ಶತಮಾನ ಕಂಡ, ಸಾವಿರ ವಿದ್ಯಾರ್ಥಿಗಳಿಗೆ ಬದುಕು ಕೊಟ್ಟ ವಿದ್ಯಾರಣ್ಯ ಸಂಸ್ಕೃತ ಪಾಠಶಾಲೆ

ಶಿಕ್ಷಣ

ಕೆಕ್ಕಾರಿನ ಪ್ರಕೃತಿಯ ಸುಂದರ ಮಡಿಲಲ್ಲಿ ತಲೆ ಎತ್ತಿ ನಿಂತಿದೆ ವಿದ್ಯಾರಣ್ಯ ಸಂಸ್ಕೃತ ಪಾಠಶಾಲೆ. ಡಿಸೆಂಬರ್ 12, 1911ರಲ್ಲಿ ವಿದ್ವಾಂಸರೂ, ಸಂಸ್ಕೃತಕಾವ್ಯಗಳ ರಚನೆಯಲ್ಲಿ ನಿಷ್ಣಾತರೂ ಆದ ಕೆಕ್ಕಾರಿನ ಶಿವಭಟ್ಟರು ಸಂಸ್ಕೃತಿ ಮತ್ತು ಸಂಸ್ಕಾರವಂತ ಸಮಾಜದ ನಿರ್ಮಾಣಕ್ಕಾಗಿ ಹಗಲಿರುಳು ಪರಿಶ್ರಮಿಸಿ ವಿದ್ಯಾರಣ್ಯ ಸಂಸ್ಕೃತ ಪಾಠಶಾಲೆಯನ್ನು ಆರಂಭಿಸಿದರು. ಆಗಿನ ಕಾಲಕ್ಕೆ ಶಾಲೆಯದೇ ಆದ ಕಟ್ಟಡಗಳು ಇಲ್ಲದ ಕಾರಣ ಮಠದಲ್ಲಿ, ಕೆಕ್ಕಾರಿನ ಮನೆಗಳಲ್ಲಿ ಪಾಠ-ಪ್ರವಚನಗಳನ್ನು ಮಾಡಿ ಸಂಸ್ಕಾರವಂತ ಸಮಾಜಕ್ಕೆ ನಿರಂತರ ಶ್ರಮಿಸಿದರು; ಅವರಂತಹ ಅನೇಕ ಶ್ರೇಷ್ಠ ವಿದ್ವಾಂಸರನ್ನೂ ನಾಡಿಗೆ ಕೊಟ್ಟರು. ಆ ಕನಸಿನ ಪಾಠಶಾಲೆ ಶತಮಾನೋತ್ಸವವನ್ನು ಪೂರೈಸಿದೆ.

 

ಈ ನೂರು ವರ್ಷಗಳ ಅವಧಿಯಲ್ಲಿ ವಿದ್ಯೆಯನ್ನು ಕಲಿತವರು ಅಸಂಖ್ಯ. ಅದರಲ್ಲೂ ವಿಶೇಷ ಉತ್ತರಕನ್ನಡ ಜಿಲ್ಲೆಯ ವೈದಿಕರು, ವಿದ್ವಾಂಸರು ಈ ಪಾಠಶಾಲೆಯ ಶಿಷ್ಯರು ಮತ್ತು ಪ್ರಶಿಷ್ಯರು. ಈ ಪಾಠಶಾಲೆಯಿಂದ ಬದುಕನ್ನು ಕಟ್ಟಿಕೊಂಡವರು ಗಣನೆಗೆ ಸಿಗರು. ಅವರೆಲ್ಲರಿಗಿರುವ ಪಾಠಶಾಲೆಯ ಮೇಲಿನ ಪ್ರೀತಿ, ಅಭಿಮಾನ ಇಷ್ಟು ಕಾಲ ಪಾಠಶಾಲೆಯನ್ನು ಜೀವಂತವಾಗಿರಿಸಿದೆ. ಅದೇ ಮುಂದೂ ಕೂಡ ಜೀವಂತಗೊಳಿಸಲಿದೆ.

 

ಇಲ್ಲಿನ ಪರಿಸರ :
ಕೆಕ್ಕಾರು- ಕುಮಟ ಮತ್ತು ಹೊನ್ನಾವರ ನಡುವಿನ ಊರು. ಕೇಕಾರವ ಎಂದೇ ಪ್ರಸಿದ್ಧವಾಗಿದ್ದ ಊರು ಬಾಯಿಂದ ಬಾಯಿಗೆ ದಾಟಿ ಕೆಕ್ಕಾರು ಆಯಿತು‌. ‘ಕೇಕಾರವ’ ಸಂಸ್ಕೃತ ಪದ. ಹಾಗೆಂದರೆ ನವಿಲಿನ ಕೂಗು ಎಂದು. ನವಿಲುಗಳ ವಾಸ ಹೆಚ್ಚಿದ್ದ ಕಾರಣ ಕೇಕಾರವ ನಾಮಕರಣ ಮಾಡಿದ್ದು. ವಿದ್ಯಾರಣ್ಯ ಸಂಸ್ಕೃತ ಪಾಠಶಾಲೆ ಕೇಕಾರವ ನಡುವಿನ ವಿದ್ಯಾಸಂಸ್ಥೆ. ಕೆಕ್ಕಾರಿನ ಶ್ರೀರಘೂತ್ತಮಮಠದ ದಿವ್ಯಪರಿಸರ ಈ ಸಂಸ್ಥೆಯನ್ನೂ ವ್ಯಾಪಿಸಿದೆ.

 

ಗುರುಪರಂಪರೆಯ ಪರಮಾನುಗ್ರಹ :
ಪರಮಪೂಜ್ಯ ಶ್ರೀಶ್ರೀರಾಮಚಂದ್ರಭಾರತೀ ಮಹಾಸ್ವಾಮಿಗಳ ಮತ್ತು ಪರಮಪೂಜ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳ ದಿವ್ಯಾಶೀರ್ವಾದದಲ್ಲಿ ಮುನ್ನಡೆದು ಬಂದ ಪಾಠಶಾಲೆ, ಮೂವತ್ತಾರನೆಯ ಪೀಠಾಧೀಶರಾದ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯಮಾರ್ಗದರ್ಶನ ಮತ್ತು ಅನುಗ್ರಹದಲ್ಲಿ ಮುನ್ನಡೆಯುತ್ತಿದೆ.

 

ಕೆಕ್ಕಾರು, ಕಡತೋಕ, ನವಿಲುಗೋಣು, ಮಾಡಿಗೇರಿ -ಈ ನಾಲ್ಕು ಗ್ರಾಮಗಳು ಸೇರಿ ಚೌಕಗ್ರಾಮ ಎಂದೇ ಪ್ರಸಿದ್ಧ. ಇಲ್ಲಿ ವಾಸಿಸುವವರು ಪ್ರಜ್ಞಾವಂತರು, ಕಲಾನಿಪುಣರು, ಸಂಸ್ಕೃತಿ-ಸಂಸ್ಕಾರ-ಸಂಸ್ಕೃತಾಸಕ್ತರು, ಸಾತ್ತ್ವಿಕ ಜನರು. ಹಾಗಾಗಿ ಶಿವಭಟ್ಟರು ನೂರು ವರ್ಷಗಳ ಹಿಂದೆ ಇಲ್ಲಿ ಪಾಠಶಾಲೆಯನ್ನು ಸಂಸ್ಥಾಪಿಸಿ, ಸುತ್ತಲಿನ ಹೊಸಾಕುಳಿ, ಬೆತ್ತಗೇರಿ, ತೆಪ್ಪ, ಮೂರೂರು ಮುಂತಾದ ಊರುಗಳಲ್ಲಿ ತಮ್ಮ ಪಾಠಶಾಲೆಯ ಶಾಖೆಗಳನ್ನು ತೆರದು ಇಡೀ ಜಿಲ್ಲೆ ಸುಸಂಸ್ಕೃತವಾಗುವಂತೆ ಮಾಡಿದರು.

 

ಪ್ರಕೃತ ಕಲಿಕಾ ವಿಧಾನ :
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಥಮ (7th equivalent), ಕಾವ್ಯ(10th equivalent), ಸಾಹಿತ್ಯ(12th equivalent)ಪಾಠಗಳನ್ನು ಇಲ್ಲಿ ಕಲಿಸಲಾಗುತ್ತಿದೆ. ಅದರ ಜೊತೆಗೆ ಕೃಷ್ಣಯಜುರ್ವೇದ ಮತ್ತು ಸಾಮವೇದಗಳ ಪ್ರಥಮ, ಪ್ರವೇಶ ಮತ್ತು ಮೂಲಾಂತ ಪರೀಕ್ಷೆಗಳ ಅಧ್ಯಾಪನ, ಸಂಸ್ಕಾರವಂತ ಸಮಾಜಕ್ಕಾಗಿ ಅವಶ್ಯಕವಾದ ಉಪಯುಕ್ತ ವಿಚಾರಗಳನ್ನು ಹೇಳಿಕೊಡಲಾಗುತ್ತಿದೆ. ಇದಲ್ಲದೇ ಆಸಕ್ತರಿಗೆ ಜಾತಕನಿರ್ಮಾಣ ವಿಧಾನ ಮತ್ತು ಜಾತಕಫಲಚಿಂತನೆ ಹಾಗೂ ಜಾತಕ ಮೇಳಾಮೇಳಿಯೇ ಮೊದಲಾದ ಉಪಯುಕ್ತ ಜ್ಯೌತಿಷಭಾಗ, ಸಂಗೀತ, ಯಕ್ಷಗಾನ, ಕಂಪ್ಯೂಟರ್ ಶಿಕ್ಷಣಗಳನ್ನೂ ನೀಡಲಾಗುತ್ತಿದೆ.

 

ವಿದ್ಯಾರ್ಥಿಗಳಿಗೆ ಅನುಕೂಲ :
ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಉಚಿತ ವಸತಿ ವ್ಯವಸ್ಥೆ ಕೂಡ ಈ ವಿದ್ಯಾಸಂಸ್ಥೆಯಲ್ಲಿದೆ. ಇಲ್ಲಿರುವ ರುಚಿ ಮತ್ತು ಶುಚಿಯಾದ ಉಚಿತ ಆಹಾರವ್ಯವಸ್ಥೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುತ್ತದೆ.

 

ಅಪೂರ್ವ ಪುಸ್ತಕಗಳ ಗ್ರಂಥಾಲಯ :
ವಿದ್ಯಾರ್ಥಿಗಳ ಮತ್ತು ವಿದ್ವಾಂಸರ ಓದಿಗೆ ಅನುಕೂಲಕ್ಕಾಗಿ ಸಾವಿರಾರು ಪುಸ್ತಕಗಳ ಗ್ರಂಥಾಲಯವಿದೆ. ವೇದ, ವೇದಾಂತ, ಸಂಸ್ಕೃತ, ಕನ್ನಡ ಅಧ್ಯನಾಸಕ್ತರಿಗೂ ಈ ಗ್ರಂಥಾಲಯ ಸಹಕಾರಿಯಾಗಲಿದೆ.

 

ಅಸಾಮಾನ್ಯ ಶಿಕ್ಷಕವೃಂದ :
ಅನುಭವೀ ಶಿಕ್ಷಕರು ಪಾಠಶಾಲೆಯ ಸಂಪನ್ಮೂಲ. ವಿದ್ಯಾರ್ಥಿಗಳ ಶ್ರೇಯಸ್ಸನ್ನೇ ಬಯಸುವ ಶಿಕ್ಷಕರು ಇಲ್ಲಿದ್ದಾರೆ.

 

ವಿಶಾಲ ಕ್ರೀಡಾಂಗಣ :
ವಿದ್ಯಾರ್ಥಿಗಳ ದೈಹಿಕವಾದ ಚಟುವಟಿಕೆಗಳಿಗೆ ವಿಶಾಲವಾದ ಆಟದ ಮೈದಾನವನ್ನೂ ಪಾಠಶಾಲೆ ತನ್ನದಾಗಿಸಿಕೊಂಡಿದೆ.

 

ಆಸಕ್ತರಿಗೆ ತೆರೆದಿದೆ ಬಾಗಿಲು :
ಇಂತಹ ವಿಶೇಷತೆಗಳನ್ನೊಳಗೊಂಡ ಪಾಠಶಾಲೆ ಆಸಕ್ತರಿಗೆ ಬಾಗಿಲು ತೆರೆದಿರಿಸಿದೆ. ಇಲ್ಲಿಗೆ ಬಂದು ಶಿಕ್ಷಣವನ್ನು ಕಲಿತು, ನಲಿದು ಸಮಾಜದ ಕಣ್ಣಾಗಲು ಎಲ್ಲರನ್ನೂ ಸ್ವಾಗತಿಸುತ್ತಿದೆ. (ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9008232532, 8105963642)

 

1911ರಲ್ಲಿ ಆರಂಭವಾದ ಶಿವಭಟ್ಟರ ಕನಸಿನ ಪಾಠಶಾಲೆ ನೂರು ವರ್ಷಗಳಲ್ಲಿ ಇಷ್ಟನ್ನು ಸಾಧಿಸಿದೆ. ಆರಂಭದಲ್ಲಿ ಗುರು-ಶಿಷ್ಯರಷ್ಟೇ ಇದ್ದ ಪಾಠಶಾಲೆ, ಈಗ ವಿದ್ಯಾರ್ಥಿಗಳಿಗೆ ಬೇಕಾದ ಸೌಕರ್ಯಗಳನ್ನು ಒದಗಿಸಿ, ಉತ್ತಮ ಶಿಕ್ಷಣವನ್ನು ನೀಡುವಲ್ಲಿಯವರೆಗೆ ಬೆಳೆದು ನಿಂತಿದೆ. ಅಸಂಖ್ಯ ವಿದ್ಯಾರ್ಥಿಗಳ ಪಾಲಿಗೆ ದಾರಿದೀಪವೂ ಆಗಿದೆ. ಇಂತಹ ಅಪರೂಪವೂ, ಪ್ರಸಿದ್ಧವೂ, ಪ್ರಾಚೀನವೂ ಆದ ವಿದ್ಯಾರಣ್ಯ ಪಾಠಶಾಲೆ ಇನ್ನಷ್ಟು ಕಾಲ ಬಾಳಬೇಕಿದೆ. ಸಮಾಜವನ್ನು ಬೆಳಗಿಸಬೇಕಿದೆ.

Author Details


Srimukha

Leave a Reply

Your email address will not be published. Required fields are marked *