ಬದಿಯಡ್ಕ: ಒಂದು ಮಗುವಿನ ಸರ್ವಾಂಗೀಣ ವಿಕಾಸವೇ ಶಿಕ್ಷಣದ ಉದ್ದೇಶವಾಗಿದೆ ಪಠ್ಯೇತರ ಚಟುವಟಿಕೆಗಳಿಗೂ ಪಠ್ಯ ಚಟುವಟಿಕೆಗಳಷ್ಟೇ ಪ್ರಾಧಾನ್ಯವನ್ನಿಟ್ಟು ಕೌಶಲ್ಯಾಧಾರಿತ ಶಿಕ್ಷಣವನ್ನು ಈ ವಿದ್ಯಾಸಂಸ್ಥೆಯು ನೀಡುತ್ತಾ ಬಂದಿದೆ. ಸಮಾಜದಲ್ಲಿ ಜವಾಬ್ದಾರಿಯುತ ಪ್ರಜೆಯಾಗಿ ವಿಕಾಸಗೊಳ್ಳುವಂತೆ ಮಗುವಿನಲ್ಲಿರುವ ಪ್ರತಿಭೆಯನ್ನು ಮೊದಲೇ ಗುರುತಿಸಿ ರೂಪಿಸುವುದೇ ಶಿಕ್ಷಣವಾಗಿದೆ ಎಂಬುದಾಗಿ ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ವಿಶ್ರಾಂತ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ ಹೇಳಿದರು.
ಅವರು 20-01-2019 ರಂದು ನಡೆದ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ `ವಸಂತೋತ್ಸವ’ ಸಮಾರಂಭದಲ್ಲಿ ವಿಶೇಷ ಅಭ್ಯಾಗತರಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪಾಲಕರ, ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ತ್ರಿಕೋನ ಸಂಬಂಧ ಪೂರ್ಣಗೊಂಡಾಗಲೇ ಅರ್ಥಪೂರ್ಣವಾಗಿ ವಿದ್ಯಾರ್ಥಿ ತನ್ನ ಜೀವನದಲ್ಲಿ `ಎ ಪ್ಲಸ್’ ಅಂಕ ಪಡೆಯುತ್ತಾನೆ. ಪಠ್ಯಚಟುವಟಿಕೆಗಳ ಅಂಕಗಳಿಗೆ ಮಾತ್ರ ಸೀಮಿತಗೊಳ್ಳದೆ ಜವಾಬ್ದಾರಿಯುತ ಸತ್ಪ್ರಜೆಯಾಗಿ ಬದುಕುವ ಕಲೆಯು ಕೌಶಲ್ಯಾಧಾರಿತ ಶಿಕ್ಷಣದಲ್ಲಿ ಲಭಿಸುತ್ತದೆ. ಈ ನಿಟ್ಟಿನಲ್ಲಿ ಶ್ರೀಭಾರತೀ ವಿದ್ಯಾಪೀಠ ಶಿಕ್ಷಣ ಸಂಸ್ಥೆಯು ಉತ್ತಮ ಶಿಸ್ತುಬದ್ಧ ಶಿಕ್ಷಣ ನೀಡುವಲ್ಲಿ ಮಾದರಿಯಾಗಿರುವುದು ಸಂತಸದ ವಿಚಾರವಾಗಿದೆ ಎಂದು ಡಾ.ಪೆರ್ಲ ಉದ್ಘೋಷಿಸಿದರು.
ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದರು. ಈ ವರ್ಷ ವೃತ್ತಿಯಿಂದ ನಿವೃತ್ತಿಯನ್ನು ಪಡೆಯಲಿರುವ ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸ ಮೂರ್ತಿ ಅವರನ್ನು ಶಾಲಾ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ವರದಿ ಮಂಡಿಸಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಗಣೇಶ ಪೈ ಬದಿಯಡ್ಕ, ಮಾತೃ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಪ್ರಮೀಳಾ, ರಾಜಗೋಪಾಲ ಚುಳ್ಳಿಕ್ಕಾನ ಉಪಸ್ಥಿತರಿದ್ದು ಶುಭಕೋರಿದರು. ವಿದ್ಯಾರ್ಥಿಗಳಾದ ನಿತೀಶ್ ಸ್ವಾಗತಿಸಿ, ವೈಷ್ಣವಿ ಭಟ್ ವಂದಿಸಿದರು. ಶ್ರೀರತ್ನಮಾಲ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ಕಳೆದ ಶೈಕ್ಷಣಿಕ ಶಾಲಿನಲ್ಲಿ ಪ್ರತೀ ತರಗತಿಯಲ್ಲಿ ಅಗ್ರ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಕಳೆದ ಸಾಲಿನ ೧೦ನೇ ತರಗತಿಯ ವಿದ್ಯಾರ್ಥಿನಿ ಕು. ವೈದೇಹಿ ವರ್ಮುಡಿ, ಶಾಲೆಯಿಂದ ಕೊಡಮಾಡುವ ಅತ್ಯುತ್ತಮ ವಿದ್ಯಾರ್ಥಿ ಪ್ರಮಾಣಪತ್ರ `ಸ್ವರ್ಣಾಂಕುರ’ ತನ್ನದಾಗಿಸಿಕೊಂಡಳು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳೂ ಗೆಜ್ಜೆಕಟ್ಟಿ, ಬಣ್ಣಬಳಿದು ವೇದಿಕೆಯಲ್ಲಿ ತನ್ನ ಕಲಾಪ್ರತಿಭೆಯನ್ನು ಅನಾವರಣಗೊಳಿಸಿದರು. ಮುದ್ರಿತ ಧ್ವನಿಸುರುಳಿಯನ್ನು ಬಳಸದೆ ಮಕ್ಕಳು ಹಿನ್ನೆಲೆ ಗಾಯನದಲ್ಲೂ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡರು. ನೆರೆದ ಪ್ರೇಕ್ಷಕರಿಗೆ ರಸದೌತಣ ನೀಡಿದರು. ಭರತನಾಟ್ಯ, ಜಾನಪದ ನೃತ್ಯ, ವಿವಿಧ ಭಾಷೆಗಳ ನಾಟಕಗಳು, ಯೋಗ, ಯಕ್ಷಗಾನಗಳೇ ಮೊದಲಾದ ಕಲೆಗಳನ್ನೊಳಗೊಂಡ ಭಾರತೀಯ ಸಂಸ್ಕೃತಿಗನುಗುಣವಾದ ಕಾರ್ಯಕ್ರಮ ನಡೆಯಿತು.