುಭದಿನದಂದು ಹೆತ್ತವರ ಪಾದ ತೊಳೆದು ಪೂಜೆ ಸಲ್ಲಿಸಿದ ಮಕ್ಕಳು, ಬದುಕಿಡಿ ತಮ್ಮನ್ನು ಸಲಹುವ ತಂದೆ-ತಾಯಿಗಳನ್ನು ಗೌರವದಿಂದ ಕೊನೆತನಕ ಸಲಹುವ ಶಪಥ ಗೈಯ್ದರು.
ಕಣ್ಮರೆಯಾಗುತ್ತಿರುವ ಭಾರತೀಯ ಸಂಸ್ಕೃತಿಯನ್ನು ನೆನಪಿಸುವ ಹಾಗೂ ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಾತಾಪಿತೃಪೂಜೆಗೆ ಮುನ್ನ ಜಗತ್ಪಾಲಕರಾದ ಪಾರ್ವತಿ ಪರಮೇಶ್ವರರಿಗೆ ಷೋಡಶೋಪಚಾರ ಪೂಜೆ ನೆರವೇರಿಸಲಾಯಿತು. ಮಾತಾಪಿತೃ ಪೂಜೆಗೂ ಮುನ್ನ ಶಾಲೆಯ ಅಧ್ಯಕ್ಷರಾದ ಶ್ರೀಗೋಪಾಲಕೃಷ್ಣ ಹೆಗಡೆಯವರು ಪೂಜೆಯ ಉದ್ದೇಶವನ್ನು ತಿಳಿಸಿದರು. ಶಾಲೆಯ ಸಂಸ್ಕೃತ ಶಿಕ್ಷಕರಾದ ಶ್ರೀ ಟಿ.ಜಿ.ಭಟ್ ಪೂಜಾ ವಿಧಿವಿಧಾನ ನಡೆಸಿಕೊಟ್ಟರು. ಮಕ್ಕಳಿಂದ ಪೂಜೆ ಸ್ವೀಕರಿಸಿದ ಹೆತ್ತವರು ಸಂತೋಷ ವ್ಯಕ್ತಪಡಿಸಿದ್ದು, ಇಂತಹ ಸಂಸ್ಕಾರಯುತ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಲಿ. ಶಿಕ್ಷಣವೆಂದರೆ ಅದು ಕೇವಲ ಪಠ್ಯಕ್ರಮವಲ್ಲ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು. ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಿ ಪಾಲಕರು ಬದುಕಿನ ಸಂಧ್ಯಾಕಾಲದಲ್ಲಿ ಮಕ್ಕಳೊಂದಿಗೆ ಬದುಕುವ ಸ್ಥಿತಿ ನಿರ್ಮಾಣವಾಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಕನ್ನಡ ರಾಜ್ಯೋತ್ಸವವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಸಹಕಾರ್ಯದರ್ಶಿಗಳಾದ ಶ್ರೀ ಗೋವಿಂದರಾಜ್ ಕೋರಿಕ್ಕಾರ್ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪನಮನಗೈದು ಕನ್ನಡ ಧ್ವಜಾರೋಹಣ ನಡೆಸಿದರು. ವಿದ್ಯಾರ್ಥಿಗಳಿಂದ ಸುಶ್ರಾವ್ಯವಾಗಿ ನಾಡಗೀತೆ ಗಾಯನ ನಡೆಯಿತು. ಶಾಲೆಯ ಕನ್ನಡ ಶಿಕ್ಷಕರಾದ ಸತ್ಯನಾರಾಯಣ ಭಟ್ ಮಕ್ಕಳಿಗೆ ಕನ್ನಡ ಭಾಷೆಯ ಮಹತ್ತ್ವ ತಿಳಿಸಿದರು. ಶಾಲೆಯ ಶಿಕ್ಷಕಿ ಚಂಪಕಾ ಭಟ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಉಪಪ್ರಾಂಶುಪಾಲರು, ಪಾಲಕರು ಹಾಗೂ ಸಾವಿರಾರು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹರೇ ರಾಮ